ADVERTISEMENT

‘ಆ ಕಿಕ್‌’ ಇಲ್ಲಿಲ್ಲ

ಕಿಕ್‌ (ಹಿಂದಿ)

ವಿಶಾಖ ಎನ್.
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST
‘ಆ ಕಿಕ್‌’ ಇಲ್ಲಿಲ್ಲ
‘ಆ ಕಿಕ್‌’ ಇಲ್ಲಿಲ್ಲ   

ನಿರ್ಮಾಣ – ನಿರ್ದೇಶನ: ಸಾಜಿದ್‌ ನಾಡಿಯಾದ್‌ವಾಲಾ
ತಾರಾಗಣ: ಸಲ್ಮಾನ್‌ ಖಾನ್‌, ಜಾಕ್ವೆಲಿನ್‌ ಫರ್ನಾಂಡಿಸ್‌, ರಣದೀಪ್‌ ಹೂಡಾ, ನವಾಜುದ್ದೀನ್‌ ಸಿದ್ದಿಕಿ, ಸೌರಭ್‌ ಶುಕ್ಲಾ ಮತ್ತಿತರರು


ಸಲ್ಮಾನ್‌ ಖಾನ್‌ ನೋಡನೋಡುತ್ತಿರುವಾಗಲೇ ತೆಲುಗಿನ ರವಿತೇಜ ನೆನಪಾಗುತ್ತಾರೆ. ತಪ್ಪು ಸಲ್ಮಾನ್‌ ಖಾನ್‌ ಅವರದ್ದಲ್ಲ. ಅನುಕರಣೆ ಅವರಿಗೆ ಗೊತ್ತಿಲ್ಲ, ಬೇಕಿಲ್ಲ. ತೆಲುಗಿನ ರವಿತೇಜ ತರಹದ ನಟರನ್ನು ಅನುಕರಿಸುವುದು ತಮಾಷೆ ಅಲ್ಲ. ಐದು ವರ್ಷಗಳ ಹಿಂದೆ ಸುರೇಂದರ್‌ ರೆಡ್ಡಿ ತೆಲುಗಿನಲ್ಲಿ ಕೊಟ್ಟಿದ್ದ ಹಿಟ್‌ ಚಿತ್ರ ‘ಕಿಕ್‌’ ಈಗ ಹಿಂದಿಯಲ್ಲಿ ಅದ್ದೂರಿತನದ ಮೆರುಗು ಪಡೆದುಕೊಂಡು ಬಂದಿದೆ. ಅಲ್ಲಿನ ಕಿಕ್‌ ಇಲ್ಲಿ ಇಲ್ಲ ಎನ್ನಲು ಕಾರಣಗಳು ಸಿಗುವಂತೆ, ಇಲ್ಲಿಯ ವೈಭವ ಅಲ್ಲಿ ಇಲ್ಲ ಎನ್ನಲೂ ಕಾರಣಗಳು ಸಿಗುತ್ತವೆ.

ರಾಬಿನ್‌ಹುಡ್‌ ಮಾದರಿಯ ಚಿತ್ರಕಥೆ ಇದ್ದ ತೆಲುಗಿನ ‘ಕಿಕ್‌’ಗೆ ತಾಂತ್ರಿಕ ಮಸಾಲೆಯನ್ನು ಸೇರಿಸಿ ಹಿಂದಿ­ಯಲ್ಲಿ ತರಲಾಗಿದೆ. ಚಿತ್ರಕಥೆಯ ಹೆಣಿಗೆಯಲ್ಲಿ ಚೇತನ್‌ ಭಗತ್‌ ತರಹದ ಕಾದಂಬರಿಕಾರರು ಕೈಹಚ್ಚಿ­ರು­ವುದು ಅಚ್ಚರಿಯೇ ಸರಿ. ಆದರೆ ಅವರ ಸ್ಪರ್ಶ ಚಿತ್ರ­ದಲ್ಲಿ ಯಾವ ರೀತಿ ಕೆಲಸ ಮಾಡಿದೆ ಎನ್ನುವುದಕ್ಕೆ ಹೇಳಿ­ಕೊ­ಳ್ಳುವಂಥ ಯಾವ ಉದಾಹರಣೆಯೂ ಸಿಗುವುದಿಲ್ಲ.

ತೆಲುಗಿನ ಚಿತ್ರ ಲವಲವಿಕೆಯಾಗಿತ್ತು. ಮುಖ್ಯವಾಗಿ ಸುರಸುಂದರಾಂಗ ಅಲ್ಲದ ರವಿತೇಜ ತಮ್ಮ ಅಭಿನಯ ಕೌಶಲ, ದೇಹಭಾಷೆಯಿಂದಲೇ ಜನಮನ ಗೆದ್ದಿದ್ದರು. ಹೋಲಿಸಿ ನೋಡಿದರೆ ಸಲ್ಮಾನ್‌ ಖಾನ್‌, ರವಿತೇಜ ಅವರಿಗಿಂತ ಸಂಪೂರ್ಣ ಭಿನ್ನ ಚಹರೆಯವರು. ದೇಹಭಾಷೆಗಿಂತ ಹೆಚ್ಚಾಗಿ ಅಂಗಸೌಷ್ಠವವನ್ನೇ ನೆಚ್ಚಿಕೊಂಡಿರುವ ಅವರ ಕದಲಿಕೆಗಳು ಬಂಡೆಗಳು ಜರುಗಿದಂತೆ ಭಾಸವಾಗುವುದರಿಂದ  ಕೆಲವು ದೃಶ್ಯಗಳು ಹಾಸ್ಯಾಸ್ಪದ ಎನಿಸುತ್ತವೆ.

ಮೂಲ ಚಿತ್ರದ ನಾಯಕಿ ಇಲಿಯಾನಾ ಡಿಕ್ರೂಸ್‌ ಎಲ್ಲಿ, ಹಿಂದಿಯ ಜಾಕ್ವೆಲಿನ್‌ ಫರ್ನಾಂಡಿಸ್‌ ಎಲ್ಲಿ ಎಂಬ ಇನ್ನೊಂದು ಮುಖ್ಯವಾದ ಪ್ರಶ್ನೆಯನ್ನೂ ಸಿನಿಮಾ ಉಳಿಸುತ್ತದೆ.

ಎಲ್ಲದರಲ್ಲೂ ‘ಕಿಕ್‌’ ಸಿಗಬೇಕು ಎಂದು ಬಯಸುವ ನಾಯಕ ಅತಿರೇಕದ ಸ್ವಭಾವದವನು. ರೋಗಪೀಡಿತ ಮಗುವೊಂದರ ನಗು ಕೊಡುವ ‘ಕಿಕ್‌’ ಅವನನ್ನು ರಾಬಿನ್‌ಹುಡ್‌ ಮಾಡಿಬಿಡುತ್ತದೆ. ಪ್ರೇಮ ಹಾಗೂ ಒಳಿತಿಗಾಗಿ ನಾಯಕ ದರೋಡೆ ಮಾಡುವ ಕಥಾನಕ­ಗಳು ಫ್ಲಾಷ್‌ಬ್ಯಾಕ್‌ನಲ್ಲಿ ಅನಾವರಣಗೊಳ್ಳುತ್ತವೆ. ಇವುಗಳ ನಡುವೆಯೇ ತ್ರಿಕೋನ ಪ್ರೇಮವೊಂದನ್ನು ಬಲವಂತವಾಗಿ ಸೃಷ್ಟಿಸಿರುವ ನಿರ್ದೇಶಕರು ಚಿತ್ರವನ್ನು ಇನ್ನಷ್ಟು ರೋಚಕವಾಗಿಸಿದ್ದಾರೆ. ಆ ರೋಚಕತೆ ತೆಲುಗಿನಲ್ಲಿ ಮೂಡಿಬಂದಿರುವಷ್ಟು ಗಟ್ಟಿಯಾಗಿ ಇಲ್ಲಿ ಮೈದಳೆದಿಲ್ಲದಿರುವುದು ಕೊರತೆ.

‘ಅಭಿನಯಿಸದ ನಟ’ ತಾವು ಎನ್ನುವುದನ್ನು ಸಲ್ಮಾನ್‌ ಖಾನ್‌ ಈ ಚಿತ್ರದಲ್ಲೂ ಮುಂದುವರಿಸಿ­ದ್ದಾರೆ. ದೃಶ್ಯಗಳ ರೋಚಕತೆಯಷ್ಟೇ ಅವರನ್ನು ತೇಲಿಸಬೇಕು. ಜಾಕ್ವೆಲಿನ್‌ ಫರ್ನಾಂಡಿಸ್‌ ದಿಢೀರನೆ ಹಾಡೊಂದರಲ್ಲಿ ಯದ್ವಾತದ್ವಾ ಕುಣಿದು ರಂಜಿಸು­ತ್ತಾರೆ. ಸಿನಿಮಾ ಒಂದಿಷ್ಟು ಮಜಾ ಕೊಡುವುದು ನವಾಜುದ್ದೀನ್‌ ಸಿದ್ದಿಕಿ ಅಭಿನಯದಿಂದ. ರಣದೀಪ್‌ ಹೂಡಾ ಕೂಡ ತಣ್ಣಗೆ ನಟಿಸಿದ್ದಾರೆ.

ಹಿಂದಿಯ ಜನಪ್ರಿಯ ಸೂತ್ರದ ಕೊಡಕ್ಕೆ ತೆಲುಗಿನ ಚಿತ್ರಕಥೆಗಳ ನೀರು ತುಂಬಿಸಿಕೊಳ್ಳುತ್ತಿರುವುದು ದಕ್ಷಿಣ ಭಾರತೀಯರಿಗೆ ಹೆಮ್ಮೆ ಎನಿಸಬಹುದು, ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT