ADVERTISEMENT

ಕರುಣದಿ ಕಾಯೋ ಮಾದೇಶ್ವರಾ...

ಸಂದೀಪ ನಾಯಕ
Published 25 ನವೆಂಬರ್ 2016, 10:14 IST
Last Updated 25 ನವೆಂಬರ್ 2016, 10:14 IST
ಕರುಣದಿ ಕಾಯೋ ಮಾದೇಶ್ವರಾ...
ಕರುಣದಿ ಕಾಯೋ ಮಾದೇಶ್ವರಾ...   

ಮಾದ ಮತ್ತು ಮಾನಸಿ

ನಿರ್ಮಾಣ: ಮನೋಮೂರ್ತಿ
ನಿರ್ದೇಶನ: ಸತೀಶ್ ಪ್ರಧಾನ್
ತಾರಾಗಣ: ಪ್ರಜ್ವಲ್‌ ದೇವರಾಜ್‌, ಶ್ರುತಿ ಹರಿಹರನ್‌, ರಂಗಾಯಣ ರಘು, ಶೋಭರಾಜ್‌

ಹೆಸರನ್ನು ನೋಡುತ್ತಿದ್ದಂತೆ ಇದು ಮಾದ ಎಂಬ ಹುಡುಗ, ಮಾನಸಿ ಎಂಬ ಹುಡುಗಿಯ ಪ್ರೇಮಕತೆ ಎಂದು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಈ ಸಿನಿಮಾದಲ್ಲಿ ನಿರ್ದೇಶಕ ಸತೀಶ್‌ ಪ್ರಧಾನ್‌ ಒಂದು ವಿಶಿಷ್ಟ ಪ್ರೇಮಕತೆಯನ್ನು ಹೇಳಲು ಹೊರಟಿದ್ದಾರೆ. ಸಿನಿಮಾದ ಈ ವಿಶಿಷ್ಟ ಗುಣ ಅದು ಒಳಗೊಂಡಿರುವ ಪ್ರೇಮ ಎಂಬ ವಸ್ತುವಿನಲ್ಲಿಲ್ಲ. ಆ ಕತೆಗೆ ಇರುವ ಚಿತ್ರವಿಚಿತ್ರ ತಿರುವುಗಳಲ್ಲಿದೆ.

ADVERTISEMENT

ನಾಯಕಿ ಈ ಮೊದಲೇ ಒಬ್ಬ ಹುಡುಗನನ್ನು ಪ್ರೇಮಿಸಿರುತ್ತಾಳೆ. ನಾಯಕಿಯ ಪ್ರೀತಿಯ ವಿಷಯ ತಿಳಿದ ನಾಯಕ, ಅವಳನ್ನು ಅವಳ ಪ್ರೇಮಿಯೊಂದಿಗೆ ಸೇರಿಸಲು ಕರೆದುಕೊಂಡು ಹೋಗುತ್ತಾನೆ. ಹಾಗೆ ಕರೆದುಕೊಂಡು ಹೋಗುವಾಗ ಏನೆಲ್ಲ ಘಟನೆಗಳು ನಡೆಯುತ್ತವೆ, ನಾಯಕಿ ಯಾರಿಗೆ ಸಿಗುತ್ತಾಳೆ ಎಂಬ ಭಾರತೀಯ ಚಿತ್ರಮಂದಿರಗಳಲ್ಲಿ ಈಗಾಗಲೇ ಓಡಿಓಡಿ ದಣಿದಿರುವ ಎಂದಿನ ಕಥೆ ಇದಕ್ಕಿದೆ.

ಕಥೆ ಸವಕಲಾಗಿದ್ದರೂ ಇದನ್ನು ನವಿರಾಗಿ, ಆಕರ್ಷಕವಾಗಿ ನಿರೂಪಿಸುವ ಅವಕಾಶ ನಿರ್ದೇಶಕರಿಗಿತ್ತು. ಪೂರಕವಾಗಿ ಸುಂದರ ನಾಯಕ–ನಾಯಕಿಯರಿದ್ದರು. ಒಳ್ಳೆಯ ಪೋಷಕ ನಟರಿದ್ದರು. ಕಥೆಯನ್ನೂ ಬರೆದಿರುವ ನಿರ್ದೇಶಕರು ಅಂತಹ ಯಾವ ಪ್ರಯತ್ನಕ್ಕೂ ಹೋಗಿಲ್ಲ. ಅವರು ಕಥೆಯಲ್ಲಿ ಕ್ಷಣಕ್ಷಣಕ್ಕೂ ತಿರುವುಗಳನ್ನು ತುರುಕಿ ಅಲ್ಲಿ ಆಗುವ ಅಪಘಾತಗಳ ನೋವನ್ನು ಪ್ರೇಕ್ಷಕರಿಗೆ ಕೊಟ್ಟಿದ್ದಾರೆ. ಇನ್ನೇನು ನಾಯಕನಿಗೆ ನಾಯಕಿ ದೊರಕಬೇಕು ಎನ್ನುವಾಗ ಕಥೆಯನ್ನು ಬೇರೆಲ್ಲೋ ತಿರುಗಿಸಿ, ಮೇಲಕ್ಕೆದ್ದ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಮತ್ತೆ ಮತ್ತೆ ಕೂರಿಸುತ್ತಾರೆ. ಇದನ್ನು ದಿನನಿತ್ಯ ಸಮಯ ಕೊಲ್ಲುವ ಟೀವಿ ಧಾರವಾಹಿಗಳಿಗೆ ಹೋಲಿಸಬಹುದು. ಇವುಗಳಿಗೆ ಹೇಳಿಕೊಳ್ಳುವಂತಹ ಕಥೆಯೇ ಇರುವುದಿಲ್ಲ, ಆದರೂ ಎಂದಿಗೂ ಅವು ಮುಗಿಯುವುದಿಲ್ಲ.

ನಾಯಕ ಪ್ರಜ್ವಲ್‌ ದೇವರಾಜ್‌ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಸಿನಿಮಾದಲ್ಲಿರುವ ಸಾಕಷ್ಟು ಸಾಹಸದೃಶ್ಯಗಳು ಅವರು ಪಟ್ಟಿರುವ ಶ್ರಮಕ್ಕೆ ಸಂಕೇತವಾಗಿವೆ. ಅವರು ದುರುಳರನ್ನು ಪುಡಿಗಟ್ಟುವ ದೃಶ್ಯಗಳು ತೆರೆಯ ಮೇಲೆ ಬಂದಾಗಲೆಲ್ಲ ನೋಡುಗರ ಕಣ್ಣಿಗೆ ಸಾಕಷ್ಟು ವ್ಯಾಯಾಮ ಆಗುತ್ತದೆ. ಅದು ಶ್ರುತಿ ಹರಿಹರನ್‌ ಅವರ ಬಾಗಿ ಬಳುಕುವ ಹಾಡಿನ ದೃಶ್ಯಗಳು ಬಂದಾಗಲೂ ಆಗುವುದು! ಶ್ರುತಿ ತಮ್ಮ ದೇಹಸಿರಿಯನ್ನು ತೋರುವಲ್ಲಿ ಜಿಪುಣರಾಗಿಲ್ಲ. ಇದರೊಂದಿಗೆ ಈ ಸಿನಿಮಾದಲ್ಲಿ ಅವರ ಅಭಿನಯವೇ ಉತ್ತಮವಾಗಿದೆ.

ಕಥೆಯೊಂದನ್ನು ವ್ಯಾಪಾರಿ ಸಿನಿಮಾದ ಸರಳ ವ್ಯಾಕರಣಕ್ಕೆ ಒಗ್ಗಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದು ಎದ್ದುಕಾಣುತ್ತದೆ. ಅವರು ಹಳೆಯ ಸೂತ್ರಕ್ಕೆ ಶರಣಾಗಿದ್ದಾರೆ. ಅವರ ನೆರವಿಗೆ ಸಿನಿಮಾದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಕೂಡ ಬಂದಿಲ್ಲ. ಕನ್ನಡ ಸಿನಿಮಾಗಳನ್ನು ತಮ್ಮ ಮಾಂತ್ರಿಕ ಸ್ಪರ್ಶವಿರುವ ಸುಮಧುರ ಹಾಡುಗಳಿಂದ ಗೆಲ್ಲಿಸುತ್ತಿದ್ದ ಮನೋಮೂರ್ತಿ ಅವರ ಕೈಚಳಕ ಇಲ್ಲಿ ‘ಹಾಗೇ ಸುಮ್ಮನೆ’ ಮಾಯವಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.