ADVERTISEMENT

ರಂಜನೆಯ ಔತಣ ಮತ್ತು ದಾಂಪತ್ಯ ಪ್ರಹಸನ

ಪದ್ಮನಾಭ ಭಟ್ಟ‌
Published 29 ಡಿಸೆಂಬರ್ 2017, 10:16 IST
Last Updated 29 ಡಿಸೆಂಬರ್ 2017, 10:16 IST
ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ
ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ   

ಹೆಸರು: ಚಮಕ್‌
ನಿರ್ಮಾಪಕ: ಟಿ.ಆರ್‌. ಚಂದ್ರಶೇಖರ್‌
ನಿರ್ದೇಶಕ: ಸಿಂಪಲ್‌ ಸುನಿ
ತಾರಾಗಣ: ಗಣೇಶ್‌, ರಶ್ಮಿಕಾ ಮಂದಣ್ಣ, ಸಾಧುಕೋಕಿಲ, ರಘುರಾಮ್‌

‘ನೂರು ಸುಳ್ಳು ಹೇಳಿ ಮದುವೆ ಮಾಡು’ ಎಂಬ ಗಾದೆ ನಮ್ಮಲ್ಲಿ ಚಾಲ್ತಿಯಲ್ಲಿದೆ. ಸುಳ್ಳು ಹೇಳಿ ಮದುವೆಯೇನೋ ಆಗಬಹುದು. ಆದರೆ ನಂತರ ದಾಂಪತ್ಯ ಜೀವನ ಕಟ್ಟಿಕೊಳ್ಳುವುದು ಸಾಧ್ಯವೇ? ಹೀಗೆ ಸುಳ್ಳುಗಳ ಮುಖವಾಡ ತೊಟ್ಟು ಮದುವೆ ಆದವರ ಕಥೆಯನ್ನು ಭರಪೂರ ರಂಜನೆ ಮತ್ತಷ್ಟೇ ಭಾವುಕತೆಯ ಹಳಿಯ ಮೇಲೆ ಹರಿಬಿಟ್ಟಿದ್ದಾರೆ ನಿರ್ದೇಶಕ ಸಿಂಪಲ್‌ ಸುನಿ.

ಚುರುಕು ಸಂಭಾಷಣೆಯೇ ಪ್ರಧಾನವಾಗಿದ್ದ ತಮ್ಮ ಹಿಂದಿನ ಕೆಲವು ಸಿನಿಮಾಗಳ ಮೂಲಕ ಗಳಿಸಿಕೊಂಡಿದ್ದ ಪ್ರೇಕ್ಷಕಗಣವನ್ನು ಕಳೆದುಕೊಳ್ಳದೆ, ‘ಮೆಲೊಡ್ರಾಮಾ’ ಇಷ್ಟಪಡುವ ಇನ್ನೊಂದಿಷ್ಟು ಜನರನ್ನು ಸೆಳೆಯುವ ಅವರ ಜಾಣತನವೇ ‘ಚಮಕ್‌’ನ ಶಕ್ತಿ ಮತ್ತು ಮಿತಿ ಎರಡೂ ಆಗಿದೆ. ಹಲವು ಮಿತಿಗಳನ್ನು ಇಟ್ಟುಕೊಂಡೂ ಅವರು ಸೋತಿಲ್ಲ ಎನ್ನುವುದು ಗಮನಾರ್ಹ. ಗಣೇಶ್‌ ಮತ್ತು ಸುನಿ ಕಾಂಬಿನೇಷನ್‌ ಕೂಡ ಇಲ್ಲಿ ಕೆಲಸ ಮಾಡಿದೆ.

ADVERTISEMENT

ಖುಷ್‌ ಖ್ಯಾತ ಪ್ರಸೂತಿ ತಜ್ಞ. ಮದುವೆ ಎಂದರೆ ಮಾರು ದೂರ ಓಡುವ ಅವನಿಗೆ, ಹೆಣ್ಣುಮಕ್ಕಳ ಜೊತೆ ‘ಪಾರ್ಟಿ’ ಮಾಡುವುದೆಂದರೆ ‘ಎಣ್ಣೆ’ಯಷ್ಟೇ ಇಷ್ಟ. ಕೊನೆಗೂ ಮನೆಯವರ ಒತ್ತಾಯಕ್ಕೆ ಮಣಿದು, ಪರಮ ಸಭ್ಯನ ಹಾಗೆ ನಟಿಸಿ ಸಂಪ್ರದಾಯಸ್ಥ ಮನೆಯ ಹೆಣ್ಣುಮಗಳನ್ನು ಮದುವೆಯಾಗುತ್ತಾನೆ. ಅಲ್ಲಿಂದ ಅಸಲಿ ಚಮಕ್‌ ಶುರುವಾಗುತ್ತದೆ.

ಮೊದಲರ್ಧ ನಗಿಸಿ ನಗಿಸಿಯೇ ಕಣ್ಣಲ್ಲಿ ನೀರು ತರಿಸುವ ಸುನಿ, ದ್ವಿತೀಯಾರ್ಧದಲ್ಲಿ ಕೆಲವು ಕಡೆ ಭಾವುಕಗೊಳಿಸಿಯೂ ಕಣ್ಣಂಚು ಒದ್ದೆಯಾಗಿಸುತ್ತಾರೆ. ಮೊದಲರ್ಧ ರಂಜನೆಗೆ ಮೀಸಲು, ದ್ವಿತೀಯಾರ್ಧ ಕಥೆ ಹೇಳಿದರಾಯ್ತು ಎಂದು ನಿರ್ಧರಿಸಿಕೊಂಡಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ ನಗಿಸಿದಷ್ಟು ಲೀಲಾಜಾಲವಾಗಿ ಅಳಿಸಲು ಅವರಿಗೆ ಸಾಧ್ಯವಾಗಿಲ್ಲ. ಮೊದಲರ್ಧದ ಬಿಗಿಹೆಣಿಗೆ ನಂತರದಲ್ಲಿ ಸಡಿಲವಾಗುತ್ತ ಹೋಗುತ್ತದೆ. ಕೆಲವು ಕಡೆ ಕಥೆ ಅದೇ ಹಳೆಯ ತುಳಸಿಕಟ್ಟೆಯನ್ನು ಮತ್ತೆ ಮತ್ತೆ ಸುತ್ತುತ್ತಿರುವಂತೆ ಭಾಸವಾಗುತ್ತದೆ.

ಇಷ್ಟವಿಲ್ಲದ ಮದುವೆಯ ಬಂಧನದಲ್ಲಿ ಸಿಕ್ಕಿಹಾಕಿಕೊಂಡ ಹುಡುಗ–ಹುಡುಗಿ ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿಯೇ ಪರಸ್ಪರ ಮಾರುಹೋಗುವ ಹಳೆಯ ಕಥೆಯನ್ನೇ ಹೇಳಹೊರಟಿರುವುದೂ ಇದಕ್ಕೆ ಕಾರಣ ಇರಬಹುದು. ಹೊಸ ಪೀಳಿಗೆಯ ಆಧುನಿಕ ಸಂದರ್ಭದಲ್ಲಿ ಬದಲಾದ ‘ದಾಂಪತ್ಯ’ದ ಸ್ವರೂಪಗಳನ್ನು ಹೇಳುವ ಪ್ರಯತ್ನ ಅಲ್ಲಲ್ಲಿ ಕಂಡರೂ ಅದು ಒಂದು ಹಂತವನ್ನು ದಾಟಿ ಮೇಲಕ್ಕೇರುವುದಿಲ್ಲ. ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳದೆ ಮತ್ತದೇ ಅನುಕೂಲಸಿಂಧು ‘ಸೂತ್ರ’ಗಳಿಗೆ ಜೋತುಬಿದ್ದು ಸಿನಿಮಾ ಕೊಂಚ ನಿರಾಸೆಯನ್ನೂ ಹುಟ್ಟಿಸುತ್ತದೆ.

ಹಳೆಯ ಪದಾರ್ಥಕ್ಕೆ ಚುರುಕು ಸಂಭಾಷಣೆಯ ಒಗ್ಗರಣೆ ಹಾಕಿ ತಾಜಾಗೊಳಿಸಿ ಬಡಿಸುವ ಸುನಿ ಕಲೆಗಾರಿಕೆ ಮತ್ತು ನಗಿಸಿದಷ್ಟೇ ಸಲೀಸಾಗಿ ಭಾವುಕರನ್ನಾಗಿಸುವ ಗಣೇಶ್‌ ಅವರ ನಟನೆಯ ಕಾರಣದಿಂದ ಇಡೀ ಚಿತ್ರಕ್ಕೆ ನೋಡಿಸಿಕೊಳ್ಳುವ ಗುಣ ದಕ್ಕಿದೆ. ಎರಡು ಭಿನ್ನ ಛಾಯೆಯಲ್ಲಿ ರಶ್ಮಿಕಾ ಮೋಹಕ ರೂಪರಾಶಿಯನ್ನು ಮೈಮರೆತು ನೋಡಬಹುದಾದರೂ ಪಕ್ವ ಅಭಿನಯವನ್ನು ನಿರೀಕ್ಷಿಸುವಂತಿಲ್ಲ. ಈ ಕೊರತೆಯನ್ನು ಲಾಂಗ್‌ ಶಾಟ್‌ಗಳ ಮೂಲಕವೇ ನಿಭಾಯಿಸುವ ಜಾಣತನ ತೋರಿದ್ದಾರೆ ಸಂತೋಷ್‌ ರೈ ಪಾತಾಜೆ. ಜೂಡಾ ಸ್ಯಾಂಡಿ ಗುನುಗಿಕೊಳ್ಳುವಂಥ ಹಾಡು ಕೊಟ್ಟಿಲ್ಲವಾದರೂ ಅಚ್ಚುಕಟ್ಟಾದ ಹಿನ್ನೆಲೆ ಸಂಗೀತದ ಕಾರಣಕ್ಕೆ ಅಂಕ ಗಳಿಸಿಕೊಳ್ಳುತ್ತಾರೆ.

ಒಟ್ಟಾರೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೇ ಹೋಗಿ ಮನದಣಿಯೆ ನಕ್ಕು, ಮತ್ತೊಂಚೂರು ಭಾವುಕರಾಗಿ ಮತ್ತದೇ ನಗುವನ್ನು ಮುಖದ ಮೇಲಿಟ್ಟುಕೊಂಡು ಬರಬಹುದಾದ ಸಿನಿಮಾ ‘ಚಮಕ್‌’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.