ADVERTISEMENT

‘ಕಟ್ಟೆ’ ಆರ್ಕೆಸ್ಟ್ರಾ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST
‘ಕಟ್ಟೆ’ ಆರ್ಕೆಸ್ಟ್ರಾ!
‘ಕಟ್ಟೆ’ ಆರ್ಕೆಸ್ಟ್ರಾ!   

ಓಂಪ್ರಕಾಶ್ ರಾವ್ ನಿರ್ದೇಶನದ ‘ಕಟ್ಟೆ’ ಚಿತ್ರತಂಡವು ಖಾಸಗಿ ಹೋಟೆಲ್‌ವೊಂದರ ಸಭಾಂಗಣದಲ್ಲಿ ಹರಟುತ್ತಿತ್ತು. ಸಭಾಂಗಣದ ಮುಖ್ಯ ಆಕರ್ಷಣೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಅದು ‘ಕಟ್ಟೆ’ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಸಂಗೀತ ನಿರ್ದೇಶಕ ಎಸ್.ಎ. ರಾಜಕುಮಾರ್ ಸಮಾರಂಭದ ನಾಯಕ.

ಓಂಪ್ರಕಾಶ್ ರಾವ್ ಮಾತನಾಡಿ, ‘ನನ್ನ ಕೆಲವು ಚಿತ್ರಗಳ ಹಾಡುಗಳು ಡಬ್ಬಾ ಥರ ಇರುತ್ತವೆ. ಆದರೆ ಈ ಚಿತ್ರದ ಐದೂ ಹಾಡುಗಳು ನಿಜಕ್ಕೂ ಚೆನ್ನಾಗಿವೆ’ ಎಂದು ಸಂಗೀತ ನಿರ್ದೇಶಕರ ಬೆನ್ನು ತಟ್ಟಿದರು. ವಿ.ನಾಗೇಂದ್ರ ಪ್ರಸಾದ್, ಅರಸು ಅಂತಾರೆ ಮತ್ತು ಕೆ.ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ತ್ರಿಭುವನ್ ಮಾಸ್ಟರ್ ಎಲ್ಲ ಹಾಡುಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಪದ್ಧತಿಯಂತೆ ಒಂದು ಐಟಂ ಹಾಡು ಕೂಡ ‘ಕಟ್ಟೆ’ಯಲ್ಲಿದೆ.

ಚಿತ್ರದ ನಾಯಕರಾಗಿ ನಾಗಶೇಖರ್ ಮತ್ತು ಚಂದನ್ ಕಾಣಿಸಿಕೊಂಡಿದ್ದಾರೆ. ನಾಗಶೇಖರ್ ಅವರಿಗೆ ಓಂಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ಜೋಡಿಯಾದರೆ, ಹೊಸ ನಾಯಕಿ ರುಕ್ಸಾರ್ ಚಂದನ್‌ಗೆ ಜೊತೆಯಾಗಿದ್ದಾರೆ. ‘ಕೇಕ್‌ನ ಮೇಲಿರುವ ಚೆರ್ರಿಯಂತೆ ಈ ಚಿತ್ರಕ್ಕೆ ಹಾಡುಗಳಿವೆ’ ಎಂದರು ಶ್ರಾವ್ಯಾ. ‘ಕಟ್ಟೆ’ಯ ಅಡಿ ಶೀರ್ಷಿಕೆ ‘ದ ಲಕ್ಕಿ ಪ್ಲೇಸ್’. ಅದೇ ರೀತಿ ‘ನನಗೆ ಇದು ಲಕ್ಕಿ ಸಿನೆಮಾ’ ಎನ್ನುತ್ತಾರೆ ಚಂದನ್.

‘ನಾಯಕನಾಗಿ ಇದು ನನ್ನ ಮೂರನೇ ಚಿತ್ರ. ನಮ್ಮಂಥ ಹೊಸಬರನ್ನು ಇಟ್ಟುಕೊಂಡು ಚಿತ್ರ ಮಾಡುವ ಧೈರ್ಯ ಮಾಡಿದ್ದಾರೆ ನಿರ್ದೇಶಕರು’ ಎಂದು ನಾಗಶೇಖರ್ ಅವರು ಓಂಪ್ರಕಾಶ್ ರಾವ್ ಮೇಲೆ ಋಣಭಾರ ಹೊರಿಸಿದರು. ರುಕ್ಸಾರ್ ಅವರು ಹಾಡುಗಳಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಲು ಕಾತರರಾಗಿದ್ದಾರಂತೆ. ‘ಈ ಆಲ್ಬಂನ ಎಲ್ಲ ಹಾಡುಗಳು ಕೇಳುಗರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನ್ನದು. ಯುವಕರಿಗೆಲ್ಲ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಲಿದೆ’ ಎಂದರು ರಾಜಕುಮಾರ್. ಆಡಿಯೊ ಸಿ.ಡಿ ಬಿಡುಗಡೆ ಮಾಡಿದ ಪುನೀತ್ ಹಾಡುಗಳ ಕುರಿತು ಮೆಚ್ಚುಗೆಯ ಮಾತನಾಡಿದರು. ನಿರ್ಮಾಪಕ ಎಂ.ಎಸ್.ಉಮೇಶ್‌ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.