ADVERTISEMENT

ಸೋಲಿನ ಹೆಸರಿನಲ್ಲಿ ಗೆಲುವಿಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST
ಸೋಲಿನ ಹೆಸರಿನಲ್ಲಿ ಗೆಲುವಿಗೆ ಪ್ರಯತ್ನ
ಸೋಲಿನ ಹೆಸರಿನಲ್ಲಿ ಗೆಲುವಿಗೆ ಪ್ರಯತ್ನ   

‘ಫ್ಲಾಪ್’ ಚಿತ್ರ ರಾಜ್ಯಾದ್ಯಂತ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು (ಮಾ. 6) ತೆರೆಗೆ ಬರುತ್ತಿದೆ. ಹೀಗೆಂದ ಮಾತ್ರಕ್ಕೆ ಈ ಮೊದಲೇ ತೆರೆಗೆ ಬಂದು ಫ್ಲಾಪ್ ಆದ ಚಿತ್ರವೊಂದು ಈಗ ಮತ್ತೆ ತೆರೆಗೆ ಬರುತ್ತಿದೆ ಎಂದುಕೊಳ್ಳಬೇಡಿ. ಚಿತ್ರದ ಹೆಸರೇ ‘ಫ್ಲಾಪ್’. ಆದರೆ ‘ಫಾರ್ ಹಿಟ್’ ಎಂಬ ಅಡಿಶೀರ್ಷಿಕೆ ಇಟ್ಟುಕೊಂಡಿರುವ ತಂಡಕ್ಕೆ ಚಿತ್ರ ಹಿಟ್ ಆಗುತ್ತದೆಂಬ ವಿಶ್ವಾಸ ಸಾಕಷ್ಟಿದೆ.

ಇದು ನಾಯಕನಿಲ್ಲದ ಚಿತ್ರ. ವಿಲನ್‌ಗಳೇ ಮುಖ್ಯ ಪಾತ್ರಧಾರಿಗಳು. ಸಂದೀಪ್, ವಿಜೇತ್, ಅಖಿಲ್ ಹಾಗೂ ಸುಕೃತಾ ವಾಗ್ಳೆ ಇಲ್ಲಿನ ಮುಖ್ಯ ಪಾತ್ರಧಾರಿಗಳಾದರೂ ಅವರೆಲ್ಲರ ಪಾತ್ರಕ್ಕೆ ವಿಲನ್‌ ಛಾಯೆ ಇದೆಯಂತೆ. ಈ ನಾಲ್ವರು ಮಾಡುವ ಕೆಲಸವೆಲ್ಲ ಹೇಗೆ ಋಣಾತ್ಮಕ ಪರಿಣಾಮ ಉಂಟು ಮಾಡುತ್ತವೆ, ಯಾವ ಸಂದರ್ಭದಲ್ಲಿ ಯಾರು ಹೀರೊ ಆಗುತ್ತಾರೆ ಮತ್ತು ಯಾರು ವಿಲನ್ ಆಗುತ್ತಾರೆ ಎನ್ನುವುದೇ ಚಿತ್ರದ ವಿಶೇಷ. ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ಬರುತ್ತಾನಾದರೂ ಆ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎಂಬುದನ್ನು ತಂಡ ಬಹಿರಂಗಪಡಿಸಲಿಲ್ಲ. ವ್ಯಕ್ತಿಯೊಬ್ಬನ ಜೀವನದ ಭಾಗವಾದ ಬಾಲ್ಯ, ಯೌವನ, ಪ್ರೀತಿ ಹಾಗೂ ಜವಾಬ್ದಾರಿ ಈ ನಾಲ್ಕು ಆಯಾಮಗಳೂ ಚಿತ್ರದಲ್ಲಿ ಇರಲಿವೆಯಂತೆ. ಈ ಎಲ್ಲ ಅಂಶಗಳೂ ಹಾಸ್ಯದ ಹಿನ್ನೆಲೆಯಲ್ಲಿಯೇ ಬರುತ್ತವೆ.

ಇದೇ ಚಿತ್ರ ತಂಡ ಈ ಮೊದಲು ರಾಮನ ಕೈಯಲ್ಲಿ ಗನ್ ಹಿಡಿಸಿ ವಿವಾದ ಸೃಷ್ಟಿಸಿತ್ತು. ‘ವಿವಾದ ಸೃಷ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಈ ಕಾಲದಲ್ಲಿ ಬಿಲ್ಲು ಬಾಣ ಹಿಡಿದು ಬಂದರೆ ಏನೂ ಪ್ರಯೋಜನವಿಲ್ಲ ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು’ ಎಂಬುದು ನಿರ್ದೇಶಕ ಕರಣ್ ಕುಮಾರ್ ಸಮಜಾಯಿಷಿ. ‘ಶೀರ್ಷಿಕೆಯು ಚಿತ್ರದ ಭವಿಷ್ಯವನ್ನು ನಿರ್ಧರಿಸುವುದಿಲ್ಲ’ ಎಂಬುದು ನಿರ್ದೇಶಕರ ಮಾತು. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ಮಾಣವೂ ಅವರದೇ.

ಈವರೆಗಿನ ಗಂಭೀರ ಪಾತ್ರಗಳ ಸರಣಿಯಿಂದ ಸುಕೃತಾ ಹೊರಬಂದಿದ್ದಾರೆ. ಹುಡುಗಿಯರಲ್ಲಿನ ನೆಗೆಟಿವ್ ಅಂಶಗಳನ್ನು ಅವರ ಮೂಲಕ ತೋರಿಸಲಾಗಿದೆಯಂತೆ. ಚಿತ್ರದಲ್ಲಿ ಅವರ ಪ್ರಯತ್ನವೆಲ್ಲವೂ ವಿಫಲವಾಗುತ್ತವೆ. ಆದರೆ ಜೀವನದಲ್ಲಿ ಯಾರ ವ್ಯಕ್ತಿತ್ವವೂ ಈ ರೀತಿ ಆಗದಿರಲಿ ಎಂಬುದು ಅವರ ಆಶಯ. ವಿಲನ್‌ಗಳು ಮಾಡುವ ಕೆಲಸಗಳೆಲ್ಲವೂ ಫ್ಲಾಪ್ ಆಗುವುದೇ ‘ಫ್ಲಾಪ್’ ಎನ್ನುತ್ತಾರೆ ಸಂದೀಪ್. ನಟ ವಿಜೇತ್, ಸಂಗೀತ ನಿರ್ದೇಶಕ ಎಲ್.ಎನ್. ಶಾಸ್ತ್ರಿ, ನೃತ್ಯ ನಿರ್ದೇಶಕ ಹೈಟ್ ಮಂಜು, ಛಾಯಾಗ್ರಾಹಕ ದರ್ಶನ್ ಕನಕ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.