ADVERTISEMENT

ಹುಚ್ಚ ವೆಂಕಟ್: ಎರಡನೇ ಆಟ ಶುರು!

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST
ವೆಂಕಟ್‌
ವೆಂಕಟ್‌   

ಸಿನಿಮಾ ಸಂಭಾಷಣೆಗಳಂತೆ ಕಾಣುವ, ಸಿನಿಮಾ ಸಂಭಾಷಣೆಗಳಲ್ಲದ ಕೆಳಗಿನ ಹೇಳಿಕೆಗಳನ್ನು ಓದಿಕೊಳ್ಳಿ.

* ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಅಷ್ಟೇ ಅಲ್ಲ, ನಾನು ನಿಜ ಜೀವನದಲ್ಲೂ ಹೀರೊ!
* ಒಬಾಮಾ, ಕಲಾಂ ಎಲ್ಲರೂ ‘ಹುಚ್ಚ ವೆಂಕಟ್ ಸೇನೆ’ ಬೆಂಬಲಿಸಿದ್ದಾರೆ.
* ನನ್ನ ಮೇಲಿನ ಅಭಿಮಾನಕೋಸ್ಕರ ಹೈದ್ರಾಬಾದ್ ಸೇರಿದಂತೆ ಬೇರೆ ಬೇರೆ ರಾಜ್ಯದ ಜನರು ಕನ್ನಡ ಕಲಿಯುತ್ತಿದ್ದಾರೆ.

* ಅಮಿತಾಭ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಅಮೀರ್ ಖಾನ್ ಎಲ್ಲರೂ ನನಗೆ ಬೆಂಬಲಕೊಟ್ಟಿದ್ದಾರೆ.
*ನನ್ನ ‘ಹುಚ್ಚ ವೆಂಕಟ್ ಸೇನೆ’ ಪೆನ್ನನ್ನೂ ಹಿಡಿಯುತ್ತೆ, ಮತ್ತೊಂದನ್ನೂ ಹಿಡಿಯುತ್ತೆ. ನನ್ನ ಸಹವಾಸಕ್ಕೆ ಬಂದವರನ್ನು ನಮ್ಮ ಹುಡುಗರು ಆಸ್ಪತ್ರೆಗೆ ಸೇರಿಸಿ ಬ್ರೆಡ್ಡು–ಬನ್ನು ಕೊಡಿಸುತ್ತಾರೆ.

ನೀವು ಕನ್ನಡ ಸಿನಿಮಾದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವವರಾದರೆ ಮೇಲಿನ ಮಾತುಗಳನ್ನು ಆಡಿದ್ದು ಯಾರು ಎನ್ನುವುದು ಈಗಾಗಲೇ ನಿಮಗೆ ಅರ್ಥವಾಗಿರಬೇಕು. ಹೌದು, ಇವು ವೆಂಕಟ್ ಅಲಿಯಾಸ್ ಹುಚ್ಚ ವೆಂಕಟ್ ಡೈಲಾಗ್‌ಗಳು! ‘ಹುಚ್ಚ ವೆಂಕಟ್’ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕುಗಳನ್ನು ಮತ್ತು ಕಾಮೆಂಟುಗಳನ್ನು ಪಡೆದ ವೆಂಕಟ್ ಅವರಿಗೂ ಹುಚ್ಚುತನಕ್ಕೂ ಅವಿನಾಭಾವ ಸಂಬಂಧ ಇರುವಂತಿದೆ. ಅವರೀಗ ಮತ್ತೆ ತಮ್ಮ ಎರಡನೇ ಆಟವನ್ನು ಆರಂಭಿಸಿದ್ದಾರೆ.

ವೆಂಕಟ್ ಅವರ ತಾಯಿ ‘ಪೊರ್ಕಿ’ ಎಂದು ಮಗನನ್ನು ಮುದ್ದಿನಿಂದ ಕರೆಯುತ್ತಿದ್ದರಂತೆ. ಹಾಗಾಗಿ ವೆಂಕಟ್‌ರ ಎರಡನೇ ಸಿನಿಮಾ ‘ಪೊರ್ಕಿ ಹುಚ್ಚ ವೆಂಕಟ್’ ಎಂದಾಗಿದೆ. ತಮ್ಮನ್ನು ಜನರ ಕಣ್ಣಿಗೆ ಕಾಣಿಸಿದ ‘ಹುಚ್ಚ ವೆಂಕಟ್‌’ ಹೆಸರನ್ನು ಯಾವುದೇ ಕಾರಣಕ್ಕೂ ಬಿಡದ ಸುಳಿವು ನೀಡಿದ ಅವರು, ಮುಂದಿನ ದಿನಗಳಲ್ಲಿ ಮಾಡುವ ಎಲ್ಲ ಚಿತ್ರಗಳಿಗೂ ಹುಚ್ಚ ವೆಂಕಟ್ ಹೆಸರು ಇದ್ದೇ ಇರಲಿದೆ ಎಂದರು. ಅಂದಹಾಗೆ, ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರದಲ್ಲಿ  ತಾಯಿ ಸೆಂಟಿಮೆಂಟು, ರಾಜಕೀಯ, ರೌಡಿಸಂ ಇತ್ಯಾದಿ ಅಂಶಗಳು ಇರಲಿವೆಯಂತೆ.

‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿದೆ. ಈ ಟ್ರೇಲರ್‌ ಹಿಂದೆಯೂ ಒಂದು ಸಣ್ಣ ಕಿರಿಕ್‌ ಸ್ಟೋರಿ ಇದೆ. ರಾಜಕಾರಣಿಗಳಾದ ಎಸ್‌.ಎಂ. ಕೃಷ್ಣ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನು ಬಳಸಿಕೊಂಡಿದ್ದಕ್ಕೆ ಸೆನ್ಸಾರ್ ಮಂಡಳಿಯವರು ಒಂದು ತಿಂಗಳ ಕಾಲ ಟ್ರೇಲರ್ ನೀಡದೆ ಸತಾಯಿಸಿದರು ಎಂದರು ವೆಂಕಟ್‌.

ಕೊನೆಯದಾಗಿ ವೆಂಕಟ್‌ ಹೇಳಿದ್ದು: ಇನ್ನು ಮುಂದೆ ಪತ್ರಕರ್ತರು ಸಿನಿಮಾ ಸೆನ್ಸಾರ್ ಕೆಲಸ ಮಾಡಬೇಕು! ‘ಬೆಳಿಗ್ಗೆ ಚಿತ್ರಗಳನ್ನು ಸೆನ್ಸಾರ್ ಮಾಡಿ, ಆ ನಂತರ ಕಚೇರಿಗೆ ಹೋಗಿ’ ಎನ್ನುವುದು ಅವರ ಆದೇಶ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.