ADVERTISEMENT

‘‘ಪ್ರತಿಯೊಬ್ಬ ಅಭಿಮಾನಿಯಲ್ಲೂ ತಾಯಿಯನ್ನು ಕಾಣುತ್ತೇನೆ...

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

* ಈವರೆಗೆ ಸಿಕ್ಕಿದ್ದ ಪಾತ್ರಗಳಿಗಿಂತ ಬೇರೆಯೇ ಬಗೆಯಲ್ಲಿ ನೀವು ಕಾಣಿಸಿಕೊಂಡಿದ್ದೀರಿ. ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆ ನಿಮ್ಮಲ್ಲಿ ಇದೆಯೇ?
ಭರವಸೆ, ನಿರೀಕ್ಷೆಗಿಂತ ನನ್ನಲ್ಲಿ ಈ ಚಿತ್ರ ಭಯ ಮೂಡಿಸಿದೆ! ಕಾರಣ ಬೇರೇನೂ ಅಲ್ಲ; ಅದು ಪಡೆದುಕೊಂಡ ಪ್ರಚಾರ. ಸಿನಿಮಾ ಇಷ್ಟು ದೊಡ್ಡ ಮಟ್ಟದ ಸದ್ದು ಮಾಡಿದಾಗ ಸಹಜವಾಗಿಯೇ ನಮ್ಮಲ್ಲಿ ಭಯ ಆವರಿಸುತ್ತದೆ. ಪ್ರೇಕ್ಷಕರ ನಿರೀಕ್ಷೆಯನ್ನು ಈಡೇರಿಸುತ್ತೇವೆಯೇ ಎಂಬುದೇ ಆ ಭಯ. ಸಿನಿಮಾ ಚೆನ್ನಾಗಿದೆ ಎಂದು ನಾವು ಹೇಳುವುದಕ್ಕಿಂತ, ಪ್ರೇಕ್ಷಕರು ಮೆಚ್ಚಿಕೊಳ್ಳುವುದು ಮುಖ್ಯ. ಅದೇ ಈಗ ನಮಗಿರುವ ಟೆನ್ಶನ್!

* ಕಾಮಿಡಿ – ಎಂಟರ್‌ಟೈನ್‌ಮೆಂಟ್‌ ಪಾತ್ರಕ್ಕೆ ಈವರೆಗೆ ಹೆಚ್ಚು ಒತ್ತು ಕೊಟ್ಟಿದ್ದಿರಿ. ಈಗ ಭೂಗತ ಲೋಕದ ಪಾತ್ರ ನಿರ್ವಹಿಸಿದ್ದೀರಿ..?
ಅದಕ್ಕಾಗಿಯೇ ಇಷ್ಟೊಂದು ಪ್ರಚಾರ ಸಿಕ್ಕಿಬಿಟ್ಟಿದೆ ಎಂಬುದು ಕೂಡ ಒಂದು ಖುಷಿ ವಿಚಾರ. ಹೌದು, ಈವರೆಗೆ ಸಿಕ್ಕ ಪಾತ್ರಗಳೆಲ್ಲ ಬಹುತೇಕ ಕಾಮಿಡಿ. ಈ ಥರ ಒಂದು ಪ್ರಯತ್ನವಾಗಿ ಬಿಡಲಿ ಎಂಬ ಆಸೆ ನನಗಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ. ಅಷ್ಟಕ್ಕೂ ಇದೊಂದು ನೈಜ ಘಟನೆ ಆಧಾರಿತ ಕಥೆಯಾದ್ದರಿಂದ ಇದರ ಬಗ್ಗೆ ಒಂದಷ್ಟು ಕುತೂಹಲ ನನ್ನಲ್ಲೂ ಇತ್ತು. ಅದಕ್ಕಾಗಿ ಒಪ್ಪಿದೆ.

* ಇದು ಯಾವುದೋ ರೌಡಿಯೊಬ್ಬರ ಜೀವನದ ಕಥೆ ಎಂದೆಲ್ಲ ವದಂತಿ ಹರಡಿದವು?
ಹಾಗೆಲ್ಲ ಏನೂ ಇಲ್ಲ. ಚಿತ್ರೀಕರಣ ಶುರುವಾದಾಗ ಒಂದಷ್ಟು ಬೆದರಿಕೆ ಕರೆಗಳು ಬಂದವು. ಸಿನಿಮಾ ಅಂದಾಗ ಏನೇನೋ ಅಂಶಗಳು ಇರುತ್ತವೆ. ಆದರೆ ಅವೆಲ್ಲ ನಿಜವಲ್ಲ ಅಂತ ಹೇಳಿ, ಸಮಾಧಾನ ಮಾಡಿದೆವು. ಮೇಲ್ನೋಟಕ್ಕೆ ಇದೊಂದು ರೌಡಿಸಂ ಕಥೆಯ ಚಿತ್ರ ಅನಿಸುತ್ತದೆ. ಆದರೆ ವಾಸ್ತವವಾಗಿ ಅದಷ್ಟೇ ಇದರಲ್ಲಿಲ್ಲ. ಈಗಾಗಲೇ ನಡೆದಿರುವ ಲವ್‌ ಸ್ಟೋರಿ ಆಧರಿಸಿದ ಚಿತ್ರವಿದು. ಮದುವೆ ಅಥವಾ ಪ್ರೀತಿಯ ಆಯ್ಕೆಯಲ್ಲಿ ತಪ್ಪು ಆಗಿಬಿಟ್ಟಾಗ ಸಂಭವಿಸುವ ಘಟನೆಗಳೇನು ಎಂಬುದನ್ನು ನಿರ್ದೇಶಕ ಶ್ರೀಜೈ ವಿಭಿನ್ನವಾಗಿ ನಿರೂಪಿಸಿದ್ದಾರೆ. ‘ರೌಡಿಸಂ ಮಾಡಿ ಬದುಕುವೆ’ ಎಂದು ಹೇಳುವ ಯುವಕರಿಗೆ, ‘ಅದು ತಪ್ಪು; ಖಂಡಿತ ಹಾಗೆ ಮಾಡಬೇಡಿ’ ಎಂಬ ಸಂದೇಶ ಅದರಲ್ಲಿದೆ.

* ಮುಂದಿನ ಸಿನಿಮಾಗಳು?
ಸದ್ಯ ‘ದನ ಕಾಯೋನು’ ಚಿತ್ರೀಕರಣ ಕೊಪ್ಪಳದ ಇಂದರಗಿ ಗ್ರಾಮದಲ್ಲಿ ನಡೆದಿದೆ. ನನ್ನ ಗುರುಗಳು ಹಾಗೂ ಪ್ರೀತಿಯ ನಿರ್ದೇಶಕ ಯೋಗರಾಜ ಭಟ್ ಚಿತ್ರದ ನಿರ್ದೇಶಕರು. ಅವರಿಲ್ಲದೇ ‘ದುನಿಯಾ’ ಆಗುತ್ತಿರಲಿಲ್ಲ. ‘ದುನಿಯಾ’ ಆಗಿರದೇ ಹೋಗಿದ್ದರೆ ನನಗೆ ಈ ಹೆಸರು ಇರುತ್ತಿರಲಿಲ್ಲ. ಭಟ್ಟರೆಂದರೆ ನಮಗೆಲ್ಲ ಪಿತಾಮಹ! ಅವರ ಸಿನಿಮಾದಲ್ಲಿ ನಟಿಸುವುದು ನನಗೆ ಹೆಮ್ಮೆ. ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದು ನನ್ನ ಪಾಲಿನ ಅದೃಷ್ಟ.

* ಆ ಸಿನಿಮಾದ ಶೂಟಿಂಗ್‌ ಅನುಭವ ಹೇಗಿತ್ತು?
ಮೊದಲ ಮಾತು ಹೇಳುವುದೇನೆಂದರೆ, ಉತ್ತರ ಕರ್ನಾಟಕದ ಅಭಿಮಾನಿಗಳ ಪಾದಕ್ಕೆ ನನ್ನ ಸಾವಿರ ನಮಸ್ಕಾರ. ಅವರು ತೋರಿಸುವ ವಾತ್ಸಲ್ಯ, ಅಭಿಮಾನಕ್ಕೆ ನಾನು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅವರ ಋಣ ತೀರಿಸಲು ನಾನು ಇನ್ನೊಂದು ಸಲ ಜನಿಸಿ ಬರಬೇಕು. ಆ ಮಟ್ಟದ ಅಭಿಮಾನ ಅವರದು. ಅಲ್ಲಿ ಶೂಟಿಂಗ್‌ ನಡೆಯುತ್ತಿದ್ದಾಗ ನನ್ನನ್ನು ಮಾತನಾಡಿಸಲು ಬರುತ್ತಿದ್ದ ಜನರನ್ನು ನೋಡಿ, ‘ನಾನು ಹುಟ್ಟಿದ್ದು ಸಾರ್ಥಕವಾಯಿತು’ ಅನಿಸಿತು.

* ಸಾಮಾನ್ಯ ಜನರ ಜತೆ ಬೆರೆಯುವ ಆಸೆ ನಿಮ್ಮಲ್ಲಿ ತುಸು ಹೆಚ್ಚೇ ಇದ್ದಂತಿದೆ?
ವಾಸ್ತವವಾಗಿ ನಾಯಕ ಅಥವಾ ಹೀರೋ ಅನ್ನುವುದು ನನಗೆ ಒಂದು ಉದ್ಯೋಗ ಅಷ್ಟೇ. ಅದರಿಂದ ಸಿಗುವ ಯಶಸ್ಸನ್ನು ತಲೆಗೆ ಹಚ್ಚಿಕೊಳ್ಳಬಾರದು. ಮುಂದೊಂದು ದಿನ ಯಾರದಾದರೂ ಮಾರ್ಕೆಟ್ ಬಿದ್ದು ಹೋಗಬಹುದು. ಯಶಸ್ಸನ್ನು ತಲೆಗೆ ಏರಿಸಿಕೊಂಡವರಿಗೆ ಅಂಥ ಹೊತ್ತಿನಲ್ಲಿ ಸಾಮಾನ್ಯನಂತೆ ನಡೆದಾಡಲು ಆಗುವುದಿಲ್ಲ. ನಾನು ಎಲ್ಲರಂತೆ ಒಬ್ಬ ಮನುಷ್ಯನಾಗಿ ಬದುಕಲು ಇಷ್ಟಪಡುತ್ತೇನೆಯೇ ಹೊರತೂ ಭ್ರಮೆ– ಬಂಧನಗಳ ಮಧ್ಯೆ ಅಲ್ಲ. ‘ನಿಮಗೆ ಬುದ್ಧಿ ಇಲ್ಲ; ಬೈಕ್‌ ತಗೊಂಡು ಹಾಗೇ ಹೋಗಿ ಬಿಡ್ತೀರಾ’ ಅಂತ ನನ್ನ ಹೆಂಡತಿ ಬೈಯುತ್ತಾಳೆ. ಆದರೆ ನನಗೆ ಅದು ಇಷ್ಟ. ನನಗೆ ಈಗ ಜನರ ಪ್ರೀತಿ ಎಷ್ಟು ಸಿಗುತ್ತದೆಯೋ, ಸಾಮಾನ್ಯ ವ್ಯಕ್ತಿಯಾಗಿರುವಾಗಲೂ ಅಷ್ಟೇ ಸಿಗಬೇಕು ಎಂಬುದು ನನ್ನ ಆಸೆ.

* ಕ್ಯಾನ್ಸರ್‌ ಪೀಡಿತ ಯುವಕನಿಗೆ ಇತ್ತೀಚೆಗೆ ನಿಮ್ಮ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಿದ್ದಿರಲ್ಲ?
ಅಭಿಮಾನಿಗಳ ಪ್ರೀತಿ ನನಗೆ ತಾಯಿ ಪ್ರೀತಿ ಇದ್ದಂತೆ. ಪ್ರತಿಯೊಬ್ಬ ಅಭಿಮಾನಿಯಲ್ಲೂ ನನ್ನ ತಾಯಿಯನ್ನು ಕಾಣುತ್ತೇನೆ. ಆತ ನನ್ನ ಅಭಿಮಾನಿ. ‘ಆರ್‌ಎಕ್ಸ್‌ ಸೂರಿ’ ಸಿನಿಮಾ ನೋಡಬೇಕೆನ್ನುವ ಈ ಅಭಿಮಾನಿ ಆಸೆ ನನಗೆ ಗೊತ್ತಾಯಿತು. ದುಃಖದ ವಿಷಯವೆಂದರೆ, ಆತ ಇನ್ನೆಷ್ಟು ದಿನ ಬದುಕುತ್ತಾನೋ ಏನೋ, ಗೊತ್ತಿಲ್ಲ. ಹೀಗಾಗಿ ಮೊದಲಿಗೆ ಆ ಚಿತ್ರವನ್ನು ಆತನಿಗೆ ತೋರಿಸಿದ ಹೆಮ್ಮೆ ಇದೆ; ಅದಕ್ಕಿಂತ ಹೆಚ್ಚಾಗಿ ಆತನನ್ನು ಕಳೆದುಕೊಳ್ಳುವ ನೋವು ನನ್ನನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT