ADVERTISEMENT

ಹೃದಯಂಗಮ ‘ಸೂಪರ್‌ಸ್ಟಾರ್’

ವಿಶಾಖ ಎನ್.
Published 19 ಅಕ್ಟೋಬರ್ 2017, 13:48 IST
Last Updated 19 ಅಕ್ಟೋಬರ್ 2017, 13:48 IST
ಯುಟ್ಯೂಬ್‌ ಚಿತ್ರ
ಯುಟ್ಯೂಬ್‌ ಚಿತ್ರ   

ಚಿತ್ರ: ಸೀಕ್ರೆಟ್ ಸೂಪರ್‌ಸ್ಟಾರ್ (ಹಿಂದಿ)
ನಿರ್ಮಾಣ: ಅಮೀರ್‌ ಖಾನ್, ಕಿರಣ್ ರಾವ್, ಆಕಾಶ್ ಚಾವ್ಲಾ, ಸುಜಯ್ ಕುಟ್ಟಿ, ಬಿ. ಶ್ರೀನಿವಾಸ ರಾವ್
ನಿರ್ದೇಶನ: ಅದ್ವೈತ್ ಚಂದನ್
ತಾರಾಗಣ: ಜೈರಾ ವಾಸಿಂ, ಮೆಹೆರ್ ವಿಜ್, ಅಮೀರ್ ಖಾನ್, ರಾಜ್ ಅರ್ಜುನ್, ತೀರ್ಥ್ ಶರ್ಮ

**

ಕಣ್ಣಾಲಿಗಳಲ್ಲಿ ಪದೇ ಪದೇ ತೇವ. ಹೃದಯ ಅದೆಷ್ಟು ಸಲ ಆರ್ದ್ರಗೊಳ್ಳುವುದೋ ಲೆಕ್ಕವಿಲ್ಲ. ‘ಸೀಕ್ರೆಟ್ ಸೂಪರ್‌ಸ್ಟಾರ್’ ಬೆರಳುಗಳು ಗಿಟಾರ್ ತಂತಿಗಳ ಮೇಲೆ ಆಡಿದರೆ, ನೋಡುಗರ ಮನದ ಭಾವತಂತಿಯಲ್ಲೂ ನಾದದಲೆ. ನಿರ್ಮಾಪಕರಾಗಿ ಅಮೀರ್ ಖಾನ್ ಹಾಗೂ ತಂಡ ಇನ್ನೊಂದು ಭಾವದಲೆಯನ್ನು ಸಹೃದಯರ ಎದೆಗೆ ದಾಟಿಸಿದೆ.

ADVERTISEMENT

ಇದು ಹಾಡುವ ಹುಡುಗಿಯ ಕನಸಿನ ಕಥೆ. ಸಾಂಪ್ರದಾಯಿಕ ಪಂಜರದ ಕದ ತೆರೆದು ಸ್ವತಂತ್ರ ಬಯಲಿಗೆ ದಾಟುವ ಹೆಣ್ಣುಮಕ್ಕಳ ಕಥೆ. ಮೂರು ತಲೆಮಾರುಗಳ ಸ್ತ್ರೀ ತಲ್ಲಣಗಳನ್ನು ಎಲ್ಲೂ ವಾಚ್ಯವೆನಿಸದಂತೆ–ಅಲ್ಲಲ್ಲಿ ಅನುಕೂಲಸಿಂಧು ಧೋರಣೆಯೊಡನೆ– ಪ್ರಕಟಪಡಿಸುವ ಕಥೆ. ‘ಧೋಬಿ ಘಾಟ್‌’ ಹಾಗೂ ‘ತಾರೆ ಜಮೀನ್ ಪರ್’ ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಅದ್ವೈತ್ ಚಂದನ್ ಸಣ್ಣ ಸಣ್ಣ ಸೂಕ್ಷ್ಮಗಳನ್ನು ಹದವರಿತಂತೆ ಕಟ್ಟಿರುವ ಸಿನಿಮಾ ‘ಸೀಕ್ರೆಟ್ ಸೂಪರ್‌ಸ್ಟಾರ್’.

ಹೊಸ ಕಾಲದ ಹೆಣ್ಣುಮಗಳ ಕನಸಿನ ನೇವರಿಕೆ ಚಿತ್ರದ ಕೇಂದ್ರಬಿಂದು. ಅದರ ಸುತ್ತ ಚಿತ್ರಭಿತ್ತಿ ವಿಸ್ತರಿಸಿಕೊಂಡಿದೆ. ಕೋಪಿಷ್ಟ ಅಪ್ಪ, ಸಂಪ್ರದಾಯದ ಬಲೆಯೊಳಗೇ ಮಗಳ ಸ್ವತಂತ್ರ ಬದುಕನ್ನು ಕಟ್ಟುವ ಹೋರಾಟಗಾರ್ತಿ ಅಮ್ಮ, ಸಹಜ ಪ್ರೀತಿಯ ಮುಗ್ಧ ನಗೆ ತುಳುಕಿಸುವ ಪುಟ್ಟ ತಮ್ಮ, ಲಾಗಾಯ್ತಿನ ಪುರುಷ ಜಗತ್ತಿನ ದರ್ಪ ಕಂಡುಂಡ ಸೂಕ್ಷ್ಮ ಮನಸ್ಸಿನ ಅಜ್ಜಿ, ಹುಚ್ಚು ಹುಚ್ಚಾಗಿ ವರ್ತಿಸಿದರೂ ಹೃದಯವಂತನಾದ ಸಂಗೀತ ನಿರ್ದೇಶಕ, ಶಾಲೆಯ ಆಪ್ತಸ್ನೇಹಿತ... ಇಷ್ಟೆಲ್ಲ ಪಾತ್ರಗಳ ಮೂಲಕ ಅದ್ವೈತ್ ಹೆಚ್ಚೇ ಅಳಿಸುತ್ತಾರೆ.

ಮಧ್ಯಮವರ್ಗದ ಧರ್ಮನಿಷ್ಠ ಕುಟುಂಬದ ಹೆಣ್ಣುಮಗಳು ಸಾಮಾಜಿಕ ಜಾಲತಾಣದ ವೇದಿಕೆ ಬಳಸಿಕೊಂಡು ಗಾಯಕಿಯಾಗುವ ಹೃದಯಂಗಮ ಕಥೆ ಚಿತ್ರದ್ದು. ಆದರೆ, ಇದಿಷ್ಟಕ್ಕೇ ಸಿನಿಮಾ ಸೀಮಿತಗೊಳ್ಳದೆ ಹೊಸಕಾಲದಲ್ಲೂ ಹೆಣ್ಣುಮಕ್ಕಳು ತಮ್ಮದೇ ದಾರಿಯಲ್ಲಿ ಸಾಗಲು ಎಷ್ಟೆಲ್ಲ ಪಡಿಪಾಟಲು ಅನುಭವಿಸಬೇಕು ಎನ್ನುವುದನ್ನು ಹೇಳುತ್ತದೆ. ನಿರ್ದೇಶಕರು ‘ಒಳಿತು–ಕೆಡುಕಿನ’ ಅನುಕೂಲಕರ ಮಾದರಿಯನ್ನು ದೃಶ್ಯಗಳ ಹೆಣಿಗೆಯಲ್ಲಿ ಅನುಸರಿಸಿದ್ದರೂ, ಅವರ ಚಿತ್ರಕಥಾ ಕೌಶಲ ಸ್ತುತ್ಯರ್ಹ. ಹೆಚ್ಚು ಸರ್ಕಸ್ ಇಲ್ಲದ ನಿರೂಪಣೆ ಹಿಡಿದಿಟ್ಟುಕೊಳ್ಳುತ್ತದೆ.

ಸಂಗೀತ ಕೂಡ ಸಿನಿಮಾದ ಪ್ರಮುಖ ಪಾತ್ರ. ವೈಯಕ್ತಿಕ ಬದುಕಿನಲ್ಲಿ ಖುದ್ದು ಹೋರಾಟ ಮಾಡಿರುವ ಅಮಿತ್ ತ್ರಿವೇದಿ ಆ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಅರ್ಥಾತ್ ಸ್ವರ ಸಂಯೋಜನೆ ಮಾಡಿದ್ದಾರೆ. ಕೌಸರ್ ಮುನೀರ್ ಬರೆದಿರುವ ಗೀತಸಾಹಿತ್ಯ ಕೂಡ ಚಿತ್ರ ಹೇಳಲು ಹೊರಟಿರುವ ಅರ್ಥವನ್ನು ಅಡಗಿಸಿಟ್ಟುಕೊಂಡಿದೆ.

ಮುಖ್ಯ ಪಾತ್ರಧಾರಿ ಜೈರಾ ವಾಸಿಂ ಭೂಮಿಗಿಳಿದ ಚಂದಿರನಷ್ಟು ಮುಗ್ಧವಾಗಿದ್ದಾರೆ. ಅವರ ಅಭಿನಯ ಮನೋಜ್ಞ. ಅಮ್ಮನಾಗಿ ಮೆಹೆರ್ ವಿಜ್ ಅವರೂ ಕಾಡುತ್ತಾರೆ. ಶಾಲೆಯ ಗೆಳೆಯನ ಪಾತ್ರದಲ್ಲಿ ತೀರ್ಥ್ ಶರ್ಮ ಹಾವಭಾವಗಳು ಆಸಕ್ತಿಕರ.

‘ಅಳಿಸುವುದು ಧರ್ಮ’ ಎನ್ನುವುದನ್ನು ಅಮೀರ್ ಖಾನ್ ‘ತಾರೆ ಜಮೀನ್ ಪರ್’ ಚಿತ್ರದಲ್ಲಿ ವ್ಯಕ್ತಪಡಿಸಿದ್ದರು. ಇಲ್ಲೂ ಅದನ್ನು ಮುಂದುವರಿಸಿರುವುದು ಕಾಕತಾಳೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.