ADVERTISEMENT

ಹೊಸ ಪುಲಕ ತವಕ–ನಡುಕ...

ಡಿ.ಎಂ.ಕುರ್ಕೆ ಪ್ರಶಾಂತ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

* ಮೊದಲ ನಿರ್ಮಾಣದ ಅನುಭವಗಳೇನು?
ಹನ್ನೆರಡು ವರ್ಷಗಳ ಚಿತ್ರರಂಗದ ಶ್ರಮವೇ ನನ್ನ ಚೊಚ್ಚಿಲ ನಿರ್ಮಾಣದ ‘ರಾಕೆಟ್’ ಎನ್ನಬಹುದು. ಸಾಮಾನ್ಯ ಕೌಟುಂಬಿಕ ಹಿನ್ನೆಲೆಯ ನಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಕಲೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಂದವನೇನೂ ಅಲ್ಲ. ಬದುಕಿನ ಹಿನ್ನೆಲೆಯಲ್ಲಿ ಬಡತನ–ಒತ್ತಡಗಳಿವೆ. ನಮ್ಮ ಅಮ್ಮ ಬದುಕು ಕಟ್ಟಿಕೊಳ್ಳಲು ತುಂಬಾ ಹೋರಾಟ ನಡೆಸುತ್ತಿದ್ದರು. ಅದನ್ನು ನೋಡುತ್ತಾ ಬೆಳೆದೆ. ಇವುಗಳು ನನ್ನ  ಸೂಕ್ಷ್ಮಗೊಳ್ಳುವಂತೆ ಮಾಡಿದವು. ಹೈಸ್ಕೂಲ್‌ನಲ್ಲಿರುವಾಗಲೇ ಯೋಚನೆ ಮಾಡುವುದನ್ನು ಕಲಿತೆ.

ಪೋಲಿತನಗಳನ್ನು ಬಿಟ್ಟೆ. ಇದಕ್ಕೆ ಮನೆಯ ಪರಿಸ್ಥಿತಿಗಳು ಕಾರಣ. ‘ನೀನಾಸಮ್’ ಸೇರಿದ ನಂತರ ನಿಲ್ಲಬೇಕು– ಗೆಲ್ಲಬೇಕು ಎನ್ನುವ ಛಲ ಮೂಡಿತು. ಸಣ್ಣ–ಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಾಯಕ ನಟನಾಗಿ ಈ ಹಂತಕ್ಕೆ ಬಂದು ನಿಂತಿದ್ದೇನೆ. ಈ ಚಿತ್ರದ ಕಥೆ ಮಾಡಲಿಕ್ಕೆ ಆರು ತಿಂಗಳು ತೆಗೆದುಕೊಂಡೆವು. ರಾಕೆಟ್... ರಾಕೆಟ್... ಎಂದು ಊಟ ನಿದ್ದೆ ಬಿಟ್ಟ ದಿನಗಳು ಹಲವು. ಈ ಸಿನಿಮಾ ಗೆದ್ದರೆ ಇಲ್ಲಿಂದ ಮುಂದಿನದ್ದೇ ಮತ್ತೊಂದು ಹಂತ. ನಾನು ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ಬಂಡವಾಳ ಖರ್ಚಾಗಿದೆ.

* ‘ರಾಕೆಟ್‌’ ಚಿತ್ರವನ್ನು ವಿಪರೀತವಾಗಿ ಹಚ್ಚಿಕೊಂಡಿರುವಂತಿದೆ?
ದುಡ್ಡು ಇಲ್ಲದಿದ್ದರೆ ಬದುಕುವೆ, ಕೆಲಸ ಇಲ್ಲದಿದ್ದರೆ ಬದುಕಲು ಕಷ್ಟ. ಸುಮಾರು 500 ದಿನಗಳಿಂದ ಈ ಚಿತ್ರದ ಕೆಲಸ ನಡೆಯುತ್ತಿದೆ. ನಟ ಅಚ್ಯುತ್ ಕುಮಾರ್ ಹೇಳುತ್ತಿದ್ದರು– ‘ನೀನು ಬೆಳಗ್ಗಿನಿಂದ ರಾತ್ರಿಯವರೆಗೂ ರಾಕೆಟ್ ರಾಕೆಟ್ ಎನ್ನುತ್ತಿರುವೆ. ನೀನು ಏನಾದರೂ ಹುಚ್ಚನಾದರೆ ಗಾಂಧಿನಗರದ ತುಂಬಾ ರಾಕೆಟ್ ರಾಕೆಟ್ ಎಂದು ಅಲೆದಾಡುವೆ’ ಎಂದರು. ಅತಿಯಾಗಿ ಹಚ್ಚಿಕೊಂಡು ಕೆಲಸ ಮಾಡದಿದ್ದರೆ ಯಾವುದೇ ಬದುಕಿಲ್ಲ ಎನಿಸುತ್ತದೆ ನನಗೆ. ನನಗೆ ಒಂದು ಬದಲಾವಣೆ ಬೇಕು ಎಂದುಕೊಂಡೇ ಈ ಚಿತ್ರ ಮಾಡಿರುವುದು. ಈ ಪ್ರಯತ್ನದಲ್ಲಿ ಭಯವೂ ಇರುತ್ತದೆ. ಮುಂದಿನ ದಿನಗಳಲ್ಲಿ ಮತ್ತೊಂದಿಷ್ಟು ಬೇರೆ ಬೇರೆ ಚಿತ್ರಗಳನ್ನು ಮಾಡಬೇಕು ಎಂದರೆ ಈ ಸಿನಿಮಾವನ್ನು ಅತಿಯಾದ ಶ್ರದ್ಧೆಯಿಂದ ಪೊರೆಯುವುದು ಅಗತ್ಯವಾಗಿತ್ತು.

* ಚಿತ್ರದ ಪ್ರತಿ ವಿಭಾಗದಲ್ಲೂ ಕೆಲಸ ನಿರ್ವಹಿಸಿದ್ದೀರಿ ಎನ್ನುವ ಮಾತಿದೆ. ಇದರಿಂದ ತಂತ್ರಜ್ಞರು ಮುಕ್ತವಾಗಿ ಕಾರ್ಯ ನಿರ್ವಹಿಸಲು ಎಷ್ಟರಮಟ್ಟಿಗೆ ಸಾಧ್ಯವಾಗಿದೆ?
ಅವರ ಕೆಲಸದ ಜತೆಯಲ್ಲಿ ನಾನು ಇರುತ್ತಿದ್ದೆ. ಅವರ ಸೃಜನಶೀಲತೆಗೆ ಧಕ್ಕೆ ಬರುವಂತೆ ನಡೆದುಕೊಂಡಿಲ್ಲ. ಯಾರು ಏನೇ ಸಲಹೆ–ಸೂಚನೆಗಳನ್ನು ನೀಡಿದರೂ ರಾಕೆಟ್ ಸ್ವೀಕರಿಸುತ್ತಿತ್ತು. ಅದು ಪ್ರಾಮಾಣಿಕವಾಗಿ ಮತ್ತು ಎಲ್ಲರಿಗೂ ಸರಿ ಎನಿಸಬೇಕಿತ್ತು ಅಷ್ಟೇ. ಎಡಿಟಿಂಗ್‌, ಪೋಸ್ಟರ್ ಡಿಸೈನ್ ಸೇರಿ ಎಲ್ಲ ಕೆಲಸಗಳಲ್ಲೂ ಒಬ್ಬನಾಗಿ ಕುಳಿತಿದ್ದೇನೆ.

* ಚಿತ್ರದ ವಿಶೇಷಗಳೇನು?
ಪಕ್ಕಾ ಆಕ್ಷನ್– ರಿಚ್– ಡ್ಯಾನ್ಸ್‌ ಮತ್ತು ನಗರ ಭಾಷೆಯಲ್ಲಿ ಚಿತ್ರ ಇದೆ. ಅಂದರೆ ಇಲ್ಲಿಯವರೆಗೂ ನನ್ನನ್ನು ಪ್ರೇಕ್ಷಕರು ನೋಡಿರದ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದೇನೆ. ಕೆಲವು ಕಥೆಗಳನ್ನು ನಾವು ಮಾಡಬೇಕು ಎಂದುಕೊಂಡಿರುತ್ತೇವೆ. ಅದು ಸಾಧ್ಯವಾಗುವುದಿಲ್ಲ. ಆಗ ನಾವೇ ನಿರ್ಮಾಣಕ್ಕೆ ಮುಂದಾಗುತ್ತೇವೆ. ಈ ಹಿನ್ನೆಲೆಯಲ್ಲಿ ರಾಕೆಟ್ ಹುಟ್ಟಿದ್ದು.

* ಹದಿನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಿರಂತೆ?
ನಾಯಕ ವರ್ಣರಂಜಿತವಾಗಿ ಬದುಕ ಬಯಸಿದವನು. ಒಂದು ಸಮಯ ಈ ಕೆಲಸ ಮಾಡಿದರೆ ಮತ್ತೊಂದು ಸಂದರ್ಭದಲ್ಲಿ ಬೇರೆಯದ್ದೇ ಆದ ಕೆಲಸ. ಸಿನಿಮಾ ಶೈಲಿಯ ಬದುಕನ್ನು ಯೋಚನೆ ಮಾಡುತ್ತಾನೆ. ಬದುಕು ಎಂದರೆ ಸಿನಿಮಾ ಎಂದುಕೊಂಡಿರುವವನು. ನಾಯಕ ರಾಕೆಟ್ ವೇಗ – ಆತ್ಮವಿಶ್ವಾಸದ ಪ್ರತಿರೂಪವಾಗಿಯೂ ನಿಲ್ಲುವನು. ಉದಾಹರಣೆಗೆ ರಾಜ್‌ಕುಮಾರ್ ಅವರ ಚಿತ್ರಗಳಲ್ಲಿನ ಪಾತ್ರಗಳು ತೊಟ್ಟಿರುವ ಬಟ್ಟೆಗಳನ್ನೇ ತೊಡಲು ಇಷ್ಟಪಡುವನು.

* ನಿಮ್ಮನ್ನು ಹಳ್ಳಿ ಸೊಗಡಿನಲ್ಲಿ ಮೆಚ್ಚಿದ ಮಂದಿ ಬಹಳ ಇದ್ದಾರೆ. ಅವರು ‘ರಾಕೆಟ್’ ಅನ್ನು ಯಾವ ರೀತಿ ಸ್ವೀಕರಿಸಬಹುದು?
ನಾನು ಡ್ರಾಮಾ ಕಲಾವಿದನಾದ ಕಾರಣ ಪಾತ್ರ–ಕಥೆಗಳು ನಂಬುವ ರೀತಿ ಇರಬೇಕು ಎಂದುಕೊಂಡವನು. ‘ಲೂಸಿಯಾ’ ಚಿತ್ರದಲ್ಲಿ ಒಬ್ಬ ಸ್ಟಾರ್ ನಟ ಮತ್ತು ಸಾಮಾನ್ಯ ವ್ಯಕ್ತಿಯಾಗಿ ನಟಿಸಿದ್ದೇನೆ. ಜನರು ಸ್ವೀಕರಿಸಿದರು. ಈಗಾಗಲೇ 50 ಸಲ ‘ರಾಕೆಟ್’ ಚಿತ್ರ ನೋಡಿದ್ದೇನೆ. ನಾವೇ ಸಿನಿಮಾವನ್ನು ನಂಬಿಕೊಂಡಾಗ ಅದನ್ನು ಜನರಿಗೆ ನಂಬಿಸುವ ಭಾವನೆ ಬರುತ್ತದೆ. ಸುಂದರ ಮತ್ತು ಮಧುರ ಪ್ರೇಮಕಥೆಯ ಅನುಭವವನ್ನು ‘ರಾಕೆಟ್’ ಕೊಡುತ್ತದೆ. ನಮ್ಮದೂ ಇಂಥ ಲವ್ ಸ್ಟೋರಿ ನಡೆಯಬೇಕು ಎಂದುಕೊಳ್ಳುತ್ತಾರೆ.

* ಆತ್ಮಹತ್ಯೆಗೆ ತುತ್ತಾದ ರೈತರ ಕುಟುಂಬಗಳಿಗೆ ಚಿತ್ರದಿಂದ ಬರುವ ಆದಾಯದಲ್ಲಿ ಶೇ 10ರಷ್ಟು ಮೀಸಲಿಡುವೆ, ಮುಂದೆ ರೈತರ ಕಥೆಯೊಂದನ್ನು ನಿರ್ದೇಶಿಸುವೆ ಎಂದು ಹೇಳಿದ್ದೀರಿ?
ಒಂದು ವೇಳೆ ಆದಾಯ ಸಾಧ್ಯವಾಗಲಿಲ್ಲ ಎಂದರೂ ನೂರು ರೈತರ ಕುಟುಂಬಗಳಿಗೆ ತಲಾ 20 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ವ್ಯವಸ್ಥೆ ಮಾಡುವೆ. ರೈತರ ಚಿತ್ರಕಥೆ ಶೇ 80ರಷ್ಟು ಪಕ್ಕಾ ಆಗಿದೆ. ನನ್ನ ಆಲೋಚನೆಯಲ್ಲಿರುವ ಆ ಕಥೆಯನ್ನು ಬರಹರೂಪಕ್ಕೆ ಇಳಿಸಬೇಕಿದೆ. ಅದು ದೊಡ್ಡ ಬಜೆಟ್ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT