ADVERTISEMENT

‘ಟೈಗರ್’ಗೆ ಕಮರ್ಷಿಯಲ್‌ ಪೋಷಾಕು

ಕೆ.ಎಚ್.ಓಬಳೇಶ್
Published 16 ಜೂನ್ 2017, 13:17 IST
Last Updated 16 ಜೂನ್ 2017, 13:17 IST
‘ಟೈಗರ್’ಗೆ ಕಮರ್ಷಿಯಲ್‌ ಪೋಷಾಕು
‘ಟೈಗರ್’ಗೆ ಕಮರ್ಷಿಯಲ್‌ ಪೋಷಾಕು   

ಚಿತ್ರ: ಟೈಗರ್
ನಿರ್ಮಾಪಕರು: ಕೆ. ಶಿವರಾಮ್
ನಿರ್ದೇಶಕ: ನಂದಕಿಶೋರ್
ತಾರಾಗಣ: ಪ್ರದೀಪ್, ಕೆ. ಶಿವರಾಮ್‌, ನೈರಾ ಬ್ಯಾನರ್ಜಿ, ಚಿಕ್ಕಣ್ಣ, ಸಾಧುಕೋಕಿಲ, ರಂಗಾಯಣ ರಘು

***

ನಂದಕಿಶೋರ್‌ ನಿರ್ದೇಶನದ ‘ಟೈಗರ್‌’ ಅಪ್ಪ–ಮಗನ ಪ್ರೀತಿಯ ಮುಸುಕಿನ ಗುದ್ದಾಟ ತೋರಿಸುತ್ತಲೇ, ಸಮಾಜಘಾತುಕ ಶಕ್ತಿಗಳನ್ನು ಮೆಟ್ಟಿನಿಲ್ಲುವ ಚಿತ್ರಣ ಅನಾವರಣ­ಗೊಳಿಸುವ ಸಿನಿಮಾ. ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಆಗಬೇಕೆಂದು ಪಣತೊಟ್ಟಿರುವ ಪುತ್ರನ ಆಸೆಗೆ ತಂದೆಯೇ ಏಕೆ ಅಡ್ಡಗಾಲು ಹಾಕುತ್ತಾರೆ? ಕೊನೆಗೆ, ತಂದೆಯ ವೈರಿಯನ್ನು ಪುತ್ರ ಹೇಗೆ  ಕೊನೆಗಾಣಿಸುತ್ತಾನೆ ಎನ್ನುವುದೇ ಚಿತ್ರದ ಕಥೆ.

ADVERTISEMENT

ಮಗನ ಶ್ರೇಯಸ್ಸಿಗೆ ಹಂಬಲಿಸುವ ಅಪ್ಪ, ಇನ್ನೊಂದೆಡೆ ತನ್ನ ಹೆಂಡತಿಗೆ ಕೊಟ್ಟ ಭಾಷೆ ಉಳಿಸಿಕೊಳ್ಳಲು ಹೆಣಗಾಟ, ಮುಂಬೈ ಭೂಗತ ಜಗತ್ತಿನಲ್ಲಿ ನಡೆಯುವ ಎನ್‌ಕೌಂಟರ್‌, ನವಿರಾದ ಹಾಸ್ಯ, ಜೊತೆಗೆ ಒಂದು ಐಟಂ ಸಾಂಗ್‌ ಇಟ್ಟುಕೊಂಡು ನಿರ್ದೇಶಕರು ಕಥೆ ಹೊಸೆದಿದ್ದಾರೆ. ‘ಟೈಗರ್’ಗೆ  ಕಮರ್ಷಿಯಲ್‌ ಪೋಷಾಕು ತೊಡಿಸಿದ್ದಾರೆ.

ದ್ವಿತೀಯಾರ್ಧದಲ್ಲಿ ಸಿನಿಮಾ ತಿರುವು ಪಡೆದುಕೊಳ್ಳುತ್ತದೆ. ಈ ಕಥೆಯನ್ನು ಹೇಳಲು ನಿರ್ದೇಶಕರು ಆಯ್ದುಕೊಂಡಿರುವ ದಾರಿ ಹೊಸದೇನಲ್ಲ. ಪಂಚಿಂಗ್‌ ಡೈಲಾಗ್‌ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಅವರು ಯತ್ನಿಸಿದ್ದಾರೆ. ಅದು ಕೆಲವೆಡೆ ಬಾಲಿಶವಾಗಿ ಕಾಣುತ್ತದೆ.

ಕಥಾನಾಯಕ ಅಶೋಕ್‌ ನಾಯಕ್‌ಗೆ (ಪ್ರದೀಪ್) ಪೊಲೀಸ್‌ ಇಲಾಖೆ ಸೇರಬೇಕು ಎಂಬ ಆಸೆ. ಮುಂಬೈನಲ್ಲಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಆಗಿದ್ದ ತಂದೆ ಶಿವರಾಮ್‌ ನಾಯಕ್‌(ಕೆ. ಶಿವರಾಮ್‌) ಮಗನ ಇಚ್ಛೆಗೆ ವಿರೋಧಿಸುತ್ತಾರೆ. ಭೂಗತ ದೊರೆ ಶಂಕರ್‌ ನಾರಾಯಣ್‌ನ(ರವಿಶಂಕರ್) ತಮ್ಮನ ಅಟ್ಟಹಾಸಕ್ಕೆ ಶಿವರಾಮ್‌ ನಾಯಕ್‌ ತಕ್ಕಪಾಠ ಕಲಿಸುತ್ತಾರೆ. ಇದಕ್ಕಾಗಿ ಶಂಕರ್‌ ನಾರಾಯಣ್ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಶಿವರಾಮ್‌ ನಾಯಕ್‌ನ ತಂಡದ ಸದಸ್ಯರು, ಹೆಂಡತಿಯ  ಹತ್ಯೆಯಾಗುತ್ತದೆ. ಖಳನಾಯಕ ಹೂಡಿದ ಸಂಚಿನಿಂದ ತಂದೆ, ಮಗ ಪಾರಾಗುತ್ತಾರೆ.

ಮಗನನ್ನು ಪೊಲೀಸ್‌ ಇಲಾಖೆಗೆ ಸೇರಿಸಬಾರದು. ಅವನನ್ನು ಬ್ಯಾಂಕ್‌ ಮ್ಯಾನೇಜರ್‌ ಮಾಡಬೇಕೆಂದು ಸಾಯುವ ಮೊದಲು ಶಿವರಾಮ್‌ ನಾಯಕ್‌ನ ಹೆಂಡತಿ ಭಾಷೆ ಪಡೆಯುತ್ತಾಳೆ.

ಈ ನಡುವೆ ರಾತ್ರಿವೇಳೆ ಕಾರಿನಲ್ಲಿ ಹೋಗುವಾಗ ನಾಯಕಿಯ(ನೈರಾ ಬ್ಯಾನರ್ಜಿ) ದರ್ಶನವಾಗುತ್ತದೆ. ಅವಳ ಹಿಂದೆ ನಾಯಕ ಬೀಳುತ್ತಾನೆ. ಆಕೆಯನ್ನು ಮದುವೆಯಾಗಬೇಕೆಂಬುದು ಎಂ.ಎಲ್‌.ಎ ಆಗಿರುವ ಸ್ವಂತ ಮಾವನ ಇಚ್ಛೆ. ಇದಕ್ಕೆ ನಾಯಕ ಅಡ್ಡಗೋಡೆ. ನಾಯಕಿಯನ್ನು ರಕ್ಷಿಸುವಾಗ ಸುಪಾರಿ ಕಿಲ್ಲರ್‌ಗಳ ಗಾಳಕ್ಕೆ ಸಿಲುಕುತ್ತಾನೆ. ಪುತ್ರನನ್ನು ಉಳಿಸಿಕೊಳ್ಳಲು ಮುಂದಾದಾಗ ಶಿವರಾಮ್‌ ನಾಯಕ್‌ ಜೀವಂತವಾಗಿರುವುದು ಖಳನಾಯಕನಿಗೆ ತಿಳಿಯುತ್ತದೆ. 
ಯುವ ನಿರ್ದೇಶಕರು ದೆವ್ವದ ಹಿಂದೆ ಬಿದ್ದಿರುವುದು ಹೊಸದೇನಲ್ಲ. ಈ ಸಿನಿಮಾದ ಒಂದು ಹಾಡು ಮತ್ತು ನಾಯಕಿಯ ಪ್ರವೇಶವೂ ದೆವ್ವದ ರೂಪದಲ್ಲಿಯೇ ಆಗುತ್ತದೆ.

ಪ್ರದೀಪ್‌ ಚಿತ್ರರಂಗಕ್ಕೆ ಬಂದು ಒಂಬತ್ತು ವರ್ಷ ಕಳೆದಿವೆ. ಅಂದ ಹಾಗೆ ತೆರೆಯ ಮೇಲೆ ಅಪ್ಪ–ಮಗನಾಗಿರುವ ಪ್ರದೀಪ್‌ ಮತ್ತು ಶಿವರಾಮ್‌ ಬಾಂಧವ್ಯದಲ್ಲಿ ಅಳಿಯ– ಮಾವ. ನಿರ್ದೇಶಕರು ಪ್ರದೀಪ್‌ ಅವರನ್ನು ಮಾಸ್‌ ಆಗಿ ಕಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಗೆ ನಿರ್ವಹಿಸಿರುವ ಕೆಲಸವನ್ನು ಅವರು ಸಮರ್ಪಕವಾಗಿ ನಿಭಾಯಿಸಿದ್ದಾರೆ. ನಾಯಕಿ ನೈರಾ ಬ್ಯಾನರ್ಜಿ ತನಗೆ ನೀಡಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ, ರಂಗಾಯಣ ರಘು ತಮಗೆ ನೀಡಿರುವ ಪಾತ್ರವನ್ನು ಉತ್ತಮವಾಗಿ ಪೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.