ADVERTISEMENT

ಹಾರರ್‌ ಕಥೆಗೆ ನಗೆಲೇಪ

ಕಲ್ಪನಾ 2

​ಪ್ರಜಾವಾಣಿ ವಾರ್ತೆ
Published 15 ಜುಲೈ 2016, 10:42 IST
Last Updated 15 ಜುಲೈ 2016, 10:42 IST
ಹಾರರ್‌ ಕಥೆಗೆ ನಗೆಲೇಪ
ಹಾರರ್‌ ಕಥೆಗೆ ನಗೆಲೇಪ   

ಕಲ್ಪನಾ 2
ನಿರ್ಮಾಪಕ: ಕೆ.ಎಂ. ರಾಜೇಂದ್ರ, ನಿರ್ದೇಶಕ: ಆರ್. ಅನಂತರಾಜು, ತಾರಾಗಣ: ಉಪೇಂದ್ರ, ಪ್ರಿಯಾಮಣಿ, ಅವಂತಿಕಾ ಶೆಟ್ಟಿ, ಶೋಭರಾಜ್, ತುಳಸಿ ಶಿವಮಣಿ

ಚಿತ್ರದ ಮೊದಲ ದೃಶ್ಯ ಕತ್ತಲೇ ಕತ್ತಲು. ಹುಡುಗ ಹುಡುಗಿಗೆ ಮನೆಯಲ್ಲಿ ವಿಪರೀತ ದೆವ್ವದ ಕಾಟ ಶುರುವಾಗುತ್ತದೆ. ಇನ್ನೇನು ದೆವ್ವ ತನ್ನನ್ನು ಕೊಂದೇಬಿಡುತ್ತದೆ ಅನ್ನುವ ಹೊತ್ತಿಗೆ ಹುಡುಗನಿಗೆ ಎಚ್ಚರವಾಗಿಬಿಡುತ್ತದೆ. ಇದು ಕನಸೇ ಆದರೂ ಸಿನಿಮಾದಲ್ಲಿ ಮುಂದೆ ಬರುವ ಭಯಾನಕ ದೃಶ್ಯಗಳಿಗೆ ಒಂದು ಸ್ಯಾಂಪಲ್ ಅಷ್ಟೆ.

ಒಂದು ವಾಹಿನಿಯು ದೇವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲೇ ಮೊದಲ ಸ್ಥಾನಕ್ಕೇರುತ್ತದೆ. ಅದರ ಪ್ರತಿಸ್ಪರ್ಧಿ ವಾಹಿನಿ ದೇವರ ಬದಲಾಗಿ ದೆವ್ವವನ್ನು ತೋರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಯೋಜನೆ ರೂಪಿಸುತ್ತದೆ. ದೆವ್ವ ಇದೆ ಎಂದು ಕಥೆ ಕಟ್ಟಿ ಅದನ್ನು ಚಿತ್ರೀಕರಿಸಲೆಂದು ಮಂಗಳೂರಿನ ಬೀಚ್‌ನಲ್ಲಿರುವ ಮನೆಯೊಂದಕ್ಕೆ ತನ್ನ ತಂಡದೊಂದಿಗೆ ಬರುತ್ತಾಳೆ ಕಾರ್ಯಕ್ರಮದ ನಿರ್ದೇಶಕಿ ನಂದಿನಿ (ಅವಂತಿಕಾ). ರಾಘವ (ಉಪೇಂದ್ರ) ಅದರ ಛಾಯಾಗ್ರಾಹಕ. ಆದರೆ ಅಲ್ಲಿ ಮೊದಲೇ ಇದ್ದ ದೆವ್ವದ ಕೋಪಕ್ಕೆ ಈ ತಂಡದ ಸದಸ್ಯರೆಲ್ಲ ಗುರಿಯಾಗುತ್ತದೆ. ಅದಕ್ಕೆ ಕಾರಣವಾಗುವುದು ಮರಳಿನಲ್ಲಿ ಸಿಗುವ ಒಂದು ಮಾಂಗಲ್ಯ.

ಎಲ್ಲ ಹಾರರ್ ಸಿನಿಮಾಗಳಂತೆ ಇಲ್ಲಿಯೂ ಫ್ಲಾಶ್‌ಬ್ಯಾಕ್ ಕಥೆ ಇದೆ. ಜಡೆ ಶಿವು (ಉಪೇಂದ್ರ) ಮತ್ತು ಕಲ್ಪನಾ (ಪ್ರಿಯಾಮಣಿ) ಪ್ರೇಮಿಗಳು. ಕಲ್ಪನಾ ಅಂಗವಿಕಲೆ. ಅವರಿಬ್ಬರನ್ನು ಅಗಲಿಸಿ ಕಲ್ಪನಾಳನ್ನು ತನ್ನ ಬುದ್ಧಿಮಾಂದ್ಯ ಮಗನಿಗೆ ಮದುವೆ ಮಾಡಬೇಕು ಎಂದು ಬಡ್ಡಿ ವ್ಯಾಪಾರಿಯೊಬ್ಬ ಹೊಂಚುಹಾಕುತ್ತಾನೆ. ಅದು ಸಾಧ್ಯವಾಗದೆ ಹೋದಾಗ ಆತ ಕಲ್ಪನಾ, ಶಿವು ಮತ್ತು ಅವರ ಕುಟುಂಬದವರನ್ನೆಲ್ಲ ಕೊಲ್ಲಿಸುತ್ತಾನೆ. ಅತೃಪ್ತ ಶಿವು ಮತ್ತು ಕಲ್ಪನಾ ಆತ್ಮಗಳು ರಾಘವ ಮತ್ತು ನಂದಿನಿ ದೇಹದಲ್ಲಿ ಸೇರುತ್ತವೆ. ಇವರಿಬ್ಬರೂ ಆತ್ಮಗಳಿಂದ ಮುಕ್ತಿ ಪಡೆಯುತ್ತಾರೆಯೇ, ದುಷ್ಟ ಸಂಹಾರ ಹೇಗಾಗುತ್ತದೆ, ಗ್ರೀನ್ ಟೀವಿ ನಂಬರ್ ಒನ್ ಆಗುತ್ತದೆಯೇ ಎನ್ನುವುದು ಸಿನಿಮಾದಲ್ಲಿನ ಕೌತುಕ.

ತಮಿಳಿನ ‘ಕಾಂಚನಾ 2’ ಚಿತ್ರದ ಈ ಕನ್ನಡ ರೂಪದಲ್ಲಿ ಉಪೇಂದ್ರ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ದೆವ್ವವೆಂದರೆ ಡೈಪರ್ ಒದ್ದೆ ಮಾಡಿಕೊಳ್ಳುವ ರಾಘವ ದೆವ್ವದ ಬಾಯಿಗೇ ಸಿಲುಕುವ ಪಾತ್ರದಲ್ಲಿ ಉಪೇಂದ್ರ ಹಾಸ್ಯರಸವನ್ನೂ ಹೊಮ್ಮಿಸಿದ್ದಾರೆ. ಹೆದರಿಸುತ್ತಲೇ ನಗಿಸುವ ನಿರ್ದೇಶಕರ ತಂತ್ರ ಕೆಲಸ ಮಾಡಿದೆ.

ಆದರೆ ನಡುನಡುವೆ ಹಾಸ್ಯವು ಹುಚ್ಚು ಸಂತೆಯಾಗುವುದೂ ಇದೆ. ಅವಂತಿಕಾಗಿಂತಲೂ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪ್ರಿಯಾಮಣಿ ಹೆಚ್ಚು ಗಮನ ಸೆಳೆಯುತ್ತಾರೆ. ಎಂ.ಆರ್. ಸೀನು ಅಚ್ಚುಕಟ್ಟಾಗಿ ಕ್ಯಾಮೆರಾ ಓಡಿಸಿದ್ದಾರೆ. ಗ್ರಾಫಿಕ್ ಮತ್ತು ಹಿನ್ನೆಲೆ ಸಂಗೀತ ಚೆನ್ನಾಗಿ ಬಳಕೆಯಾಗಿದ್ದರೂ ಅರ್ಜುನ್ ಜನ್ಯ ಸಂಗೀತದಲ್ಲಿ ಸಾಹಿತ್ಯಕ್ಕಿಂತ ವಾದ್ಯಗಳೇ ಅಬ್ಬರಿಸುತ್ತವೆ. ಫಟಾಫಟ್ ಓಡುವ ದೃಶ್ಯಗಳು ಅಲ್ಲಲ್ಲಿ ಕುಂಟುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT