ADVERTISEMENT

ಭುಜಂಗಯ್ಯನ ಹೊಸ ಅವತಾರ!

ಗಣೇಶ ವೈದ್ಯ
Published 7 ಅಕ್ಟೋಬರ್ 2016, 11:35 IST
Last Updated 7 ಅಕ್ಟೋಬರ್ 2016, 11:35 IST
ಇದೊಳ್ಳೆ ರಾಮಾಯಣ
ಇದೊಳ್ಳೆ ರಾಮಾಯಣ   

ನಿರ್ಮಾಪಕ: ಪ್ರಕಾಶ್ ರೈ, ರಾಮ್‌ಜಿ
ನಿರ್ದೇಶಕ: ಪ್ರಕಾಶ್ ರೈ
ತಾರಾಗಣ: ಪ್ರಕಾಶ್ ರೈ, ಪ್ರಿಯಾಮಣಿ, ಅಚ್ಯುತಕುಮಾರ್, ರಂಗಾಯಣ ರಘು

ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೋ ಉದ್ವೇಗಕ್ಕೆ ಒಳಗಾಗಿಯೋ– ಸಮಾಜ ಒಪ್ಪಿತವಲ್ಲದ ಕೆಲಸವನ್ನು ಮಾಡಲು ಹೋಗಿ ಅಚಾನಕ್ಕಾಗಿ ಸಿಕ್ಕಿಕೊಂಡು ಬಿಡುತ್ತೇವೆ. ತಾನು ಇದನ್ನೆಲ್ಲ ಮಾಡಬಾರದಿತ್ತು ಎಂದುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರುವ ಸಂದರ್ಭ ಬಂದಿರುತ್ತದೆ. ಈ ವಿಚಾರ ನಾಲ್ಕು ಜನರ ಮುಂದೆ ಬಹಿರಂಗವಾದರೆ ಮರ್ಯಾದೆಗೆ ಕುತ್ತು ಎಂದು ಹೇಗಾದರೂ ಬಚಾವಾಗುವ ಯತ್ನದಲ್ಲಿ ಮನುಷ್ಯ ಏನೆಲ್ಲ ಅನುಭವಗಳನ್ನು ಹಾದುಹೋಗುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನವೇ ‘ಇದೊಳ್ಳೆ ರಾಮಾಯಣ’.

ಮನೆಯವರನ್ನೆಲ್ಲ ಮಾತಿನಲ್ಲಿ ಬೆದರಿಸಿ, ಊರಲ್ಲೆಲ್ಲ ನೋಟುಗಳ ಮೂಲಕ ಗೌರವ ‘ಸಂಪಾದಿಸುವ’ ವ್ಯಕ್ತಿ, ತನ್ನ ಸುತ್ತಲಿನ ಜಗತ್ತು ತನ್ನನ್ನು ಹೇಗೆ ನೋಡುತ್ತಿದೆ, ತನ್ನ ಬೆನ್ನ ಹಿಂದೆ ತನ್ನ ಕುರಿತು ತನ್ನ ಆಪ್ತ ವಲಯದಲ್ಲೇ ಇರುವವರಿಂದ ಏನೆಲ್ಲ ಮಾತುಗಳು ಹರಿಯುತ್ತಿರುತ್ತವೆ ಎಂದು ತಿಳಿದಾಗ ಅದನ್ನು ಎದುರಿಸುವ ನೈತಿಕತೆ ಇಲ್ಲದೆ ಹೇಗೆ ಅಸಹಾಯಕನಾಗುತ್ತಾನೆ ಎಂಬುದಕ್ಕೆ ಚಿತ್ರದ ನಾಯಕ ಭುಜಂಗಯ್ಯ (ಪ್ರಕಾಶ್ ರೈ) ಉದಾಹರಣೆ.

ಮನೆಯಲ್ಲಿ ಹೆಂಡತಿ ಎದುರುಮಾತನಾಡಿದ್ದಕ್ಕೆ ಕುಪಿತನಾಗಿ ಹೊರಟುಬಿಡುವ ಭುಜಂಗಯ್ಯ ಕರೆವೆಣ್ಣಿನ ಸಹವಾಸ (ಪ್ರಿಯಾಮಣಿ) ಬಯಸುತ್ತಾನೆ. ತನ್ನ ಶಿಷ್ಯ ಶಿವನ ಸಹಾಯದಿಂದ ಆಕೆಯನ್ನು ತನ್ನ ಜಾಗಕ್ಕೆ ಕರೆತರುತ್ತಾನೆ. ಅಲ್ಲಿಂದ ಹೊರ ಹೋಗುವ ಉಪಾಯ ತಿಳಿಯದೆ ಸುತ್ತಲಿನ ಜನ ಮಾತನಾಡುವುದನ್ನೆಲ್ಲ ಒಳಗಿನಿಂದಲೇ ಕೇಳಿಸಿಕೊಳ್ಳುತ್ತಾನೆ. ನಾಲ್ಕು ಗೋಡೆಗಳ ಮಧ್ಯೆ ಆ ಹೆಣ್ಣಿನ ಮುಂದೆ ಭುಜಂಗಯ್ಯನ ಮುಖವಾಡಗಳು ಕಳಚಿಕೊಳ್ಳುತ್ತ ಹೋಗುತ್ತವೆ. ಇದು ಸಂತೆಯಲ್ಲಿ ನಿಂತು ಬೆತ್ತಲಾಗುವ ಅನುಭವ. ತಾನು ಯಾವುದನ್ನೂ ವಿರೋಧಿಸದ ಸ್ಥಿತಿಗೆ ಕುಸಿಯುತ್ತಾನೆ. ಹೊರಜಗತ್ತಿನಲ್ಲಿ ರಾಮನಾಗಿ ತೋರಿಸಿಕೊಳ್ಳುವ ಭುಜಂಗಯ್ಯನ ಒಳಗಿರುವ ರಾವಣ ಈ ಪ್ರಸಂಗದಲ್ಲಿ ಚೂರು ಚೂರಾಗಿಯೇ ದಹನವಾಗುತ್ತಾನೆ.

ಜಾಯ್ ಮ್ಯಾಥ್ಯು ಅವರ ಕಥೆ ಆಧರಿಸಿದ ಮಲಯಾಳಂನ ‘ಶಟರ್’ ಚಿತ್ರದಿಂದ ಪ್ರೇರಿತರಾಗಿ ಪ್ರಕಾಶ್ ರೈ ‘ಇದೊಳ್ಳೆ ರಾಮಾಯಣ’ ನಿರ್ದೇಶಿಸಿದ್ದಾರೆ. ಮನುಷ್ಯನ ಸ್ವಭಾವವನ್ನೇ ಮುಖ್ಯವಾಗಿಸಿಕೊಂಡಿರುವ ಕಥೆಯಲ್ಲಿ ಗಟ್ಟಿತನವಿದ್ದರೂ ಚಿತ್ರದ ನಿರೂಪಣೆಯ ವೇಗ ಅಲ್ಲಲ್ಲಿ ಕುಂಟುತ್ತದೆ. ಒಂದು ಮನೆಯೊಳಗೆ ಪ್ರಕಾಶ್ ರೈ, ಪ್ರಿಯಾಮಣಿ ಸಿಕ್ಕಿ ಒದ್ದಾಡುವಂತೆಯೇ ಪ್ರೇಕ್ಷಕನೂ ಅಲ್ಲೇ ಎಲ್ಲೋ ‘ಸ್ಟ್ರಕ್’ ಆದ ಅನುಭವಕ್ಕೆ ಒಳಗಾಗುತ್ತಾನೆ. ಇಲ್ಲಿ ಸಂಕಲನಕಾರ ಶ್ರೀಕರ್ ಪ್ರಸಾದ್ ಕೆಲಸ ಇನ್ನೂ ಚುರುಕಾಗಿರಬೇಕಿತ್ತು ಎನ್ನಿಸುತ್ತದೆ.

ಪ್ರತಿ ಫ್ರೇಮ್‌ನಲ್ಲಿಯೂ ಎದ್ದು ಕಾಣುವ ವರ್ಣ ಶ್ರೀಮಂತಿಕೆಯ ಹಿಂದೆ ಕಲಾ ನಿರ್ದೇಶಕ ಶಶಿಧರ್ ಅಡಪ ಹಾಗೂ ಛಾಯಾಗ್ರಾಹಕ ಮುಖೇಶ್ ಶ್ರಮ ಎದ್ದುಕಾಣುವಂತಿದೆ. ಚಿತ್ರದ ಕೊನೆಯಲ್ಲಿ ಟೈಟಲ್ ಕಾರ್ಡ್ ತೋರಿಸುವಾಗ ಮಾತ್ರ ಒಂದು ಹಾಡು ಬರುತ್ತದೆ. ಇಳಯರಾಜ ಅವರ ಹಿನ್ನೆಲೆ ಸಂಗೀತಕ್ಕೆ ಬೇರೊಂದು ಮೂಡ್‌ಗೆ ಕರೆದೊಯ್ಯುವ ಶಕ್ತಿಯಿದೆ. ಅದರಲ್ಲೊಂದು ತಾಜಾತನವಿದೆ. ನಟನೆಯಲ್ಲಿ ಪ್ರಕಾಶ್ ರೈ ನಿಜಕ್ಕೂ ರಾವಣ. ಅಚ್ಯುತಕುಮಾರ್, ಅರವಿಂದ್, ಪ್ರಿಯಾಮಣಿ ನಟನೆಯೂ ಚಿತ್ರದ ಧನಾತ್ಮಕ ಅಂಶಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT