ADVERTISEMENT

ಹಾಡುತ್ತಾ ಆಡುತ್ತಾ ನಟಿಯಾದ ಸುಷ್ಮಿತಾ

​ಪ್ರಜಾವಾಣಿ ವಾರ್ತೆ
Published 23 ಜೂನ್ 2016, 19:30 IST
Last Updated 23 ಜೂನ್ 2016, 19:30 IST
ಹಾಡುತ್ತಾ ಆಡುತ್ತಾ ನಟಿಯಾದ ಸುಷ್ಮಿತಾ
ಹಾಡುತ್ತಾ ಆಡುತ್ತಾ ನಟಿಯಾದ ಸುಷ್ಮಿತಾ   

ದೆಹಲಿ ಮೂಲದ ಸುಷ್ಮಿತಾ ಜೋಶಿ, ‘ರನ್ ಆಂಟನಿ’ ಚಿತ್ರದ ಮೂಲಕ ತಮ್ಮ ಸಿನಿಮಾ ಯಾನ ಪ್ರಾರಂಭಿಸುತ್ತಿದ್ದಾರೆ.

ಓದುವ ಸಲುವಾಗಿ ಉತ್ತರ ದಿಕ್ಕಿನಿಂದ ಬೆಂಗಳೂರಿಗೆ ಬರುವ ಯುವತಿಯರು ಇಲ್ಲಿನ ಬಣ್ಣದ ಲೋಕದತ್ತ ಆಕರ್ಷಿತರಾಗಿ ಮಾಡೆಲಿಂಗ್‌, ಬಳಿಕ ಸಿನಿಮಾ ರಂಗಕ್ಕೆ ಕಾಲಿಡುವುದು ಹೊಸತಲ್ಲ. ಈ ಪಟ್ಟಿಗೆ ನೂತನ ಸೇರ್ಪಡೆ ಸುಷ್ಮಿತಾ ಜೋಶಿ. ವಿನಯ್ ರಾಜಕುಮಾರ್‌ ನಾಯಕರಾಗಿರುವ ‘ರನ್‌ ಆ್ಯಂಟನಿ’ ಚಿತ್ರದಲ್ಲಿ ಇಬ್ಬರು ನಾಯಕಿಯರು. ನಾಯಕನೊಂದಿಗಿನ ಪ್ರೀತಿಯ ಕಾದಾಟದಲ್ಲಿ ತೆರೆಯ ಮೇಲೆ ಮತ್ತೊಬ್ಬ ನಾಯಕಿ ರುಕ್ಷರ್‌ ಮಿರ್‌ ಅವರಿಗೆ ಪೈಪೋಟಿ ನೀಡಿರುವವರು ದೆಹಲಿ ಮೂಲದ ಈ ಬೆಡಗಿ.

ದೆಹಲಿಯಲ್ಲಿ ಹುಟ್ಟಿ ಬೆಳೆದ ಸುಷ್ಮಿತಾ, ಆ್ಯಕ್ಸಸರಿ ಡಿಸೈನ್‌ ಕಲಿಕೆಗಾಗಿ ಬೆಂಗಳೂರಿಗೆ ಕಾಲಿಟ್ಟವರು. ಚಿಕ್ಕಂದಿನಲ್ಲಿ ಟೆಲಿವಿಷನ್‌ ನೃತ್ಯ ಕಾರ್ಯಕ್ರಮಗಳನ್ನು ನೋಡುತ್ತಿದ್ದ ಅವರಿಗೆ ತಾನೂ ಡ್ಯಾನ್ಸರ್ ಆಗಬೇಕೆಂಬ ಆಸೆಯಿತ್ತು. ಗಾಯನವೂ ತುಸು ಒಲಿದಿತ್ತು. ಅದರ ಜತೆ ಓದಿನಲ್ಲಿ ಅಪಾರ ಆಸಕ್ತಿ. 10ನೇ ತರಗತಿಯವರೆಗೂ ಐಎಎಸ್‌ ಅಧಿಕಾರಿಯಾಗುವ ಕನಸು ಅವರದು. ಆದರೆ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದ ಬಳಿಕ ಅವರ ಆದ್ಯತೆ–ಗುರಿ ಬದಲಾಯಿತು. ಓದುವಾಗಲೇ ಬಂದ ಮಾಡೆಲಿಂಗ್ ಆಫರ್‌ಗಳನ್ನು ಒಲ್ಲೆ ಎನ್ನಲಾಗಲಿಲ್ಲ.

ರೋಲ್‌ ಮಾಡೆಲ್‌ ಹಂಟ್‌ನಲ್ಲಿ ಗೆದ್ದು ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದೂ ಆಯಿತು. ಕ್ರಮೇಣ ಈ ರಂಗಿನ ಜಗತ್ತು ಸಿನಿಮಾ ಸೇರ್ಪಡೆಯಾದರೆ ಎನ್ನಷ್ಟು ರಂಗೇರುತ್ತದೆ ಎಂದೆನಿಸಿತ್ತು. ಹಾಗೆ ಸಿನಿಮಾಗೆ ಎದುರು ನೋಡುತ್ತಿದ್ದಾಗಲೇ ಸಿಕ್ಕಿದ್ದು ‘ರನ್‌ ಆ್ಯಂಟನಿ’ಯ ಅವಕಾಶ. ಸುಷ್ಮಿತಾರ ಚಿತ್ರವನ್ನು ನೋಡಿದ್ದ ಚಿತ್ರತಂಡದ ಸದಸ್ಯರೊಬ್ಬರು ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಆಡಿಷನ್‌ನಲ್ಲಿ ಮೆಚ್ಚಿಸಿ ಚಿತ್ರರಂಗದ ಹೊಸ್ತಿಲು ದಾಟುವುದು ಅವರಿಗೆ ಕಷ್ಟವೆನಿಸಲಿಲ್ಲ.

ಎಲ್ಲರ ನಡುವೆ ವಿಭಿನ್ನ
‘ರನ್ ಆಂಟನಿ’ ಗಂಭೀರ ಕಥಾವಸ್ತುವಿನ ಸಿನಿಮಾ. ನಾಯಕ ಕೂಡ ಗಂಭೀರ, ಮಾತು ಕಡಿಮೆ. ಇಲ್ಲಿ ಕಥೆಯಲ್ಲಿ ಬೇರೆ ಬೇರೆ ಛಾಯೆಗಳಿಲ್ಲ, ಏಕರೂಪವಾಗಿ ಕಥೆ ಸಾಗುತ್ತದೆ. ಉಳಿದ ಪಾತ್ರಗಳೂ ಕೂಡ. ಆದರೆ ನನ್ನದು ಮಾತ್ರ ವಿಭಿನ್ನ ಪಾತ್ರ. ಇದು ಒಂದು ರೀತಿ ನನ್ನ ಪ್ರತಿ ರೂಪ. ಇಲ್ಲಿನ ‘ಕನ್ನಿಕಾ’ ಬಬ್ಲಿ ಬಬ್ಲಿ ಹುಡುಗಿ, ವಾಚಾಳಿ. ಯಾವುದೇ ಅಡೆ ತಡೆಗಳಿಲ್ಲದ ಬದುಕುವ ಧೈರ್ಯಶಾಲಿ. ನನ್ನ ಹಾಗೂ ವಿನಯ್‌ ನಡುವಣ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಿದೆ ಎಂದು ತಮ್ಮ ಪಾತ್ರದ ಕುರಿತು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಮೊದಲ ಸಿನಿಮಾ ಅನುಭವ ಸಾಕಷ್ಟು ಕಲಿಸಿಕೊಟ್ಟಿದೆ ಎಂಬ ಖುಷಿಯೂ ಅವರಲ್ಲಿದೆ. ‘ನನ್ನ ಕುಟುಂಬದಲ್ಲಿ ಯಾರೂ ಸಿನಿಮಾ ಕ್ಷೇತ್ರದಲ್ಲಿ ದುಡಿದವರಲ್ಲ. ಸಿನಿಮಾ ಹೇಗೆ ಸಿದ್ಧವಾಗುತ್ತದೆ ಎಂಬ ಪ್ರಕ್ರಿಯೆಯ ಜ್ಞಾನವೂ ಇರಲಿಲ್ಲ. ಇಲ್ಲಿನ ಪ್ರತಿ ಸಂಗತಿಯೂ ನನಗೆ ಹೊಸತು. ಹೀಗಾಗಿ ದಿನವೂ ಹೊಸ ಅನುಭವ. ಕಲಿತದ್ದು ಬೊಗಸೆಯಷ್ಟು ಮಾತ್ರವೇ, ಈ ಶಾಲೆಯ ಪಠ್ಯ ಭಂಡಾರ ದೊಡ್ಡದಿದೆ’ ಎನ್ನುತ್ತಾರೆ ಸುಷ್ಮಿತಾ. ಚಿತ್ರತಂಡ ಪ್ರತಿಭಾವಂತರು ಮತ್ತು ಅನುಭವಿಗಳಿಂದ ಕೂಡಿತ್ತು.

ದೊಡ್ಡ ಬ್ಯಾನರ್‌ನಿಂದ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿರುವ ಅವಕಾಶವೂ ತಾನು ಅದೃಷ್ಟವಂತೆ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಿದೆ ಎನ್ನುತ್ತಾರೆ. ಮುಂದೆ ದೊರಕುವ ಪಾತ್ರಗಳು ವೈವಿಧ್ಯಮಯವಾಗಿರಬೇಕು ಎನ್ನುವುದು ಅವರ ಬಯಕೆ. ತಮ್ಮ ಸ್ವಭಾವಕ್ಕೆ ವಿರುದ್ಧವಾದ ಸವಾಲಿನ ಪಾತ್ರಗಳಿಗೆ ಆದ್ಯತೆ ನೀಡುವುದಾಗಿ ಅವರು ಹೇಳುತ್ತಾರೆ. ಕನ್ನಡವಲ್ಲದೆ ಬೇರೆ ಭಾಷೆಯ ಚಿತ್ರರಂಗಗಳ ಕದ ತಟ್ಟಲೂ ಅವರು ಸಿದ್ಧ. ಆದರೆ ಅದಕ್ಕೆ ಮುನ್ನ ಓದು ಪೂರ್ಣಗೊಳ್ಳಬೇಕು ಎಂಬ ಷರತ್ತನ್ನು ಅವರೇ ಹಾಕಿಕೊಂಡಿದ್ದಾರೆ.

ಗೆರೆ ಅಳಿಸುವ ತೆರೆ
ಉತ್ತರ ಭಾರತೀಯರಿಗೆ ದಕ್ಷಿಣ ಭಾರತೀಯರ ಕುರಿತು ವಿಭಿನ್ನ ಅಭಿಪ್ರಾಯವಿದೆ. ಬದುಕು–ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ದಪ್ಪ ಗೆರೆ ಇದೆ. ಆದರೆ ನಾವು ಇಲ್ಲಿಗೆ ಬಂದಾಗಲೇ ಆ ಸಂಸ್ಕೃತಿಯಲ್ಲಿನ ಗಟ್ಟಿತನ ಅರಿವಾಗುವುದು. ನಾವು ಅದರೊಳಗೆ ಬೆರೆತಾಗ ಸಹಜವಾಗಿಯೇ ನಮಗೆ ಅದು ಇಷ್ಟವಾಗುತ್ತದೆ. ಇಲ್ಲಿನ ಬದುಕಿನ ಬಗ್ಗೆ ಅಷ್ಟು ಕುತೂಹಲ ಇಲ್ಲದಿದ್ದರೂ, ಸಿನಿಮಾ ರಂಗದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಬಯಸುತ್ತಾರೆ.

ಹೀಗಾಗಿ ಸಿನಿಮಾದ ಕಾರಣದಿಂದ ಈ ಗೆರೆ ತೆಳುವಾಗುತ್ತಿದೆ ಎನ್ನುತ್ತಾರೆ ಸುಷ್ಮಿತಾ. ‘ಈ ಉದ್ಯಮ ಒಳ್ಳೆಯದಲ್ಲ. ಅಲ್ಲಿನ ಜನರ ಜತೆ ಕೆಲಸ ಮಾಡುವುದು ಕಷ್ಟ ಎಂಬ ಮಾತುಗಳನ್ನೂ ಕೇಳಿದ್ದೆ. ಆದರೆ ನನ್ನ ಮೊದಲ ಅನುಭವ ಅವಿಸ್ಮರಣೀಯ. ನಾನು ಕೆಲಸ ಮಾಡಿದ ತಂಡ ಅದ್ಭುತ. ಎಲ್ಲರೂ ಸಹೃದಯಿಗಳು, ಅಷ್ಟೇ ಸರಳತೆ ಹೊಂದಿರುವವರು. ಅವರಿಂದ ಸಾಕಷ್ಟು ಕಲಿತಿದ್ದೇನೆ’ ಎನ್ನುವ ಸುಷ್ಮಿತಾ, ಆದಷ್ಟು ಬೇಗನೆ ಕನ್ನಡ ಕಲಿತು ಮಾತನಾಡುವ ಹಂಬಲ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT