ADVERTISEMENT

‘‘ನಮ್ಮ ನಿರ್ದೇಶಕರು ಒಳ್ಳೆಯ ಪಾತ್ರಗಳನ್ನು ಏಕೆ ಸೃಷ್ಟಿಸುತ್ತಿಲ್ಲ...

ಪ್ರಜಾವಾಣಿ ವಿಶೇಷ
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST
‘‘ನಮ್ಮ ನಿರ್ದೇಶಕರು ಒಳ್ಳೆಯ  ಪಾತ್ರಗಳನ್ನು ಏಕೆ ಸೃಷ್ಟಿಸುತ್ತಿಲ್ಲ...
‘‘ನಮ್ಮ ನಿರ್ದೇಶಕರು ಒಳ್ಳೆಯ ಪಾತ್ರಗಳನ್ನು ಏಕೆ ಸೃಷ್ಟಿಸುತ್ತಿಲ್ಲ...   

‘ನಮ್ಮೂರ ಮಂದಾರ ಹೂವೇ’ ಖ್ಯಾತಿಯ ನಟಿ ಪ್ರೇಮಾ ಮತ್ತೆ ‘ಒಳ್ಳೆಯ’ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಬೆಳ್ಳಿತೆರೆಯ ಮರುಪ್ರವೇಶಕ್ಕೂ ಮುನ್ನ ಅವರೊಂದಿಗಿನ ಮಾತು–ಕಥೆ ಇಲ್ಲಿದೆ.

* ನೀವು ಮತ್ತೆ ಸಿನಿಮಾಗಳಲ್ಲಿ ನಟಿಸುವ ಮಾತುಗಳು ಚಿತ್ರೋದ್ಯಮದಲ್ಲಿ ಕೇಳಿಸುತ್ತಿವೆ. ಯಾವುದಾದರೂ ಹೊಸ ಸಿನಿಮಾ ಒಪ್ಪಿಕೊಂಡಿದ್ದೀರಾ?
ನಿರ್ದೇಶಕರು ಬರುತ್ತಿದ್ದಾರೆ. ಮೂರು ಚಿತ್ರಕಥೆಗಳನ್ನು ಸದ್ಯ ಕೇಳಿದ್ದೇನೆ. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಎರಡು ಮೂರು ದಿನದ ಪಾತ್ರಗಳಿಗಾಗಿ ಕೆಲವು ನಿರ್ದೇಶಕರು ಬಂದಿದ್ದರು. ಇತ್ತೀಚೆಗೆ ಒಬ್ಬ ಪ್ರಮುಖ ನಿರ್ದೇಶಕರು ಆರು ದಿನಗಳ ಡೇಟ್ಸ್‌ ಕೇಳಿದರು. ‘ನಿಮ್ಮ ಬ್ಯಾನರ್‌ನಲ್ಲಿಯೇ ಹಿಟ್ ಚಿತ್ರಗಳನ್ನು ಕೊಟ್ಟಿದ್ದೇನೆ. ಈಗ ಮೂವರಲ್ಲಿ ನಾನೂ ಒಬ್ಬಳು ಎನ್ನುವ ಪಾತ್ರ ಮಾಡಿ ಎನ್ನುತ್ತಿದ್ದೀರಿ. ನನಗೆ ಖುಷಿ ಇರುತ್ತದೆಯಾ?’ ಎಂದು ಕೇಳಿದೆ. ಅವರೂ ನಿಮ್ಮ ಮಾತು ನಿಜ ಎಂದರು. ಪ್ರೇಮಾ ಇಂಥ ಪಾತ್ರಕ್ಕೆ ಸರಿ ಹೊಂದುತ್ತಾರೆ ಎನ್ನುವ ವಿಶ್ವಾಸದಲ್ಲಿ ಬರುವವರು ಯಾರು ಇಲ್ಲ. ಇದು ನನಗೆ ಬೇಸರ–ನೋವು ತರಿಸಿದೆ.

* ಎಂಥ ಪಾತ್ರಗಳ ನಿರೀಕ್ಷೆಯಲ್ಲಿ ಇದ್ದೀರಿ?
ಅಮ್ಮ– ಅತ್ತಿಗೆ ಪಾತ್ರ ಮಾಡುವಿರಾ ಎಂದು ನೇರವಾಗಿ ಕೇಳಲು ಕೆಲವರಿಗೆ ಸಾಧ್ಯವಿಲ್ಲ. ಬೇರೊಬ್ಬರಿಂದ ಫೋನ್ ಮಾಡಿಸಿ ನಿಮ್ಮ ನಂಬರ್ ಕೊಡಲಾ ಎನ್ನುತ್ತಾರೆ. ನಮ್ಮ ನಿರ್ದೇಶಕರಿಗೆ ಒಳ್ಳೆಯ ಪಾತ್ರಗಳ ಸೃಷ್ಟಿ ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ನನ್ನನ್ನು ಕಾಡುತ್ತಿರುವ ವಿಷಯ. ಅನಂತನಾಗ್ ಈ ವಯಸ್ಸಿನಲ್ಲೂ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ನಾನೂ ಒಳ್ಳೆಯ ಪಾತ್ರಗಳನ್ನು ನಿರೀಕ್ಷಿಸುವುದು ತಪ್ಪೇ?

ಅಮ್ಮ– ಅತ್ತಿಗೆ ಪಾತ್ರ ಮಾಡುವಿರಾ ಎಂದಾಗ ಬೇಸರ ಆಗುತ್ತದೆ. ಒಳಗೊಂದು ಹೊರಗೊಂದು ಮಾತನಾಡಲು ನನಗೆ ಬರುವುದಿಲ್ಲ. ಇದರಿಂದ ಪ್ರೇಮಾ ಯದ್ವಾತದ್ವಾ ಎಂದುಕೊಳ್ಳುತ್ತಾರೆ.  ಸುನೀಲ್‌ಕುಮಾರ್ ದೇಸಾಯಿ ಚಿತ್ರಗಳ ಕಥೆಯನ್ನೇ ನಾನು ಕೇಳುತ್ತಿರಲಿಲ್ಲ. ಅವರಿಗೆ ಪ್ರೇಮ ಹೇಗೆ ಎಂದು ಗೊತ್ತಿತ್ತು. ಕಲ್ಪನಾ, ಮಂಜುಳ ರೀತಿ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆ ಇತ್ತು. ಇವತ್ತಿನ ಸನ್ನಿವೇಶ ನೋಡಿದರೆ ಆಸೆಗಳು ಬತ್ತಿ ಹೋಗುತ್ತಿವೆ. ಜಗಪತಿ ಬಾಬು ಅವರ ಜತೆ ಸ್ಪೇನ್‌ನಲ್ಲಿ ಶೂಟಿಂಗ್. ನಾಲ್ಕು ದಿನ ಡೇಟ್ ಕೊಡುತ್ತಿರಾ? ಎಂದು ತಮಿಳಿನ ನಿರ್ದೇಶಕರು ಕರೆ ಮಾಡಿದ್ದರು. ಒಪ್ಪಿಕೊಳ್ಳಲಿಲ್ಲ.

* ಚಿತ್ರರಂಗವನ್ನು ಮಿಸ್ ಮಾಡಿಕೊಂಡೆ ಎನ್ನುವ ಭಾವನೆ ಬಂದಿದೆಯಾ?
ಖಂಡಿತಾ ಇಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುವುದಿಲ್ಲ ಎಂದು ನನಗೆ ನಾನೇ ನಿರ್ಧರಿಸಿದ್ದೆ. ಚಿತ್ರರಂಗದಿಂದ ದೂರವಿದ್ದರೆ ಅದಕ್ಕೆ ನಾನೇ ಕಾರಣ, ಮತ್ತೊಬ್ಬರಲ್ಲ.

* ಇಂದಿನ ಚಿತ್ರಗಳಲ್ಲಿ ನಾಯಕಿ ಪಾತ್ರಗಳನ್ನು ನೋಡಿದರೆ ಏನನ್ನಿಸುತ್ತದೆ?
ಚಿತ್ರಕಥೆಯಲ್ಲಿ ಪ್ರಮುಖವಾಗಿ ಗಮನ ನೀಡುತ್ತಿರುವುದು ನಾಯಕನ ಪಾತ್ರಗಳಿಗೆ. ಸುದೀಪ್‌, ಯಶ್ ಯಾರ ಜತೆ ನಟಿಸಿದರೂ ತಮ್ಮ ಪಾತ್ರ ಏನು ಎನ್ನುವುದನ್ನು ನಾಯಕಿಯರು ಗಮನಿಸಬೇಕಾಗುತ್ತದೆ. ಚಿತ್ರಗಳಿಂದ ಆಚೆ ಬಂದು ಯೋಚಿಸಿದರೆ ನಾವು ಮಾಡಿದ್ದು ಉಳಿದುಕೊಳ್ಳುವಂತೆ ಇರಬೇಕು. ಇಲ್ಲವಾದರೆ ಕಲಾವಿದೆಯಾಗಿ ಉಪಯೋಗವೇನು? ಈಗ ನಿರ್ದೇಶಕರಿಗೇ ನಾಯಕಿ ನಟನೆಯ ಬಗ್ಗೆ ವಿಶ್ವಾಸ ಇರುವುದಿಲ್ಲ. ತುಂಡು ಬಟ್ಟೆ ತೊಟ್ಟು ಶೋ ಕೊಟ್ಟರೆ ನಾಯಕಿ!

* ಈಗ ಜೀವನ ಹೇಗಿದೆ?
ಅಡುಗೆ ಮಾಡುವುದು ನನಗಿಷ್ಟ. ಸುತ್ತಾಟ ಇದ್ದೇಇದೆ. ಪ್ರಸ್ತುತ ವರ್ಷಕ್ಕೆ ಒಂದು ಒಳ್ಳೆಯ ಸಿನಿಮಾ ಮಾಡೋಣ ಎಂದುಕೊಂಡಿದ್ದೇನೆ. ಜನರು ಕೊಟ್ಟ ಶಹಬ್ಬಾಶ್‌ ಗಿರಿ ದೊಡ್ಡ ಪ್ರಶಸ್ತಿ. ಪೇಲವ ಪಾತ್ರ ಮಾಡಿ ಆ ಪ್ರಶಸ್ತಿಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ‘ಕನಸುಗಾರ’, ‘ಯಜಮಾನ’, ‘ಓಂ’ ಸೇರಿದಂತೆ ಬೇಕಾದಷ್ಟು ಚಿತ್ರಗಳಲ್ಲಿನ ನನ್ನ ಪಾತ್ರಗಳನ್ನು ಪ್ರೇಕ್ಷಕರು ಪ್ರಶಂಸಿಸಿದ್ದಾರೆ. ನನಗೆ ನಾನು ಮಾಡಿರುವ ಪಾತ್ರಗಳ ಬಗ್ಗೆ ತೃಪ್ತಿ ಮತ್ತು ಖುಷಿ ಇದೆ. 

 * ಸಿಹಿಕಹಿ ನೆನಪುಗಳು
ನಿರ್ದೇಶಕ ಎಸ್‌. ನಾರಾಯಣ್ ದುಬೈನಲ್ಲಿ ಇದ್ದರು. ಒಬ್ಬರು ನನಗೆ ಫೋನ್ ಮಾಡಿ ನೀವು ಎಸ್‌. ನಾರಾಯಣ್ ಅವರನ್ನು ಮದುವೆ ಆಗಿದ್ದೀರಂತೆ ಎಂದರು. ನಾನು–ಅಮ್ಮ ಸಿಕ್ಕಾಪಟ್ಟೆ ನಕ್ಕೆವು. ಗಾಸಿಪ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಚಾಮರಾಜಪೇಟೆಯಲ್ಲಿ ಒಬ್ಬರು ಅಚಾನಕ್ಕಾಗಿ ಸಿಕ್ಕರು. ಅವರು ‘ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಮ್ಮ. ನಿಮ್ಮ ಹಾದಿಯಲ್ಲಿ ನೀವು ಮುಂದುವರಿಯಿರಿ’ ಎಂದರು. ಆ ಮಾತುಗಳೇ ನನಗೆ ಪ್ರೋತ್ಸಾಹ. ‘ಓಂ’ ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಾಗ ಆಶ್ಚರ್ಯವಾಗಿತ್ತು. ನಿರ್ದೇಶಕ ಉಪೇಂದ್ರ  ಅವರನ್ನು‘ಇವರು ಎಂಥ ಸಿನಿಮಾ ಮಾಡುತ್ತಾರೋ?’ ಎಂದು ಬೈದುಕೊಂಡು ‘ಓಂ’ ಚಿತ್ರದಲ್ಲಿ ನಟಿಸಿದ್ದೆ. ‘ನಿನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂದು ಎಂಥ ಕೆಲಸ ಮಾಡಿಬಿಟ್ಟೆ’ ಎಂದು ಅಮ್ಮ ಅಳುತ್ತಿದ್ದರು. ಇವೆಲ್ಲ ನೆನಪಾದರೆ ಈಗ ನಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.