ADVERTISEMENT

ಹಾರರ್‌ ಅಂದ್ರೆ ಹಾರರ್‌ ಅಲ್ಲ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಹಾರರ್‌ ಅಂದ್ರೆ ಹಾರರ್‌ ಅಲ್ಲ!
ಹಾರರ್‌ ಅಂದ್ರೆ ಹಾರರ್‌ ಅಲ್ಲ!   

ಗಾಂಧಿನಗರದಲ್ಲಿ ಹಾರರ್ ಸಿನಿಮಾಗಳ ಸುಗ್ಗಿ ಸದ್ಯಕ್ಕಂತೂ ಮುಗಿಯುವಂತೆ ಕಾಣುತ್ತಿಲ್ಲ. ಮಳೆ ನಿಂತುಹೋದ ಮೇಲೆ ಬೀಳುವ ಹನಿಗಳಂತೆ ಆಗೀಗ ಹಾರರ್‌ ಸಿನಿಮಾಗಳು ವೀಕ್ಷಕರನ್ನು ಬೆಚ್ಚಿಬೀಳಿಸುವ ಕನಸನ್ನಿಟ್ಟುಕೊಂಡು ತೆರೆಗೆ ಬರುತ್ತಲೇ ಇವೆ. ‘ಮಂಜರಿ’ ಇದೇ ಟ್ರೆಂಡ್‌ನ ಭಾಗವಾಗಬೇಕು ಎಂದುಕೊಂಡು ಆರಂಭವಾದ ಸಿನಿಮಾ. ಆದರೆ ನಿರ್ದೇಶಕ ವಿಶ್ರುತ್‌ ನಾಯ್ಕ್‌ ಅವರು ಕಥೆ ಬರೆಯುತ್ತ ಬರೆಯುತ್ತ ಹಾರರ್‌ ಜತೆಗೆ ಬೇರೆ ಅಂಶಗಳೂ ಸೇರಿಕೊಂಡು ಮತ್ತೊಂದು ಆಯಾಮ ಪಡೆದುಕೊಂಡಿತು. ಅಷ್ಟೇ ಅಲ್ಲ, ಒಂದು ಸಿನಿಮಾದಲ್ಲಿ ಮುಗಿಸಲಾರದಷ್ಟು ದೊಡ್ಡದಾಗಿಯೂ ಬೆಳೆದಿತ್ತು. ಹಾಗಾಗಿ ಮೂರು ಭಾಗದಲ್ಲಿ ಸಿನಿಮಾ ಮಾಡಲು ನಿರ್ಧರಿಸಿದರು ವಿಶ್ರುತ್‌.

ಪರಿಣಾಮವಾಗಿ ‘ಮಂಜರಿ’ ಅಧ್ಯಾಯ 1 ಎಂಬ ಸೂಚನೆಯನ್ನೂ ಜತೆಗೇ ಇರಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗೆ ಮಾಧ್ಯಮಗೋಷ್ಠಿ ಏರ್ಪಡಿಸಿ ಧ್ವನಿಸುರುಳಿ ಬಿಡುಗಡೆ ಮಾಡಿತು. ವೇದಿಕೆಯ ಇಕ್ಕೆಲಗಳಲ್ಲಿನ ಚಿತ್ರದ ಪೋಸ್ಟರ್‌ಗಳು ‘ಇದೊಂದು ಹಾರರ್‌’ ಚಿತ್ರ ಎಂಬುದನ್ನೇ ಬಿಂಬಿಸುತ್ತಿದ್ದರೂ ಚಿತ್ರತಂಡ ಇದು ಹಾರರ್‌ ಸಿನಿಮಾ ಅಷ್ಟೇ ಅಲ್ಲ ಎಂದೇ ಪ್ರತಿಪಾದಿಸುತ್ತಿತ್ತು.

‘ಕಥೆ ಬರೆಯಲು ಆರಂಭಿಸಿದ್ದು ಹಾರರ್‌ ಸಿನಿಮಾಕ್ಕಾಗಿಯೇ. ಆದರೆ ಅದು ಬೆಳೆಯುತ್ತ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳತೊಡಗಿತು. ಸಾಕಷ್ಟು ಬೆಳೆದದ್ದರಿಂದ ಇದನ್ನು ಮೂರು ಭಾಗಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಿದೆ. ಇದರಲ್ಲಿ ಶೇ 40ರಷ್ಟು ಮಾತ್ರ ಹಾರರ್‌ ಅಂಶಗಳಿವೆ. ಉಳಿದಂತೆ ಹಾಸ್ಯ, ಪ್ರೇಮ, ಮನರಂಜನೆ, ಭಾವುಕತೆ ಎಲ್ಲವೂ ಇರುವ ಸಿನಿಮಾ ಇದು’ ಎಂದು ನಿರ್ದೇಶಕ ವಿಶ್ರುತ್‌ ವಿವರಿಸಿದರು.

ADVERTISEMENT

ವಿಶ್ರುತ್‌ ಕನಸಿಗೆ ಶಂಕರ್‌ ಮತ್ತು ಕಿರಣ್‌ ಗೌಡ ಹಣ ಹೂಡಿದ್ದಾರೆ. ಪ್ರಭು ಮತ್ತು ರೂಪಿಕಾ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಈ ಭಾಗದಲ್ಲಿ ಕೆಲವೇ ದೃಶ್ಯಗಳಲ್ಲಿ ಮಂತ್ರವಾದಿಯಾಗಿ ಕಾಣಿಸಿಕೊಂಡರೂ ಮುಂದಿನ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆಯಂತೆ. ವಿಜಯ್‌ ಚೆಂಡೂರು ಸಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿನ ಎರಡು ಹಾಡುಗಳಿಗೆ ಮ್ಯಾಥ್ಯೂ ಮನು ಸಂಗೀತ ಸಂಯೋಜಿಸಿದ್ದಾರೆ. ತಿಪಟೂರು, ಬಿಡದಿ, ಕೋಲಾರ, ನಂದಿಬೆಟ್ಟದಲ್ಲಿ ಚಿತ್ರವನ್ನು ಚಿತ್ರೀಕರಿಸಿದ್ದಾರೆ. ಬಿ. ಕೆ. ಮನು ಛಾಯಾಗ್ರಹಣ ಮಾಡಿರುವ ‘ಮಂಜರಿ’ಯಲ್ಲಿ ನಾಗೇಶ್‌, ಪವಿತ್ರಾ ಕೂಡ ಅಭಿನಯಿಸಿದ್ದಾರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.