ADVERTISEMENT

ಮನುಷ್ಯ ಸಂಬಂಧಗಳ ಸೂಕ್ಷ್ಮ ಚಿತ್ರಣ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2015, 19:52 IST
Last Updated 27 ಆಗಸ್ಟ್ 2015, 19:52 IST
‘ತಟ್ಟೆ ಇಡ್ಲಿ ರಾದ್ಧಾಂತ’ ನಾಟಕದ ದೃಶ್ಯ
‘ತಟ್ಟೆ ಇಡ್ಲಿ ರಾದ್ಧಾಂತ’ ನಾಟಕದ ದೃಶ್ಯ   

ಇಡೀ ಕಥೆಯ ವಸ್ತುವನ್ನು ಧ್ವನಿಸುವಂಥ ನಾಟಕದ ಶೀರ್ಷಿಕೆಯೂ ಅಗತ್ಯ ಪಾತ್ರವನ್ನು ವಹಿಸುತ್ತದೆ ಎಂದೆನಿಸಿದ್ದು ‘ತಟ್ಟೆ ಇಡ್ಲಿ ರಾದ್ಧಾಂತ’ ನಾಟಕವನ್ನು ವೀಕ್ಷಿಸಿದಾಗ. ಈ ಹಾಸ್ಯಭರಿತ ಪತ್ತೇದಾರಿ ನಾಟಕವನ್ನು ರಚಿಸಿ ನಿರ್ದೇಶಿಸಿದವರು ರಂಗಾಯಣದ ಮಾಯಸಂದ್ರ ಕೃಷ್ಣಪ್ರಸಾದ್. ಮೈಸೂರಿನಲ್ಲಿ ಕ್ರಿಯಾಶೀಲವಾಗಿರುವ ರಂಗತಂಡ ‘ರಂಗವಲ್ಲಿ’ ಪ್ರಸ್ತುತಿಪಡಿಸಿದ ನಾಟಕ ಕೆ.ಎಚ್‌.ಕಲಾಸೌಧದಲ್ಲಿ ಇತ್ತೀಚೆಗೆ ಪ್ರದರ್ಶಿತವಾಯಿತು.

ಪತ್ತೇದಾರಿ ಶೈಲಿಯ ಈ ನಾಟಕ, ಇಂದು ಅಪರೂಪವಾಗುತ್ತಿರುವ ಅವಿಭಕ್ತ ಕುಟುಂಬಗಳ ಆಂತರಂಗಿಕ ಸಮಸ್ಯೆ-ಸಂಭ್ರಮಗಳನ್ನು ಕಥಾನಡೆಯೊಳಗೆ, ಹಾಸುಹೊಕ್ಕಾಗಿಸಿ ನವಿರಾಗಿ ಬಿಚ್ಚಿಡುತ್ತ ಕುತೂಹಲಕರವಾಗಿ ಸಾಗಿತು. ಜಿಪುಣಾಗ್ರೇಸರ ಮುದುಕನೊಬ್ಬ ಮಕ್ಕಳಿಗೆ ಆಸ್ತಿಯನ್ನು ಹಂಚದೆ, ಕಿರಿಕಿರಿ ಮಾಡುತ್ತ ಅಸಂತೋಷದ ಬದುಕನ್ನು ದೂಡುತ್ತಿರುವಾಗ ಕೊಲೆಯಾಗುತ್ತಾನೆ. ತನ್ನ ಪ್ರಾಣಕ್ಕೆ ಆಪತ್ತಿದೆ ಎಂಬ ಮುದುಕನ ಪತ್ರದಿಂದ ವಿಷಯ ತಿಳಿದ ಪೋಲಿಸಿನವರು ಬಂದು ಹೆಣದ ಪೋಸ್ಟ್‌ಮಾರ್ಟಂ ಮಾಡಿ ತನಿಖೆ ಕೈಗೊಳ್ಳುತ್ತಾರೆ.

ಶವಸಂಸ್ಕಾರ ಇತ್ಯಾದಿ ನಡೆದು, ಹದಿಮೂರು ದಿನಗಳ ಕಾರ್ಯಗಳು ನಡೆಯುವ ಅವಧಿಯಲ್ಲಿ ಮನೆಯವರಿಗೆ ಪೊಲೀಸ್ ತನಿಖೆಯ ಫಜೀತಿ. ಮುದುಕನ ವಾಸ ಕಿರಿಮಗನ ಮನೆಯಲ್ಲಿ. ಹಿರಿಯವನ ಸಂಸಾರ ಹಳ್ಳಿಯಲ್ಲಿ. ಪಕ್ಕದಮನೆಯಲ್ಲಿ ದಾಯಾದಿಯ ಮಗ. ಯಾರಿಗೂ ಮುದುಕನ ಸ್ವಭಾವ ಒಗ್ಗದು. ಜಿಗುಟು ಮುದುಕ ಸತ್ತಿದ್ದಕ್ಕೆ ಯಾರಿಗೂ ಅಂಥ ದುಃಖವಿಲ್ಲ. ಹಿರಿತಲೆಗೆ ಶಾಸ್ತ್ರೋಕ್ತ ವಿಧಿಗಳು ಸಾಂಗವಾಗಿ ನಡೆದರೂ, ಮಧ್ಯೆ ಪೋಲಿಸರ ತಲೆನೋವು. ಮುದುಕನಿಗೆ ಅವರೇಕಾಯಿ ಉಪ್ಪಿಟ್ಟಿನಲ್ಲಿ ಕೀಟನಾಶಕ ಬೆರೆಸಿ ಕೊಲ್ಲಲಾಗಿದೆ ಎಂಬ ಆರೋಪದ ಬಗ್ಗೆ ಮನೆಯವರಲ್ಲಿ ನೂರೆಂಟು ವಿಶ್ಲೇಷಣೆ-ಚರ್ಚೆಗಳು.  

ಊರಿನಿಂದ ಬಂದ ಹಿರಿಮಗ-ಸೊಸೆ, ಕಿರಿಮಗ-ಸೊಸೆ ಮತ್ತು ಪಕ್ಕದ ಮನೆಯ ದಂಪತಿ ತಮ್ಮ ತಮ್ಮಲ್ಲಿಯೇ ಅನುಮಾನ ವ್ಯಕ್ತಪಡಿಸುತ್ತ, ಸಮರ್ಥಿಸಿಕೊಳ್ಳುತ್ತ ತಲೆಕೆಡಿಸಿಕೊಳ್ಳುತ್ತಾರೆ. ಪೊಲೀಸರ ಪ್ರಶ್ನೆಗಳಿಗೆ ಪಕ್ಕದ ಮನೆಯ ಬುದ್ಧಿಮಾಂದ್ಯ ಮಗ ಪೆದ್ದುಪೆದ್ದಾಗಿ ಉತ್ತರಿಸುತ್ತ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸುತ್ತಾನೆ. ತಟ್ಟೆಇಡ್ಲಿ ಪ್ರಿಯನಾದ ಅವನ ಕೈಯಿಂದಲೇ ಮುದುಕನಿಗೆ ವಿಷವುಣ್ಣಿಸಿದವರು, ಇಡ್ಲಿಯ ಆಮಿಷ ಒಡ್ಡಿ ‘ತಾಯಿ ಆಣೆ’ ಮಾಡಿಸಿಕೊಂಡಿದ್ದರಿಂದ ಹುಡುಗ ಕಡೆಗೂ ಕೊಲೆಗಾರರ ಬಗ್ಗೆ ಬಾಯಿ ಬಿಡುವುದಿಲ್ಲ. ಅನಿರೀಕ್ಷಿತ ತಿರುವಿನೊಂದಿಗೆ ನಾಟಕ ಅಂತ್ಯ ಕಾಣುತ್ತದೆ.

ಒಂದು ಕೊಲೆಯ ಸುತ್ತ ಗಿರಕಿ ಹೊಡೆಯುವ ಈ ನಾಟಕ ಪತ್ತೇದಾರಿಯ ಮಾದರಿಯಲ್ಲಿ ಸಾಗಿದರೂ ಪ್ರತಿ ದೃಶ್ಯವೂ ಆಸಕ್ತಿ ಕೆರಳಿಸುತ್ತದೆ. ಅಕ್ಕ ಪಕ್ಕದ ಮನೆಯ ಹೆಂಗಸರ ಮಾತು, ನಡೆ-ನುಡಿ ನಗೆಯುಕ್ಕಿಸಿದರೂ ಮಾನವೀಯ ವಿಚಿತ್ರ ಸಂಬಂಧಗಳ ಸುಳಿಯನ್ನು ಬಹಿರಂಗಗೊಳಿಸುತ್ತ ಪ್ರೀತಿಯೇ ಆಗಲಿ, ದ್ವೇಷವೇ ಆಗಲಿ ಕಟುವಾಗಿರದು ಎಂಬ ಕಡುಸತ್ಯವನ್ನು ಸಾರುತ್ತದೆ. ಇದು ಅಪೇಕ್ಷಣೀಯ ಕೂಡ.

ದಂಪತಿಗಳ ಮಾತಿನ ಧಾಟಿ, ಕೋಪ-ಜಗಳಗಳ ಪ್ರತಿ ಸನ್ನಿವೇಶವೂ ನೋಡುಗರನ್ನು ಹಾಸ್ಯದಲೆಯಲ್ಲಿ ತೇಲಿಸಿತು. ಮೂವರು ವಾರಗಿತ್ತಿಯರು ಯಾವಾಗ ಜಗಳವಾಡುತ್ತಾರೋ, ಯಾವಾಗ ಒಂದಾಗುತ್ತಾರೋ ಎಂಬುದೇ ಅರ್ಥವಾಗದಷ್ಟು ‘ಸ್ತ್ರೀ ಮೂಲ’ ಅರಿಯಲಾಗದು ಎಂಬ ನುಡಿಗೆ ಯಥಾರ್ಥವಾಗಿತ್ತು. ಅರಿವಿಗೇ ಬಾರದ ಹಾಗೆ ಸರಸ-ವಿರಸವಾಗಿ ಹೊರಳುತ್ತಿದ್ದ ಸ್ವಾರಸ್ಯಕರ ಸಂಭಾಷಣೆಗಳು ಖುಷಿ ನೀಡಿದವು.

ಕೊಲೆಗಾರ ಯಾರೆಂಬುದು ಕೊನೆಯಲ್ಲಿ ಸ್ಫೋಟಗೊಂಡರೂ ತುಂಬಿದ ಮನೆಯ ಆತ್ಮೀಯ ಅನುಬಂಧ, ಒಗ್ಗಟ್ಟಿನ ಅಂತಃಕರಣ ಮನಮಿಡಿಯಿತು. ಮೇಲ್ನೋಟಕ್ಕೆ ನಾಟಕ ಪತ್ತೇದಾರಿ ವಸ್ತುವನ್ನೊಳಗೊಂಡಿದ್ದರೂ ಇಲ್ಲಿನ ಸಾಂಸಾರಿಕ ಅವ್ಯಕ್ತ ಭಾವನೆಗಳ ಪಾತಳಿ ವಿಸ್ಮಯವನ್ನು ಉಂಟುಮಾಡುತ್ತದೆ. ಎಲ್ಲ ಪಾತ್ರ-ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿರುವ ನಿರ್ದೇಶಕರ ಚಾಕಚಕ್ಯತೆ ಪ್ರಶಂಸನೀಯ.

ಗಂಡ-ಹೆಂಡಿರ, ವಾರಗಿತ್ತಿಯರ ವಾಗ್ವಾದ ಆಲಿಸಲು ಸೊಗಸಾಗಿತ್ತು. ಕಾರಣ ಆಯಾ ಪಾತ್ರಗಳನ್ನು ನಿರ್ವಹಿಸಿದ್ದ ನಟಿಯರ ಅಭಿನಯ ಅಷ್ಟು ಪ್ರಭಾವಶಾಲಿಯಾಗಿತ್ತು. ಪಾರ್ವತಿಯಾಗಿ ರಶ್ಮಿ ನಾರಾಯಣ್ ತಮ್ಮ ಅರಳು ಹುರಿದಂಥ ಮಾತಿನ ಚಟಾಕಿಯಿಂದ ಪಳಗಿದ ಅಭಿನಯ ನೀಡಿದರೆ, ಅನಸೂಯಳಾಗಿ ಧನ್ಯ ಶ್ರೀಧರ್ ಸವ್ವಾಸೇರಾಗಿ ಚುರುಕಿನಿಂದ ನಟಿಸಿದರು.

ರಾಜೀವನಾಗಿ ಮಂಜುನಾಥ ಶಾಸ್ತ್ರಿ ಮತ್ತು ನಾಗರಾಜನಾಗಿ ಹರಿಪ್ರಸಾದ್ ಕಶ್ಯಪ್ ಪಾತ್ರಗಳೆಂದೇ ಅನಿಸದಷ್ಟು ಸಹಜಾಭಿನಯ ನೀಡಿ ಮನಸೂರೆಗೊಂಡರು. ಇನ್ಸ್‌ಪೆಕ್ಟರ್-ರಾಘವೇಂದ್ರ ಬೂದನೂರ್ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗಮನ ಸೆಳೆದರೆ, ಶಿವಮೂರ್ತಿ, ಸುಧೀರಕುಮಾರ್, ರೋಶ್ನಿ ಹದವಾಗಿ ನಟಿಸಿದರು. ಪೆದ್ದನಾಗಿ ವೆಂಕಟನಾಗ್ ಸೋಬರ್ಸ್‌ ತಮ್ಮ ಆಂಗಿಕಭಾಷೆ-ತೊದಲು ಮಾತುಗಳಿಂದ ಚೆನ್ನಾಗಿ ಅಭಿನಯಿಸಿದರು.

ಕೃಷ್ಣಪ್ರಸಾದ್‌ರ ನಾಟಕ ರಚನಾ ಶೈಲಿ ಆಕರ್ಷಕವಾಗಿದ್ದರೂ ಅಂತ್ಯವೇಕೋ ನಾಟಕದ ನಡೆಗೆ ಒಗ್ಗುವಂತಿರಲಿಲ್ಲ. ಹಾಸ್ಯದ ಲಘುಧಾಟಿಯಲ್ಲಿ ಸಾಗುವ ಪ್ರಹಸನಕ್ಕೆ ಬೇರೆ ಯಾವುದಾದರೂ ಆಕಸ್ಮಿಕ ಘಟನೆಯ ತಿರುವು ನೀಡಿದ್ದರೆ ನೋಡುಗರನ್ನು  ರಂಜಿಸುತ್ತಿತ್ತು. ವಿಷಾದ ಅಂತ್ಯದ ಅಗತ್ಯವಿರಲಿಲ್ಲ. ಹಿರಿಮಗನ ಪಾತ್ರಚಿತ್ರಣದಲ್ಲಿ ಕೊಂಚ ಮೆಲೋಡ್ರಾಮ ಇಣುಕಿತು. ಉಪ್ಪಿಟ್ಟಿನಲ್ಲಿ ಕ್ರಿಮಿನಾಶಕ ಬೆರೆಸಿದ್ದರೆ ತಾನೇ ತಿನ್ನುವ ಮುದುಕನಿಗೆ ಯಾವ ವಾಸನೆ, ರುಚಿ ವ್ಯತ್ಯಾಸವಾಗಲಿ ತಿಳಿಯುವುದಿಲ್ಲವೇ; ಅದೂ ಹಳ್ಳಿಯಲ್ಲಿ ವ್ಯವಸಾಯದ ಪರಿಚಯವಿದ್ದ ವ್ಯಕ್ತಿಗೆ?! ಇಂಥ ಕೆಲವು ಅನುಮಾನಗಳನ್ನು ಬಿಟ್ಟರೆ ಮಿಕ್ಕಂತೆ ನಾಟಕ ನೋಡಿಸಿಕೊಂಡು ಹೋಯಿತು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.