ADVERTISEMENT

ಹಾಡಿನ ಬೆಳದಿಂಗಳಲ್ಲಿ ಸಿದ್ಧಾರ್ಥ

ಸತೀಶ ಬೆಳ್ಳಕ್ಕಿ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಅಣ್ಣಾವ್ರ ಕುಟುಂಬದ ಮೂರನೇ ಕುಡಿ ವಿನಯ್‌ ರಾಜ್‌ಕುಮಾರ್‌ ಅಭಿನಯದ ‘ಸಿದ್ಧಾರ್ಥ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಈಚೆಗೆ ಅದ್ದೂರಿಯಾಗಿ ನಡೆಯಿತು. ‘ಸಿದ್ಧಾರ್ಥ 3ಜಿ’ ಕಾರ್ಯಕ್ರಮದಲ್ಲಿ ಹಲವು ವಿಶೇಷಗಳಿದ್ದವು. ವಿನಯ್‌ಗೆ ಶುಭಹಾರೈಸಲು ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದು ಒಂದಾದರೆ, ರಾಜ್‌ಕುಮಾರ್‌, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟ ವಿಶೇಷ ಗಳಿಗೆಗಳನ್ನು ಚಿತ್ರತುಣುಕುಗಳ (ಎವಿ) ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದು ಮತ್ತೊಂದು ವಿಶೇಷವಾಗಿತ್ತು.

‘ಸಿದ್ಧಾರ್ಥ’ ಚಿತ್ರದ ಸೀಡಿಗಳನ್ನು ನಟ ರವಿಚಂದ್ರನ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ಅವರ ಎಪ್ಪತ್ತೈದನೇ ಹುಟ್ಟುಹಬ್ಬವನ್ನೂ ಆಚರಿಸಲಾಯಿತು. ಇನ್ನೊಂದು ವರ್ಷದಲ್ಲಿ ತಮ್ಮ ಎರಡನೇ ಮಗ ಗುರು ರಾಜ್‌ಕುಮಾರ್‌ ಕೂಡ ನಟಿಸುವ ಸುಳಿವು ನೀಡಿದರು ರಾಘಣ್ಣ.

ಆಡಿಯೊ ಬಿಡುಗಡೆ ಸಮಾರಂಭಕ್ಕೆ ‘ಸಿದ್ಧಾರ್ಥ 3ಜಿ’ ಎಂಬ ಹೆಸರನ್ನು ಏಕೆ ಇರಿಸಿದ್ದೇವೆ ಎಂಬುದನ್ನು ತಿಳಿಸಲು ಅವರು ಆಡಿಯೊ ವಿಷುವಲ್‌ ತೋರಿಸಿದರು. ಆನಂತರ ವೇದಿಕೆಗೆ ಬಂದ ಶಿವಣ್ಣ ಮತ್ತು ಪುನೀತ್‌ ತಮ್ಮ ಮೊದಲ ಚಿತ್ರದ ಕ್ಷಣಗಳನ್ನು ನೆನಪಿಸಿಕೊಂಡರು.

ವಿನಯ್‌ ತಮ್ಮ ಮೊದಲ ಚಿತ್ರದ ಮೊದಲ ಶಾಟ್‌ನ ಅನುಭವವನ್ನು ನೆನಪಿಸಿಕೊಂಡಿದ್ದು ಹೀಗೆ: 
‘ತಾತ ನನ್ನ ರೋಲ್‌ ಮಾಡೆಲ್‌. ಮೊದಲ ಶಾಟ್‌ನಲ್ಲಿ ಭಾಗವಹಿಸುವಾಗ ಭಯ ಕಾಡಿತ್ತು. ಸಂಭಾಷಣೆಯನ್ನು ಸರಿಯಾಗಿ ಹೇಳುತ್ತೇನೋ ಇಲ್ಲವೋ ಎಂಬ ಟೆನ್ಷನ್‌ ಇತ್ತು. ನನ್ನ ಸಿನಿಮಾಕ್ಕೆ ಕ್ಲಾಪ್‌ ಮಾಡಿದ್ದು ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್‌. ಪ್ರಕಾಶ್‌ ಸರ್‌ ಆ್ಯಕ್ಷನ್‌ ಹೇಳಿದ್ರು, ಆಮೇಲೆ ಕಟ್‌ ಅಂದ್ರು. ಈ ಗ್ಯಾಪ್‌ನಲ್ಲಿ ನಾನು ಡೈಲಾಗ್‌ ಹೇಳಿದ್ದೆ. ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದರು. ತುಂಬ ಖುಷಿಯಾಯ್ತು. ಪ್ರಕಾಶ್‌ ಸರ್‌ ಡೈರೆಕ್ಟರ್‌ ಆಗಿ ಸಿಕ್ಕಿದ್ದು ನನ್ನ ಅದೃಷ್ಟ’.

ವಿನಯ್‌ ತಮ್ಮ ಮಾತಿನ ಕೊನೆಯಲ್ಲಿ, ‘ನನ್ನ ಹೆಸರು ಸಿದ್ಧಾರ್ಥ. ಆದರೆ, ಯಾವುದೇ ಆ್ಯಂಗಲ್‌ನಲ್ಲೂ ಬುದ್ಧ ಅಲ್ಲ’ ಎಂಬ ಡೈಲಾಗ್‌ ಹೊಡೆದರು. ‘ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವುದಕ್ಕಿಂತಲೂ ಒಂದೇ ವೇದಿಕೆಯಲ್ಲಿ ನಾಲ್ಕು ಜನರೂ ನಿಂತಿರುವುದನ್ನು ನೋಡಿದಾಗ ಹೆಚ್ಚು ಖುಷಿಯಾಯ್ತು. ಶಿವಣ್ಣ, ಅಪ್ಪು ಮತ್ತು ವಿನಯ್‌ ಮೂವರಿಗೂ ಕೆಲಸ ಮಾಡಿದ್ದೇನೆ. ತುಂಬ ಒಳ್ಳೆ ಚಿತ್ರ ಇದು. ಎಲ್ಲರಿಗೂ ಆಲ್‌ ದಿ ಬೆಸ್ಟ್‌’ ಅಂದರು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ.

‘ವಿನು ಕ್ಲೀನ್‌ ಸ್ಲೇಟ್‌ ಇದ್ದಂತೆ. ತುಂಬ ವಿನಯವಂತ. ಏನೇ ಹೇಳಿದರೂ ಅದನ್ನು ಅರ್ಥಮಾಡಿಕೊಂಡು, ಚೆನ್ನಾಗಿ ಅಭಿನಯರೂಪಕ್ಕೆ ಇಳಿಸುತ್ತಿದ್ದರು. ಅದು ನನಗೆ ದೊಡ್ಡ ಪ್ಲಸ್‌ ಆಯ್ತು. ಈ ಚಿತ್ರಕ್ಕೆ ಸೌಂಡಿಂಗ್‌ನಲ್ಲೇ ಹೊಸತನ ಬೇಕು ಅಂತ ಹರಿಕೃಷ್ಣರನ್ನು ಕೇಳಿಕೊಂಡೆ. ಅವರು ಐದೂ ಸಾಂಗ್‌ಗಳನ್ನು ಅಷ್ಟೇ ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ. ಎಷ್ಟು ಚೆನ್ನಾಗಿ ಮಾಡಿಕೊಟ್ಟಿದ್ದಾರೆಂದರೆ, ಅದನ್ನು ದೃಶ್ಯರೂಪಕ್ಕೆ ತರುವುದು ನಮಗೆ ಸವಾಲಾಯ್ತು’ ಅಂದರು ನಿರ್ದೇಶಕ ಪ್ರಕಾಶ್‌. 

‘ತುಂಬ ಸಂತೋಷದ ಸಮಯ ಇದು. ಕನ್ನಡ ಎಂಬ ಮಹಾಮನಸ್ಸನ್ನು ರೂಪಿಸಿದ ವಿರಾಟ್‌ಪ್ರತಿಭೆ ರಾಜ್‌ಕುಮಾರ್‌. ಅವರ ಮನಸ್ಸು ಎಲ್ಲ ಕಡೆಯೂ ಇರುತ್ತೆ. ಇದು ಮನಸ್ಸಿಗೆ ಸಂಬಂಧಪಟ್ಟ ಕೆಲಸ. ವಿನಯ ಕೇವಲ ಒಂದು ಕುಟುಂಬಕ್ಕೆ ಸೇರಿದ ಹುಡುಗ ಅಲ್ಲ. ಇಡೀ ಕನ್ನಡ ಎನ್ನುವ ಮಹಾಕುಟುಂಬಕ್ಕೇ ಸೇರಿದವನು. ಈ ಚಿತ್ರಕ್ಕೆ ಐದೂ ಹಾಡುಗಳನ್ನು ನನ್ನಿಂದ ಬರೆಯಿಸುವ ದೊಡ್ಡ ಧೈರ್ಯ ಮಾಡಿದ್ದಾರೆ. ಅದಕ್ಕೆ ನಾನು ಆಭಾರಿ’ ಅಂದರು ಜಯಂತ್‌ ಕಾಯ್ಕಿಣಿ.

‘ರಾಜ್‌ಕುಮಾರ್‌ ಮನೆಯ ಸಮಾರಂಭ ಅಂದ ತಕ್ಷಣ ಮನೆಯಿಂದಲೇ ಕೈಕೊಟ್ಟು ಹೊರಡಬೇಕಾಗುತ್ತದೆ. ಅದು ಅವರ ಮೇಲಿನ ಭಯದಿಂದಲ್ಲ. ಅವರ ಮೇಲಿರುವ ಗೌರವ, ಪ್ರೀತಿ, ಅಭಿಮಾನದಿಂದ. ಸಿದ್ಧಾರ್ಥ್‌ 3ಜಿ ಅಂತ ಅನೌನ್ಸ್‌ ಮಾಡಿದ್ರು, ಅದರ  ಪ್ರತಿ ಭಾಗದಲ್ಲೂ ನಾನಿದ್ದೇನೆ ಅನ್ನುವುದು ಖುಷಿ.  ರಾಜ್‌ಕುಮಾರ್‌ ಅವರ ಮನೆಯಲ್ಲಿ ಸದಾ ವಾಸಮಾಡುತ್ತಿದ್ದುದು ಒಂದೇ; ಅದು ವಿನಯ. ಅದು ವಿನಯ್‌ ಅವರಲ್ಲಿ ಕಾಣಿಸುತ್ತಿದೆ. ಆ ವಿನಯ ನಿನ್ನಲ್ಲಿರುವವರೆಗೂ, ಅಣ್ಣಾವ್ರ ನಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿರುವವರೆಗೂ ನಿನ್ನ ದಾರಿ ಖುಷಿಯಾಗಿರುತ್ತದೆ’ ಎಂದರು ರವಿಚಂದ್ರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.