ADVERTISEMENT

ಮಳೆಯೊಳಗೆ ಬರಗಾಲ!

‘ಮುತ್ತಿನ ಮಳೆಯಲಿ’’

ಡಿ.ಎಂ.ಕುರ್ಕೆ ಪ್ರಶಾಂತ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ನಿರ್ಮಾಪಕ, ನಿರ್ದೇಶಕ: ಮಂಜು ಸಾಗರ್

ತಾರಾಗಣ: ಮಂಜು ಸಾಗರ್, ರಮಣೀತು ಚೌಧರಿ, ಶರತ್ ಲೋಹಿತಾಶ್ವ, ಮುನಿ, ಚಂದ್ರಶೇಖರ್ ಮತ್ತಿತರರು

‘ಮುತ್ತಿನ ಮಳೆಯಲಿ’– ಚೆಂದದ ಹೆಸರಿಗೆ ತಕ್ಕಂತೆಯೇ ಈ ಚಿತ್ರವೂ ಆಹ್ಲಾದದ ಅನುಭೂತಿ ನೀಡುತ್ತದೆ ಎಂದುಕೊಂಡು ಚಿತ್ರಮಂದಿರದೊಳಗೆ ಪ್ರವೇಶಿಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಬ್ಬರದ ಮಳೆ ಇರಲಿ, ಸೋನೆ ಮಳೆಯೂ ಸುರಿಯುವುದಿಲ್ಲ. ಪ್ರೇಕ್ಷಕ ನಿಗೆ ರಸಾಸ್ವಾದದ ಬರಗಾಲ! ಬಹುಶಃ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನ ನಾಯಕ... ಹೀಗೆ ‘ಮುತ್ತಿನ ಮಳೆಯಲಿ’  ಮಂಜು ಸಾಗರ್ ಬಹುಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇಡೀ ಸಿನಿಮಾ ಭಾರ ಹೊತ್ತುಕೊಂಡಿರುವ ಕಾರಣಕ್ಕೇನೋ ಯಾವ ವಿಭಾಗದಲ್ಲೂ ಸಶಕ್ತವಾಗಿ ಸಾಗದೆ ಎಡವುತ್ತಲೇ ಸಾಗಿದ್ದಾರೆ.

ಸಿನಿಮಾ ಶೀರ್ಷಿಕೆಗಳಿಗೆ ‘ಮಳೆ’ ಎನ್ನುವ ಹೆಸರು ಸೇರಿದೊಡನೆಯೇ ಅಂದೊಂದು ಪ್ರೇಮ ಕಥೆ ಎನ್ನುವ ಮನಸ್ಥಿತಿ ನಮ್ಮಲ್ಲಿ ನಿಂತಿದೆ. ನಿರ್ದೇಶಕರು ನಾಯಕ–ನಾಯಕಿಯನ್ನು ಮಳೆಯಲ್ಲಿ ಮೀಯಿಸುತ್ತಾರೆ. ಈ ಚಿತ್ರವೂ ಪ್ರೇಮಕಥೆ ಹಾದಿಯದ್ದೇ ಆದರೂ ಮಳೆ ಮಾತ್ರ ಕಾಣಿಸುವುದೇ ಇಲ್ಲ. ಪತ್ರಕರ್ತ ಇಶಾಂತ್‌ಗೆ ಇಬ್ಬನಿಯ ಮೇಲೆ ಪ್ರೀತಿ ಮೂಡುತ್ತದೆ. ಇಬ್ಬನಿಗೂ ಹೃದಯ ಮಿಡಿಯಿತು ಎನ್ನುವಷ್ಟರಲ್ಲಿ ಆಕೆಗೆ ಮನೆಯವರು ನಿಶ್ಚಯಿಸಿದ ವರನ ಪ್ರವೇಶ. ಈ ವರನನ್ನೂ ಗೊತ್ತು ಮಾಡುವುದಕ್ಕೂ ಒಂದು ಹಿನ್ನೆಲೆ ಇದೆ. ಆದರೆ ಇಬ್ಬನಿ ಹೃದಯಕ್ಕೆ ಇಶಾಂತ ಇಷ್ಟ. ಅಪ್ಪ–ಅಮ್ಮನ ಸೆಂಟಿಮೆಂಟು, ಪ್ರೇಯಸಿ ಕೈತಪ್ಪುತ್ತಿರುವಾಗ ನಾಯಕ ಪಡುವ ಪಡಿಪಾಟಲು, ಇಬ್ಬನಿಗೆ ನಿಶ್ಚಿಯಿಸಿದ ವರ ಮಾಡುವ ತ್ಯಾಗ... ಇದಿಷ್ಟು ಒಂದು ಕಥಾ ಹಂದರ.

ಪ್ರೇಮ ಕಥೆಯ ಜೊತೆಗೆ ಗಂಭೀರವಾದ ನಕ್ಸಲ್ ವಿಚಾರವನ್ನೂ ಬೆಸೆದಿದ್ದಾರೆ ಮಂಜು ಸಾಗರ್. ಇಂಥ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ಹೇಗೆ ಗ್ರಹಿಸಬೇಕು, ಅದನ್ನು ಯಾವ ರೀತಿ ನಿರೂಪಿಸಬೇಕು ಎನ್ನುವ ಸೂಕ್ಷ್ಮ ಇಲ್ಲಿ ಕಾಣಿಸುವುದಿಲ್ಲ. ಇಲ್ಲಿನವರು ಹೆಸರಿಗೆ ಮಾತ್ರ ನಕ್ಸಲರು ಅಷ್ಟೇ! ಆದರೆ ಅವರ ಹಾವ–ಭಾವ, ಚಿತ್ರಣ ಎಲ್ಲವೂ ‘ಗೂಂಡಾ’ ಮಾದರಿಯದ್ದು. ಚಿತ್ರದ ಖಳನಾಯಕರೂ ಅವರೇ. ನಕ್ಸಲ್ ಮುಖಂಡನ ಪಾತ್ರದಲ್ಲಿರುವ ನಟ ಮುನಿ ಎಂದಿನಂತೆ ತಮ್ಮ ಖಳನಟನ ಇಮೇಜಿನಲ್ಲಿಯೇ ಕೂಗಾಡುತ್ತಾರೆ. ಇಡೀ ಚಿತ್ರದ ಕಥೆ ಪೇಲವವಾಗಿಯೇ ಸಾಗಿ ಪೇಲವವಾಗಿಯೇ ಕೊನೆ ಮುಟ್ಟುತ್ತದೆ.

ಚಿತ್ರದ ಮೊದಲ ಭಾಗ ನಡೆಯುವುದು ಮಲೆನಾಡಿನಲ್ಲಿ. ಹಾಗೆಂದು ಮಳೆಯ ನಡುವೆಯೇನೂ ಅಲ್ಲ. ಕ್ಯಾಮೆರಾ ಕಣ್ಣಿಗೆ ಮಲೆನಾಡಿನ ಪ್ರಾಕೃತಿಕ ಸಿರಿಯೂ ಕಂಡಿಲ್ಲ. ‘ಈಗ ಸಾಂಗು ಗುರು...’ ಎಂದು ಮೊದಲೇ ಊಹಿಸಿ ಬಿಡಬಹುದು! ಹಾಡುಗಳು ಹಾಗೇ ಬಂದು ಹೀಗೆ ಹೋಗುತ್ತವೆಯೇ ಹೊರತು ಸಂಗೀತ–ಸಾಹಿತ್ಯದಲ್ಲೂ ಹಿತ ವಿಲ್ಲ. ನಾಯಕ ಮಂಜು ಸಾಗರ್‌ಗೆ ಹೋಲಿಸಿದರೆ ರಮಣೀತು ಚೌಧರಿ ನಟನೆಯೇ ಉತ್ತಮ. ಶರತ್ ಲೋಹಿ ತಾಶ್ವ, ‘ಎಡಕಲ್ಲುಗುಡ್ಡ’ ಚಂದ್ರಶೇಖರ್ ಅವರ ಪಾತ್ರಕ್ಕೂ ಸೀಮಿತ ವ್ಯಾಪ್ತಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.