ADVERTISEMENT

ಸೀಜರ್ ಸಿನಿಮಾ ಕಟ್ಟಿದ ವಿನಯ್

ವಿಜಯ್ ಜೋಷಿ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ವಿನಯ್ ಕೃಷ್ಣ
ವಿನಯ್ ಕೃಷ್ಣ   

ನಿರ್ದೇಶಕ ವಿನಯ್ ಕೃಷ್ಣ ‘ಸೀಜರ್‌’ ಚಿತ್ರದ ಮೂಲಕ ಮಾಸ್‌ ಪ್ರೇಕ್ಷಕರನ್ನು ರಂಜಿಸುವ ಉತ್ಸಾಹದಲ್ಲಿ ಇದ್ದಾರೆ. ಅವರು ನಿರ್ದೇಶಿಸಿರುವ ಮೊದಲ ಚಿತ್ರ ಇದು. ಈ ಚಿತ್ರ ಶುಕ್ರವಾರ (ಏಪ್ರಿಲ್ 13) ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿನಯ್ ಅವರು ‘ಚಂದನವನ’ಕ್ಕೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಈ ಸಿನಿಮಾದ ಕಥೆ ಕಾರುಗಳನ್ನು ಸೀಜ್‌ ಮಾಡುವವರ ಬಗ್ಗೆ ಎಂದು ಚಿರು ಹೇಳಿದ್ದರು. ಇದರ ಬಗ್ಗೆ ಸಿನಿಮಾದಲ್ಲಿ ಏನು ಹೇಳಿದ್ದೀರಿ?

ಸೀಜರ್‌ ಎಂಬ ಹೆಸರು ಕೇಳಿದಾಗ ಹಲವರು ಗೊಂದಲಕ್ಕೆ ಒಳಗಾದಂತಿದೆ. ಕೆಲವರು ಇದನ್ನು ಸಿಜರ್‌ (ಕತ್ತರಿ) ಎಂದು ಭಾವಿಸಿದ್ದಾರೆ. ಇನ್ನು ಕೆಲವರು ಇದು ಜೂಲಿಯಸ್ ಸೀಜರ್‌ಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದಾರೆ. ವಾಹನಗಳನ್ನು ಸೀಜ್‌ ಮಾಡುವವರನ್ನು ಸೀಜರ್ಸ್‌ ಎಂದು ಕರೆಯುತ್ತೇವೆ. ಈ ಸಿನಿಮಾದಲ್ಲಿ ಅವರ ಕಥೆ ಇರುವ ಕಾರಣ ಇದಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ.

ADVERTISEMENT

ಇದರಲ್ಲಿ ಮುಖ್ಯವಾಗಿದ್ದು ಇನ್ನೊಂದಿದೆ. ವಾಹನಗಳನ್ನು ಸೀಜ್‌ ಮಾಡುವ ವೃತ್ತಿಯನ್ನು ಆಧರಿಸಿ ಕನ್ನಡದಲ್ಲಿ ಯಾವುದೇ ಸಿನಿಮಾ ಬಂದಂತಿಲ್ಲ. ವಾಹನ ಸೀಜ್‌ ಮಾಡಿ ತರುವ ಕೆಲಸದಲ್ಲಿ ಒಂದು ಥ್ರಿಲ್ ಇರುತ್ತದೆ. ಕಾರನ್ನೋ ಅಥವಾ ಇನ್ಯಾವುದೇ ವಾಹನವನ್ನೋ ಅಷ್ಟು ಸುಲಭವಾಗಿ ಸೀಜ್‌ ಮಾಡಿ ಕೊಂಡೊಯ್ಯಲು ಆಗುವುದಿಲ್ಲ. ವಾಹನಗಳಿಗೆ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಇರುತ್ತದೆ, ವಾಹನಗಳು ನಾಲ್ಕು ಗೋಡೆಗಳ ಮಧ್ಯೆ ನಿಂತಿರುವುದೂ ಇರುತ್ತವೆ... ಹೀಗಿದ್ದರೂ ಸೀಜ್‌ ಮಾಡುವವರು ವಾಹನಗಳನ್ನು ಒಯ್ಯುತ್ತಾರೆ. ಇದು ಈ ಸಿನಿಮಾದ ಕಥೆಯ ಎಳೆ.

* ಇಂಥದ್ದೊಂದು ಕಥೆಯನ್ನು ಸಿನಿಮಾ ಮಾಡಬೇಕು ಎಂದು ಅನಿಸಿದ್ದು ಏಕೆ?

ನಾನು ಒಂದು ಸೀಜಿಂಗ್‌ ಘಟನೆಗೆ 2010ರ ಸುಮಾರಿನಲ್ಲಿ ಸಾಕ್ಷಿಯಾಗಿದ್ದೆ. ಅದನ್ನು ಗಮನಿಸಿದ ನಂತರ ನನಗೆ ಇದರ ಬಗ್ಗೆ ಸಿನಿಮಾ ಮಾಡಬೇಕು ಎಂದು ಅನಿಸಿತು. ಇದನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟರೆ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯೂ ನನ್ನಲ್ಲಿ ಅಂದೇ ಗಟ್ಟಿಯಾಯಿತು. ಘಟನೆ ನಡೆದಿದ್ದು 2010ರಲ್ಲಿಯಾದರೂ ನನ್ನಲ್ಲಿ ಕಥೆ ಸಿದ್ಧವಾಗುವ ವೇಳೆಗೆ 2014ನೇ ಇಸವಿ ಬಂದಾಗಿತ್ತು.

* ಈ ವಸ್ತುವಿನ ಬಗ್ಗೆ ಸಿನಿಮಾ ಮಾಡೋಣ ಎಂದು ಹೇಳಿದಾಗ ನಿರ್ಮಾಪಕರ ಪ್ರತಿಕ್ರಿಯೆ ಏನಿತ್ತು?

ನಿರ್ಮಾಪಕ ತ್ರಿವಿಕ್ರಮ್ ಸಾಪಲ್ಯ ಅವರು 2012ರಲ್ಲಿ ‘ಪರಿ’ ಎನ್ನುವ ಸಿನಿಮಾ ಮಾಡಿದ್ದರು. ಅದಾದ ನಂತರ ಅವರು ದೊಡ್ಡ ಮಟ್ಟದಲ್ಲಿ ಒಂದು ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಹಲವು ನಿರ್ದೇಶಕರಿಂದ ಅವರು ಕಥೆಗಳನ್ನು ಕೇಳಿಸಿಕೊಂಡಿದ್ದರು. ಆದರೆ ಅವರು ಅವ್ಯಾವ ಕಥೆಗಳನ್ನೂ ಒಪ್ಪಿರಲಿಲ್ಲ. ನಾನು ನನ್ನಲ್ಲಿದ್ದ ಕಥೆಯನ್ನು ಅವರ ಬಳಿ ಹೇಳಿದಾಗ, ಇದನ್ನು ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದರು. ಇದು ಕನ್ನಡ ಮಾತ್ರವಲ್ಲದೆ ಮಲಯಾಳ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ತೆರೆಗೆ ಬರುತ್ತಿದೆ.

* ಈ ಸಿನಿಮಾಕ್ಕೆ ಚಿರು, ರವಿಚಂದ್ರನ್ ಮತ್ತು ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಏನು?

ಈ ಚಿತ್ರದ ಮೂರು ಪಾತ್ರಗಳು ಬಹಳ ಪವರ್‌ಫುಲ್‌ ಆಗಿವೆ. ಹಾಗಾಗಿ ಇವರನ್ನು ಆಯ್ಕೆ ಮಾಡಿಕೊಂಡೆವು. ಚಿರು ಅವರಿಗೆ ವಿಭಿನ್ನ ಗೆಟಪ್ ನೀಡಿದ್ದೇವೆ. ರವಿಚಂದ್ರನ್ ಅವರು ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರದ್ದು ಇದರಲ್ಲಿ ಒಬ್ಬ ಫೈನಾನ್ಶಿಯರ್ ಪಾತ್ರ. ರೈ ಅವರದ್ದು ಪವರ್‌ಫುಲ್‌ ವಿಲನ್ ಪಾತ್ರ. ಇದು ಮಾಸ್ ಕಥೆಯನ್ನು ಹೊಂದಿದೆ.

* ನಿರ್ದೇಶಕರಾಗಿ ನಿಮಗೆ ಇದು ಮೊದಲ ಸಿನಿಮಾ. ನಿಮ್ಮ ನಿರೀಕ್ಷೆಗಳು ಏನು?

ಮೂರು ಜನ ದೊಡ್ಡ ಕಲಾವಿದರು ಅಭಿನಯಿಸಿರುವ ಸಿನಿಮಾ ನಿರ್ದೇಶನ ನನಗೊಂದು ದೊಡ್ಡ ಪ್ರಾಜೆಕ್ಟ್‌ ಆಗಿತ್ತು. ದೊಡ್ಡ ಕಲಾವಿದರು ಇರುವ ಈ ಸಿನಿಮಾ ಚೆನ್ನಾಗಿ ಆಗಿದೆ ಎಂದು ವೀಕ್ಷಕರು ಹೇಳಬೇಕು ಎಂಬುದು ನನ್ನಲ್ಲಿರುವ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.