ADVERTISEMENT

‘ನಾಜೂಕಿನ ನಡಿಗೆ ನನ್ನದಲ್ಲ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2014, 19:30 IST
Last Updated 20 ಜುಲೈ 2014, 19:30 IST
ಅಲಿಯಾ ಭಟ್‌
ಅಲಿಯಾ ಭಟ್‌   

ನವದೆಹಲಿಯಲ್ಲಿ ನಡೆದ ಭಾರತೀಯ ಉಡುಪು ವಿನ್ಯಾಸಕರ ಸಪ್ತಾಹದಲ್ಲಿ ಬಾಲಿವುಡ್‌ನ ಯುವನಟಿ ಅಲಿಯಾ ಭಟ್‌ 20 ಕಿಲೋ ತೂಗುವ ಲೆಹೆಂಗಾ ಧರಿಸಿ ಆತ್ಮವಿಶ್ವಾಸದಿಂದ ರ್‌್ಯಾಂಪ್‌ವಾಕ್‌ ಮಾಡಿದರು. ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್‌ ಮಲ್ಹೋತ್ರಾ ವಿನ್ಯಾಸದ ವಸ್ತ್ರ ಧರಿಸಿದ್ದ ಅಲಿಯಾ, ತನ್ನ ಬೆಡಗು–ಬಿನ್ನಾಣ ತೋರುತ್ತಾ ಕ್ಷಣಕಾಲ ರ್‌್್ಯಾಂಪ್‌ ಮೇಲೆ ಮಿಂಚು ಹರಿಸಿದರು.

‘ರ್‌್ಯಾಂಪ್‌ವಾಕ್‌ ಮಾಡುವ ಮೊದಲು ತುಂಬ ಹೆದರಿದ್ದೆ. ನನಗೆ ರೂಪದರ್ಶಿಗಳಂತೆ ಅತ್ಯುತ್ತಮವಾಗಿ ಕ್ಯಾಟ್‌ವಾಕ್‌ ಮಾಡಲು ಬರುವುದಿಲ್ಲ. ಫ್ಯಾಷನ್‌ ಹೆಜ್ಜೆಗಳ ನಾಜೂಕು ಅರಿಯದ ನಡಿಗೆ ನನ್ನದು. ಹಾಗಾಗಿ, 20 ಕಿಲೋ ತೂಗುವ ವಸ್ತ್ರಾಭರಣದ ಜೊತೆಗೆ ಹೈ ಹೀಲ್ಸ್‌ ಧರಿಸಿ, ನೂರಾರು ಪ್ರೇಕ್ಷಕರ ಬಾಣದಂತಹ ನೋಟಗಳನ್ನು ಎದುರಿಸುತ್ತಾ, ರ್‌್ಯಾಂಪ್‌ ತುದಿಯಲ್ಲಿ ಬಳುಕಿ ನಿಂತು ಕಿರುನಗೆ ಸೂಸುವ ಬೆಕ್ಕಿನ ನಡಿಗೆ ನನಗೆ ಸುಲಭದ್ದೇನೂ ಆಗಿರಲಿಲ್ಲ. ಆದರೂ, ಆ ಕ್ರಮವನ್ನು ಯಶಸ್ವಿಯಾಗಿ ಪೂರೈಸಿದೆ. ನನ್ನ ರ್‌್ಯಾಂಪ್‌ ನಡಿಗೆ ನೋಡಿ ಹಿಗ್ಗಿದ ಪ್ರೇಕ್ಷಕರು ಮೆಚ್ಚುಗೆ ಸೂಸಿ ತಟ್ಟಿದ ಚಪ್ಪಾಳೆ ಸದ್ದು ನನ್ನೊಳಗೆ ಪುಳಕ ಮೂಡಿಸಿತು’ ಎಂದು ರ್‌್ಯಾಂಪ್‌ವಾಕ್‌ ಅನುಭವ ಹಂಚಿಕೊಳ್ಳುತ್ತಾರೆ ಅಲಿಯಾ.

ಬಾಲಿವುಡ್‌ ನಟ–ನಟಿಯರ ನೆಚ್ಚಿನ ವಸ್ತ್ರ ವಿನ್ಯಾಸಕ ಮನೀಷ್‌ ಮಲ್ಹೋತ್ರಾ ಅವರ ವಿನ್ಯಾಸಕ್ಕೆ ಮೈಯೊಡ್ಡಿದ್ದು ಅಲಿಯಾಗೆ ತುಂಬ ಖುಷಿ ನೀಡಿದೆಯಂತೆ. ‘ಬಾಲಿವುಡ್‌ ಜನರ ನೆಚ್ಚಿನ ವಸ್ತ್ರ ವಿನ್ಯಾಸಕ ಮನೀಷ್‌ ಅವರ ವಿನ್ಯಾಸದ ವಸ್ತ್ರ ಧರಿಸಿ ಹೆಜ್ಜೆ ಹಾಕುವುದು ನನ್ನ ಪಾಲಿಗೆ ವಿಶೇಷವಾಗಿತ್ತು ಮತ್ತು ಹೆಚ್ಚು  ಖುಷಿಕೊಟ್ಟಿತು’ ಎಂಬುದು ಅಲಿಯಾ ಅಭಿಪ್ರಾಯ.

‘ಕಳೆದ ಎರಡು ವರ್ಷದ ಹಿಂದೆ ನಡೆದ ಮನೀಷ್‌ ಮಲ್ಹೋತ್ರಾ ಷೋನಲ್ಲಿ ನಾನು ಪ್ರೇಕ್ಷಕಳಾಗಿ ಭಾಗವಹಿಸಿದ್ದೆ. ಆಗ ನನ್ನ ಜೊತೆ ಕರಣ್‌ ಜೋಹರ್‌ ಇದ್ದರು. ಮನೀಷ್‌ ಮಲ್ಹೋತ್ರಾ ಅವರ ವಿನ್ಯಾಸದ ತೂಕದ ದಿರಿಸು ಧರಿಸಿದ್ದ ಕತ್ರೀನಾ ಅಂದು ರ್‌್ಯಾಂಪ್‌ವಾಕ್‌ ಮಾಡಲು ಸಜ್ಜಾಗಿ ಕುಳಿತಿದ್ದರು. ಅವರನ್ನು ನೋಡಿ ನನಗೆ ಅಷ್ಟೊಂದು ತೂಕದ ವಸ್ತ್ರಾಭರಣಗಳನ್ನು ಧರಿಸಿ ಅದು ಹೇಗೆ ರ್‌್ಯಾಂಪ್‌ವಾಕ್‌ ಮಾಡುತ್ತಾರೆ ಎಂದು ಅನಿಸಿತ್ತು. ತೂಕದ ವಸ್ತ್ರಗಳನ್ನು ಧರಿಸಿ ರ್‌್ಯಾಂಪ್‌ವಾಕ್‌ ಮಾಡುವಾಗಿನ ಕಷ್ಟ ಅನುಭವಿಸಿದಾಗಲೇ ತಿಳಿಯಿತು. ಆದರೂ, ಅದೊಂದು ಸುಂದರ ಅನುಭವ’ ಎನ್ನುತ್ತಾರೆ ಅಲಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.