ADVERTISEMENT

ಸಂಪ್ರದಾಯದ ಹುಡುಗಿ, ಸೋಮಾರಿ ಹುಡುಗ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ಸಂಪ್ರದಾಯದ ಹುಡುಗಿ, ಸೋಮಾರಿ ಹುಡುಗ
ಸಂಪ್ರದಾಯದ ಹುಡುಗಿ, ಸೋಮಾರಿ ಹುಡುಗ   

‘ಇದು ನನ್ನ ಮೊದಲ ಚಿತ್ರ. ಈ ಸಂಭ್ರಮದಲ್ಲಿ ಮಾತುಗಳೇ ಬರುತ್ತಿಲ್ಲ’ ಎನ್ನುವಾಗ ರವಿ ಕಾರಂಜಿ ಅವರ ಕಣ್ಣುಗಳು ತುಂಬಿ ಬಂದಂತೆ ಕಾಣುತ್ತಿದ್ದವು. ತಮ್ಮ ನಿರ್ದೇಶನದ ಮೊದಲ ಚಿತ್ರ ‘ಅಜರಾಮರ’ದ ಆಡಿಯೊ ಸಿ.ಡಿ ಬಿಡುಗಡೆ ಅವರ ಎದೆಬಡಿತವನ್ನು ಹೆಚ್ಚಿಸಿತ್ತು.

‘ಅತಿ ಬುದ್ಧಿವಂತ ಸೋಮಾರಿ ಹುಡುಗ ಮತ್ತು ಸಂಪ್ರದಾಯಸ್ಥ ಹುಡುಗಿಯ ನಡುವಿನ ನವಿರು ಪ್ರೇಮಕಥೆ ಚಿತ್ರದ್ದಾಗಿದೆ. ಚಿತ್ರದಲ್ಲಿ 10 ನಿಮಿಷ ಗ್ರಾಫಿಕ್ಸ್ ದೃಶ್ಯಗಳಿವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ ನಮ್ಮದು’ ಎಂದು ರವಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

ಡಾ. ಡೇವಿಡ್ ಬಾಂಜಿ ಚಿತ್ರದ ನಿರ್ಮಾಪಕ. ‘ಯಾವುದೇ ರಾಜಿ ಮಾಡಿಕೊಳ್ಳದೇ ಕೆಲಸ ಮಾಡುವುದು ನನ್ನ ಜಾಯಮಾನ. ಮೊದಲ ಚಿತ್ರಕ್ಕೆ ಉತ್ತಮ ನಿರ್ದೇಶಕ ಸಿಕ್ಕಿದ ಖುಷಿ ನನಗಿದೆ’ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗಿನ ಹುಡುಗ ತಾರಕ್ ಮತ್ತು ರೋಷಿಣಿ ಚಿತ್ರದ ನಾಯಕ–ನಾಯಕಿ. ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ತಾರಕ್‌ಗೆ ಬೆಳ್ಳಿತೆರೆ ಮೇಲಿನ ನಟನೆ ಹೊಸದು. ‘ಬುದ್ಧಿವಂತ ಸೋಮಾರಿ ಯುವಕನ ಪಾತ್ರ ನನ್ನದು’ ಎಂದು ತಾರಕ್ ತಮ್ಮ ಪಾತ್ರವನ್ನು ಪರಿಚಯಿಸಿಕೊಂಡರು. ‘ಗಂಡಿನ ಸಾಧನೆ ಹಿಂದೆ ಹೆಣ್ಣೊಬ್ಬಳು ಇರುತ್ತಾಳೆ ಎಂಬ ಮಾತನ್ನು ನಿರೂಪಿಸುವ ಪಾತ್ರ ನನ್ನದು’ ಎಂದು ನಾಯಕಿ ನಟಿ  ರೋಷಿಣಿ ಮಾತು ಮುಗಿಸಿದರು.

ಸಂಗೀತ ನಿರ್ದೇಶಕ ರಾಜ್ ಕಿಶೋರ್, ‘ಮೊದಲ ಸಲ ಸ್ವತಂತ್ರವಾಗಿ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ಚಿತ್ರವಿದು. ಸಿನಿಮಾದಲ್ಲಿ ಐದು ಹಾಡುಗಳಿದ್ದು ಕೇಳಲು ಇಂಪಾಗಿವೆ’ ಎಂದರು.

ಹಿರಿಯ ಛಾಯಾಗ್ರಾಹಕ ಮನೋಹರ್ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅಭಯ್ ಜಿ. ಗಂಜ್ಯಾಳ ಸಹ ನಿರ್ಮಾಪಕರಾಗಿ ಡೇವಿಡ್ ಅವರಿಗೆ ಹೆಗಲು ಕೊಟ್ಟಿದ್ದಾರೆ. ಸಾಯಿ ಆಡಿಯೊ ಹೊರತಂದಿರುವ ಚಿತ್ರದ ಆಡಿಯೊ ಸಿ.ಡಿ.ಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.