ADVERTISEMENT

ಸತ್ಯದ ಮುಖವಾಡದಲ್ಲಿ ವಿಕೃತ ಉನ್ಮಾದ

ಪದ್ಮನಾಭ ಭಟ್ಟ‌
Published 17 ಮಾರ್ಚ್ 2018, 9:09 IST
Last Updated 17 ಮಾರ್ಚ್ 2018, 9:09 IST
ಸತ್ಯದ ಮುಖವಾಡದಲ್ಲಿ ವಿಕೃತ ಉನ್ಮಾದ
ಸತ್ಯದ ಮುಖವಾಡದಲ್ಲಿ ವಿಕೃತ ಉನ್ಮಾದ   

ಸಿನಿಮಾ: lll

ನಿರ್ಮಾಪಕರು: ರಾಮ್‌ ತಳ್ಳೂರಿ

ನಿರ್ದೇಶನ: ಶ್ರೀನಿವಾಸರಾಜು

ADVERTISEMENT

ತಾರಾಗಣ: ಪೂಜಾ ಗಾಂಧಿ, ಮಕರಂದ ದೇಶಪಾಂಡೆ, ರವಿಶಂಕರ್‌, ರವಿ ಕಾಳೆ, ಪೆಟ್ರೋಲ್‌ ಪ್ರಸನ್ನ

‘ಅಂತಿಮ ಸತ್ಯ ಎನ್ನುವುದೊಂದು ಇರುವುದಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ನಾನು ಕೇಳಿದ ಕೆಲವು ಸಂಗತಿಗಳನ್ನು ಹೇಳಿದ್ದೆ. ಎರಡನೇ ಭಾಗದಲ್ಲಿ ಅಪರಾಧಿಗಳನ್ನು ಸಂದರ್ಶಿಸಿ ಅವರ ದೃಷ್ಟಿಕೋನದಿಂದ ಕಥೆಯನ್ನು ಹೇಳಿದ್ದೆ. ಈ ಭಾಗದಲ್ಲಿ ಪೊಲೀಸರ ದೃಷ್ಟಿಕೋನದಿಂದ ಕಥೆ ಹೇಳಿದ್ದೇನೆ’

ನಿರ್ದೇಶಕ ಶ್ರೀನಿವಾಸರಾಜು ಅವರ ಈ ಹೇಳಿಕೆಯಿಂದ ‘lll’ ಸಿನಿಮಾ ಕೊನೆಗೊಳ್ಳುತ್ತದೆ. ಮೇಲ್ನೋಟಕ್ಕೆ ಈ ಹೇಳಿಕೆಯಲ್ಲಿ ನಿರ್ದೇಶಕರ ವಸ್ತುನಿಷ್ಠತೆಯೇ ವೇದ್ಯವಾಗುತ್ತದೆ. ಆದರೆ ಸತ್ಯದ ಹಲವು ಮುಖಗಳನ್ನು ಪರಿಚಯಿಸುವುದು ಅವರ ಮೂಲ ಉದ್ದೇಶ ಅಲ್ಲವೇ ಅಲ್ಲ ಎನ್ನುವುದು ಹಿಂದಿನ ಭಾಗಗಳಲ್ಲಿಯೇ ಗೊತ್ತಾಗಿತ್ತು. ಸತ್ಯವನ್ನು ಹೇಳುತ್ತೇನೆ ಎನ್ನುವುದು ಪ್ರಾಮಾಣಿಕನೊಬ್ಬನ ಲಕ್ಷಣವಾಗುವ ಹಾಗೆಯೇ ವಂಚಕನೊಬ್ಬನ ಮುಖವಾಡವೂ ಆಗಬಹುದು. ವಸ್ತುನಿಷ್ಠತೆಯ ಹೆಸರಿನಲ್ಲಿ ಹೇಗೆಲ್ಲ ಕ್ರೌರ್ಯದ ಮಾರಾಟ ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆ. ಈ ಸರಣಿಯ ಮೂರೂ ಭಾಗದಲ್ಲಿ ಕಂಡುಬರುವ ಒಂದೇ ಸಾಮಾನ್ಯ ಅಂಶವೆಂದರೆ ವಿಕೃತ ಕ್ರೌರ್ಯ. ಒಮ್ಮೆ ಅಪರಾಧ, ಇನ್ನೊಮ್ಮೆ ಅಪರಾಧಿ ಮತ್ತೊಮ್ಮೆ ಪೊಲೀಸರು ಹೀಗೆ ಬೇರೆ ಬೇರೆ ಬ್ರ್ಯಾಂಡ್‌ನಲ್ಲಿ ನಿರ್ದೇಶಕರು ಪ್ರೇಕ್ಷಕನಿಗೆ ಉಣಿಸುವುದು ಅದೇ ನೆತ್ತರ ಉನ್ಮಾದವನ್ನೇ.

ಇಂಥ ವ್ಯಾಪಾರದಲ್ಲಿ ಒಂದಕ್ಕಿಂತ ಇನ್ನೊಂದನ್ನು ಇನ್ನಷ್ಟು ರೋಚಕಗೊಳಿಸುವ, ಇನ್ನಷ್ಟು ವಿಕೃತಗೊಳಿಸುವ ಅನಿವಾರ್ಯತೆಯೂ ಇರುತ್ತದೆ. ಹಿಂದಿನ ಎರಡು ಭಾಗಗಳಲ್ಲಿ ಮಿತಿ ಮೀರಿ ಕ್ರೌರ್ಯ ತೋರಿಸಿದ್ದ ನಿರ್ದೇಶಕರು ಈ ಭಾಗದಲ್ಲಿ ಇನ್ನಷ್ಟು ವಿಜೃಂಭಿಸುವುದು ಹೇಗೆಂದು ತಿಳಿಯದೆ ಪರದಾಡಿದಂತಿದೆ. ಈ ಪರದಾಟಕ್ಕೆ ನಿದರ್ಶನದಂತಿರುವ ‘ಗಾಂಜಾ ನಮ್ಮ ದೇವ್ರು’ ಎಂಬ ಹಾಡು ನಿರ್ದೇಶಕರ ಅಭಿರುಚಿಗೆ ಹಿಡಿದ ಕೈಗನ್ನಡಿಯೂ ಹೌದು.

ಎರಡನೇ ಭಾಗದಲ್ಲಿ ಪತ್ರಕರ್ತೆಯೊಬ್ಬಳ ಮೂಲಕ ದಂಡುಪಾಳ್ಯ ಗ್ಯಾಂಗಿನ ಅಪರಾಧಿಗಳು ಅಮಾಯಕರು ಎಂದು ಚಿತ್ರಿಸಲಾಗಿತ್ತು. ಅವಳ ವರದಿ ಪ್ರಕಟವಾಗುವುದರೊಂದಿಗೇ ‘lll’ ಶುರುವಾಗುತ್ತದೆ. ವರದಿಯನ್ನು ಓದಿದ ಇನ್‌ಸ್ಟೆಕ್ಟರ್‌ ದಳಪತಿ, ಪತ್ರಕರ್ತೆಯನ್ನು ಮತ್ತೆ ಜೈಲಿಗೆ ಕರೆತಂದು ಅವರು ಹೇಳಿದ್ದೆಲ್ಲ ಸುಳ್ಳು, ನಿಜ ಏನು ಎಂದು ನಾನು ಹೇಳುತ್ತೇನೆ ಎಂದು ಕಥೆ ಹೇಳಲು ಶುರುಮಾಡುತ್ತಾನೆ. ಅವನು ಹೇಳುವ ಕಥೆಯೇ ಈ ಭಾಗದಲ್ಲಿ ನಿರೂಪಿತವಾಗಿದೆ.

ಸತ್ಯ ಏನಾದರೂ ಇರಲಿ, ತನಗೆ ಸಿನಿಮಾ ಮಾಡುವಷ್ಟು ಕ್ರೌರ್ಯದ ಸರಕು ಸಿಕ್ಕರೆ ಸಾಕು ಎಂಬ ಧೋರಣೆಯೇ ಸಿನಿಮಾದುದ್ದಕ್ಕೂ ಎದ್ದು ಕಾಣುತ್ತದೆ. ‘ನಿಂಗೆ ಕತ್ ಮೇಲಿನ ಮಾಲು ಇಷ್ಟ. ಅವಂಗೆ ಕತ್‌ ಕೆಳಗಿನ ಮಾಲು ಇಷ್ಟ. ನಂಗೆ ಕತ್ತೇ ಇಷ್ಟ. ಅದನ್ನು ಕುಯ್ವಾಗ ಶ್‌... ಎಂದು ಶಬ್ದ ಬರ್ತೈತಲಾ... ಅದ್ಕಾಗಿ ಎಷ್ಟ್‌ ಕೊಲೆ ಬೇಕಾದ್ರೂ ಮಾಡ್ತೀನಿ’ ಎಂಬಂಥ ಸಂಭಾಷಣೆಗಳು, ಈ ಮಾತನ್ನು ಹಾಗ್ಹಾಗೇ ಕೃತಿಯಾಗಿ ತೋರಿಸುವ ದೃಶ್ಯಗಳು ರೇಜಿಗೆ ಹುಟ್ಟಿಸುತ್ತವೆ. ಆದರೆ ತೋರಿಸಿದ್ದನ್ನೇ ಎಷ್ಟು ಸಲ ತೋರಿಸಲು ಸಾಧ್ಯ? ಹಾಗಾಗಿಯೇ ಈ ಭಾಗದಲ್ಲಿ ಅಪರಾಧಿಯೊಬ್ಬ ಪೊಲೀಸ್‌ ಅಧಿಕಾರಿಯನ್ನು ದಿನವಿಡೀ ಸುತ್ತಿಸಿ, ಬಿರಿಯಾನಿ ತಿಂದು, ಸಿನಿಮಾ ನೋಡುವ ಬಾಲಿಶ ಸನ್ನಿವೇಶಗಳನ್ನೆಲ್ಲ ಸೇರಿಸಿದ್ದಾರೆ. ಜತೆಗೆ ‘ದಂಡುಪಾಳ್ಯದವರ ಅಪರಾಧ ಇಂದು ನಿನ್ನೆಯದಲ್ಲ, ಅದು ಅವರಿಗೆ ವಂಶಪಾರಂಪರ್ಯವಾಗಿ ಬಂದಿರುವುದು’ ಎಂದು ಹಣೆಪಟ್ಟಿ ಹಚ್ಚುವ ಕೆಲಸವನ್ನೂ ಮಾಡಿದ್ದಾರೆ. ಇದೇ ಭರದಲ್ಲಿ ಅವರು ಹಾಳುಗಲ್ಲದ ಹಸುಳೆಗಳ ಕೈಯಲ್ಲಿ ಅವಾಚ್ಯ ಬೈಗುಳಗಳನ್ನು ಆಡಿಸಿದ್ದಾರೆ. ಸಂಗೀತ, ಛಾಯಾಗ್ರಹಣ, ಅಭಿನಯ ಎಲ್ಲವೂ ನಿರ್ದೇಶಕರ ಉದ್ದೇಶಕ್ಕೆ ಪೂರಕವಾಗಿಯೇ ಕೆಲಸ ಮಾಡಿವೆ.

ಒಟ್ಟಾರೆ ಈ ಚಿತ್ರ ನೋಡಿದ ಮೇಲೆ ಸಹೃದಯರ ಮನಸಿಗೆ ಸಿಗುವ ಒಂದೇ ಸಮಾಧಾನಕರ ಸಂಗತಿ ಏನೆಂದರೆ ‘ಮುಂದಿನ ಭಾಗ ಬರುತ್ತಿಲ್ಲ’ ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.