ADVERTISEMENT

ಹೊಸ ಕನಸು ಹೊಸೆಯುತ್ತಾ...

​ಪ್ರಜಾವಾಣಿ ವಾರ್ತೆ
Published 15 ಜುಲೈ 2014, 19:30 IST
Last Updated 15 ಜುಲೈ 2014, 19:30 IST

ಸಾಕಷ್ಟು ಗ್ಲಾಮರ್‌ಪಾತ್ರ ಮಾಡಿದ್ದೇನೆ. ಇನ್ನು ಮುಂದೆ ಗ್ಲಾಮರ್‌ ಪಾತ್ರಗಳಿಗಿಂತ ಸವಾಲಿನ  ಪಾತ್ರಗಳಲ್ಲಿ ಅಭಿನಯಿಸುವ ಇರಾದೆ ಇದೆ. ಸವಾಲಿನ ಪಾತ್ರಗಳು ನಟನೆಯನ್ನು ಪಕ್ವಗೊಳಿಸುತ್ತದೆ ಎಂಬುವುದು ನಟಿ ದೀಪಾನಿತ ಅವರ ಗಂಭೀರ ಮಾತು. ಬಣ್ಣದ ಜಗತ್ತಿನಲ್ಲಿ ಹಳೆ ನೀರು ಹರಿದು, ಹೊಸ ನೀರು ಬರುವುದು ಸಹಜ. ಹಾಗೆ ಅಲ್ಲಿ ಪಾತ್ರಗಳು ಕೂಡ ಸದಾ ಹೊಸತನ್ನು ಬೇಡುತ್ತದೆ.

ಇಂದು ಹಾಸ್ಯ ಪಾತ್ರ ಮಾಡಿದರೆ, ನಾಳೆ ಖಳನಾಯಕನ ಪಾತ್ರದಲ್ಲಿ ಮಿಂಚಬೇಕು ಎಂಬ ತುಡಿತವಿರುತ್ತದೆ. ನಟಿ ದೀಪಾನಿತ ಅವರ ವೃತ್ತಿಬದುಕಿನಲ್ಲೂ ಈ ರೀತಿಯ ಬದಲಾವಣೆ ಗಾಳಿ ಬೀಸಿದೆ. ಮಾಡೆಲ್‌ ಆಗಿ ಕೆಂಪು ಹಾಸಿನ ಮೇಲೆ ಹೆಜ್ಜೆ ಇಟ್ಟ ಈ ಚೆಲುವೆ ನಟಿಯಾಗಿಯೂ ಸೈ ಅನಿಸಿಕೊಂಡಿದ್ದರು.

‘16 ಡಿಸೆಂಬರ್’, ‘ದಿಲ್‌ ವಿಲ್ ಪ್ಯಾರ್’, ‘ಲೇಡಿಸ್‌ ವರ್ಸಸ್ ರಿಕ್ಕಿಬಾಲ್’, ಜೋಡಿ ಬ್ರೇಕರ್ಸ್ ಸಿನಿಮಾದಲ್ಲಿ ನಟಿಸಿರುವ ದೀಪಾನಿತ ಅವರಿಗೆ ಸಿನಿಮಾ ಅನ್ನುವುದು  ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ತೋರಿಸಿಕೊಳ್ಳುವುದಕ್ಕೆ ಇರುವ ವೇದಿಕೆಯಲ್ಲ. ವರ್ಷಕ್ಕೊಂದು ಸಿನಿಮಾ ಬಿಡುಗಡೆಯಾಗುವುದು ಕೂಡ ಇವರ ಆದ್ಯತೆ ಅಲ್ಲವೆಂದು ಹೇಳಿದ್ದಾರೆ.

ಇವರಿಗೆ ಗ್ಲಾಮರ್‌ ಪಾತ್ರಗಳಿಗಿಂತ ಸವಾಲೊಡ್ಡುವ ಪಾತ್ರಗಳಲ್ಲಿ ಮಿಂಚಬೇಕು ಎಂಬ ಕನಸಿದೆಯಂತೆ.  ಅಕ್ಷಯ್‌ ಅಕ್ಕಿನೇನಿ ಅವರ ನಿರ್ದೇಶನದ ಸಿನಿಮಾವೊಂದರಲ್ಲಿ ದೀಪಾನಿತ ಪ್ಯಾರಾನಾರ್ಮಲ್‌ ಪಾತ್ರದಲ್ಲಿ ಗಮನ ಸೆಳೆಯಲ್ಲಿದ್ದಾರಂತೆ. ಅದು ಅಲ್ಲದೇ ಮಧ್ಯಮ ವರ್ಗದ ಮಹಿಳೆಯ ಪಾತ್ರವಿರುವ ಮತ್ತೊಂದು ಸಿನಿಮಾವು ಅವರ ಕೈಯಲ್ಲಿದೆಯಂತೆ.

ಮಾಡೆಲಿಂಗ್‌ ಲೋಕದಲ್ಲಿ ಮಿಂಚಿರುವ ದೀಪಾನಿತ ಅವರ ಬಳಿ ಆ ಜಗತ್ತಿನ ಕುರಿತ ಒಂದು ಚಿತ್ರಕತೆ ಕೂಡ  ಇದೆಯಂತೆ. ಗ್ಲಾಮರ್‌ ಪ್ರಪಂಚ ಕುರಿತು ಸಕಾರಾತ್ಮಕವಾದ ಚಿತ್ರಕತೆ ಅದು ಎನ್ನುತ್ತಾರೆ ದೀಪಾನಿತ. ‘ಜನ ಫ್ಯಾಷನ್‌ ಲೋಕದ ಬಗ್ಗೆ ಏನೇನೋ ವಿವಾದಗಳನ್ನು ಕೇಳಿದ್ದಾರೆ, ನೋಡಿದ್ದಾರೆ. ಅದು ಅಲ್ಲದೇ ಇನ್ನೂ ಒಳ್ಳೆಯ ವಿಷಯ ಅಲ್ಲಿದೆ. ಆ ಮುಖವನ್ನು ನಾನು ತೋರಿಸುತ್ತೇನೆ. ಒಂದು ನಾಣ್ಯಕ್ಕೆ ಎರಡು ಮುಖವಿದೆ ನಾನು ಇನ್ನೊಂದು ಮುಖವನ್ನು ತೋರಿಸಲಿದ್ದೇನೆ’ ಎನ್ನುತ್ತಾರೆ ಈ ಬೆಡಗಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.