ADVERTISEMENT

ನೆಲದ ಸೊಗಡಿಲ್ಲದ ಚಿತ್ತ ಚಂಚಲ

ವಿಜಯ್ ಜೋಷಿ
Published 17 ಜೂನ್ 2017, 11:11 IST
Last Updated 17 ಜೂನ್ 2017, 11:11 IST
ನೆಲದ ಸೊಗಡಿಲ್ಲದ ಚಿತ್ತ ಚಂಚಲ
ನೆಲದ ಸೊಗಡಿಲ್ಲದ ಚಿತ್ತ ಚಂಚಲ   

ಚಿತ್ರ: ಚಿತ್ತ ಚಂಚಲ

ನಿರ್ಮಾಪಕರು: ಕರುಣಾಕರ್

ನಿರ್ದೇಶಕ: ವೈ.ಕು. ಸುಂದರ್

ADVERTISEMENT

ತಾರಾಗಣ: ದಿವಂ ಕುಂದರ್, ಪ್ರಭಾಕರ ಕುಂದರ್, ಪ್ರತೀಕಾ ಸರಾಯ್, ಧೃತಿ ಸಾಯಿ

ಕರ್ನಾಟಕದ ಕರಾವಳಿಯ ರಮಣೀಯ ಸ್ಥಳಗಳನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ಹಲವು ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ‘ಉಳಿದವರು ಕಂಡಂತೆ’, ‘ರಂಗಿತರಂಗ’, ಕುಂದಗನ್ನಡದಲ್ಲಿ ಬಂದ ‘ಬಿಲಿಂಡರ್’ ಸಿನಿಮಾಗಳಲ್ಲಿ ಕರಾವಳಿಯ ಹಸಿರ ಹೊದಿಕೆಗಳ, ಕಡಲ ಕಿನಾರೆಗಳ ಚಿತ್ರಣ ಇತ್ತು. ವೈ.ಕು. ಸುಂದರ್ ಎತ್ತಿನಟ್ಟಿ ನಿರ್ದೇಶನದ ಚಿತ್ರ ‘ಚಿತ್ತ ಚಂಚಲ’ ಕೂಡ ಕುಂದಾಪುರ ಸುತ್ತಲಿನ ಅಷ್ಟಿಷ್ಟು ಸುಂದರ ದೃಶ್ಯಗಳನ್ನು ತೋರಿಸುತ್ತದೆ. ಅಲ್ಲಿನ ಹಸಿರು ಗದ್ದೆಗಳು, ಕರಾವಳಿಯಲ್ಲಿ ಮಳೆ ಬಂದು ನಿಂತ ನಂತರ ಇಡೀ ಪರಿಸರವನ್ನು ಆವರಿಸುವ ಸೌಂದರ್ಯವನ್ನು ತುಸು ಮಟ್ಟಿಗೆ ಈ ಸಿನಿಮಾ ಮೂಲಕ ಅನುಭವಿಸಬಹುದು.

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಕೂಡ ಸುಂದರ್ ಅವರದ್ದು. ಕಥಾವಸ್ತು ಉತ್ತಮವಾಗಿದೆ. ಆದರೆ ಕಥೆಯನ್ನು ಚಿತ್ರರೂಪದಲ್ಲಿ ಹೇಳಿರುವ ರೀತಿಯ ಬಗ್ಗೆ ಇದೇ ಮಾತು ಹೇಳಲು ಕಷ್ಟವಾಗುತ್ತದೆ. ಊರಿನ ಶ್ರೀಮಂತ ಗೌಡರ ಮಗ ಪವನ್ (ನಾಯಕ ನಟ ದಿವಂ ಕುಂದರ್), ತನ್ನದೇ ಮನೆಯ ಕೆಲಸದವನ ಮಗಳನ್ನು (ನಾಯಕ ನಟಿ ಪ್ರತೀಕಾ ಸರಾಯ್) ಪ್ರೀತಿಸುತ್ತಾನೆ. ಇದು ಗೌಡರಿಗೆ ಸರಿ ಕಾಣುವುದಿಲ್ಲ. ‘ನಿನ್ನ ಮಗಳಿಗೆ ಬುದ್ಧಿ ಹೇಳು’ ಎಂದು ಗೌಡರು ಮನೆ ಕೆಲಸದವನಿಗೆ ಆಜ್ಞೆ ಮಾಡುತ್ತಾರೆ. ಮನೆ ಕೆಲಸದವ (ಪ್ರಭಾಕರ ಕುಂದರ್) ತನ್ನ ಮಗಳಿಗೆ ಬುದ್ಧಿ ಹೇಳಲು ಮುಂದಾಗುತ್ತಾನೆ. ಆದರೆ ಮಗಳು ‘ಪ್ರೀತಿಗೆ ಅಂತಸ್ತು ಮುಖ್ಯವಲ್ಲ...’ ಎನ್ನುವ ವಿವರಣೆ ನೀಡಿ, ಪವನ್‌ ಜೊತೆಗಿನ ನಂಟು ಬಿಡಲು ಒಲ್ಲೆ ಎನ್ನುತ್ತಾಳೆ.

ಇದಾದ ನಂತರ ಒಂದು ದಿನ ಬೆಳಿಗ್ಗೆ ಭತ್ತದ ಗದ್ದೆ ಬಳಿಯ ಕೆರೆಯಲ್ಲಿ ಪವನ್ ಶವ ಸಿಗುತ್ತದೆ. ಅದು ಕೊಲೆಯೇ? ಆತ್ಮಹತ್ಯೆಯೇ? ಆ ಶವ ನಿಜಕ್ಕೂ ಪವನ್‌ನದ್ದೇ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕು ಎಂದಾದರೆ ಸಿನಿಮಾ ನೋಡಬೇಕು. ಹಾಗೆಯೇ, ಪವನ್ ಸಾವಿನ ನಂತರ ಜ್ಯೋತಿ ಹಾಗೂ ಗೌಡರು ಕೂಡ ಸಾವನ್ನಪ್ಪುತ್ತಾರೆ. ಇವರಿಬ್ಬರದು ಕೂಡ ಕೊಲೆಯೋ, ಆತ್ಮಹತ್ಯೆಯೋ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಸಿನಿಮಾದ ಕೊನೆಯಲ್ಲಿ. ಪವನ್ ಶವ ಸಿಕ್ಕ ಕೆಲವೇ ದಿನಗಳ ನಂತರ ಮೈಸೂರಿನಲ್ಲಿ ಕಿರಣ್‌ ಎನ್ನುವ ಹೆಸರಿನ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ. ನೋಡಲು ಪವನ್‌ಗೂ ಕಿರಣ್‌ಗೂ ವ್ಯತ್ಯಾಸವೇ ಇಲ್ಲ. ಈತ ಯಾರು ಎಂಬ ಪ್ರಶ್ನೆಗೂ ಸಿನಿಮಾ ನೋಡಿಯೇ ಉತ್ತರ ಕಂಡುಕೊಳ್ಳಬೇಕು.

ಒಂಚೂರು ಹಾಸ್ಯ, ಪ್ರೀತಿ, ಸರಣಿ ಕೊಲೆಗಳು, ಆಸ್ತಿ ಮೇಲಿನ ಮೋಹ, ವಿವಾಹೇತರ ಸಂಬಂಧ ಈ ಸಿನಿಮಾ ಕಥೆಯಲ್ಲಿನ ಎಳೆಗಳು. ನಿರ್ದೇಶಕ ಸುಂದರ್ ಅವರು ‘ಗಂಟೆ’ ಎಂಬ ಪಾತ್ರದ ರೂಪದಲ್ಲಿ ಸಿನಿಮಾದ ಉದ್ದಕ್ಕೂ ಬರುತ್ತಾರೆ, ಪ್ರೇಕ್ಷರಲ್ಲಿ ನಗೆಯುಕ್ಕಿಸಲು ಯತ್ನಿಸುತ್ತಾರೆ. ನಾಯಕ ನಟಿಯರಾದ ಧೃತಿ ಸಾಯಿ ಹಾಗೂ ಪ್ರತೀಕಾ ಅವರ ನಟನೆ ದಿವಂ ಕುಂದರ್ ನಟನೆಗಿಂತಲೂ ಚೆನ್ನಾಗಿದೆ ಎಂದು ಹೇಳಲು ತೀರಾ ಕಷ್ಟಪಡಬೇಕಾಗಿಲ್ಲ. ನಾಯಕನ ಮುಖಭಾವ ಬಹುತೇಕ ಸನ್ನಿವೇಶಗಳಲ್ಲಿ ಒಂದೇ ಆಗಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುತ್ತದೆ. ಸಿನಿಮಾದಲ್ಲಿ ಅಲ್ಲಲ್ಲಿ ಬರುವ,‘ಹಾರರ್’ ಎಂದು ಚಿತ್ರತಂಡ ಹೇಳಿಕೊಂಡಿರುವ ಸನ್ನಿವೇಶಗಳು ಬೇಡವೆಂದರೂ ‘ಗುಡ್ಡದ ಭೂತ’ ಧಾರಾವಾಹಿಯ ನೆನಪನ್ನು ತರಿಸುತ್ತವೆ!

ಈ ಚಿತ್ರದ ಬಹುಪಾಲು ಕಥೆ ಕುಂದಾಪುರದ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತದೆಯಾದರೂ, ಸಿನಿಮಾದಲ್ಲಿ ಕುಂದಗನ್ನಡ ಮಾತನಾಡುವ ಪಾತ್ರಗಳು ಇಲ್ಲ. ಒಂದು ಪಾತ್ರ ಮಾತ್ರ ಅಷ್ಟಿಷ್ಟು ಮಾತುಗಳನ್ನು ಕುಂದಗನ್ನಡದಲ್ಲಿ ಆಡುತ್ತದೆ. ಈ ಭಾಷೆ ಎಲ್ಲ ಪ್ರದೇಶದವರಿಗೂ ಅರ್ಥವಾಗುವುದು ಕಷ್ಟ ಎಂಬ ಕಾರಣಕ್ಕೆ, ಸಿನಿಮಾದ ಪಾತ್ರಗಳು ತಮ್ಮ ಪ್ರದೇಶದ ಭಾಷೆಯಲ್ಲಿ ಮಾತನಾಡಿಲ್ಲದೇ ಇರಬಹುದೇನೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.