ADVERTISEMENT

ಸಿನಿಮಾ ಗೀಳಿನವರ ಘೀಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಸಿನಿಮಾದ ಹೆಸರೇನೋ ‘ಗಜಪಡೆ’. ಹಾಗೆಂದು ಚಿತ್ರದಲ್ಲಿ ಆನೆಗಳಿಲ್ಲ. ಆದರೆ ಗಜಗಳ ಹಾಗೆ ಘೀಳಿಡುತ್ತ ಬರುವ ನಾಯಕರಿದ್ದಾರೆ. ಅವರದೇ ಒಂದು ಪಡೆ. ‘ಅಬ್ಬರಿಸಿ ಬೊಬ್ಬಿರಿದರಿಲ್ಲಿ ಯಾರಿಗೂ ಭಯವಿಲ್ಲ’ ಎಂಬ ಟ್ಯಾಗ್‌ಲೈನಿನೊಂದಿಗೆ ಬರುತ್ತಿರುವ ಗಜಪಡೆಗೆ ಕಳೆದ ವಾರ ಮುಹೂರ್ತ ನಡೆಯಿತು. ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿದ ಮುಹೂರ್ತ ಸಮಾರಂಭಕ್ಕೆ ಚಿತ್ರೋದ್ಯಮದ ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

ಸುಮಾರು ಇಪ್ಪತ್ತು ಚಿತ್ರಗಳಿಗೆ ಸಹಾಯಕನಾಗಿ ದುಡಿದು ಪಡೆದಿರುವ ಅನುಭವವನ್ನೇ ನೆಚ್ಚಿಕೊಂಡು ನಿರ್ದೇಶಕನ ಹ್ಯಾಟ್ ಹಾಕಿಕೊಂಡು ಸೀನು ಬಂದಿದ್ದಾರೆ. ‘ಈ ಹಿಂದೆ ಹಲವು ನಿರ್ದೇಶಕರ ಬಳಿ ಕಲಿತ ಕೆಲಸದ ತಂತ್ರಗಳನ್ನೆಲ್ಲ ಇಲ್ಲಿ ಅಳವಡಿಸಲಿದ್ದೇನೆ. ಕಥೆ- ಚಿತ್ರಕಥೆ- ಸಂಭಾಷಣೆ ಜವಾಬ್ದಾರಿ ನನ್ನದೇ. ಒಂದೊಂದು ಕೆಲಸ ಮಾಡುವ ಮುನ್ನ ಹತ್ತಾರು ಸಲ ಯೋಚಿಸುತ್ತೇನೆ’ ಎಂದು ಸೀನು ಹೇಳಿಕೊಂಡರು.

‘ಮೊಗ್ಗಿನ ಮನಸು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹರ್ಷ ‘ಗಜಪಡೆ’ಯ ನಾಯಕ. ವಿಭಿನ್ನ ಪಾತ್ರ ಸಿಕ್ಕಿದ ಪುಳಕದಲ್ಲಿ ಅವರಿದ್ದರು. ಹರ್ಷ ಜತೆಗೆ ಆನಂದ್, ಅರುಣ್ ಹಾಗೂ ಸಿದ್ದೇಶ್ ಕೂಡ ಸಮಾನ ಹೀರೋಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಮೂವರು ಅಮಾಯಕ ಯುವಕರು ಒಬ್ಬ ಡಾನ್‌ಗೆ ಪಾಠ ಕಲಿಸುವ ಉದ್ದೇಶದಿಂದ ಭೂಗತ ಜಗತ್ತಿಗೆ ಪ್ರವೇಶ ಪಡೆಯುವ ಕಥೆಯಿದು.

ತನ್ಮಯಿ ಹಾಗೂ ಮೊನಿಶಾ ನಾಯಕಿಯರು. ಐದು ಹಾಡುಗಳಿಗೆ ಅಭಿಲಾಷ್ ಜೋಯಿಸ್ ಸಂಗೀತ ಹೊಸೆಯಲಿದ್ದಾರೆ. ಮಡಿಕೇರಿ ಸೇರಿದಂತೆ ಸುಂದರ ತಾಣಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. ಶಂಕರ್ ಕ್ಯಾಮೆರಾ ಹಿಡಿಯಲಿದ್ದು, ಬೆಂಗಳೂರು ಸುತ್ತಮುತ್ತ 45 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ಹಂಚಿಕೊಂಡರು. ನಿರ್ಮಾಪಕರಾದ ರಘು ಕುಂಚಿ, ಮುತ್ತು ಪಾವಗಡ, ಶ್ರೇಯಸ್, ಅನನ್ಯ, ಧನುಷ್, ದೀಪು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.