ADVERTISEMENT

ಸೂತಕದ ಮನೆಯಲ್ಲಿ ಹಾಸ್ಯದ ಬುಗ್ಗೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಹೊನ್ನವಳ್ಳಿ ಕೃಷ್ಣ
ಹೊನ್ನವಳ್ಳಿ ಕೃಷ್ಣ   

ಸಾವಿನ ಮನೆಯಲ್ಲಿ ಸಂಕಷ್ಟಗಳ ಸರಮಾಲೆಯೇ ಇರುತ್ತದೆ. ಇಂಥಹ ಮನೆಯಲ್ಲಿ ಹಾಸ್ಯದ ಹುಡುಕಾಟಕ್ಕೆ ಹೊರಟರೆ ತೊಂದರೆ ಎದುರಾಗುವುದು ನಿಶ್ಚಿತ. ಸೂತಕದ ಮನೆಯಲ್ಲಿಯೂ ಹಾಸ್ಯ ಇದೆ ಎಂದು ಜನರಿಗೆ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಆರ್‌. ನಾಗರಾಜ್‌ ಪೀಣ್ಯ. ಈ ಸಿನಿಮಾಕ್ಕಾಗಿ ಅವರು ಐವತ್ತಕ್ಕೂ ಹೆಚ್ಚು ಸಾವಿನ ಮನೆಗಳಿಗೆ ಭೇಟಿ ನೀಡಿದ್ದಾರಂತೆ. ಸಾವಿನಲ್ಲಿಯೂ ಹಾಸ್ಯ ಹೇಳಲು ಹೊರಟಿರುವ ಅವರು, ಈ ಚಿತ್ರಕ್ಕೆ ಇಟ್ಟಿರುವ ಹೆಸರು ‘ಬೂತಯ್ಯನ ಮೊಮ್ಮಗ ಅಯ್ಯು’.

ಸಿನಿಮಾ ಕುರಿತು ಹೇಳಲು ಈಚೆಗೆ ಚಿತ್ರತಂಡವು ಸುದ್ದಿಗೋಷ್ಠಿಗೆ ಬಂದಿತ್ತು. ‘ನೀವು ಸಾವಿನ ಮನೆಗೆ ಹೋಗಿ ಹಾಸ್ಯದ ಹುಡುಕಾಟ ನಡೆಸುವಾಗ ಕುಟುಂಬದ ದುಃಖತಪ್ತರು ಕೋಪಗೊಳ್ಳಲಿಲ್ಲವೇ?’ ಎಂದು ಪ್ರಶ್ನೆ ನಿರ್ದೇಶಕರಿಗೆ ಎದುರಾಯಿತು. ಅದಕ್ಕೆ ಅವರ ನೀಡಿದ ಉತ್ತರವೂ ಹಾಸ್ಯಮಯವಾಗಿತ್ತು.

‘ತುಮಕೂರು ಸಮೀಪದ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸುದ್ದಿ ತಿಳಿದ ತಕ್ಷಣ ಅಲ್ಲಿಗೆ ಹೋದೆವು. ಹಲವು ತಾಸು ಅಲ್ಲಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿದೆವು. ಆಗ ಅಲ್ಲಿಗೆ ಮೃತರ ಸ್ನೇಹಿತರೊಬ್ಬರು ಬಂದರು. ನಿನ್ನೆ ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದೆ. ಬೆಳಿಗ್ಗೆ ಸತ್ತು ಹೋಗಿದ್ದಾನೆ ಎಂದ್ರು. ವಾಸ್ತವದಲ್ಲಿ ಮೃತರು ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳಾಗಿತ್ತು. ಸೂತಕನದ ಮನೆಯಲ್ಲೂ ಇಂಥಹ ನಗೆ ಉಕ್ಕಿಸುವ ಸನ್ನಿವೇಶ ಸಿಗುತ್ತವೆ. ಇವುಗಳನ್ನು ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದೇನೆ’ ಎಂದರು ನಾಗರಾಜ್.

ADVERTISEMENT

(ಆರ್. ನಾಗರಾಜ್‌ ಪೀಣ್ಯ)

ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ‘ಇದು ನನ್ನ ಒಂದು ಸಾವಿರದ ಸಿನಿಮಾ. ಈ ಬಗ್ಗೆ ನನಗೆ ಖುಷಿ ಇದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ರಸದೌತಣ ಸಿಗಲಿದೆ’ ಎಂದರು.

ಹಿರಿಯ ನಟ ಉಮೇಶ್‌, ‘ಸೂತಕನ ಮನೆಯಲ್ಲಿಯೂ ಹಾಸ್ಯದ ಹುಡುಕಾಟ ನಡೆಸುವ ಸಿನಿಮಾ ಎಂದಾಕ್ಷಣ ಪ್ರೇಕ್ಷಕರಲ್ಲೂ ಕುತೂಹಲ ಮೂಡುತ್ತದೆ. ಸಿನಿಮಾ ಯಶಸ್ವಿಯಾಗಲಿ’ ಎಂದು ಶುಭ ಕೋರಿದರು.

ನಟ ಪುನೀತ್‌ರಾಜ್‌ಕುಮಾರ್ ಇದೇ ವೇಳೆ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದರು. ಚಿಕ್ಕಣ್ಣ, ಶ್ರುತಿ ಹರಿಹರನ್‌, ಬುಲೆಟ್‌ ಪ್ರಕಾಶ್‌, ತಬಲಾ ನಾಣಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.