ADVERTISEMENT

ಅಯನ: ಸಾಫ್ಟ್‌ವೇರ್‌ ನವೋದ್ಯಮಿಯ ಪಯಣ!

ವಿಜಯ್ ಜೋಷಿ
Published 8 ಸೆಪ್ಟೆಂಬರ್ 2017, 15:35 IST
Last Updated 8 ಸೆಪ್ಟೆಂಬರ್ 2017, 15:35 IST
ಅಯನ ಚಿತ್ರದಲ್ಲಿ ಅಪೂರ್ವ ಮತ್ತು ದೀಪಕ್ ಸುಬ್ರಹ್ಮಣ್ಯ
ಅಯನ ಚಿತ್ರದಲ್ಲಿ ಅಪೂರ್ವ ಮತ್ತು ದೀಪಕ್ ಸುಬ್ರಹ್ಮಣ್ಯ   

ಚಿತ್ರ: ಅಯನ

ನಿರ್ಮಾಣ: ದೀಸ್‌ ಫಿಲಂಸ್

ನಿರ್ದೇಶನ: ಗಂಗಾಧರ ಸಾಲಿಮಠ

ADVERTISEMENT

ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಅಪೂರ್ವ, ರಮೇಶ್ ಭಟ್, ವೇದಶ್ರೀ ರಾವ್

ಸಂಗೀತ: ಶ್ರೀಯಾಂಶ್ ಶ್ರೀರಾಮ್

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುವುದು ಅಂದರೆ ಕೈತುಂಬ ಸಂಬಳ ಪಡೆಯುವುದು, ವಾರಾಂತ್ಯದಲ್ಲಿ ಸ್ನೇಹಿತರ ಜೊತೆ ಸೇರಿ ಸುತ್ತಾಟ, ಪಾರ್ಟಿ ಎನ್ನುತ್ತಾ ಗಮ್ಮತ್ತು ಮಾಡುವುದು, ಸಣ್ಣ ವಯಸ್ಸಿನಲ್ಲೇ ಮಹಾನಗರಿಯಲ್ಲಿ ಫ್ಲ್ಯಾಟ್‌ ಖರೀದಿಸುವುದು ಎಂಬುದು ನಿಮ್ಮ ಮನಸ್ಸಿನಲ್ಲಿ ಬರುವ ಆಲೋಚನೆಯೇ?...

ತುಸು ತಾಳಿ. ಆ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅನುಭವಿಸುವ ಒತ್ತಡಗಳು, ಅವರಲ್ಲಿನ ಆಸೆಗಳು, ಸಾಫ್ಟ್‌ವೇರ್‌ ಕ್ಷೇತ್ರದಲ್ಲೇ ಒಂದು ಉದ್ದಿಮೆ ಆರಂಭಿಸಬೇಕು ಎಂಬ ಕನಸು, ಆ ಕನಸು ಈಡೇರಿಸಿಕೊಳ್ಳಲು ಮುಂದಾಗಿ ಅನುಭವಿಸುವ ಸಂಕಟಗಳು, ಮಾರುಕಟ್ಟೆ ಶಕ್ತಿಗಳಿಗೆ ಮಣಿದು ಕಂಡ ಕನಸುಗಳನ್ನು ಈಡೇರಿಸಿಕೊಳ್ಳಲಾದಿರುವುದು... ಈ ಎಲ್ಲ ಸಂಗತಿಗಳ ಬಗ್ಗೆ ಸಿನಿತೆರೆಯ ಮೂಲಕ ಒಂದು ಕಥೆ ಹೇಳಬೇಕಿತ್ತಲ್ಲವೇ? ಆ ಕೆಲಸ ಮಾಡಿದೆ ‘ಅಯನ’.

‘ಅಯನ’ ಎಂದರೆ ಪಥ ಎಂಬ ಅರ್ಥವಿದೆ. ಇದು ಸಾಫ್ಟ್‌ವೇರ್‌ ತಂತ್ರಜ್ಞನೊಬ್ಬ ತನ್ನ ಉದ್ಯೋಗ ತೊರೆದು, ಸಾಫ್ಟ್‌ವೇರ್‌ ಕ್ಷೇತ್ರದಲ್ಲೇ ಒಂದು ನವೋದ್ಯಮ ಆರಂಭಿಸಿ, ತನ್ನ ಜೊತೆ ಕೆಲಸ ಮಾಡುವವರಿಗೆ ತಿಂಗಳ ವೇತನ ಕೊಡಲು ಒದ್ದಾಟ ನಡೆಸಿ, ನವೋದ್ಯಮಕ್ಕೆ ಬಂಡವಾಳ ತರಲು ಹೆಣಗಾಡಿ, ಎಲ್ಲವೂ ಸರಿಹೋಗುತ್ತದೆ, ಬಂಡವಾಳ ಕೂಡ ಬರುತ್ತದೆ ಎನ್ನುವಾಗ ಎದುರಾದ ಅನಿರೀಕ್ಷಿತ ಸವಾಲುಗಳಿಗೆ ಸ್ಪಂದಿಸಲಾಗದೆ ಅನುಭವಿಸುವ ಯಾತನೆಗಳನ್ನು ಹೇಳುವ ಸಿನಿಮಾ. ‘ಅಯನ’ದ ಮೂಲಕ ಈ ಕಥೆ ಹೇಳಿದವರು ನಿರ್ದೇಶಕ ಗಂಗಾಧರ ಸಾಲಿಮಠ.

ಆದಿತ್ಯ (ದೀಪಕ್ ಸುಬ್ರಹ್ಮಣ್ಯ) ಹಾಗೂ ದಿವ್ಯಾ (ಅಪೂರ್ವ) ಈ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಬ್ಬರೂ ಇಷ್ಟಪಟ್ಟು ವಿವಾಹ ಆಗುತ್ತಾರೆ. ಇಬ್ಬರಿಗೂ ಒಳ್ಳೆಯ ಕೆಲಸ, ಕೈತುಂಬ ಸಂಬಳ ಇರುತ್ತದೆ. ಎಲ್ಲವೂ ಸರಿಯಿದೆ ಎಂಬ ಹಂತದಲ್ಲಿ ಆದಿತ್ಯ, ತನ್ನ ಬಹುಕಾಲದ ಆಸೆಯಾದ ಐ.ಟಿ. ನವೋದ್ಯಮವೊಂದನ್ನು ಆರಂಭಿಸಲು ಮುಂದಾಗುತ್ತಾನೆ. ಯುವಕರ ನಡುವಣ ಸ್ನೇಹ, ಒಂಚೂರು ಪ್ರೀತಿ, ಮಸ್ತಿಯ ಬಗ್ಗೆ ಮಾತನಾಡುವ ಸಿನಿಮಾ ಅಲ್ಲಿಂದ ತಿರುವು ಪಡೆಯುತ್ತದೆ.

ಹೊಸ ಉದ್ಯಮಕ್ಕೆ ಬಂಡವಾಳ ತರುವುದಕ್ಕೆ ಆದಿತ್ಯ ಕಷ್ಟಪಡುತ್ತಾನೆ. ಕೊನೆಗೂ ಒಬ್ಬರು ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಾರೆ. ಆದರೆ ಅವರು ಒಡ್ಡಿದ ಷರತ್ತುಗಳನ್ನು ಒಪ್ಪಿಕೊಂಡರೆ ಕಂಪೆನಿಯ ಮಾಲೀಕತ್ವದ ಸ್ವರೂಪವೇ ಬದಲಾಗಿಬಿಡುತ್ತದೆ. ಹೀಗಿದ್ದರೂ, ಆರ್ಥಿಕ ಮುಗ್ಗಟ್ಟು ನಿವಾರಿಸಿಕೊಳ್ಳಲು ಆದಿತ್ಯ ಷರತ್ತುಗಳಿಗೆ ಒಪ್ಪಿಕೊಳ್ಳುತ್ತಾನೆ. ಎಲ್ಲವೂ ಸರಿಯಾಯಿತು, ಐ.ಟಿ. ಉತ್ಪನ್ನವನ್ನು ಇನ್ನು ಮಾರುಕಟ್ಟೆಗೆ ಬಿಡುವುದೊಂದೇ ಬಾಕಿ ಎನ್ನುವ ಹಂತದಲ್ಲಿ ಐ.ಟಿ. ಕ್ಷೇತ್ರದ ದೈತ್ಯ ಕಂಪೆನಿಯೊಂದು ಅದೇ ಮಾದರಿಯ ಉತ್ಪನ್ನವನ್ನು ಮಾರುಕಟ್ಟೆಗೆ ಉಚಿತವಾಗಿ ಬಿಡುಗಡೆ ಮಾಡುತ್ತದೆ. ಆಗ ಆದಿತ್ಯನ ನವೋದ್ಯಮದ ನೌಕೆ ಮುಳುಗುವ ಹಡಗಾಗುತ್ತದೆ.

ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವ ಇಬ್ಬರು ವಿವಾಹ ಬಂಧನಕ್ಕೆ ಒಳಗಾದ ನಂತರ, ಕೆಲಸದ ಒತ್ತಡಗಳು ಅವರಿಬ್ಬರ ನಡುವಣ ಸಂಬಂಧದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ, ಮಧ್ಯಮ ವರ್ಗದ ತಂದೆ–ತಾಯಂದಿರುವ ಐ.ಟಿ. ಕ್ಷೇತ್ರದಲ್ಲಿ ಚೆನ್ನಾಗಿ ಸಂಪಾದಿಸುವ ತಮ್ಮ ಮಕ್ಕಳಿಂದ ಬಯಸುವುದು ಏನು, ಅವರ ಬಯಕೆ ಈಡೇರಿಸುವುದು ಐ.ಟಿ. ವೃತ್ತಿಪರರಿಂದ ಸಾಧ್ಯವಾಗುತ್ತಿದೆಯೇ, ಮನುಷ್ಯ ಸಂಬಂಧಗಳನ್ನೂ ಮಾರುಕಟ್ಟೆ ಶಕ್ತಿಗಳೇ ತೀರ್ಮಾನಿಸುತ್ತವೆಯೇ, ಪರಸ್ಪರರ ನಡುವೆ ಪ್ರೀತಿ ಇದ್ದರೂ ವಿವಾಹಗಳು ಮುರಿದು ಬೀಳುವುದು ಏಕೆ ಎಂಬ ಬಗ್ಗೆಯೂ ‘ಅಯನ’ ಮಾತನಾಡುತ್ತದೆ. ಹೀರೊ ಇಲ್ಲದ, ಪಾತ್ರಗಳು ಮಾತ್ರ ಇರುವ, ಆಡಂಬರ, ಅಬ್ಬರ ಇಲ್ಲದ ಸಿನಿಮಾ ಇದು.

ಅಂದಹಾಗೆ, ನವೋದ್ಯಮದಲ್ಲಿ ಸೋಲು ಅನುಭವಿಸಿ, ತನ್ನದೆನ್ನುವ ಪ್ರೀತಿಯನ್ನು ಕಳೆದುಕೊಂಡ ನಂತರವೂ ಆದಿತ್ಯ ಬದುಕಿನಲ್ಲಿ ಸಾರ್ಥಕ್ಯ ಕಂಡುಕೊಳ್ಳುತ್ತಾನೆ. ಅದು ಏನು ಎಂಬುದನ್ನು ಸಿನಿಮಾ ನೋಡಿ ಅರಿಯಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.