ADVERTISEMENT

‘ಮಳೆ’ ಸುರಿಸಲು ಮುಹೂರ್ತ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ಚಂದ್ರು ನಿರ್ಮಾಣದ ‘ಮಳೆ’ ಚಿತ್ರ ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ನಿರ್ದೇಶಕ ತೇಜಸ್ ಖುಷಿಗೆ ಕಾರಣ!‘ಮಳೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಜೂನ್ 12ರ ಒಳಗೆ ಅದು ಸುರಿಯುವುದು ಖಚಿತ’ ಎಂದು ಸ್ಪಷ್ಟವಾಗಿ ಹೇಳಿದರು ನಿರ್ಮಾಪಕ ಆರ್. ಚಂದ್ರು. 

ಅವರು ಹೇಳಿದ್ದು ತಮ್ಮ ನಿರ್ಮಾಣದ ‘ಮಳೆ’ ಚಿತ್ರದ ಬಿಡುಗಡೆ ಕುರಿತು! ಸಿನಿಮಾ ಸಿದ್ಧವಾಗಿದ್ದರೂ ಬಿಡುಗಡೆ ಮಾತ್ರ ಮುಂದಕ್ಕೆ ಹೋಗುತ್ತಲೇ ಇದೆ. ಅದಕ್ಕೆ ಹಲವು ಕಾರಣಗಳೂ ಇವೆಯಂತೆ. ದೊಡ್ಡ ಬ್ಯಾನರ್‌ನ ಸಿನಿಮಾಗಳು ಬಿಡುಗಡೆಗೆ ‘ಕ್ಯೂ’ ನಿಂತಿರುವುದು ‘ಮಳೆ’ ವಿಳಂಬಕ್ಕೆ ಮುಖ್ಯ ಕಾರಣ. ‘ನಾನೊಬ್ಬ ನಿರ್ಮಾಪಕ, ನಿರ್ದೇಶಕನಾಗಿ ಇನ್ನೊಂದು ಸಿನಿಮಾಕ್ಕೆ ಅಡ್ಡಿ ಮಾಡಬಾರದು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ಮಳೆ ಮುಂದೆ ಹೋಗುತ್ತಿದೆ’ ಎಂದು ವಿವರ ಕೊಟ್ಟರು.

ಚಂದ್ರು ಖುಷಿಗೆ ಇನ್ನೊಂದು ಕಾರಣವೂ ಇದೆ. ಅದು ದೊಡ್ಡ ಮೊತ್ತಕ್ಕೆ ‘ಮಳೆ’ ಮಾರಾಟವಾಗಿರುವುದು. ಎಷ್ಟು ಎಂಬ ಪ್ರಶ್ನೆಗೆ ಅವರು ನೇರ ಉತ್ತರ ಕೊಡದೇ, ‘ಇಡೀ ಕರ್ನಾಟಕದಲ್ಲಿ ವಿತರಣೆ ಮಾಡಲು ಸಾಕಷ್ಟು ಹೆಚ್ಚಿನ ಮೊತ್ತಕ್ಕೇ ನಮ್ಮ ಸಿನಿಮಾ ಮಾರಾಟವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ತಾವು ನಿರ್ದೇಶಿಸಿದ ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ತೆಲುಗು ಸಿನಿಮಾ ಜೂನ್‌ ತಿಂಗಳಲ್ಲಿ ತೆರೆ ಕಾಣಲಿದೆ ಹಾಗೂ ಅದೇ ಸಮಯಕ್ಕೆ ‘ಮಳೆ’ ಕೂಡ ತೆರೆಗೆ ಬರಲಿದೆ. ಹೀಗಾಗಿ ಮುಂದಿನ ತಿಂಗಳು ತಮಗೆ ಕುತೂಹಲ ಹಾಗೂ ಸಂತಸದ ಸಮಯ ಎಂದು ಚಂದ್ರು ಹೇಳಿಕೊಂಡರು.

ನಿರ್ದೇಶಕ ತೇಜಸ್ ಅವರಿಗೆ ‘ಮಳೆ’ಯ ಮೇಲೆ ಹೆಚ್ಚು ನಿರೀಕ್ಷೆಯಿದೆ. ನಿರ್ಮಾಪಕ ಚಂದ್ರು ಅವರು ಸಿನಿಮಾಕ್ಕೆ ಬೇಕೆನಿಸಿದ್ದನ್ನೆಲ್ಲ ಕೊಟ್ಟಿದ್ದಾರೆ. ಅವರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು. ತಮ್ಮ ನಿರ್ದೇಶನದ ಮೊದಲ ಸಿನಿಮಾವನ್ನು ವಿತರಕರು ಖರೀದಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದ ತೇಜಸ್, ‘ಮಳೆಯು ನಿರ್ಮಾಪಕರಿಗೆ ಹಣದ ಮಳೆ ಸುರಿಸಲಿ’ ಎಂದು ಹಾರೈಸಿದರು. ‘ಚಾರ್‌ಮಿನಾರ್ ಬಳಿಕ ಚಂದ್ರು ಸಿನಿಮಾಕ್ಕೆ ಮತ್ತೊಮ್ಮೆ ನಾಯಕನಾಗಿರುವುದು ಖುಷಿ ತಂದಿದೆ’ ಎಂದು ನಾಯಕ ಪ್ರೇಮ್ ಹೇಳಿಕೊಂಡರು.

ತಮ್ಮ ಬ್ಯಾನರ್‌ನಿಂದ ನಿರ್ಮಾಣವಾಗುವ ಸಿನಿಮಾಗಳಿಗೆ ಸಂಬಂಧಿಸಿದ ಎಲ್ಲ ಕೆಲಸಗಳೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಚಂದ್ರು ಅವರು ಆರಂಭಿಸಿದ ಪ್ರತ್ಯೇಕ ಕಾರ್ಯಾಲಯವನ್ನು ಪ್ರೇಮ್ ಹಾಗೂ ನಟಿ ಐಂದ್ರಿತಾ ರೇ ಉದ್ಘಾಟಿಸಿದರು. ‘ಮಳೆ’ ಚಿತ್ರ ತೆರೆ ಕಾಣುವ ಮುಖ್ಯ ಚಿತ್ರಮಂದಿರದಲ್ಲಿ ಸಂಗ್ರಹವಾಗುವ ಎಲ್ಲ ಹಣವನ್ನೂ ನೇಪಾಳ ಭೂಕಂಪ ಸಂತ್ರಸ್ತರ ನಿಧಿಗೆ ನೀಡುವುದಾಗಿ ಚಂದ್ರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT