ADVERTISEMENT

‘ಭುಜಂಗ’ನೆಂಬ ಚೋರನೂ ಪ್ರೇಮಿಯೂ...

​ಪ್ರಜಾವಾಣಿ ವಾರ್ತೆ
Published 14 ಜುಲೈ 2016, 20:02 IST
Last Updated 14 ಜುಲೈ 2016, 20:02 IST
ಜೀವಾ
ಜೀವಾ   

ಸೆನ್ಸಾರ್ ಆಗಿ ಮೂರು ತಿಂಗಳುಗಳ ಬಳಿಕ ‘ಭುಜಂಗ’ ಈ ಶುಕ್ರವಾರ ತೆರೆಗೆ ಬರುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಕರ್ತರನ್ನು ಆಹ್ವಾನಿಸಿತ್ತು. ಪ್ರಜ್ವಲ್ ದೇವರಾಜ್ ಅಭಿನಯದ 25ನೇ ಸಿನಿಮಾ ಇದಾಗಿದ್ದು, ಅವರ ಅಭಿನಯದ ಹೊಗಳಿಕೆಗೆ ಎಲ್ಲರೂ ತಮ್ಮ ಮಾತುಗಳನ್ನು ಮೀಸಲಾಗಿಟ್ಟರು.

ನಿರ್ಮಾಪಕನಾಗಿ ವರುಣಾ ಮಹೇಶ್ ಅವರಿಗೆ ಇದು ಮೊದಲ ಪ್ರಯತ್ನ. ಪ್ರಜ್ವಲ್ ಅವರ ವೃತ್ತಿಜೀವನದ ಪ್ರಮುಖ ಚಿತ್ರವೊಂದಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದ ಬಿ.ಎ. ಮಧು ಅವರೇ ಕಾರಣ ಎಂದು ಸ್ಪಷ್ಟಪಡಿಸಿದರು. ಅನೇಕ ಹಿರಿಯ ಕಲಾವಿದರೂ ಇದರಲ್ಲಿದ್ದು, ಸಿನಿಮಾಕ್ಕೆ ಯಾವ ಕೊರತೆಯನ್ನೂ ಮಾಡಿಲ್ಲ ಎಂದ ಮಹೇಶ್, ‘ಭುಜಂಗ’ನ ಬಜೆಟ್ ನಾಲ್ಕು ಕೋಟಿ ದಾಟಿದೆ ಎಂಬ ಮಾಹಿತಿ ಕೊಟ್ಟರು.

ನಿರ್ದೇಶಕ ಜೀವಾ ಅವರಿಗೂ ಇದು ಮೊದಲ ಅನುಭವ. ಪ್ರಜ್ವಲ್ ಅವರನ್ನು ಈವರೆಗೆ ಯಾರೂ ನೋಡದಂಥ ಅವತಾರದಲ್ಲಿ ತೋರಿಸಲಾಗಿದೆ ಎಂಬ ಪ್ರತಿಪಾದನೆ ಅವರದಾಗಿದೆ.

‘ಮೊದಲಾರ್ಧ ತಮಾಷೆಯಾಗಿ ಓಡಿದರೆ ದ್ವಿತೀಯಾರ್ಧ ತುಂಬಾ ಗಂಭೀರವಾಗಿ ಬಿಡುತ್ತದೆ. ಆ ಎರಡು ಶೇಡ್‌ಗಳಲ್ಲಿ ಪ್ರಜ್ವಲ್ ಅಭಿನಯ ನೋಡುವುದೇ ಒಂದು ಹಬ್ಬ’ ಎಂದು ಬಣ್ಣಿಸಿದರು. ಕಮರ್ಷಿಯಲ್ ಸೂತ್ರಗಳನ್ನೇ ನಂಬಿಕೊಂಡ ‘ಭುಜಂಗ’ ಪ್ರೇಕ್ಷಕರನ್ನು ಹಿಡಿದಿಡುತ್ತದೆ ಎಂಬ ವಿಶ್ವಾಸ ಅವರದು.

ಕಥೆ ಬರೆದು ಮಹೇಶ್ ಅವರಲ್ಲಿಗೆ ಹೋದಾಗ, ಅದರ ಸತ್ವ ಗ್ರಹಿಸಿದ ಮಹೇಶ್ ನಿರ್ಮಾಣಕ್ಕೆ ತಕ್ಷಣವೇ ಒಪ್ಪಿದರು ಎಂದು ನೆನಪಿಸಿಕೊಂಡ ಬಿ.ಎ. ಮಧು, ‘ಶಿವನ ಕೊರಳಲ್ಲಿರುವ ಸರ್ಪವೇ ಭುಜಂಗ. ಇಲ್ಲಿ ನಾಯಕನ ಸ್ವಭಾವ ಹಾಗಿರುತ್ತದೆ. ಮೊದಲು ಕಳ್ಳನಾಗಿರುವ ಅವರು, ನಾಯಕಿಯ ಪ್ರೀತಿಯ ಬಲೆಗೆ ಬಿದ್ದು ಒಳ್ಳೆಯವನಾಗುತ್ತಾನೆ. ಆ ಪರಿವರ್ತನೆಯ ಕಥೆಯನ್ನು ಹಾಸ್ಯ ಹಾಗೂ ಗಂಭೀರವಾಗಿ ಹೇಳಲಾಗಿದೆ’ ಎಂದು ಕಥಾಸಾರ ತೆರೆದಿಟ್ಟರು.

ಹಿರಿಯ ಕಲಾವಿದರ ಜತೆ ಕೆಲಸ ಮಾಡಿದ ಅನುಭವವನ್ನು ಪ್ರಜ್ವಲ್ ನೆನಪಿಸಿಕೊಂಡರೆ, ನಿರ್ದೇಶಕರ ಬದ್ಧತೆಯನ್ನು ನಾಯಕಿ ಮೇಘನಾ ರಾಜ್ ಪ್ರಶಂಸಿಸಿದರು.

ಐದು ಹಾಡುಗಳಿಗೆ ಸಂಗೀತ ಹೊಸೆದ ಪೂರ್ಣಚಂದ್ರ ತೇಜಸ್ವಿ, ಸಂಕಲನಕಾರ ಸೌಂದರ್ ರಾಜನ್ ಹಾಗೂ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.