ADVERTISEMENT

‘ಪರಸಂಗ’ದ ಹೊಸ ತಿಮ್ಮ

ಶುಕ್ರವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ಪರಸಂಗ, ಅಕ್ಷತಾ ಮತ್ತು ಮಿತ್ರ
ಪರಸಂಗ, ಅಕ್ಷತಾ ಮತ್ತು ಮಿತ್ರ   

ಕೆ.ಎಂ. ರಘು ನಿರ್ದೇಶನದ ‘ಪರಸಂಗ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ‘ಇದು ಸತ್ಯಕಥೆಯೊಂದನ್ನು ಆಧರಿಸಿದ ಚಿತ್ರ’ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಗೆಯೇ, ‘ಪರಸಂಗದ ಗೆಂಡೆತಿಮ್ಮ ಚಿತ್ರದಲ್ಲಿ ಹೃದಯ ಗೆಲ್ಲುವ ಅಂಶಗಳು ಇದ್ದಂತೆ, ಇದರಲ್ಲೂ ಅಂತಹ ಅಂಶಗಳು ಇವೆ’ ಎಂದೂ ತಂಡ ಹೇಳಿಕೊಂಡಿದೆ.

ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ರಘು ಸುದ್ದಿಗೋಷ್ಠಿ ಕರೆದಿದ್ದರು. ‘ಇದು ಹಾಸನದ ಹಳ್ಳಿಯೊಂದರಲ್ಲಿ ನಡೆದ ಘಟನೆಯನ್ನು ಆಧರಿಸಿ ಮಾಡಿರುವ ಸಿನಿಮಾ. ಆ ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಹೆಸರು ತಿಮ್ಮ’ ಎಂದು ಮಾತು ಆರಂಭಿಸಿದರು ರಘು. ‘ಈ ಘಟನೆಯು ಎಲ್ಲರ ಮನಕಲಕುವಂಥದ್ದು. ಸಣ್ಣ ತಪ್ಪಿನಿಂದ ಆಗುವ ಸಮಸ್ಯೆಯನ್ನು ಮನರಂಜನೆಯ ರೂಪದಲ್ಲಿ ಹೇಳಿದ್ದೇನೆ’ ಎಂದೂ ಹೇಳಿದರು.

‘ಈ ಚಿತ್ರ ವೀಕ್ಷಿಸಿದ ನಂತರ ನಟ ಮಿತ್ರ ಅವರನ್ನು ಜನ ತಿಮ್ಮ ಎಂಬ ಹೆಸರಿನಿಂದಲೇ ಗುರುತಿಸುವಂತೆ ಆಗುತ್ತದೆ. ಸೋಡಾ ಬೆರೆಸದ ಹಳ್ಳಿ ಊಟದ ರುಚಿಯನ್ನು ಈ ಸಿನಿಮಾ ಕೊಡುತ್ತದೆ’ ಎಂಬ ಮಾತನ್ನು ವಿಶ್ವಾಸದಿಂದ ಹೇಳಿದರು ರಘು.

ADVERTISEMENT

ಮಿತ್ರ ಅವರ ವೃತ್ತಿ ಜೀವನದಲ್ಲಿ ಇದು ಬಹಳ ವಿಶೇಷವಾದ ಸಿನಿಮಾವಂತೆ. ‘ಮುಗ್ಧ ವ್ಯಕ್ತಿಯೊಬ್ಬನ ಪಾತ್ರವನ್ನು ನಿರ್ದೇಶಕರು ನನ್ನಿಂದ ಮಾಡಿಸಿದ್ದಾರೆ’ ಎಂದರು ಮಿತ್ರ.

ಅಕ್ಷತಾ ಅವರು ಇದರಲ್ಲಿ ನಾಯಕಿಯ ಪಾತ್ರ ನಿಭಾಯಿಸಿದ್ದಾರೆ. ‘ವೀಕ್ಷಕರಿಗೆ ಹೊಸತನ ಬೇಕು. ನಮ್ಮ ಸಿನಿಮಾ ಒಂದು ಬೆಂಚ್‌ಮಾರ್ಕ್‌ ರೂಪಿಸಲಿದೆ. ಕಥೆ ಬಹಳ ಚೆನ್ನಾಗಿದೆ. ಇದರಲ್ಲಿನ ಮಹಿಳಾ ಪಾತ್ರಗಳು ಗಟ್ಟಿತನ ಹೊಂದಿವೆ. ಈ ಪಾತ್ರಗಳು ಮಹಿಳೆಯರ ಮನಸ್ಸನ್ನು ತಟ್ಟುತ್ತವೆ’ ಎಂದರು ಅಕ್ಷತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.