ADVERTISEMENT

ಕುದುರದ ‘ಡೀಲ್’

ಡೀಲ್ ರಾಜ

ಆನಂದತೀರ್ಥ ಪ್ಯಾಟಿ
Published 29 ಜುಲೈ 2016, 11:15 IST
Last Updated 29 ಜುಲೈ 2016, 11:15 IST
ಕುದುರದ ‘ಡೀಲ್’
ಕುದುರದ ‘ಡೀಲ್’   

ಡೀಲ್ ರಾಜ
ನಿರ್ಮಾಪಕರು: ಕೆ.ಮೂರ್ತಿ, ರವಿಚಂದ್ರ ರೆಡ್ಡಿ, ಸುರೇಶ ಎನ್., ಶ್ರೀಕಾಂತ ರೆಡ್ಡಿ
ನಿರ್ದೇಶಕ: ರಾಜ್ ಗೋಪಿ
ತಾರಾಗಣ: ಕೋಮಲ್, ಭಾನುಶ್ರೀ, ಸುಮನ್ ನಗರಕರ್, ತಬಲಾ ನಾಣಿ


ಕೋಟ್ಯಂತರ ಮೌಲ್ಯದ ಆಸ್ತಿ ಲಪಟಾಯಿಸಲು ಮೂವರು ಸಂಚು ಮಾಡುತ್ತಾರೆ. ಅವರಾದರೂ ಸಾಮಾನ್ಯರೇನಲ್ಲ; ಸಚಿವ ಶಂಕರಾನಂದ, ಮಠಾಧೀಶ ಅಮಿತಾನಂದ ಸ್ವಾಮಿ ಹಾಗೂ ಜೈಲರ್ ದುರ್ಗಾ ದೇವಿ! ಇವರ ಕಾಕದೃಷ್ಟಿ ಬಿದ್ದ ಆ ಆಸ್ತಿಯ ವಾರಸುದಾರ ಡೀಲ್ ಮಾಡುತ್ತ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಕಾಸು ಕಮಾಯಿಸುವ ಈ ಡೀಲ್ ರಾಜನ ವ್ಯಕ್ತಿತ್ವ ತುಸು ಭಿನ್ನ. ಆತನ ಡೀಲ್‌ಗಳಿಂದ ಜನಸಾಮಾನ್ಯರಿಗೆ ತೊಂದರೆಯೇನೂ ಆಗದು. ಆ ಕರಾಮತ್ತನ್ನು ‘ಡೀಲ್ ರಾಜ’ ತೆರೆದಿಡುತ್ತದೆಂದು ಚಿತ್ರಮಂದಿರಕ್ಕೆ ಹೋದವರ ಆಸೆಯಂತೂ ಈಡೇರುವುದಿಲ್ಲ.

ಆಸ್ತಿಯನ್ನು ಕಬಳಿಸುವ ಹುನ್ನಾರ ಹಾಗೂ ಅದು ಹೇಗೆ ಹಾಳಾಗುತ್ತದೆಂಬುದನ್ನು ಮನರಂಜನೆ ಸೂತ್ರದಡಿ ಪೋಣಿಸಲು ಯತ್ನಿಸಿದ ರಾಜ್ ಗೋಪಿ ಗಮನ ಸೆಳೆಯುವುದು ವಿಭಿನ್ನ ಎನಿಸುವ ಚಿತ್ರಕಥೆಯಲ್ಲಿ ಮಾತ್ರ. ಆದರೆ ಎರಡೂವರೆ ತಾಸುಗಳ ನಿರೂಪಣೆಯು ಪ್ರೇಕ್ಷಕರಿಗೆ ಆಕಳಿಕೆ ತರುತ್ತದೆ. ಹತ್ತು ಹಲವು ಪಾತ್ರಗಳನ್ನು ಸೃಷ್ಟಿಸಿ, ಅವುಗಳಿಗೆಲ್ಲ ಪ್ರಾಮುಖ್ಯ ಕೊಡುವ ಅವಸರದಲ್ಲಿ ನಿರ್ದೇಶಕರು ಒಂದಷ್ಟು ಗೊಂದಲಕ್ಕೆ ಬಿದ್ದಂತೆ ಭಾಸವಾಗುತ್ತದೆ. ಒಂದು ಹಂತದಲ್ಲಿ ಕಥೆ ಎಲ್ಲೆಲ್ಲೋ ಹೋಗಿ, ಅದನ್ನು ದಡ ಸೇರಿಸಲು ನಿರ್ದೇಶಕರು ಪ್ರಯಾಸ ಪಟ್ಟಿರುವುದೂ ಕಾಣಿಸುತ್ತದೆ!

ವಿಜಯ ಬಹದ್ದೂರ್ ಹಾಗೂ ರಾಣಿ ವಿಮಲಾದೇವಿ ಅವರ ಕಾಲಾನಂತರ ಅನಾಥವಾಗಿ ಉಳಿಯುವ ಜಮೀನನ್ನು ಮಠಾಧಿಪತಿಯೊಬ್ಬ ಮಂತ್ರಿಯ ನೆರವಿನಿಂದ ಪಡೆಯಲು ನಡೆಸುವ ಹುನ್ನಾರದ ಕಥೆಯಿದು. ಅದು ಹೇಗೆಲ್ಲ ವಿಫಲವಾಗುತ್ತದೆ ಎಂಬುದನ್ನು ಕೋಮಲ್ ಕಾಮಿಡಿಯೊಂದಿಗೆ ಹೇಳಲು ರಾಜ್ ಗೋಪಿ ಯತ್ನಿಸಿದ್ದಾರೆ. ಆ ಜಮೀನಿಗೆ ಇರುವ ಕೊನೆಯ ಕೊಂಡಿ ಆಂಟೋನಿ ಅಲಿಯಾಸ್ ರಾಮಸಿಂಗ್‌ನನ್ನು ಪತ್ತೆ ಹಚ್ಚುವ ಡೀಲ್‌ ರಾಜನಿಗೆ ಸಿಗುತ್ತದೆ. ಆತನನ್ನು ಹುಡುಕಲು ಹೋಗುವ ರಾಜನಿಗೆ ಮತ್ತೇನೋ ರಹಸ್ಯ ಗೊತ್ತಾಗಿ ಬಿಡುತ್ತದೆ. ಆತನನ್ನು ನಿಗೂಢವಾಗಿ ಮುಗಿಸಿಬಿಡಲು ಜೈಲರ್ ದುರ್ಗಾ ಹಾಗೂ ಸಚಿವ ಶಂಕರಾನಂದ ತೀರ್ಮಾನಿಸುತ್ತಾರೆ. ಅದನ್ನೆಲ್ಲ ಡೀಲ್ ರಾಜ ಹೇಗೆ ಎದುರಿಸುತ್ತಾನೆ? ಅಷ್ಟೊಂದು ಆಸ್ತಿ ರಾಜನಿಗೆ ಸಿಗುವುದಾದರೂ ಹೇಗೆ? ಇದಕ್ಕೆಲ್ಲ ನಿರ್ದೇಶಕರು ಆಸಕ್ತಿಯುಳ್ಳ ಏನೇನೋ ಕಥೆ ಹೆಣೆದಿದ್ದಂತೂ ನಿಜ!

ಕೋಮಲ್ ಇದ್ದರೆ ಕಾಮಿಡಿ ಖಚಿತ. ಅದು ಇಲ್ಲೂ ಮುಂದುವರಿದಿದೆ. ಹಾವಭಾವ, ಶೈಲಿ, ಚಿತ್ರ–ವಿಚಿತ್ರ ಡಾನ್ಸ್‌ಗಳಿಂದ ಅವರು ಕೊಡುವ ರಂಜನೆಗೇನೂ ಕೊರತೆ ಇಲ್ಲ. ನಾಯಕಿ ಭಾನುಶ್ರೀ ಅವರದು ಟೈಮ್‌ ಪಾಸ್ ಪಾತ್ರವಷ್ಟೇ. ವಿರಾಮದ ಬಳಿಕ ಜೈಲರ್ ಆಗಿ ತೆರೆ ಮೇಲೆ ಬರುವ ಸುಮನ್ ನಗರಕರ್, ಉಳಿದವರಿಗಿಂತ ಹೆಚ್ಚು ಛಾಪು ಮೂಡಿಸುತ್ತಾರೆ. ಕೋಮಲ್ ಹಾಸ್ಯದೂಟಕ್ಕೆ ಸಾಧು ಕೋಕಿಲಾ, ತಬಲಾ ನಾಣಿ, ಮಿತ್ರ, ಕುರಿ ಪ್ರತಾಪ್ ಇತರರು ಮತ್ತಷ್ಟು ಮಸಾಲೆ ಬೆರೆಸುತ್ತಾರೆ. ಅಭಿಮಾನ್ ರಾಯ್ ರಾಗ ಸಂಯೋಜಿಸಿದ ಹಾಡುಗಳ ಪೈಕಿ ‘ಪದ್ಮಾವತಿ’ ಗೀತೆಯೊಂದೇ ನೆನಪಿನಲ್ಲಿ ಉಳಿಯುತ್ತದೆ.

ಅನಾಯಾಸವಾಗಿ ಕೋಟಿಗಟ್ಟಲೆ ಹಣ ಗಿಟ್ಟಿಸಲು ಡೀಲ್ ರಾಜ ‘ಅಪರೇಷನ್ ಕೋಟಿ’ ತಂತ್ರ ರೂಪಿಸುತ್ತಾನೆ. ದಕ್ಷ ಪೊಲೀಸರಿಂದ ಅದೆಲ್ಲವೂ ವಿಫಲವಾಗಿ, ‘ಅಪರೇಷನ್ ಕೋತಿ’ಯಾಗಿ ಬಿಡುತ್ತದೆ. ಅಲ್ಲಿದ್ದವರು ಪೆಚ್ಚರಾಗುತ್ತಾರೆ. ಪ್ರೇಕ್ಷಕನ ಸ್ಥಿತಿ ಕೂಡ ಬೇರೆಯೇನೂ ಆಗಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT