ADVERTISEMENT

ಕೆಂಪು–ಪಂಪು, ಬಿಳಿ–ತಿಳಿ, ಇತ್ಯಾದಿ...

ಬಹುಪರಾಕ್

ಚ.ಹ.ರಘುನಾಥ
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ನಿರ್ಮಾಪಕ : ಹೇಮಂತ್‌, ಅಭಿ, ಸುರೇಶ್‌ ಬೈರಸಂದ್ರ
ನಿರ್ದೇಶಕ : ಸುನಿ, ತಾರಾಗಣ : ಶ್ರೀನಗರ ಕಿಟ್ಟಿ, ಮೇಘನಾ ರಾಜ್, ಸುಕೃತ ವಾಗ್ಲೆ, ಮಾನಸ ಜೋಶಿ, ಭಾವನಾರಾವ್, ಪವನ್ ಒಡೆಯರ್, ಇತರರು


‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ 2013ರಲ್ಲಿನ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ಈ ಸಿನಿಮಾದ ನಿರ್ದೇಶಕ ಸುನಿ ಒಂದು ವರ್ಷದ ನಂತರ ‘ಬಹುಪರಾಕ್‌’ ಮೂಲಕ ಮತ್ತೆ ಪ್ರೇಕ್ಷಕರ ಎದುರು ನಿಂತಿದ್ದಾರೆ. ಕಾಕತಾಳೀಯ ಎಂದರೆ, ‘ಬಹುಪರಾಕ್‌’ 2013ರ ಮತ್ತೊಂದು ಪ್ರಯೋಗಶೀಲ ಸಿನಿಮಾ, ಜಯತೀರ್ಥ ಅವರ ‘ಟೋನಿ’ ಚಿತ್ರವನ್ನು ನೆನಪಿಸುತ್ತದೆ. ಒಂದರೊಳ­ಗೊಂದು ತಳಕು ಹಾಕಿಕೊಂಡೂ ಪ್ರತ್ಯೇಕವಾಗಿ ಉಳಿಯುವ ಮೂರು ಕಥನಗಳ ಮೂಲಕ ಬದುಕಿನ ಸೌಂದರ್ಯ ಮತ್ತು ನಶ್ವರತೆಯನ್ನು ‘ಟೋನಿ’ ಚಿತ್ರಿಸಿತ್ತು. ‘ಬಹುಪರಾಕ್‌’ ಕೂಡ ಮೂರು

ಕಥನಗಳ ಮೂಲಕ ಬದುಕಿನ ಒಳಿತು ಕೆಡಕುಗಳ ಬಗ್ಗೆ ಮಾತನಾಡುತ್ತದೆ. ಶ್ರೀನಗರ ಕಿಟ್ಟಿ ಈ ಎರಡೂ ಸಿನಿಮಾಗಳ ನಾಯಕ ಎನ್ನುವುದು ಕಾಕತಾಳೀಯ.

ಮನಸ್‌, ಮೌನಿ ಮತ್ತು ಮಣಿ ಎನ್ನುವ ಮೂರು ಪಾತ್ರಗಳು ‘ಬಹುಪರಾಕ್‌’ನ ಕೇಂದ್ರದಲ್ಲಿವೆ. ಮನಸ್‌ ಸ್ನೇಹ ಮತ್ತು ಪ್ರೀತಿಯ ಆಯ್ಕೆಯ ಗೊಂದಲದ­ಲ್ಲಿದ್ದಾನೆ. ರಾಜಕಾರಣದ ಏರುದಾರಿಯಲ್ಲಿ ನಡೆಯುವ ಮೌನಿ ತನ್ನ ಆದರ್ಶಗಳಿಂದ ದೂರವಾಗಿದ್ದಾನೆ. ಈ ಇಬ್ಬರೂ ಮತ್ತೆ ಬದುಕಿನ ಸರಿಯಾದ ಹಳಿಗೆ ಮರಳಬೇಕೆಂದು ಬಯಸಿದರೂ, ಆ ಹಂಬಲಕ್ಕೆ ಪ್ರೇರಣೆಯಾದ ಸ್ನೇಹಸಂಬಂಧಗಳನ್ನೇ ಕಳೆದುಕೊಂಡಿದ್ದಾರೆ.

ಭೂಗತಲೋಕದ ದೊರೆಯಾದ ಮಣಿ ಕೂಡ ತನ್ನ ಗೆಳೆಯನಿಗೆ ತಾನೇ ಗುಂಡಿಕ್ಕುತ್ತಾನೆ. ಈ ವಿರೋಧಾಭಾಸದ ಕಥನಗಳ ಹೆಣಿಗೆಯ ಸಿನಿಮಾ, ‘ಒಳ್ಳೆಯದಕ್ಕೆ ಬಹುಪರಾಕ್‌’ ಎನ್ನುತ್ತದೆ. ‘ಟೋನಿ’ ಸಿನಿಮಾದ ಕಥನಗಳು ಪ್ರತ್ಯೇಕವಾಗಿ ಉಳಿಯುತ್ತವೆ; ಆದರೆ, ಸುನಿ ಸಿನಿಮಾದಲ್ಲಿ ಮೂರು ಎಳೆಗಳು ತಳಕು ಹಾಕಿಕೊಳ್ಳಲು ಹಂಬಲಿಸುತ್ತವೆ. ಅಷ್ಟುಮಾತ್ರವಲ್ಲ, ಈ ಮೂರೂ ಮುಖಗಳು ಒಬ್ಬನೇ ವ್ಯಕ್ತಿಯ ಬದುಕಿನ ಪ್ರತ್ಯೇಕ ಅವಸ್ಥೆಗಳಿರಬಹುದು ಎಂದೂ ಪ್ರೇಕ್ಷಕರಿಗೆ ಅನ್ನಿಸುತ್ತದೆ.

ಮೂರು ಆಯಾಮಗಳ ಪಾತ್ರವನ್ನು ಶ್ರೀನಗರ ಕಿಟ್ಟಿ ತನ್ಮಯತೆಯಿಂದ ಪೋಷಿಸಿದ್ದಾರೆ. ಸ್ನೇಹ ಮತ್ತು ಪ್ರೀತಿಯ ರೂಪಕಗಳನ್ನು ಪೋಷಿಸಿರುವ ಮೇಘನಾ ರಾಜ್‌ ಕೂಡ ಇಷ್ಟವಾಗುತ್ತಾರೆ. ಬಿ.ಜೆ. ಭರತ್ ಸಂಗೀತ, ಮನೋಹರ್ ಜೋಷಿ ಅವರ ಛಾಯಾಗ್ರಹಣವೂ ಸಿನಿಮಾದ ಪಾತ್ರಗಳಷ್ಟೇ ಸಹಜವಾಗಿದೆ.

‘ಬಹುಪರಾಕ್‌’ ನೋಡುಗರ ಸಾವಧಾನವನ್ನು ಬೇಡುವ ಸಿನಿಮಾ. ಜನಪ್ರಿಯ ಸಿನಿಮಾ ಸಂದರ್ಭದಲ್ಲಿ ಬಳಸುವ ‘ರಿಲೀಫ್‌’ನ ಅಂಶಗಳು ಇಲ್ಲಿ ಕಡಿಮೆ. ಐಟಂ ಸಾಂಗ್‌ ಸನ್ನಿವೇಶ ಕೂಡ ನಾಯಕನಲ್ಲಿ ಕ್ಷೋಭೆ ಉಂಟುಮಾಡುವುದರೊಂದಿಗೆ ಕೊನೆಗೊಳ್ಳುತ್ತದೆ.
ದೃಶ್ಯಗಳ ಹೆಣಿಗೆ, ಶಿಶುನಾಳ ಶರೀಫ ಮತ್ತು ಲಂಕೇಶರ ಪದ್ಯಗಳನ್ನು ಬಳಸಿಕೊಂಡಿರುವ ರೀತಿ ಗಮನಸೆಳೆಯುವಂತಿದೆ.
ಇದೆಲ್ಲಕ್ಕೂ ಮುಖ್ಯವಾಗಿ ಸಿನಿಮಾ ಬಗೆಗಿನ ನಿರ್ದೇಶಕರ ಪ್ರೀತಿ ಸಿನಿಮಾದು­ದ್ದಕ್ಕೂ ಒಡೆದುಕಾಣುತ್ತದೆ. ಒಂದು ಪ್ರಯೋಗಶೀಲ ಚಿತ್ರದ ಮಾದರಿಯಲ್ಲಿ ‘ಬಹುಪರಾಕ್‌’ ಇಷ್ಟವಾಗು­ತ್ತದೆ. ‘ನಮ್ಮದು ಹಾಲಿವುಡ್‌ ಮಟ್ಟದ ಸಿನಿಮಾ’, ‘ನಮ್ಮ ಸಿನಿಮಾ ನೋಡಲಿಕ್ಕೆ ಹೊಸಕಾಲದ ಸಂಗೀತ, ಟೊರಾಂಟಿನೋ ಸಿನಿಮಾ, ನಿಯೋ ನೋಯಿರ್‌ ಕಥನಗಳು ಗೊತ್ತಿರಬೇಕು’ ಎಂದು ಬಣ್ಣಿಸಿಕೊಳ್ಳು­ವವರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ‘ಬಹುಪರಾಕ್‌’ ಅಪ್ಪಟ ಕನ್ನಡ ಸಿನಿಮಾ ಎಂದೂ ಕನ್ನಡದ ಕಣ್ಣಿನಿಂದಲೇ ನೋಡಬಹುದಾದ ಸಿನಿಮಾ ಎಂದೂ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT