ADVERTISEMENT

‘ಜಿಸ್ಮ್‌ 3’ಗೆ ಸಿದ್ಧರಾದ ಪೂಜಾ ಭಟ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಪೂಜಾ ಭಟ್‌
ಪೂಜಾ ಭಟ್‌   

‘ಜಿಸ್ಮ್‌’ ಮತ್ತು ‘ಜಿಸ್ಮ್‌ 2’ ಸಿನಿಮಾಗಳ ಮಾದಕತೆಗೆ ಮೈ ಮನಸ್ಸು ಬೆಚ್ಚಗಾಗಿಸಿಕೊಂಡಿದ್ದ ಪಡ್ಡೆಗಳಿಗೆ ಮತ್ತೊಂದು ಖುಷಿಯ ಸುದ್ದಿ ಇದೆ. ಈ ಸಿನಿಮಾದ ಮೂರನೇ ಅವತರಣಿಕೆಯನ್ನು ರೂಪಿಸಲು ನಟಿ–ನಿರ್ದೇಶಕಿ ಪೂಜಾ ಭಟ್‌ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿರುವ ಪೂಜಾ, ತಮ್ಮ ಹೊಸ ಸಿನಿಮಾದ ಬಗೆಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.

‘ಜಿಸ್ಮ್‌ 3 ಈ ಸರಣಿಯ ಉಳಿದೆರಡು ಚಿತ್ರಗಳಿಗಿಂತ ಹೆಚ್ಚು ಬೋಲ್ಡ್‌ ಆಗಿರುತ್ತದೆ’ ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ. ‘ಈ ಸಿನಿಮಾದಲ್ಲಿ ಮೂವರು ನಾಯಕರು ಮತ್ತು ಒಬ್ಬಳು ನಾಯಕಿ ಇರುತ್ತಾರೆ. ಈ ವರ್ಷವೇ ‘ಜಿಸ್ಮ್‌ 3’ ಕೆಲಸ ಆರಂಭಿಸಿ 2017ರಲ್ಲಿ ಬಿಡುಗಡೆಗೊಳಿಸಲು ಯೋಜಿಸಿದ್ದೇನೆ. ಇದು ಇದುವರೆಗಿನ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ಬಿಂದಾಸ್‌ ಆಗಿರುತ್ತದೆ’ ಎಂದಿದ್ದಾರೆ ಪೂಜಾ.

2003ರಲ್ಲಿ ತೆರೆಕಂಡ ‘ಜಿಸ್ಮ್‌’ ಮೂಲಕ ಬಿಪಾಶಾ ಬಸು ಮತ್ತು ಜಾನ್‌ ಅಬ್ರಹಾಂ ಬಾಲಿವುಡ್‌ ಪ್ರವೇಶಿಸಿದ್ದರು. ಅದರ ಮತ್ತೊಂದು ಅವತರಣಿಕೆ ‘ಜಿಸ್ಮ್‌ 2’ 2013ರಲ್ಲಿ ತೆರೆಕಂಡಿತ್ತು. ಈ ಚಿತ್ರದ ಮೂಲಕ ನೀಲಿ ತಾರೆ ಸನ್ನಿ ಲಿಯೋನ್‌ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಲವೂ ಹೊಸಬರನ್ನು ಪರಿಚಯಿಸುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಪೂಜಾ, ‘ಗೊತ್ತಿಲ್ಲ, ನೀವು ಹೇಗೆ ಬೇಕಾದರೂ ಊಹಿಸಿಕೊಳ್ಳಿ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ‘ಪಾಪ್‌’, ‘ಹಾಲಿಡೇ’ಗಳಂತಹ ಸಿನಿಮಾ ನಿರ್ದೇಶಿಸಿರುವ ಪೂಜಾ, ಸೆನ್ಸಾರ್‌ ಮಂಡಳಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.