ADVERTISEMENT

ಸುನಿ ಪರಾಕು ಪಂಪು!

ಅಮಿತ್ ಎಂ.ಎಸ್.
Published 18 ಜುಲೈ 2014, 19:30 IST
Last Updated 18 ಜುಲೈ 2014, 19:30 IST

ಸಿಂಪಲ್‌ ಸುನಿಗೆ ‘ಬಹುಪರಾಕ್‌’ಗೆ ಸೆನ್ಸಾರ್‌ ಮಾಡಿಸುವ ಕೆಲಸ ಸಿಂಪಲ್‌ ಆಗಿರಲಿಲ್ಲ. ಆದಷ್ಟು ಬೇಗನೆ ಜನ ‘ಬಹುಪರಾಕ್‌’ ಹೇಳಬೇಕು ಎಂದುಕೊಂಡಿದ್ದವರಿಗೆ ಎದುರಾದದ್ದು ಸೆನ್ಸಾರ್‌ ವಿಘ್ನ. ಸಿನಿಮಾದಲ್ಲಿ ಸಮಸ್ಯೆ ಇದ್ದಿದ್ದರಿಂದ ಸೆನ್ಸಾರ್‌ ಮಾಡಿಸಲು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು. ‘ಅದು ಸುಳ್ಳು, ಸಮಸ್ಯೆ ಇರುವುದು ಸೆನ್ಸಾರ್‌ ಮಂಡಳಿಯಲ್ಲಿಯೇ, ಸಿನಿಮಾದಲ್ಲಲ್ಲ’ ಎಂದು ವಿವರಿಸುತ್ತಾರೆ ನಿರ್ದೇಶಕ ಸುನಿ.

ಕರ್ನಾಟಕದ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯರ ಕೊರತೆ ಇದೆ. ಹೊಸ ಸದಸ್ಯರ ನೇಮಕ ಆಗಿಲ್ಲ. ‘ಮುಂಬೈನಲ್ಲಿಯೇ’ ಸೆನ್ಸಾರ್‌ ಮಾಡಿಸಿ ಎಂದು ಸ್ವತಃ ಸೆನ್ಸಾರ್‌ ಮಂಡಳಿಯ ಅಧ್ಯಕ್ಷರೇ ಸೂಚಿಸಿದರು. ಅದರಂತೆಯೇ ಅನಿವಾರ್ಯವಾಗಿ ಮುಂಬೈಗೆ ಹೋಗಿ ‘ಬಹುಪರಾಕ್‌’ ಸೆನ್ಸಾರ್‌ ಮಾಡಿಸಿಕೊಂಡು ಮರಳಿದ್ದಾರೆ ಸುನಿ. ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರವೂ ಸಿಕ್ಕಿದೆ. ಮರಾಠಿ ಸೆನ್ಸಾರ್‌ ಮಂಡಳಿಯಲ್ಲಿ ಕನ್ನಡಿಗರೂ ಇರುವುದರಿಂದ ಸುಲಭವಾಯಿತು ಎನ್ನುತ್ತಾರೆ ಸುನಿ.

ಅಂದಹಾಗೆ, ‘ಬಹುಪರಾಕ್‌’ ಜುಲೈ 25ರಂದು ತೆರೆಗೆ ಬರುತ್ತಿದೆ. ಸುಮಾರು 150 ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆರೆಕಾಣಿಸುವುದು ಸುನಿ ಉದ್ದೇಶ. ಇದು ಶ್ರೀನಗರ ಕಿಟ್ಟಿ ಅವರ 25ನೇ ಸಿನಿಮಾ. ಚಿತ್ರದಲ್ಲಿ ಭರ್ತಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಒಳ್ಳೆ ಸಂದೇಶವೂ ಇದೆ ಎನ್ನುತ್ತಾರೆ ಸುನಿ. ಕಥಾಹಂದರದ ಒಳಗೇ ಸಂದೇಶ ಅಡಗಿದೆ. ಆರಂಭದಿಂದಲೇ ಇದ್ದರೂ ಕ್ಲೈಮ್ಯಾಕ್ಸ್‌ವರೆಗೂ ಅದು ಪ್ರಕಟವಾಗುವುದಿಲ್ಲ ಎಂದು ಹೇಳುತ್ತಾರೆ ಅವರು.

ಎಲ್ಲಾ ವರ್ಗಗಳ ಪ್ರೇಕ್ಷಕರನ್ನು ಸೆಳೆಯುವುದು ಸುನಿ ಗುರಿ. ಕಷ್ಟಪಟ್ಟು ಇಷ್ಟಪಟ್ಟು ಮಾಡಿದ್ದೇನೆ ಎನ್ನುವುದಕ್ಕಿಂತ ಎಲ್ಲರಿಗೂ ಇಷ್ಟವಾಗುವಂತೆ ಮಾಡಿದ್ದೇನೆ ಎನ್ನುವ ಅವರು, ಕತೆಯಲ್ಲಿ ವೈವಿಧ್ಯವಿದೆ. ಪ್ರೇಕ್ಷಕ ಖಂಡಿತಾ ಮೆಚ್ಚುತ್ತಾನೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ. ‘ಕಾಲೇಜು ಹುಡುಗರನ್ನು ಸೆಳೆಯಲು ಒಳ್ಳೆಯ ಲವ್‌ಟ್ರ್ಯಾಕ್‌ ಇದೆ.  ಮಾಸ್‌ ಆಡಿಯನ್ಸ್‌ ಸೆಳೆಯಲು ಐಟಂ ಸಾಂಗ್‌, ರೌಡಿಸಂ ಕೂಡ ಇದೆ. ಅದನ್ನು ಬಿಟ್ಟು ಹೊಸತನ ತೋರಿಸಲು ಒಂದು ಟ್ರ್ಯಾಕ್‌ ಮಾಡಿದ್ದೇನೆ. ಮೂರು ಟ್ರ್ಯಾಕ್‌ ಕೂಡ ಒಂದೆಡೆ ಸೇರುತ್ತವೆ. ಅಲ್ಲಿ ಹೊಸತನ್ನು ಹೇಳಿದ್ದೇನೆ’ ಎಂದು ವಿವರಿಸುತ್ತಾರೆ ಸುನಿ.

‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ಯ ಗುಂಗಿನಲ್ಲೇ ಬಂದ ಪ್ರೇಕ್ಷಕನಿಗೆ ಸಣ್ಣ ನಿರಾಸೆ ‘ಬಹುಪರಾಕ್‌’ನಲ್ಲಿ ಎದುರಾಗುವುದು ಖಚಿತವಂತೆ. ಏಕೆಂದರೆ ಅದು ಸಂಭಾಷಣೆ ಆಧಾರಿತವಾಗಿತ್ತು, ದ್ವಂದ್ವಾರ್ಥಗಳಿದ್ದವು. ಆದರೆ ಇಲ್ಲಿ ದ್ವಂದ್ವಾರ್ಥ ಇಲ್ಲವೇ ಇಲ್ಲ. ಕತೆಯೂ ಕೂಡ ಸಂಪೂರ್ಣ ವಿಭಿನ್ನ. ಅದೇ ನಿರ್ದೇಶಕರ ಚಿತ್ರವೇ ಇದು ಎಂಬ ಅನುಮಾನ ಪ್ರೇಕ್ಷಕನಲ್ಲಿ ಮೂಡಿಸುತ್ತದೆ. ‘ಸಿಂಪಲ್ಲಾಗ್‌...’ ನಲ್ಲಿ ತೆಳುವಾದ ಎಳೆಯಿತ್ತು. ‘ಬಹುಪರಾಕ್‌’ ಗಟ್ಟಿಯಾದ ಮೂರು ಕಥನಗಳಿಂದ ಕೂಡಿದೆ. ಜತೆಗೆ ಉಪಕತೆಗಳೂ ಇವೆ.

‘ಸಿಂಪಲ್ಲಾಗ್‌...’ನಲ್ಲಿದ್ದಂತೆ ತಮಾಷೆಯ ಸಂಗತಿಗಳು ಇಲ್ಲಿಯೂ ಇವೆ ಎನ್ನುವ ಸುನಿ, ‘ಬಹುಪರಾಕ್‌’ ಒಂದು ನಾಟಕ. ಇಲ್ಲಿ ಕಾಣಿಸಿಕೊಳ್ಳುವವರು, ನೋಡುವವರೇ ಪಾತ್ರಧಾರಿಗಳಾಗುತ್ತಾರೆ ಎಂದು ಹೇಳುತ್ತಾರೆ. ಅವರು ‘ಬಹುಪರಾಕ್‌’ ಎನ್ನುತ್ತಿರುವುದು ಪ್ರೇಕ್ಷಕರಿಗಂತೆ. ‘ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ನಮ್ಮ ನಿಯತ್ತಿನಲ್ಲಿ ನಾವು ಎಂಬಂತೆ ಇದ್ದವರಿಗೆ ಹೇಳುವುದು ಬಹುಪರಾಕ್‌ ಎನ್ನುತ್ತಾರೆ ಸುನಿ.

ಪ್ರೇಕ್ಷಕನಿಗೆ ಒಳ್ಳೆ ಸಿನಿಮಾ ನೋಡಿದ ಖುಷಿ ಸಿಗುತ್ತದೆ. ಮನರಂಜನೆ ಮತ್ತು ಒಳ್ಳೆಯ ಕತೆ ಬಯಸುವ ಮನಸುಗಳಿಗೆ ತೃಪ್ತಿ ದೊರಕುತ್ತದೆ ಎಂದು ಹೇಳುವ ಸುನಿ ಅವರಲ್ಲಿ ಆತ್ಮವಿಶ್ವಾಸವಿದೆ. ಕಥನದಲ್ಲಷ್ಟೇ ಅಲ್ಲ, ನಿರೂಪಣೆಯಲ್ಲಿಯೂ ವೈವಿಧ್ಯವಿದೆ.  ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ಯಲ್ಲಿ ಮಾತಿನ ಹೊರತಾಗಿ ಬೇರೆ ಅಂಶಗಳಿರಲಿಲ್ಲ, ವಿಚಾರಗಳಿರಲಿಲ್ಲ. ಎಷ್ಟೋ ಜನರಿಗೆ ಸಿನಿಮಾ ಇಂದಿಗೂ ಅರ್ಥ ಆಗಿಲ್ಲ. ಆದರೆ ‘ಬಹುಪರಾಕ್‌’ ಹಲವು ರೀತಿಗಳಿಂದ ವಿಭಿನ್ನ.

ಇದು ನಮ್ಮ ನೆಲದ ಕತೆಯ ಸಿನಿಮಾ ಎಂಬ ವಿವರಣೆ ಅವರದು. ಇಪ್ಪತ್ತೈದನೇ ಸಿನಿಮಾ ಎಂಬ ಸಂಭ್ರಮ, ಜವಾಬ್ದಾರಿ ಎರಡನ್ನೂ ಕಿಟ್ಟಿ ಉತ್ಸಾಹದಿಂದಲೇ ನಿಭಾಯಿಸಿದ್ದಾರೆ ಎಂಬ ಖುಷಿ ಸುನಿ ಅವರದು. ಮೂರು ಪಾತ್ರಗಳಲ್ಲಿ ವಿಭಿನ್ನವಾಗಿ ಅಭಿನಯಿಸಿರುವ ಕಿಟ್ಟಿ, ಹೊಸತಾಗಿ ಕಾಣಿಸುತ್ತಾರೆ . ಇದುವರೆಗೆ ಕಂಡಿರುವ ಕಿಟ್ಟಿ ಆಗಿರುವುದಿಲ್ಲ. ಸಿನಿಮಾ ಆರಂಭವಾದ ತುಸು ಹೊತ್ತಿನಲ್ಲೇ ಅವರು ಶ್ರೀನಗರ ಕಿಟ್ಟಿ ಎಂಬುದು ಹಿನ್ನೆಲೆಗೆ ಹೋಗಿ, ಹೊಸ ನಟನೊಬ್ಬ ಅವರಲ್ಲಿ ಕಾಣಿಸುತ್ತಾನೆ. ಇದು ಅವರ ಲೈಫ್‌ಟೈಮ್‌ ಪರ್ಫಾಮೆನ್ಸ್‌ ಆಗಲಿದೆ ಎಂದು ಹೇಳುವ ಸುನಿ ಅವರಿಗೆ, ಈ ಪಾತ್ರ ಕಿಟ್ಟಿಗೆ ಪ್ರಶಸ್ತಿಯನ್ನೂ ತಂಡುಕೊಡಲಿದೆ ಎಂಬ ವಿಶ್ವಾಸವಿದೆ.

ಕಿಟ್ಟಿಯಂತೆಯೇ ನಾಯಕಿ ಮೇಘನಾ ರಾಜ್‌ ಅವರ ದ್ವಿಪಾತ್ರ ಅಭಿನಯವೂ ಸೊಗಸಾಗಿ ಬಂದಿದೆ ಎನ್ನುತ್ತಾರೆ ಸುನಿ. ಚಿತ್ರದಲ್ಲಿ ಕಿಟ್ಟಿ ಅವರೇ ತುಂಬಿದ್ದರೂ ಇಲ್ಲಿ ಕತೆಯೇ ನಾಯಕ. ಮೂರು ಪಾತ್ರಗಳಲ್ಲಿ ಕಿಟ್ಟಿ ಕಾಣಿಸಿಕೊಳ್ಳುವುದರಿಂದ ಅವರು ವಿಜೃಂಭಿಸುವುದಿಲ್ಲ. ರೌಡಿಸಂ ಗೆಟಪ್‌ನಲ್ಲಿ ತುಸು ಬಿಲ್ಡಪ್‌ ಇದೆ. ನೆಗೆಟಿವ್ ಛಾಯೆ ಇದೆ. ಜತೆಗೆ ಹೃದಯಕ್ಕೂ ಹತ್ತಿರವಾಗುತ್ತಾರೆ.

ಮೂರು ವಿಷಯಗಳಿರುವುದರಿಂದ ಮೂರು ರೀತಿಯ ಅನುಭವ ಒಂದೇ ಚಿತ್ರದಲ್ಲಿ ದಕ್ಕಲಿದೆ ಎನ್ನುವ ಸುನಿ, ಸುಖಾಂತ್ಯವೋ, ದುಃಖಾಂತ್ಯವೋ ಎಂಬ ತೀರ್ಮಾನವನ್ನು ಪ್ರೇಕ್ಷಕನಿಗೇ ಬಿಟ್ಟಿದ್ದಾರಂತೆ. ‘ಇರುವುದು ಸ್ವಲ್ಪ ದಿನ. ಅದರಲ್ಲಿ ನನ್ನದು ಎಂದು ಏಕೆ ಹೊಡೆದಾಡುವುದು’ ಎಂಬ ಕೊನೆಯ ಸಾಲುಗಳು ಪ್ರೇಕ್ಷಕನ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯೊಂದಿಗೆ ‘ಬಹುಪರಾಕ್‌’ ಹೇಳಲು ಸಿದ್ಧರಾಗುತ್ತಿದ್ದಾರೆ ಸುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.