ADVERTISEMENT

ಕಲರ್‌ಫುಲ್ ಮನರಂಜನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 10:21 IST
Last Updated 24 ಜೂನ್ 2016, 10:21 IST
ಕಲರ್‌ಫುಲ್ ಮನರಂಜನೆ
ಕಲರ್‌ಫುಲ್ ಮನರಂಜನೆ   

ಚಿತ್ರ: ಜಿಗರ್‌ಥಂಡ
ನಿರ್ಮಾಣ: ಟಿ.ಎಸ್. ಸತ್ಯನಾರಾಯಣ, ರಘುನಾಥ್
ನಿರ್ದೇಶಕ: ಶಿವಗಣೇಶ್
ತಾರಾಗಣ: ರಾಹುಲ್, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಸಂಯುಕ್ತಾ ಹೊರನಾಡು, ದತ್ತಣ್ಣ ಇತರರು

ಹೆಸರಾಂತ ನಿರ್ಮಾಪಕನ ಹತ್ತಿರ ಹೊಸ ನಿರ್ದೇಶಕನೊಬ್ಬ ಅವಕಾಶ ಕೇಳಿಕೊಂಡು ಬರುತ್ತಾನೆ. ಅವನ ಕಥೆಯನ್ನು ಕೇಳಿ ರೋಸಿದ ನಿರ್ಮಾಪಕ, ಒಳ್ಳೆಯ ರೌಡಿಸಂ ಕಥೆ ಮಾಡಿಕೊಂಡು ಬಾ ಎಂದು ಒಂದಷ್ಟು ಸೀಡಿಗಳನ್ನು ಕೊಡುತ್ತಾನೆ. ಆ ಸೀಡಿಯಲ್ಲಿನ ಸಿನಿಮಾಗಳನ್ನು ನೋಡಿಕೊಂಡು, ಇರುವುದನ್ನೇ ತಿರುಗಾ ಮುರುಗ ಮಾಡಿ ಹೊಸತೊಂದು ಕಥೆಯನ್ನು ಮಾಡಿಕೊಂಡು ಬರಬೇಕು ಎಂಬುದು ನಿರ್ಮಾಪಕನ ನಿರೀಕ್ಷೆ. ಇದು ಚಿತ್ರದ ಆರಂಭದಲ್ಲಿನ ಒಂದು ದೃಶ್ಯ. ನಿರ್ದೇಶಕ ಶಿವಗಣೇಶ್ ಕೂಡ ಇದೇ ರೀತಿ ಮಾಡಿದ್ದಾರೆ. ಆದರೆ ಅವರು ತಿರುಗಾ ಮುರುಗ ಮಾಡುವ ಶ್ರಮವನ್ನೇನೂ ತೆಗೆದುಕೊಂಡಿಲ್ಲ. ತಮಿಳಿನ ‘ಜಿಗರ್‌ಥಂಡ’ ಚಿತ್ರವನ್ನು ಶೀರ್ಷಿಕೆ ಸಮೇತ ಕನ್ನಡಕ್ಕೆ ಕಡ ತಂದಿದ್ದಾರೆ. ಫ್ರೇಂ ಟು ಫ್ರೇಂ.

ಟೀವಿ ರಿಯಾಲಿಟಿ ಷೋ ಒಂದರ ಕಿರುಚಿತ್ರ ನಿರ್ದೇಶಕರ ಸ್ಪರ್ಧೆಯಲ್ಲಿ ನಾಯಕ ರಾಹುಲ್ (ರಾಹುಲ್) ಸೋತರೂ ಅದೇ ವೇದಿಕೆಯಲ್ಲಿ ಅವನಿಗೆ ನಿರ್ಮಾಪಕ ಸಿಕ್ಕಿಬಿಡುತ್ತಾನೆ. ಈ ನಿರ್ಮಾಪಕನನ್ನು ಮೆಚ್ಚಿಸಲು ರೌಡಿಯ ಕಥೆ ಮಾಡುವ ಉದ್ದೇಶದಿಂದ ನಾಯಕ ರುದ್ರಾಪುರಕ್ಕೆ ಬರುತ್ತಾನೆ. ಆ ಊರಿನ ಕುಖ್ಯಾತ ರೌಡಿ ಅಸಾಲ್ಟ್ ಆರುಮುಗಂನ (ರವಿಶಂಕರ್) ಕ್ರೌರ್ಯವನ್ನು ಬೆನ್ನತ್ತುವ ನಾಯಕ ಎಂತೆಂಥ ಸಂಕಷ್ಟದಲ್ಲಿ ಸಿಲುಕುತ್ತಾನೆ, ಹೇಗೆ ಪಾರಾಗುತ್ತಾನೆ ಎಂಬುದೇ ಕಥೆ.

‘ಇಲ್ಲಿ ಒಂದೊಂದು ಕೊಲೆಯೂ ಒಂದೊಂದು ಮೆಡಲ್ ಇದ್ದಂತೆ’ ಎಂದು ಪಾತಕ ಲೋಕದ ಬಗ್ಗೆ ನಾಯಕನಿಗೆ ರೌಡಿ ಆರುಮುಗಂ ಹೇಳುತ್ತಾನೆ. ತನ್ನ ಬಗ್ಗೆ ಸಿನಿಮಾ ಮಾಡುವವರಿಗೆ ತನ್ನ ಕಥೆಯನ್ನು ಆತ ಎಳೆ ಎಳೆಯಾಗಿ ಬಿಟ್ಟುಕೊಡುತ್ತಾನೆ. ತಾನು ಮಾಡಿದ ಕೊಲೆಗಳ ಲೆಕ್ಕವನ್ನೂ ಕೊಡುತ್ತಾನೆ. ಅದನ್ನು ಸಮರ್ಥಿಸುವಂತೆ ಚಿತ್ರದಲ್ಲಿಯೂ ಸಾಲು ಸಾಲು ಹೆಣಗಳು ಬೀಳುತ್ತವೆ. ಆರುಮುಗಂ ಎಷ್ಟು ದೊಡ್ಡ ರೌಡಿ ಎಂದು ತೋರಿಸುವ ದೃಶ್ಯಗಳಿವು. ಇದರ ಮಧ್ಯದಲ್ಲಿ ಪ್ರಸ್ತುತ ಚಲನಚಿತ್ರ ಉದ್ಯಮದ ಪರಿಸ್ಥಿತಿಯನ್ನೂ ಅಲ್ಲಲ್ಲಿ ತೋರಿಸಲಾಗಿದೆ. ಮೂಲ ಕಥೆಯಲ್ಲಿ ಬದಲಾವಣೆಯೇನೂ ಇಲ್ಲದ್ದರಿಂದ ಇಷ್ಟು ಪರಿಚಯ ಸಾಕು ಅನ್ನುಸುತ್ತದೆ.

ಸಿನಿಮಾ ಆರಂಭದಲ್ಲಿ ಕಥೆಯೇ ಮುಂದೆ ಓಡುತ್ತಿಲ್ಲ ಅನ್ನಿಸಿದರೂ ಬೋರ್ ಹೊಡೆಸುವುದಿಲ್ಲ. ಕೌತುಕದ ತಿರುವಿನ ಗಾಂಭೀರ್ಯವನ್ನೇ ಮರೆಮಾಚುವಂತೆ ಬೆನ್ನಿಗೇ ಹಾಸ್ಯ ಸನ್ನಿವೇಶಗಳೂ ನುಸುಳಿಬಿಡುತ್ತವೆ. ಇವನ್ನು ಚಿತ್ರದ ‘ಪ್ಲಸ್’ ಆಗಿಯೂ ‘ಮೈನಸ್’ ಆಗಿಯೂ ಪರಿಗಣಿಸಬಹುದು.

ಕೆಲವೊಮ್ಮೆ ಮುಂದಿನ ಸನ್ನಿವೇಶಗಳು ಏನಿರಬಹುದೆಂದು ಊಹಿಸಿಕೊಳ್ಳಬಹುದು (ಮೂಲ ಸಿನಿಮಾ ನೋಡದಿದ್ದರೂ). ಚಿತ್ರದುದ್ದಕ್ಕೂ ರವಿಶಂಕರ್ ತೆರೆಯ ಮೇಲೆ ಅಬ್ಬರಿಸಿದರೆ ರಾಹುಲ್ ತಣ್ಣಗಿನ ಚಹರೆಯಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ಸಂಯುಕ್ತಾ ಹೆಚ್ಚಿನ ದೃಶ್ಯಗಳಲ್ಲಿ ಕಾಣಸಿಗದಿದ್ದರೂ ಅವರು ನಿರಾಭರಣ, ನಿರಾಡಂಬರ ಸುಂದರಿ. ಚಿಕ್ಕಣ್ಣ ಹಾಗೂ ಸಾಧುಕೋಕಿಲ ತೆರೆಯ ಮೇಲಿದ್ದಷ್ಟು ಹೊತ್ತೂ ನಗಿಸುತ್ತಾರೆ. ಅರ್ಜುನ್ ಜನ್ಯ ಸಂಗೀತ ತಕ್ಕ ಮಟ್ಟಿಗೆ ಕೇಳಬಹುದು. ಜೈ ಆನಂದ್ ಛಾಯಾಗ್ರಹಣದಲ್ಲಿ ಹೆಚ್ಚು ದೃಶ್ಯಗಳು ಕತ್ತಲೆಯಲ್ಲೂ ಕಲರ್‌ಫುಲ್ ಆಗಿವೆ.

ಕನ್ನಡದ ವರ್ಣಮಾಲೆಯನ್ನೆಲ್ಲ ಸೇರಿಸಿದ ಒಂದು ಹಾಡನ್ನು ಹೊರತು ಪಡಿಸಿದರೆ ಇದು ಕನ್ನಡದ ಚಿತ್ರ ಎಂದು ಪ್ರೇಕ್ಷಕನಿಗೆ ಅನ್ನಿಸುವುದು ಕಷ್ಟ. ಆದರೂ, ನಿರೀಕ್ಷೆಗಳಿಲ್ಲದೆ ಚಿತ್ರಮಂದಿರ ಹೊಕ್ಕವರಿಗೆ ಮನರಂಜನೆಗಂತೂ ಮೋಸವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT