ADVERTISEMENT

ದೊನ್ನೆ ಬಿರಿಯಾನಿ ಜೊತೆ ಒಂಚೂರು ಪಾಠ!

ವಿಜಯ್ ಜೋಷಿ
Published 1 ಡಿಸೆಂಬರ್ 2017, 15:10 IST
Last Updated 1 ಡಿಸೆಂಬರ್ 2017, 15:10 IST
'ಗೌಡ್ರು ಹೊಟೆಲ್' ಚಿತ್ರದಲ್ಲಿ ಪ್ರಕಾರ್ ರೈ ಮತ್ತು ರಂಚನ್
'ಗೌಡ್ರು ಹೊಟೆಲ್' ಚಿತ್ರದಲ್ಲಿ ಪ್ರಕಾರ್ ರೈ ಮತ್ತು ರಂಚನ್   

ಸಿನಿಮಾ: ಗೌಡ್ರು ಹೋಟೆಲ್

ನಿರ್ದೇಶನ: ಪಿ. ಕುಮಾರ್

ತಾರಾಗಣ: ಪ್ರಕಾಶ್ ರೈ, ಅನಂತ್ ನಾಗ್, ರಚನ್ ಚಂದ್ರ, ವೇದಿಕಾ

ADVERTISEMENT

ಸಂಗೀತ: ಯುವನ್ ಶಂಕರ್ ರಾಜ

ನಿರ್ಮಾಣ: ಸತೀಶ್ ರೆಡ್ಡಿ
*
ಮಲಯಾಳ ಭಾಷೆಯಲ್ಲಿ 2012ರಲ್ಲಿ ಒಂದು ಸಿನಿಮಾ ಬಂದಿತ್ತು. ಅದರ ಹೆಸರು ‘ಉಸ್ತಾದ್ ಹೋಟೆಲ್’. ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು ಅದು. ಆ ಸಿನಿಮಾದಿಂದ ಸ್ಫೂರ್ತಿ ಪಡೆದು ಕನ್ನಡದಲ್ಲಿ ಮೂಡಿರುವ ಸಿನಿಮಾದ ಹೆಸರು ‘ಗೌಡ್ರು ಹೋಟೆಲ್’.

ಹೆಸರು ‘ಗೌಡ್ರು ಹೋಟೆಲ್’ ಎಂದಿದ್ದರೂ ಇದನ್ನು ‘ಗೌಡರ ಹೋಟೆಲ್’ ಎಂದು ಗ್ರಹಿಸಿದಾಗಲೇ ಸಿನಿಮಾ ಕೂಡ ಹತ್ತಿರವಾಗುವುದು. ಏಕೆಂದರೆ ಭೈರೇಗೌಡರ ಹೋಟೆಲ್‌ ಈ ಸಿನಿಮಾದ ಕೇಂದ್ರಬಿಂದು, ಭೈರೇಗೌಡರು (ಪ್ರಕಾಶ್ ರೈ) ಮತ್ತು ಅವರ ಮೊಮ್ಮಗ ರಿಷಿ (ರಚನ್ ಚಂದ್ರ) ಆ ಕೇಂದ್ರಬಿಂದುವಿನ ಅಕ್ಕಪಕ್ಕ ನಿಂತಿರುವ ಪ್ರಮುಖ ಪಾತ್ರಗಳು.

ಸಾಧು ಸ್ವಭಾವದ ವ್ಯಕ್ತಿ ಭೈರೇಗೌಡರು. ಹೋಟೆಲ್‌ ಮೂಲಕ ಚೆನ್ನಾಗಿ ಹಣ ಸಂಪಾದನೆ ಮಾಡಿದರೂ, ಅದನ್ನು ತಮ್ಮ ಸುತ್ತಮುತ್ತಲಿನವರ ಖುಷಿಗೆ ಖರ್ಚು ಮಾಡುವಂಥವರು. ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಆಗಾಗ ಹೇಳುತ್ತಿರುವವರು, ಬದುಕನ್ನು ಬಹಳ ಆಳವಾಗಿ ಅನುಭವಿಸುವವರು. ರಿಷಿ ಮಹತ್ವಾಕಾಂಕ್ಷಿ. ಯುರೋಪಿನ ದೊಡ್ಡ ವಿಶ್ವವಿದ್ಯಾಲಯದಲ್ಲಿ ಬಾಣಸಿಗನ ವೃತ್ತಿಯಲ್ಲಿ ತರಬೇತಿ ಪಡೆದವ. ಯುರೋಪಿಗೆ ಮರಳಿ ಅಲ್ಲಿನ ಒಂದು ತಾರಾ ಹೋಟೆಲ್‌ನಲ್ಲಿ ಬಾಣಸಿಗನಾಗಿ ನೆಲೆ ಕಂಡುಕೊಳ್ಳಬೇಕು ಎಂಬ ಬಯಕೆ ಇರುವವ.

ಹೀಗೇ ಒಮ್ಮೆ ಭಾರತಕ್ಕೆ ಮರಳುವ ರಿಷಿಗೆ ತಂದೆಯ ಜೊತೆ ಮನಸ್ತಾಪ ಉಂಟಾಗುತ್ತದೆ. ರಿಷಿಯ ಪಾಸ್‌ಪೋರ್ಟ್‌ ಮತ್ತು ಪದವಿ ಪ್ರಮಾಣಪತ್ರವನ್ನು ತಂದೆ ಕಿತ್ತಿಟ್ಟುಕೊಳ್ಳುತ್ತಾನೆ. ಈ ಹಂತದಲ್ಲಿ ಕೆಲವು ದಿನಗಳ ಮಟ್ಟಿಗೆ ಎಂದು ರಿಷಿ ತಾತ ಭೈರೇಗೌಡರಲ್ಲಿಗೆ ಬರುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಸಿನಿಮಾದ ಕಥೆ.

ಮುದ್ದಿನ ಮೊಮ್ಮಗನಿಗೆ ತಾತ ಹೋಟೆಲ್‌ನ ಕೆಲಸಗಳನ್ನು ಕಲಿಸುತ್ತಾರೆ. ಆ ಕೆಲಸಗಳ ಮೂಲಕವೇ ಬದುಕಿಗೆ ಬೇಕಾದ ಚಿಕ್ಕ–ಪುಟ್ಟ ಪಾಠಗಳನ್ನೂ ಕಲಿಸುತ್ತಾರೆ. ‘ಹೇಗಿದ್ದರೂ ಒಂದು ದಿನ ಯುರೋಪಿಗೆ ಹೋಗಿ, ಅಲ್ಲಿಯೇ ನೆಲೆಯೂರಬೇಕು’ ಎಂಬ ಭಾವನೆಯಲ್ಲೇ ತಾತ ಹೇಳುವ ಕೆಲಸಗಳನ್ನು ಮಾಡುವ ರಿಷಿ, ಗೌಡರ ಹೋಟೆಲ್‌ ಮೇಲೆ ಪ್ರೀತಿಯನ್ನು ತನಗರಿವಿಲ್ಲದೆಯೇ ಬೆಳೆಸಿಕೊಳ್ಳುತ್ತಾನೆ.

ಎಲ್ಲವೂ ಮಾಮೂಲಿನಂತೆ ಸಾಗುತ್ತಿದ್ದಾಗ ಗೌಡರ ಹೋಟೆಲ್‌ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ. ಹೋಟೆಲ್‌ ಗೌಡರ ಕೈತಪ್ಪಿಹೋಗಬಹುದೇ ಎಂದು ಅನಿಸಲು ಆರಂಭವಾಗುತ್ತದೆ. ಕಷ್ಟವೆಂಬುದು ಗೌಡರಿಗೆ ಹೊಸದಲ್ಲವಾದರೂ, ಈ ಕಷ್ಟದ ಎದುರು ಗೌಡರೂ ಶರಣಾಗುವ ಹಂತಕ್ಕೆ ಬಂದುಬಿಡುತ್ತಾರೆ. ಆಗ ಮೊಮ್ಮಗ ಮತ್ತು ಅವನ ಪ್ರೇಯಸಿ (ವೇದಿಕಾ) ಹೋಟೆಲ್‌ ಉಳಿಸುವ ಪಣ ತೊಡುತ್ತಾರೆ. ಮುಂದಿನದನ್ನು ತೆರೆಯ ಮೇಲೆ ವೀಕ್ಷಿಸಬಹುದು!

ಅನಂತ್ ನಾಗ್ ಅವರೂ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೈತುಂಬ ಸಂಬಳ ಬರುವ ಕೆಲಸವನ್ನು ಬಿಟ್ಟು, ವಿದೇಶದಿಂದ ಸ್ವದೇಶಕ್ಕೆ ಹಿಂದಿರುಗಿ, ಹಸಿದವರಿಗೆ ಅನ್ನ ಕೊಡುವ ಕಾಯಕದಲ್ಲೇ ಸುಖ ಕಂಡುಕೊಳ್ಳುವ ಪಾತ್ರಕ್ಕೆ ಅನಂತ್ ನಾಗ್ ಜೀವ ತುಂಬಿದ್ದಾರೆ. ನಿರ್ದೇಶಕ ಪಿ. ಕುಮಾರ್ ಅವರು ಅನಂತ್ ನಾಗ್ ಪಾತ್ರದ ಮೂಲಕ ಸಂದೇಶವೊಂದನ್ನು ರವಾನಿಸುತ್ತಾರೆ – ಅದು ರಿಷಿಗೂ, ವೀಕ್ಷಕನಿಗೂ ತಟ್ಟುತ್ತದೆ.

ಪ್ರೀತಿ–ಪ್ರೇಮ, ಆ್ಯಕ್ಷನ್‌ನಂತಹ ದೃಶ್ಯಗಳು ಈ ಸಿನಿಮಾದಲ್ಲೂ ಇವೆ. ಆದರೆ ಅವೆಲ್ಲವೂ ಇರುವುದು ಒಂಚೂರು ಎಂಬಂತೆ ಮಾತ್ರ. ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದು ಪ್ರಕಾಶ್ ರೈ, ರಚನ್ ಚಂದ್ರ ಮತ್ತು ಅನಂತ್ ನಾಗ್ ಅವರ ಪಾತ್ರಗಳು, ಜೊತೆಗೆ ಗೌಡರ ಹೋಟೆಲ್ ಎನ್ನುವ ಆಪ್ತ ಸ್ಥಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.