ADVERTISEMENT

ಕಡಿಮೆ ಸಿಹಿ, ಮಾಸಲು ಬಣ್ಣ!

ಗಣೇಶ ವೈದ್ಯ
Published 3 ಮಾರ್ಚ್ 2017, 12:40 IST
Last Updated 3 ಮಾರ್ಚ್ 2017, 12:40 IST
ಕಡಿಮೆ ಸಿಹಿ, ಮಾಸಲು ಬಣ್ಣ!
ಕಡಿಮೆ ಸಿಹಿ, ಮಾಸಲು ಬಣ್ಣ!   

ಚಿತ್ರ: ಜಿಲೇಬಿ
ನಿರ್ಮಾಪಕರು: ಶಿವ ಕಬ್ಬಿನ, ಶಂಕರ್
ನಿರ್ದೇಶಕ: ಶಂಕರ್
ತಾರಾಗಣ: ಪೂಜಾ ಗಾಂಧಿ, ಯಶಸ್ ಸೂರ್ಯ, ವಿಜಯ್ ಚೆಂಡೂರು

‘ಪ್ರತಿ ಬಾರಿಯೂ ಕಥೆ ಇರುವುದಿಲ್ಲ. ಕೆಲವೊಮ್ಮೆ ಘಟನೆಗಳೇ ಕಥೆಯನ್ನು ಹುಟ್ಟುಹಾಕುತ್ತವೆ’ ಎಂದು ಚಿತ್ರದ ಆರಂಭದಲ್ಲಿಯೇ ನಿರ್ದೇಶಕ ಶಂಕರ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹಾಗಾಗಿ ಕಥೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೋಡಬೇಕಾದ ಸಿನಿಮಾ ‘ಜಿಲೇಬಿ’.

ಜಿಲೇಬಿ (ಪೂಜಾ ಗಾಂಧಿ) ಒಬ್ಬ ಕರೆವೆಣ್ಣು. ಮೂವರು ಯುವಕರು ದುಬೈಗೆ ಹಾರುವ ಮುನ್ನ ‘ಪಿಂಕ್ ಕ್ರಾಂತಿ’ ಮಾಡುವ ಉತ್ಸಾಹದಲ್ಲಿ ಜಿಲೇಬಿಯ ಸಂಗ ಮಾಡುತ್ತಾರೆ. ಆಕೆಯನ್ನು ತಮ್ಮ ಮನೆಗೆ ಕರೆತರುತ್ತಾರೆ. ಜಿಲೇಬಿಯದ್ದು ‘ಫಿಕ್ಸೆಡ್ ರೇಟ್ – ನೋ ಬಾರ್ಗೇನ್, ಜೆನ್ಯೂನ್ ಸರ್ವೀಸ್’. ಆದರೆ ಆಕೆಯನ್ನು ಕರೆತಂದ ಸೂರ್ಯಪ್ರಕಾಶ್ (ಯಶಸ್ ಸೂರ್ಯ), ವಿಜಯ್ (ವಿಜಯ್ ಚೆಂಡೂರು) ಮತ್ತು ಗುರು (ನಾಗೇಂದ್ರ) ಮದಿರೆಯ ಮತ್ತಿನಲ್ಲಿ ಮಾನಿನಿಯನ್ನೇ ಮರೆಯುತ್ತಾರೆ. ಯಾವಾಗ ಬಿಡುಗಡೆ ಸಿಗುತ್ತದೋ ಎಂದು ಜಿಲೇಬಿ ಕಾಯುತ್ತಲೇ ಇರುತ್ತಾಳೆ. ಹಾಗೆಯೇ ಪ್ರೇಕ್ಷಕನಿಗೂ ಚಿತ್ರದಲ್ಲಿ ಈಗ ಏನಾದರೂ ಸಂಭವಿಸುತ್ತದೆ ಎಂದು ಕಾಯುವುದಷ್ಟೇ ಭಾಗ್ಯ. ‘ಹಾಟ್ ಆ್ಯಂಡ್ ಸ್ವೀಟ್’ ಅಡಿಟಿಪ್ಪಣಿ ನೋಡಿ ಚಿತ್ರಮಂದಿರಕ್ಕೆ ಬಂದ ಪೂಜಾ ಗಾಂಧಿ ಅಭಿಮಾನಿಗಳಿಗೆ ನಿರಾಸೆಯೇ. ಸಂಭಾಷಣೆಗಳೂ ಕಚಗುಳಿ ಇಡುವ ಬದಲು ಕಿರಿಕಿರಿ ಉಂಟುಮಾಡುತ್ತವೆ.

ADVERTISEMENT

‘ಪಿಂಕ್ ಕ್ರಾಂತಿ’ಗೆ ಸಾಥ್ ನೀಡಲು ಬಂದ ಜಿಲೇಬಿ ಹೆಣವಾಗುತ್ತಾಳೆ. ಕೊಲೆ ಹೇಗೆ ನಡೆಯುತ್ತದೆ, ಯಾರು ಮಾಡಿದ್ದು, ಘಟನೆಯಿಂದ ಮೂವರು ಹುಡುಗರು ಹೇಗೆ ಮಾನಸಿಕ ತೊಳಲಾಟ ಅನುಭವಿಸುತ್ತಾರೆ, ಅವರು ಪಾರಾಗುತ್ತಾರಾ? ಎಂಬುದೆಲ್ಲ ಸಿನಿಮಾದ ಹೂರಣ.

ಮೇಲಿಂದ ಮೇಲೆ ಹೊಸ ಪಾತ್ರಗಳು ಬರುತ್ತಲೇ ಇರುತ್ತವೆ. ಫ್ಲ್ಯಾಶ್‌ಬ್ಯಾಕ್ ತೋರಿಸುವ ತಂತ್ರ ಅತಿ ಎನ್ನುವಷ್ಟು ಬಳಕೆಯಾಗಿದೆ. ಕೆಲವು ಸನ್ನಿವೇಶಗಳು ಘಟನೆಯ ಗಾಂಭೀರ್ಯವನ್ನು ಮಣ್ಣುಪಾಲು ಮಾಡಿಬಿಡುತ್ತವೆ. ನಟನೆ ವಿಚಾರದಲ್ಲಿ ವೇಶ್ಯೆಯಾಗಿ ಪೂಜಾ ಗಾಂಧಿ ಅಷ್ಟೇನೂ ಗಮನ ಸೆಳೆಯುವುದಿಲ್ಲ. ನಿರ್ದೇಶಕರು ಜಿಲೇಬಿ ಪಾತ್ರ ಪೋಷಣೆಗೆ ಹೆಚ್ಚು ಅವಕಾಶವನ್ನೂ ನೀಡಿಲ್ಲ. ಬಿರಾದಾರ್ ಸುಮ್ಮನೇ ಬಂದು ಹೋಗುತ್ತಾರೆ. ದತ್ತಣ್ಣ ಪಾತ್ರಕ್ಕೂ ಅಷ್ಟೇನು ಮಹತ್ವವಿಲ್ಲ.

‘ನಮ್ಮ ಮೇಲೆ ಜನ ಇಟ್ಟುಕೊಂಡ ನಂಬಿಕೆಯನ್ನು ಉಳಿಸಿಕೊಳ್ಳಬೇಕು’ ಎಂದು ಪಾತ್ರವೊಂದರ ಬಾಯಲ್ಲಿ ನಿರ್ದೇಶಕರು ಹೇಳಿಸುತ್ತಾರೆ. ಈ ಮಾತನ್ನು ಅವರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ.

‘ಮೋಜು ಮಸ್ತಿ ಎಂದು ಹೋದರೆ ಯುವಕರು ಆಪತ್ತಿನಲ್ಲಿ ಸಿಕ್ಕಿಬೀಳುತ್ತಾರೆ’ ಎಂಬ ವಾಚ್ಯ ಸಂದೇಶ ಚಿತ್ರದಲ್ಲಿದೆ. ಕೊನೆಯಲ್ಲಿ ‘ಶುಭಂ’ ಬದಲು ‘ಕಥೆ ಈಗ ಶುರು’ ಎಂದು ತೋರಿಸಿ, ‘ಜಿಲೇಬಿ 2’ ಮಾಡುವ ಸೂಚನೆಯನ್ನೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.