ADVERTISEMENT

ಹೊಸಬರ ದರ್ಬಾರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2014, 19:30 IST
Last Updated 16 ಜುಲೈ 2014, 19:30 IST

ಮಾತು ಮಾತಿಗೂ ಕೇಕೆ, ಶಿಳ್ಳೆಗಳು. ಸಭಾಂಗಣದ ತುಂಬ ಸಿನಿಮಾ ಮಂದಿರಗಳಂತೆಯೇ ಧ್ವನಿವರ್ಧಕಗಳನ್ನು ಹಾಕಲಾಗಿತ್ತು. ಈ ಹುಮ್ಮಸ್ಸಿನ ದೃಶ್ಯ ಕಂಡುಬಂದಿದ್ದು ‘ಓ ದರ್ಬಾರ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ.

‘ಇಂದಿನ ಯುವ ಜನಾಂಗ ಯಾವ ದಾರಿಯಲ್ಲಿ ಸಾಗುತ್ತಿದೆ. ಎಷ್ಟು ಜನ ದೇಶದ ಒಳಿತಿಗೆ ಕಾರಣರಾಗಿದ್ದಾರೆ, ಎಷ್ಟು ಜನ ಕೆಟ್ಟ ದಾರಿ ತುಳಿದು ಹಾಳಾಗುತ್ತಿದ್ದಾರೆ ಎಂಬ ಎಳೆಯನ್ನಿಟ್ಟುಕೊಂಡು ಮಾಡಿದ ಕಥೆ ಇದು. ಕಥೆಯ ಮೇಲೆ ಸುಮಾರು ಎರಡು ವರ್ಷ ಕೆಲಸ ಮಾಡಿದ್ದೇನೆ. ಸಮಾಜಕ್ಕೊಂದು ಸಂದೇಶ ನೀಡುವ ಪ್ರಯತ್ನ ಚಿತ್ರದಲ್ಲಿದೆ’ ಎಂದು ನಿರ್ದೇಶಕ ಮೋಹನ್‌ಕುಮಾರ್ ಹೇಳಿದರು.

‘ದರ್ಬಾರ್ ಎಂದರೆ ಏನೆಂಬುದು ಎಲ್ಲರಿಗೂ ಗೊತ್ತು. ಆದರೆ ಶಿರ್ಷಿಕೆಯೊಂದಿಗೆ ‘ಓ’ ಎಂದು ಯಾಕೆ ಸೇರಿಸಿದ್ದೇನೆ ಎಂಬುದು ಸಸ್ಪೆನ್ಸ್. ಚಿತ್ರಮಂದಿರಲ್ಲಿ ಅದಕ್ಕೆ ಉತ್ತರ ಸಿಗಲಿದೆ’ ಎಂದರು ಮೋಹನ್‌ಕುಮಾರ್‌. ಅಂದಹಾಗೆ, ನಿರ್ದೇಶಕರಾಗಿ ಇದವರ ಮೊದಲ ಸಿನಿಮಾ.
‘ಕಿಸ್ಮತ್’, ‘ಕೇರ್‌ಆಫ್ ಫುಟ್‌ಪಾತ್–2’ ಚಿತ್ರಗಳಲ್ಲಿ ನಟಿಸಿರುವ ಸುಷ್ಮಾ ‘ಓ ದರ್ಬಾರ್’ ಚಿತ್ರದ ನಾಯಕಿ.

‘ಚಿತ್ರದಲ್ಲಿ ನಾನು ಕೇರಳದ ಸಾಂಪ್ರದಾಯಿಕ ಹುಡುಗಿ. ಓದಿಗಾಗಿ ಕರ್ನಾಟಕಕ್ಕೆ ಬಂದು ನಾಯಕನ ಮೇಲೆ ಪ್ರೀತಿ ಅಂಕುರಿಸುತ್ತದೆ’ ಎಂದು ತಮ್ಮ ಪಾತ್ರದ ಬಗೆ ಅವರು ಹೇಳಿಕೊಂಡರು. 23 ವರ್ಷದ ಶರತ್ ಸಿಂಗ್ ಚಿತ್ರದ ನಾಯಕ. ಚಾಕಲೇಟ್ ಹೀರೊನಂತೆ ಕಾಣುವ ಅವರು ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

‘ಚಿತ್ರವನ್ನು ಬೇರೆ ಭಾಷೆಗೆ ಡಬ್ ಮಾಡುವ ಚಿಂತನೆಯೂ ಇದೆ. ಹೀಗಾಗಿ ಹೂಡಿದ ಹಣಕ್ಕೆ ಮೋಸವಾಗುವುದಿಲ್ಲ ಎಂದು ನಂಬಿದ್ದೇವೆ’ ಎಂದು ನಿರ್ಮಾಪಕರಾದ ಚಂದ್ರು ಮತ್ತು ಆರ್. ಸಾಗರ್ ತಮ್ಮ ಸಿನಿಮಾ ಲೆಕ್ಕಾಚಾರಗಳನ್ನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT