ADVERTISEMENT

ಸೋಶಿಯಲ್ ಮೀಡಿಯಾದಿಂದ ಮೇಲ್ಕೋಟೆಗೆ...

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

‘ಕಾಮಿಡಿ ಪಾತ್ರಗಳನ್ನೇ ಜನರು ಇಷ್ಟಪಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಿಂದ ನನಗೆ ಗೊತ್ತಾಗಿದೆ. ಹೀಗಾಗಿ ಇಂಥದೊಂದು ಭರಪೂರ ಕಾಮಿಡಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ’ ಎಂದು ತಮ್ಮ ಚಿತ್ರದ ಹಿನ್ನೆಲೆ ಬಿಚ್ಚಿಟ್ಟರು ನಟ ಜಗ್ಗೇಶ್.

‘ಮೇಲುಕೋಟೆ ಮಂಜ’ ಸಿನಿಮಾ ಚಿತ್ರೀಕರಣ ಆರಂಭವಾಗುವ ನೆಪದಲ್ಲಿ ಆ ಕುರಿತ ವಿವರಗಳನ್ನು ಹಂಚಿಕೊಳ್ಳಲು ಜಗ್ಗೇಶ್ ಪತ್ರಕರ್ತರನ್ನು ಆಹ್ವಾನಿಸಿದ್ದರು. ಅವರೇ ಕ್ಯಾಪ್ಟನ್ ಆಗಿರುವುದರಿಂದ, ತಾಂತ್ರಿಕ ವಿವರಗಳನ್ನೆಲ್ಲ ಎಳೆಎಳೆಯಾಗಿ ವಿವರಿಸಿದರು. ‘ಮತ್ತದೇ ಹಳೇ ಟ್ರ್ಯಾಕ್‌ಗೆ ಬಂದಿದ್ದೀರಲ್ಲ?’ ಎಂಬ ಪ್ರಶ್ನೆಗೆ ಅವರ ಉತ್ತರ ಸುದೀರ್ಘವಾಗಿತ್ತು.

ಈಗಿನ ಯುವಪೀಳಿಗೆಯತ್ತ ಜಗ್ಗೇಶ್ ಅವರದು ಕುತೂಹಲದ ದೃಷ್ಟಿ. ಅದರಲ್ಲೂ ಫೇಸ್‌ಬುಕ್‌ನಂಥ ಸೋಶಿಯಲ್ ಮೀಡಿಯಾ ಬಂದ ಮೇಲೆ ಪ್ರೇಕ್ಷಕರ ಅಭಿಮತ ತಿಳಿದುಕೊಳ್ಳುವುದು ತೀರಾ ಸುಲಭವಾಗಿದೆಯಂತೆ. ‘ಈ ಮೀಡಿಯಾದಲ್ಲಿ ಏನಿದೆ ಅಂತ ತಿಳಿಯಲು ನಾನೂ ಎಂಟ್ರಿ ಕೊಟ್ಟೆ. ಜನರು ನನ್ನಿಂದ ಬಯಸುವುದು ಹಾಸ್ಯವನ್ನು ಎಂಬುದು ಗೊತ್ತಾಯಿತು. ಅದೇ ಈ ಸಿನಿಮಾ ನಿರ್ಮಾಣದ ಹಿಂದಿನ ಕಥೆ’ ಎಂದರು.

ಜಗ್ಗೇಶ್‌ ಅವರೇ ಆ್ಯಕ್ಷನ್– ಕಟ್ ಹೇಳುತ್ತಿರುವುದಕ್ಕೆ ಕಾರಣ, ಅವರ ಕಿರಿಯ ಸ್ನೇಹಿತ ಹಾಗೂ ಸಂಕಲನಕಾರ ಕೆ.ಎಂ. ಪ್ರಕಾಶ್. ‘ಪ್ರಕಾಶ್ ಒತ್ತಾಯಕ್ಕೆ ಮಣಿದು ನಿರ್ದೇಶನಕ್ಕೆ ಮುಂದಾಗಿದ್ದೇನೆ. ತಲೆ ತುಂಬ ಕನಸು ತುಂಬಿಕೊಂಡು, ಸಾಲಗಾರರ ಕಾಟ ಎದುರಿಸದೇ ತಪ್ಪಿಸಿಕೊಂಡು ಓಡಾಡುವ ಮೇಲುಕೋಟೆ ಮಂಜನ ಕಥೆ, ಒಂದು ಅಪ್ಪಟ ಕಮರ್ಷಿಯಲ್ ಕಾಮಿಡಿ ಸಿನಿಮಾ. ಯಾವುದೇ ಲಾಜಿಕ್ ಇಲ್ಲ’ ಎಂದು ಜಗ್ಗೇಶ್ ಸ್ಪಷ್ಟಪಡಿಸಿದರು.

ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥ’ ಚಿತ್ರವನ್ನು ಪದೇ ಪದೇ ನೋಡುವ ಐಂದ್ರಿತಾ ರೇ ಅವರು ‘ಮೇಲುಕೋಟೆ ಮಂಜ’ನ ಜತೆಗಾತಿ. ಜಗ್ಗೇಶ್ ಕೋರಿಕೆಗೆ ಇನ್ನೊಂದು ಮಾತಾಡದೇ ‘ಓಕೆ’ ಅಂತ ಬಂದು ಬಣ್ಣ ಹಚ್ಚಿದ್ದಾರೆ. ಹತ್ತಾರು ಚಿತ್ರಗಳಿಗೆ ಸಂಗೀತ ಹೊಸೆದಿರುವ ಗಿರಿಧರ ದಿವಾನ್‌ ಅವರಿಗೆ ಜಗ್ಗೇಶ್ ಪ್ರತಿಭೆ ಕಂಡು ದಿಗ್ಭ್ರಮೆಯಾಗಿದೆ! ಯಾಕೆಂದರೆ ಮೊದಲ ಬಾರಿಗೆ ಜಗ್ಗೇಶ್ ಈ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ‘ಆ ಹಾಡುಗಳು ಅದ್ಭುತವಾಗಿವೆ’ ಎಂದು ಮೆಚ್ಚುಗೆ ಪಟ್ಟರು ಗಿರಿಧರ್. ಯೋಗರಾಜ ಭಟ್ಟರ ಎರಡು ಹಾಡುಗಳೂ ಚಿತ್ರದಲ್ಲಿವೆ.

ಜಗ್ಗೇಶ್ ಸ್ನೇಹಿತ ಕೃಷ್ಣಪ್ಪ ‘ಮಂಜ’ನಿಗೆ ಬಂಡವಾಳ ಹಾಕಿದ್ದಾರೆ. ಜಗ್ಗೇಶ್ ಸಿನಿಮಾ ನಿರ್ಮಾಣ ಅವರ ಬಹುವರ್ಷಗಳ ಕನಸಾಗಿತ್ತಂತೆ; ಈಗ ಅದು ಕೈಗೂಡಿದೆ ಎಂದು ಕೃಷ್ಣಪ್ಪ ಹೇಳಿದರು. ಆಗಸ್ಟ್ 1ರಂದು ಮುಹೂರ್ತ ನಡೆಯಲಿದ್ದು, ಒಂದೇ ಶೆಡ್ಯೂಲ್‌ನಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.