ADVERTISEMENT

‘ಹುಲಿದುರ್ಗ’ದ ಟೆಂಟ್‌ನಲ್ಲಿ ಪ್ರೇಮಕಾವ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ನೇಹಾ ಪಾಟೀಲ್‌
ನೇಹಾ ಪಾಟೀಲ್‌   

ಈಗ ಮಲ್ಟಿಫ್ಲೆಕ್ಸ್‌, ಮಾಲ್‌ ಸಂಸ್ಕೃತಿಯ ಕಾಲ. ಹೊಸ ತಲೆಮಾರು ಈ ಸಂಸ್ಕೃತಿಯಲ್ಲಿಯೇ ಮಿಂದೇಳುತ್ತಿದೆ. ಒಂದೇ ಚಿತ್ರಮಂದಿರದಲ್ಲಿ ಹಲವು ಸ್ಕ್ರೀನ್‌ಗಳಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ನಡೆಯುತ್ತದೆ. ಟೆಂಟ್ ಸಿನಿಮಾದ ಪರಿಕಲ್ಪನೆ ಮರೆಯಾಗಿ ದಶಕಗಳೇ ಉರುಳಿವೆ. ಆದರೆ, ನಿರ್ದೇಶಕ ವಿಕ್ರಮ್‌ ಯಶೋಧರ ಟೆಂಟ್‌ವೊಂದರಲ್ಲಿ ಪ್ರೀತಿ ಅರಳಿಸಿದ್ದಾರೆ.

ಟೆಂಟ್‌ನಲ್ಲಿ ಪ್ರೇಮಕಾವ್ಯ ಅರಳಿಸಿರುವ ಅವರು, ಈ ಬಗ್ಗೆ ಹೇಳಲು ಸುದ್ದಿಗೋಷ್ಠಿಗೆ ಬಂದಿದ್ದರು. ‘ಹುಲಿದುರ್ಗ’ ನನ್ನ ಮೊದಲ ಸಿನಿಮಾ. ಈ ಚಿತ್ರದಲ್ಲಿ ಹಳ್ಳಿಯ ಸೊಗಡಿದೆ. ಎಲ್ಲ ವರ್ಗದ ಜನರಿಗೂ ಈ ಸಿನಿಮಾ ಇಷ್ಟವಾಗಲಿದೆ ಎಂದರು.

ಸುಪ್ರೀತ್‌ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ನಟನಾಗುತ್ತಿದ್ದಾರೆ. ಹದಿನೇಳು ವರ್ಷದಿಂದ ನಟನಾಗಬೇಕೆಂಬ ಅವರ ಆಸೆ ಈಡೇರಿದ ಖುಷಿಯಲ್ಲಿದ್ದರು. ‘ನಾನು ಸ್ಟಾರ್‌ ನಟನ ಮಗನಲ್ಲ. ನಿರ್ಮಾಪಕ ಸುಧಾಕರ್‌ ಮತ್ತು ನಾನು ಹಲವು ವರ್ಷದಿಂದ ಸ್ನೇಹಿತರು. ಅವರ ಭರವಸೆಯಿಂದ ನಾನಿಂದು ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದರು.

ADVERTISEMENT

ಹಿರಿಯ ನಟ ಗುರುರಾಜ ಹೊಸಕೋಟೆ ಅವರಿಗೆ ಇದು 105ನೇ ಸಿನಿಮಾ. ‘ಜೋಗಿ’ ಚಿತ್ರದ ಬಳಿಕ ನನ್ನನ್ನು ಚಿತ್ರರಂಗವು ಮುಸ್ಲಿಂ ಪಾತ್ರಕ್ಕೆ ಸೀಮಿತಗೊಳಿಸಿದೆ ಎಂಬ ಬೇಸರ ಅವರ ಮಾತುಗಳಲ್ಲಿತ್ತು.

‘ಜೋಗಿ ಸಿನಿಮಾದ ಬಳಿಕ 39 ಚಿತ್ರಗಳಲ್ಲಿ ನನಗೆ ಸಿಕ್ಕಿದ್ದು ಮುಸ್ಲಿಂ ಪಾತ್ರ. ಯಾವುದಾದರೊಂದು ಪಾತ್ರ ಯಶಸ್ಸು ಗಳಿಸಿದರೆ ಆ ಪಾತ್ರವೇ ಕಲಾವಿದನಿಗೆ ಕಾಯಂ ಆಗುತ್ತದೆ. ಈ ಧೋರಣೆ ಏಕೆ?’ ಎಂಬ ಪ್ರಶ್ನೆ ಮುಂದಿಟ್ಟರು.

‘ನನ್ನದು ಹಳ್ಳಿಯ ಟೆಂಟ್‌ ಮಾಲೀಕನ ಪಾತ್ರ. ಸುಪ್ರೀತ್‌ ಅನಾಥ. ಸಿನಿಮಾ ಪೋಸ್ಟರ್‌ ಅಂಟಿಸುವುದು ಅವನ ಕೆಲಸ. ಅವನಲ್ಲಿ ಪ್ರೀತಿಯ ಅಂಕುರವಾಗುತ್ತದೆ. ಆ ನಂತರ ಅದು ಸಾಗುವ ಬಗೆಯನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ’ ಎಂದು ಕಥೆಯ ಎಳೆಬಿಡಿಸಿಟ್ಟರು.

ಚಿತ್ರಕ್ಕೆ ಎರಡು ಹಾಡು ಬರೆದಿರುವ ನಿರ್ದೇಶಕ ವಿ. ನಾಗೇಂದ್ರಪ್ರಸಾದ್‌ ಹಾಡೊಂದರಲ್ಲಿಯೂ ಅಭಿನಯಿಸಿದ್ದಾರೆ. ‘ವಿಕ್ರಮ್‌ ನನ್ನ ಶಿಷ್ಯ. ಆತ ಮನುಷ್ಯ ಸಂಬಂಧಗಳ ಕಥೆ ಆಧರಿಸಿ ಸಿನಿಮಾ ಮಾಡಿದ್ದಾನೆ. ವಿಷ್ಣುವರ್ಧನ್‌ ಅವರ 44 ಸಿನಿಮಾಗಳ ಟೈಟಲ್‌ ಇಟ್ಟುಕೊಂಡು ಹಾಡು ರಚಿಸಿದ್ದೇನೆ’ ಎಂದರು.

ನಾಯಕಿ ನೇಹಾ ಪಾಟೀಲ್‌, ‘ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ. ಟೆಂಟ್‌ನಲ್ಲಿ ನಡೆಯುವ ಪ್ರೇಮಕಥೆ ಸೊಗಸಾಗಿ ಮೂಡಿಬಂದಿದೆ’ ಎಂದರು. ಇದೇ ವೇಳೆ ಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು. ಕೆ. ಸುಧಾಕರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.