ADVERTISEMENT

ಕಲೆ–ಕಟ್ಟಲೆಗಳ ಸಂಘರ್ಷ

ಪದ್ಮನಾಭ ಭಟ್ಟ‌
Published 19 ಮೇ 2017, 12:59 IST
Last Updated 19 ಮೇ 2017, 12:59 IST
ಕಲೆ–ಕಟ್ಟಲೆಗಳ ಸಂಘರ್ಷ
ಕಲೆ–ಕಟ್ಟಲೆಗಳ ಸಂಘರ್ಷ   

ಬಣ್ಣ ಬಣ್ಣದ ಬದುಕು
ನಿರ್ದೇಶಕ: ಇಸ್ಮಾಯಿಲ್‌ ಮೂಡುಶೆಡ್ಡೆ
ನಿರ್ಮಾಪಕ: ಕೃಷ್ಣ ನಾಯ್ಕ
ತಾರಾಗಣ: ರವಿರಾಜ್ ಶೆಟ್ಟಿ, ಅನ್ವಿತ್ ಸಾಗರ್, ಸತ್ಯರಾಜ್‌

ತಾನು ಬೆಳೆದ ನೆಲದ ಕಲೆಯನ್ನು ಆರಾಧಿಸಿ ಕಲಾವಿದನಾಗುವ ಮುಸ್ಲಿಂ ಹುಡುಗನೊಬ್ಬನ ಬದುಕಿನ ಕಥೆ ‘ಬಣ್ಣ ಬಣ್ಣದ ಬದುಕು’.
ಧರ್ಮದ ಕಟ್ಟಳೆಗಳು ಮತ್ತು ಎಲ್ಲವನ್ನೂ ಮೀರಲು ಪ್ರೇರೇಪಿಸುವ ಕಲೆಯ ನಡುವಿನ ಸಂಘರ್ಷದ ವಸ್ತುವನ್ನು ಆಯ್ದುಕೊಂಡಿದ್ದಕ್ಕೆ ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ ಅಭಿನಂದನಾರ್ಹರು. ಆದರೆ ಆ ವಸ್ತುವಿನ ಸಂಕೀರ್ಣತೆಗಳನ್ನು ಒಂದು ಕಲಾಕೃತಿಯಾಗಿ ರೂಪಿಸುವಲ್ಲಿ ಅವರು ಯಶಸ್ವಿಯಾಗಿಲ್ಲ.

ಅಬ್ಬು ಬ್ಯಾರಿ ಬಾಲ್ಯದಲ್ಲಿಯೇ ಯಕ್ಷಗಾನ ಕಲೆಗೆ ಮಾರುಹೋಗಿ ಸಾಕಷ್ಟು ಪ್ರಸಿದ್ಧಿ ಗಳಿಸಿರುತ್ತಾನೆ. ಆದರೆ ಅವನದೇ ಧರ್ಮದವರಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತದೆ. ಮನುಷ್ಯ ತಾನೇ ಸೃಷ್ಟಿಸಿಕೊಂಡ ಧರ್ಮವೊಂದರ ನಿಯಮಗಳು ಅವನಿಗೇ ಹೇಗೆ ಕಟ್ಟಳೆಯಾಗಿ ಪರಿಣಮಿಸುತ್ತವೆ ಎನ್ನುವುದನ್ನು ಹೇಳಲು ನಿರ್ದೇಶಕರು ಯತ್ನಿಸಿದ್ದಾರೆ. ತಮ್ಮ ಉದ್ದೇಶವನ್ನು ಸಮರ್ಥವಾಗಿ ದೃಶ್ಯರೂಪದಲ್ಲಿ ಕಟ್ಟಿಕೊಡಲು ಅವರಿಗೆ ಸಾಧ್ಯವಾಗಿಲ್ಲ.

ADVERTISEMENT

ಧರ್ಮದ ನಿಯಮಗಳು ಮತ್ತು ಕಲೆಯ ಮುಕ್ತತೆ ಇವುಗಳ ಸಂಘರ್ಷವನ್ನು ಚಿತ್ರಿಸಿರುವ ದೃಷ್ಟಿಕೋನವೇ ಅಪೂರ್ಣವಾಗಿದೆ ಮತ್ತು ಏಕಮುಖವಾಗಿದೆ. ಈ ಕಾರಣದಿಂದಲೇ ಇದು ಅತ್ತ ಕಲಾಜಗತ್ತಿನ ರಾಜಕಾರಣವನ್ನೂ ಅನಾವರಣ ಮಾಡುವುದಿಲ್ಲ, ಇತ್ತ ಕಲಾವಿದನ ಖಾಸಗೀ ಬದುಕಿನ ಸಮಸ್ಯೆಗಳನ್ನೂ ವಾಸ್ತವವೆಂಬಂತೆ ಬಿಂಬಿಸುವುದಿಲ್ಲ. ಒಂದು ಸಾಮಾಜಿಕ ಸಮಸ್ಯೆಯನ್ನು ಅದರ ಸಂಕೀರ್ಣತೆಯೊಟ್ಟಿಗೆ ನೋಡುವ ಪ್ರಯತ್ನವೂ ಇಲ್ಲಿ ಕಾಣಿಸುವುದಿಲ್ಲ. ಯಕ್ಷಗಾನ ಕಲೆಯನ್ನು ನಂಬಿರುವ ಒಬ್ಬ ಮುಸ್ಲಿಂ ಹುಡುಗನ ಗೋಳಿನ ಕಥೆಯಷ್ಟೇ ಆಗಿ ಸಿನಿಮಾ ಮುಗಿದುಬಿಡುತ್ತದೆ. 

‘ನಮಗೆ ನೈತಿಕ ಪೊಲೀಸ್‌ಗಿರಿ ಬೇಕಾಗಿಲ್ಲ’ ಎಂದು ಧರ್ಮರಕ್ಷಕ ಸಂಘಟನೆಗಳಿಗೆ ಹೇಳಿಸುವ ದಿಟ್ಟತನ ತೋರಿಸುವ ನಿರ್ದೇಶಕರು, ಆ ‘ಸಂಘಟನೆಗಳ’ ಇಬ್ಬದಿ ಮುಖ, ಅದರ ಹಿನ್ನೆಲೆ–ಪರಿಣಾಮಗಳನ್ನೇ ಆಳವಾಗಿ ಗ್ರಹಿಸಿದ್ದರೂ ಸಿನಿಮಾ ಇನ್ನಷ್ಟು ಘನಗೊಳ್ಳುವ ಸಾಧ್ಯತೆ ಇತ್ತು. ವಸ್ತುವನ್ನು ಆಯ್ದುಕೊಳ್ಳುವಲ್ಲಿ ನಿರ್ದೇಶಕರಿಗಿರುವ ಕಾಳಜಿ, ಅದನ್ನು ಹೇಳುವ ಮಾಧ್ಯಮದ ವ್ಯಾಕರಣದ ಕುರಿತಾಗಿ ಇಲ್ಲದಿರುವುದಕ್ಕೆ ಸಿನಿಮಾದುದ್ದಕ್ಕೂ ಹೇರಳ ಪುರಾವೆಗಳಿವೆ. ದಕ್ಷಿಣ ಕನ್ನಡದಲ್ಲಿಯೇ ನಡೆಯುವ ಈ ಸಿನಿಮಾದಲ್ಲಿ ಅಲ್ಲಿನ ಕನ್ನಡದ ಸೊಗಡನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ಕೈಚೆಲ್ಲಿದ್ದಾರೆ. ಸಂಭಾಷಣೆಯಲ್ಲಿನ ಕೃತಕತೆ ಯಾವ ದೃಶ್ಯವನ್ನೂ ಆಪ್ತವಾಗಿಸದಂತೆ ತಡೆಯುತ್ತದೆ.

ಮತ್ತೆ ಮತ್ತೆ ಬರುವ ಫ್ಲಾಶ್‌ಬ್ಯಾಕ್‌ಗಳು ಹೇಳಿದ್ದನ್ನೇ ಪುನರಾವರ್ತಿಸುತ್ತವೆಯೇ ಹೊರತು ಹೊಸತೇನನ್ನೂ ಸೇರಿಸುವುದಿಲ್ಲ. ಆದ್ದರಿಂದ ಸಿನಿಮಾ ಕೆಸರಿನಲ್ಲಿ ಸಿಲುಕಿಕೊಂಡ ವಾಹನದ ಚಕ್ರದಂತೆ ನಿಂತಲ್ಲೇ ಸುತ್ತುತ್ತಿರುವಂತೆ ಭಾಸವಾಗುತ್ತದೆ. ಕಲೆ ಮತ್ತು ಧರ್ಮದ ಬಗೆಗಿನ ಧಾರಾಳ ಉಪದೇಶಗಳು, ಅನುಕೂಲಸಿಂಧು ಮನಃಪರಿವರ್ತನೆಗಳು, ಅನಗತ್ಯ ನಾಟಕೀಯತೆ ಸಿನಿಮಾದ ಬಣ್ಣಗೆಡಿಸಿವೆ.

ಎ.ಕೆ. ವಿಜಯ್‌ ಅವರ ಸಂಯೋಜನೆಯ ಗೀತೆಗಳಲ್ಲಿ ಭಾವಗೀತೆಯ ಗುಣವಿದೆ. ಎಸ್‌. ವಿಜಯ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಲ್ಲಷ್ಟೇ ಸಹನೀಯವಾಗಿದೆ. ಪ್ರಸಿದ್ಧ ಯಕ್ಷಗಾನ ಕಲಾವಿದನ ಪಾತ್ರದಲ್ಲಿ ನಟಿಸಿರುವ ರವಿರಾಜ್ ಶೆಟ್ಟಿ ಯಕ್ಷಗಾನ ಮತ್ತು ನಟನೆ ಎರಡರಲ್ಲಿಯೂ ಎಳಸು. ನಾಯಕಿ ಅನ್ವಿತಾ ಸಾಗರ್‌ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ರಮೇಶ್‌ ಭಟ್‌, ಸತ್ಯರಾಜ್‌, ಹೊನ್ನವಳ್ಳಿ ಕೃಷ್ಣ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸಿನಿಮಾದ ಸಂಭಾಷಣೆಯೊಂದರ ಸಹಾಯದಿಂದಲೇ ಹೇಳುವುದಾದರೆ – ಇದು ಹರಾಮಿ ಮತ್ತು ಹಲಾಲ್‌ಗಳ ನಡುವೆ ನಲುಗುವ ಕಲೆಯ ಕಥೆ. ಈ ಮಾತನ್ನು ಕಥೆಯೊಳಗಿನ ಕಲಾವಿದ ಅಬ್ಬುವಿನ ಬದುಕಿಗಷ್ಟೇ ಅಲ್ಲ, ಸಿನಿಮಾಕ್ಕೂ ಅನ್ವಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.