ಮನಸಾರೆಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮುದ್ದಾದ ಜೋಡಿ ಎಂದು ಕರೆಸಿಕೊಂಡ ನಟಿ ಐಂದ್ರಿತಾ ರೇ ಮತ್ತು ದಿಗಂತ್ ಇನ್ನು ಎರಡು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸುಮಾರು ಹತ್ತು ವರ್ಷಗಳ ಅವರ ಪ್ರೀತಿಯ ಹೆಜ್ಜೆಗಳು ಮತ್ತೊಂದು ಮಜಲನ್ನು ತಲುಪುತ್ತಿವೆ.
ನಗರದ ಹೊರಭಾಗದಲ್ಲಿ ಡಿಸೆಂಬರ್ 12, ಬುಧವಾರ ಈ ಜೋಡಿಯ ವಿವಾಹ ಸಮಾರಂಭ ಆಯೋಜನೆಯಾಗಿದೆ. ತೆರೆಯ ಮೇಲೆ, ತೆರೆಯ ಹೊರಗೂ ಪ್ರೇಮ ಪಕ್ಷಿಗಳಿಗಾಗಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಜೋಡಿ ಇದೀಗ ಮದುವೆಯ ಸಿದ್ಧತೆಯ ತರಾತುರಿಯಲ್ಲಿದೆ.
ಯೋಗರಾಜ್ ಭಟ್ ನಿರ್ದೇಶನದ ’ಮನಸಾರೆ’ ಹಾಗೂ ಪ್ರಭು ಶ್ರೀನಿವಾಸ್ ನಿರ್ದೇಶನದ ’ಪಾರಿಜಾತ’ ಸಿನಿಮಾಗಳ ನಂತರ ಐಂದ್ರಿತಾ–ದಿಗಂತ್ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿತ್ತು. ’ನಮ್ಮ ಮದುವೆಯ ಬಗ್ಗೆ ಸಾಕಷ್ಟು ಬಾರಿ ಚರ್ಚಿಸಿದ್ದೇವೆ. ಅತಿಥಿಗಳೆಲ್ಲ ಬಂದು ನಾವು ಸಮಾರಂಭದಲ್ಲಿ ಕಾಣಿಸಿಕೊಳ್ಳುವವರೆಗೂ... ’ ಎಂದು ದಿಗಂತ್ ಹೇಳುತ್ತಿದ್ದಂತೆ, ’ನಾನು ನನ್ನ ಬೆಸ್ಟ್ ಫ್ರೆಂಡ್‌ನನ್ನು ಮದುವೆಯಾಗುತ್ತಿದ್ದೇನೆ’ ಎಂದು ಮಾತಿಗೆ ಮುಂದಾದರು ಐಂದ್ರಿತಾ.
’ನಮ್ಮಿಬ್ಬರದೂ ತದ್ವಿರುದ್ಧ ಗುಣಗಳು, ಬಹುಶಃ ಇದುವೇ ನಮ್ಮನ್ನು ಜೊತೆಗೂಡಿಸಿದೆ. ಕಳೆದ 10 ವರ್ಷಗಳಲ್ಲಿ ದಿಗಂತ್ ಕೋಪಗೊಂಡಿರುವುದನ್ನು ನಾನು ಕೇವಲ ಎರಡೇ ಸಲ ಕಂಡಿರುವುದು. ಆದರೆ, ಯಾವುದೇ ಕ್ಷಣದಲ್ಲಿ ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ’ ಎನ್ನುವ ಐಂದ್ರಿತಾ, ದಿಗಂತ್ ಸಹನಾ ಮೂರ್ತಿ ಎನ್ನುತ್ತಾರೆ.
ಬದುಕು ಬದಲಿಸಿತು...
ಐಂದ್ರಿತಾ ಸ್ನೇಹ–ಸಂಬಂಧ ಬದುಕನ್ನೇ ಬದಲಿಸಿತು ಎಂದು ಮುಗುಳು ನಗುತ್ತಾರೆ ದಿಗಂತ್. ’ಅಷ್ಟೇನು ರೊಮ್ಯಾಂಟಿಕ್ ಆಗಿರದಿದ್ದರೂ ಬಾಂಧವ್ಯ ಗಟ್ಟಿಗೊಳ್ಳಲು ಐಂದ್ರಿತಾಳೆ ಕಾರಣ. ಪ್ರೀತಿ ಬೆಳೆಸಿಕೊಳ್ಳುವುದು ಹಾಗೂ ಅದನ್ನು ಗೌರವಿಸುವುದನ್ನು ಕ್ರಮೇಣ ಕಲಿಯುತ್ತ ಬಂದೆ. ನಾವಿಬ್ಬರೂ ಜೊತೆಯಾಗಿಯೇ ಬೆಳೆದುಪ್ರೌಢರಾದೆವು’ ಎಂಬುದು ದಿಗಂತ್ ಮಾತು.
ದಶಕದ ಪ್ರೇಮದ ಗುಟ್ಟು
’ಇಬ್ಬರ ನಡುವೆ ಇರುವ ನಂಬಿಕೆ’ ಎನ್ನುತ್ತಾರೆ ದಿಗಂತ್. ’ನಾನು ನನ್ನಂತೆಯೇ ಇರಲು ಐಂದ್ರಿತಾ ಅವಕಾಶ ನೀಡುತ್ತಾಳೆ ಹಾಗೂ ನನಗೆ ಏನು ಬೇಕಿದೆ ಎಂಬುದು ಆಕೆಗೆ ಸ್ಪಷ್ಟವಾಗಿ ತಿಳಿದಿದೆ. ಪರಸ್ಪರ ಸ್ವಂತಿಕೆಗೆ ಅವಕಾಶ ಮಾಡಿಕೊಡುವುದು ಬಹಳ ಮುಖ್ಯವಾಗುತ್ತದೆ. ನಂಬಿಕೆ ಇರುವುದರಿಂದ ಯಾವುದೂ ಹೊಂದಾಣಿಕೆಯನ್ನು ಕದಲಿಸಲು ಆಗದು’ ಎಂದು ವಿವರಿಸುತ್ತಾರೆ.
ಮೂರು ದಿನಗಳ ಮದುವೆ
ಮದುವೆ ಸಂತಸ ಮತ್ತು ಸಂಭ್ರಮದಿಂದ ಕೂಡಿರಬೇಕು ಎಂದು ಇಚ್ಛಿಸುವ ಈ ಪ್ರೇಮಿಗಳ ವಿವಾಹ ಮೂರು ದಿನ ನಡೆಯಲಿದೆ. ’ಅರಿಶಿನ’ ಶಾಸ್ತ್ರದೊಂದಿಗೆ ಮೊದಲ ದಿನದ ಸಮಾರಂಭ ಶುರುವಾಗಲಿದೆ. ’ನನ್ನ ತಾಯಿ ಮನೆಯ ಹಿತ್ತಲಲ್ಲಿ ಬೆಳೆದಿರುವ ಅರಿಶಿನ ಬೆಳೆದಿದ್ದಾರೆ. ಇದೇ ಸಾವಯವ ಅರಿಶಿನವನ್ನು ದಿಗಂತ್ ಮತ್ತು ನನಗೆ ಹಚ್ಚಲಾಗುತ್ತದೆ’ ಎಂದು ಐಂದ್ರಿತಾ ಸಂಭ್ರಮದಲ್ಲಿ ಮುಳುಗಿದರು. ಇದೇ ದಿನ ಲೈವ್ ಪ್ರದರ್ಶನಗಳು ಮತ್ತು ದಿಗಂತ್–ಐಂದ್ರಿತಾ ನೆಚ್ಚಿನ ಹಾಡುಗಳನ್ನು ಕೇಳಿಸಲಿರುವ ಡಿಜೆ, ನೆರೆದವರನ್ನು ಕುಣಿಸಲಿದ್ದಾರೆ.
ನಂದಿ ಬೆಟ್ಟದ ಸಮೀಪದ ರೆಸಾರ್ಟ್‌ವೊಂದರಲ್ಲಿ ಮೂರು ದಿನಗಳ ಮದುವೆ ಸಮಾರಂಭ ನಡೆಯಲಿದೆ. ಕುಟುಂಬದ ಆಪ್ತರು ಮತ್ತು ಸ್ನೇಹಿತರನ್ನಷ್ಟೇ ಆಹ್ವಾನಿಸಲಾಗಿದ್ದು, ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿ ಇರುವಂತೆ ಆಯೋಜಿಸಲಾಗಿದೆ. ಆದಷ್ಟು ಸರಳವಾಗಿ, ಹೆಚ್ಚು ಜನರು ಮತ್ತು ಆಡಂಬರಗಳಿಲ್ಲದೆ, ಊಟ–ತಿಂಡಿ ಸೇರಿ ಯಾವುದೂ ವ್ಯರ್ಥವಾಗದಂತೆ ಗಮನಹರಿಸಲಾಗಿದೆ ಎಂದು ಸಿದ್ಧತೆಯ ಬಗ್ಗೆ ಐಂದ್ರಿತಾ ಹೇಳುತ್ತಾರೆ.
ದಿಗಂತ್‌ನಲ್ಲಿ ಸೆಳೆದ ಗುಣ?
ಬಹಳಷ್ಟು. ಅದರಲ್ಲೂ ಪ್ರಾಣಿಗಳ ಮೇಲೆ ದಿಗಂತ್‌ಗೆ ಇರುವ ಪ್ರೀತಿ ಮತ್ತು ಪರಿಸರ ಕಾಳಜಿ. ಆಹಾರಕ್ಕೆ ಪ್ರಾಣಿಗಳ ಮೇಲೆ ಮನುಷ್ಯ ನಡೆಸುವ ಕ್ರೌರ್ಯವನ್ನು ಅರಿತ ನಂತರ, ಅವರು ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಇಬ್ಬರ ಮನೆಯವರೂ ಬಹಳ ಆಪ್ತರಾಗಿದ್ದಾರೆ. ’ನನ್ನನ್ನು ಮದುವೆಯಾಗುತ್ತಿರುವುದು ನಿನ್ನ ತಂದೆಗೋಸ್ಕರ’ ಎಂದು ದಿಗಂತ್ ಆಗಾಗ್ಗೆ ತಮಾಷೆ ಮಾಡುತ್ತಿರುತ್ತಾರೆ. ನನ್ನ ತಂದೆಯೊಂದಿಗೆ ದಿಗಂತ್ ಬಹಳ ಆಪ್ತವಾಗಿರುತ್ತಾರೆ. ದಿಗಂತ್ ತಂದೆಗೆ ನಾವು ಬೆಂಗಾಲಿ ಸಂಪ್ರದಾಯದಂತೆ ಮದುವೆಯಾಗುವ ಆಸೆಯಿದೆ.
ಮುಂಬೈನತ್ತ ಇಬ್ಬರ ಚಿತ್ತ
ಮದುವೆಯ ಬಳಿಕವೂ ವೃತ್ತಿ ಜೀವನ ವಿಸ್ತರಿಸಿಕೊಳ್ಳುವ ಆಸಕ್ತಿ ತೋರಿರುವ ಇಬ್ಬರೂ ಮುಂಬೈಗೆ ಪ್ರಯಾಣಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ದಿಗಂತ್ ಬಾಲಿವುಡ್ ಪ್ರವೇಶಿಸಿದ್ದು, ಐಂದ್ರಿತಾ ಸಹ ಅವಕಾಶ ಹುಡುಕಿ ಹೊರಡುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.