ADVERTISEMENT

ಸಿನಿಮಾ, ಸಮಾಜ, ರಾಜಕೀಯ ಇತ್ಯಾದಿ...

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ವೆಂಕಟ್
ವೆಂಕಟ್   

ಸಿನಿಮಾಗಿಂತಲೂ ವಿಚಿತ್ರ ಹುಚ್ಚಾಟಗಳಿಂದಲೇ ಪ್ರಸಿದ್ಧಿಗೆ ಬಂದ ಹುಚ್ಚ ವೆಂಕಟ್‌ ಅವರ ‘ಪೊರ್ಕಿ ಹುಚ್ಚ ವೆಂಕಟ್‌’ ಸಿನಿಮಾ ಇದೇ ತಿಂಗಳ 28ರಂದು ಬಿಡುಗಡೆ ಆಗಲಿದೆ. ಐವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಉದ್ದೇಶ ಅವರದ್ದು.

ಈ ವಿಷಯನ್ನು ಹಂಚಿಕೊಳ್ಳಲಿಕ್ಕಾಗಿಯೇ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿದ್ದ ವೆಂಕಟ್‌, ‘ಸಿನಿಮಾ ಜನರನ್ನು ಬದಲಾಯಿಸುತ್ತದೆ. ಜತೆಗೆ ಅವರ ವ್ಯಕ್ತಿತ್ವವನ್ನೂ’ ಎಂದೇ ಮಾತಿಗೆ ಆರಂಭಿಸಿದರು.

‘ನಾವು ಸಿನಿಮಾದಲ್ಲಿ ಪಾತಕಗಳನ್ನು ವೈಭವೀಕರಿಸಿಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂಬ ಸಂದೇಶವನ್ನೂ ಸಿನಿಮಾದಲ್ಲಿ ನೀಡಿದ್ದೇವೆ’ ಎನ್ನುವುದರ ಜತೆಗೇ ‘ಒಬ್ಬ ವ್ಯಕ್ತಿ ಎಲ್ಲವನ್ನೂ ಸಹಿಸಿಕೊಂಡಿದ್ದರೆ ಅದು ಕೊನೆಗೊಮ್ಮೆ ಆಕ್ರೋಶವಾಗಿ ಸ್ಫೋಟಗೊಳ್ಳುತ್ತದೆ ಎಂಬುದನ್ನೂ ತೋರಿಸಿದ್ದೇವೆ’ ಎಂದರು. ಅಂದಹಾಗೆ, ಈ ಚಿತ್ರದ ಕಥೆ–ಚಿತ್ರಕಥೆ–ನಿರ್ದೇಶನ ಎಲ್ಲವೂ ವೆಂಕಟ್‌ ಅವರದೇ.

ADVERTISEMENT

ಪತ್ರಕರ್ತರ ಎದುರು ಕೂತ ವೆಂಕಟ್‌ ಮಾತು, ಕೇವಲ ಸಿನಿಮಾಕ್ಕಷ್ಟೇ ಸೀಮಿತಗೊಳ್ಳಲಿಲ್ಲ. ಬದಲಿಗೆ ತಮ್ಮ ಇತರ ಯೋಜನೆಗಳ ಬಗ್ಗೆಯೂ ಅವರು ಹೇಳಿಕೊಂಡರು.

‘ನನ್ನ ನೆರೆಹೊರೆಯವರು ಮತ್ತು ಸಮಾಜದ ಸಮಸ್ಯೆಗಳ ಕುರಿತು ನೀಡುವಷ್ಟು ಗಮನವನ್ನು ನನ್ನ ಕುಟುಂಬದತ್ತ ಹರಿಸಲು ನನಗೆ ಸಾಧ್ಯವಾಗಿಲ್ಲ’ ಎಂದ ಅವರು – ‘ನನಗೆ ಹಸಿವಿನ ಮಹತ್ವ ಗೊತ್ತು. ಆದ್ದರಿಂದಲೇ ವೆಂಕಟ್‌ ಸೇನೆ ಕಟ್ಟಿದ್ದೇನೆ’ ಎಂದರು.

ವೆಂಕಟ್‌ ಅವರಿಗೆ ರಾಜಕೀಯ ಸೇರುವ ಉದ್ದೇಶವೂ ಇದೆಯಂತೆ. ತಮ್ಮ  ಈ ಆಸೆಯನ್ನೂ ಅವರು ಇದೇ ಕಾರ್ಯಕ್ರಮದಲ್ಲಿ ಹೊರಹಾಕಿದರು. ಮತ್ತೆ ಸಿನಿಮಾದ ಬಗೆಗಿನ ಮಾತುಕತೆಗೆ ಮರಳಿದ ಅವರು ‘ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ನನ್ನ ನಿಜವಾದ ವ್ಯಕ್ತಿತ್ವ ಅನಾವರಣವಾಗಲಿದೆ’ ಎಂದರು.

‘ಪೊರ್ಕಿ ಹುಚ್ಚ ವೆಂಕಟ್‌’ ಸಿನಿಮಾದಲ್ಲಿ ಪ್ರಣಯಗೀತೆ ಇದೆಯಂತೆ. ಆದರೆ ಒಂದೇ ಒಂದು ದೃಶ್ಯದಲ್ಲಿಯೂ ನಾಯಕ ವೆಂಕಟ್‌ ನಾಯಕಿಯನ್ನು ಮುಟ್ಟಿಲ್ಲವಂತೆ. ರಚನಾ ಈ ಸಿನಿಮಾದಲ್ಲಿ ವೆಂಕಟ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.