ADVERTISEMENT

ಹಿಂಸೆ ಅಹಿಂಸೆಗಳ ತಾಕಲಾಟದ ಕಥನ

ಪದ್ಮನಾಭ ಭಟ್ಟ‌
Published 24 ಆಗಸ್ಟ್ 2014, 19:30 IST
Last Updated 24 ಆಗಸ್ಟ್ 2014, 19:30 IST
‘ಅರಹಂತ’ ನಾಟಕದಲ್ಲಿ ಸಾಗರ ಸೇನ ಮತ್ತು ಬೃಹಸ್ಪತಿ ಮಿತ್ರ ಮುಖಾಮುಖಿಯ ದೃಶ್ಯ
‘ಅರಹಂತ’ ನಾಟಕದಲ್ಲಿ ಸಾಗರ ಸೇನ ಮತ್ತು ಬೃಹಸ್ಪತಿ ಮಿತ್ರ ಮುಖಾಮುಖಿಯ ದೃಶ್ಯ   

ಮನುಕುಲದ ಚರಿತ್ರೆಯೆಂದರೆ ಅದು ಹಿಂಸೆಯ ಹಲವು ಅವತಾರಗಳ ಕಥನ ಎನ್ನುವಷ್ಟು ದಟ್ಟವಾಗಿ ಯುದ್ಧಗಳಿಂದ ತುಂಬಿಹೋಗಿದೆ. ಅದನ್ನು ನೀಗಿಕೊಳ್ಳಲು ಮನುಷ್ಯ ಯತ್ನಿಸಿದಷ್ಟೂ ಒಂದಕ್ಕೆರಡಾಗಿ ಎರಡಕ್ಕೆ ನೂರಾಗಿ ರೂಪು ತಳೆದು ಕಾಡುತ್ತಲೇ ಇರುವ ದುಃಸ್ವಪ್ನ ಅದು. ಮನುಷ್ಯನ ಮನಸ್ಸಿನೊಳಗೇ ಇರುವ ಹಿಂಸೆಯ ಬೇರುಗಳನ್ನು ಕೀಳುವುದೂ ಅಷ್ಟು ಸುಲಭವಲ್ಲ.

ಹಿಂಸೆ, ಪ್ರತಿಹಿಂಸೆಯ ಹಲವು ಪ್ರಶ್ನೆಗಳನ್ನೂ, ಉತ್ತರ ಕಂಡುಕೊಳ್ಳುವ ಸಂಭಾವ್ಯ ದಾರಿಯ ಚಿಂತನೆಯನ್ನೂ ಒಳಗೊಂಡಿರುವ ನಾಟಕ ‘ಅರಹಂತ’. ಇತ್ತೀಚೆಗೆ ಸಂಚಾರಿ ದಶಮಾನೋತ್ಸವ ಸಡಗರದ ಅಂಗವಾಗಿ ನಗರದ ರಂಗಶಂಕರದಲ್ಲಿ ಈ ನಾಟಕ ಪ್ರದರ್ಶಿತವಾಯಿತು. ಎಸ್‌. ರಾಮನಾಥ ರಚಿಸಿರುವ ಈ ನಾಟಕವನ್ನು ಮಂಗಳಾ ಎನ್‌. ನಿರ್ದೇಶಿಸಿದ್ದಾರೆ.

ಮಗಧರ ಸಾಮಂತ ರಾಜ್ಯವಾದ ಕಳಿಂಗ ರಾಜ್ಯದ ಸಿಂಹಾಸನಾಧಿಪತಿ ಬುದ್ಧರಾಜ ಒಂದು ದಿನ ಇದ್ದಕ್ಕಿದ್ದಂತೆ ಅಧಿಕಾರ ಅರಮನೆ ಎಲ್ಲವನ್ನೂ ತ್ಯಜಿಸಿ ಮಾಯವಾಗಿಬಿಡುವುದರಿಂದ ನಾಟಕ ಆರಂಭವಾಗುತ್ತದೆ. ಅಹಿಂಸೆ, ಅಪರಿಗ್ರಹ ತತ್ವಗಳನ್ನೇ ಬದುಕಿನ ಶ್ರೇಷ್ಠ ಮಾರ್ಗಗಳು ಎಂದು ಬೋಧಿಸುವ ಜೈನಧರ್ಮವನ್ನು ಪಾಲಿಸುವ ರಾಜ್ಯವಾದ ಕಳಿಂಗದ ಯುವರಾಜ ಕಾರವೇಲ ಮಾತ್ರ ಹಿಂಸೆಯ ಪ್ರತಿರೂಪದಂತಿರುವವನು. ಹಿಂಸೆ ಆನಂದವನ್ನು ಪಡೆಯುವ ಮತ್ತೊಂದು ಮಾರ್ಗ ಎಂದು ನಂಬಿದವನು.

ಬುದ್ಧರಾಜನ ಅಜ್ಞಾತದ ನಂತರ ಅಧಿಕಾರಕ್ಕೆ ಬರುವ ಕಾರವೇಲ ಅಹಿಂಸೆಯ ಸಮೃದ್ಧತೆಯ ರಾಜ್ಯದಲ್ಲಿ ಹಿಂಸೆಯ ಬೀಜ ನೆಡುತ್ತಾನೆ. ಮಗಧರ ಮೇಲೆ ಯುದ್ಧಸಾರಿ ಅವರಲ್ಲಿರುವ ಕಳಿಂಗರ ಕುಲದೇವರು ವೃಷಭನಾಥನ ವಿಗ್ರಹವನ್ನು ಮರಳಿ ರಾಜ್ಯಕ್ಕೆ ತರುತ್ತೇನೆ. ಆ ಮೂಲಕ ಪೂರ್ವಿಕರ ಆತ್ಮಕ್ಕೆ ಶಾಂತಿ ದೊರಕಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.

ತಮ್ಮ  ಶಾಂತಿಯ ದೀಪದಲ್ಲಿಯೇ ಕಾಡ ಸುಡುವ ಬೆಂಕಿಯೂ ಅಡಗಿರುತ್ತದೆ ಎಂಬ ಮಾತಿಗೆ ರೂಪಕದಂತೆ ಕಾಣುವ ಕಾರವೇಲನ ಯುದ್ಧದ ಹಪಹಪಿಗೆ ಆಮಾತ್ಯ ತುಪ್ಪ ಸುರಿಯುತ್ತಾನೆ. ಹೀಗೆ ಹಿಂಸೆ ಮತ್ತು ಶಾಂತಿಯ ಮಾದರಿಗಳನ್ನು ಸಮಾನಾಂತರವಾಗಿ ತೋರುತ್ತಲೇ ನಾಟಕ ಮುಂದುವರಿಯುತ್ತದೆ.

ಕಾರವೇಲ ಮಗಧ ರಾಜ್ಯದ ಮೇಲೆ ದಾಳಿ ಮಾಡಿ ಬೃಹಸ್ಪತಿ ಮಿತ್ರನನ್ನು ಸೋಲಿಸಿ ವಿಜಯಶಾಲಿಯಾಗುತ್ತಾನೆ. ಅಪಾರ ಸಾವು ನೋವುಗಳಿಗೆ ಕಾರಣವಾದ ಈ ಯುದ್ಧ ಮುಗಿಯುವಷ್ಟರಲ್ಲಿ ಅರಮನೆಯ ಮುಂದೆ ನಿಂತಿದ್ದ ವೃಷಭಸೇನರ ವಿಗ್ರಹವೇ ಮಾಯವಾಗಿರುತ್ತದೆ!

ವಿಗ್ರಹ ಹುಡುಕುತ್ತ ಕಾರವೇಲ ಸಾಗರಸೇನನನ್ನು ಬಂಧಿಸಿರುವ ಕಾರಾಗೃಹಕ್ಕೂ ಬರುತ್ತಾನೆ. ವೃಷಭಸೇನನ ಮೂರ್ತಿಯನ್ನು ಶಾಂತಿ ಮಾರ್ಗದಲ್ಲಿಯೇ ಹಿಂಪಡೆಯಲು ಪ್ರಯತ್ನಿಸಿ, ಮಗಧ ರಾಜ್ಯದ ಬೃಹಸ್ಪತಿಮಿತ್ರನಿಂದ ಬಂಧಿತನಾಗಿ ಕಾರಾಗೃಹದಲ್ಲಿಯೇ ಸಲ್ಲೇಖನ ವೃತ ಕೈಗೊಂಡಿದ್ದ ಸಾಗರಸೇನನೇ ಅರಮನೆಯನ್ನು ತ್ಯಜಿಸಿ ಹೋದ ತನ್ನ ತಂದೆ ಬುದ್ಧರಾಜ ಎಂದು ಅರಿವಾಗುತ್ತಲೇ ಕಾರವೇಲ ತಲ್ಲಣಿಸಿಹೋಗುತ್ತಾನೆ.

ಕಾರವೇಲ ಯುದ್ಧಕ್ಕೆ ಸಿದ್ಧನಾಗುವುದನ್ನು ಕಂಡು ಜೈನ ಆಚಾರ್ಯರು ಹೇಳುವ ‘ಸಂಸ್ಕೃತಿಯನ್ನು ಬಲಿಕೊಟ್ಟು, ಧರ್ಮವ ಮೀರಿ ಮಾನವ ಮಾನವರನ್ನೇ ಬಲಿತೆಗೆದುಕೊಳ್ಳುವ ಯುದ್ಧ ಈ ನಾಡಿಗೆ ಬರದಿರಲಿ’ ಎಂಬ ಮಾತು ಇಡೀ ನಾಟಕದ ಒಟ್ಟಾರೆ ಆಶಯವೂ ಹೌದು. ಅಹಿಂಸೆಯ ರಕ್ಷಣೆಗೆ ಹಿಂಸೆಯ ಮಾರ್ಗವನ್ನೇ ಹಿಡಿಯುವ ವಿಪರ್‍ಯಾಸ ನಾಟಕದಲ್ಲಿ ಸಮರ್ಥವಾಗಿ ನಿರೂಪಿತವಾಗಿದೆ. ಕೊನೆಯಲ್ಲಿ ಎರಡು ಮದಗಜದಿಂದಲೂ ಅಲ್ಲಾಡಿಸಲಾಗದ ಬೃಹತ್‌ ವಿಗ್ರಹ ಮಾಯವಾಗಿಬಿಡುವುದು ಯುದ್ಧದ ಅರ್ಥಹೀನತೆಯನ್ನು ಧ್ವನಿಸುವಂತಿದೆ.

ಇಡೀ ನಾಟಕದಲ್ಲಿ ಎದ್ದು ತೋರುವುದು ಕಾರವೇಲನ ಪಾತ್ರ ನಿರ್ವಹಿಸಿದ ಸಂಚಾರಿ ವಿಜಯ್‌ ಅವರ ನಟನೆ. ಕತ್ತಿಯನ್ನು ಹರಿತಗೊಳಿಸುವ ಮನಸ್ಸೇ ಅಹಿಂಸೆಗಾಗಿ ತುಡಿಯುವ ವೈರುದ್ಧ್ಯ, ಅಹಿಂಸೆಯೇ ಮೈವೆತ್ತಂತೆ ಇರುವ ಜನರ ನಡುವೆ ಹಿಂಸೆಯ ದಾರಿ ಹಿಡಿದವನ್ನು ಕಾಡುವ ಒಂಟಿತನ, ತನ್ನದಲ್ಲದ ದಾರಿಯಲ್ಲಿ ಬಹುದೂರ ಸಾಗಿದವನ ಆತ್ಮರೋದನ ಹೀಗೆ ಹಲವು ಛಾಯೆಗಳಿರುವ ಪಾತ್ರವನ್ನು ಅವರು ಅದೆಷ್ಟು ಸಮರ್ಥವಾಗಿ ನಿರ್ವಹಿಸಿದ್ದಾರೆಂದರೆ ಅದೇ ಇಡೀ ನಾಟಕದ ಶಕ್ತಿಯಾಗಿ ಎದ್ದು ತೋರುತ್ತದೆ.
ಬೃಹಸ್ಪತಿ ಮಿತ್ರನ ಪಾತ್ರದಲ್ಲಿ ಕೆ. ಶ್ರೀನಿವಾಸ್ ಮತ್ತು ಸಾಗರ ಸೇನನ ಪಾತ್ರದಲ್ಲಿ ಗಣಪತಿ ಗೌಡ ಅವರ ಅಭಿನಯವೂ ಗಮನ ಸೆಳೆಯುವಂತಿದೆ.

ಆರಂಭದಲ್ಲಿ ಕೆಲವು ಕಡೆ ಕಲಾವಿದರ ಚಲನೆಗೂ ಬೆಳಕಿನ  ವಿನ್ಯಾಸಕ್ಕೂ (ವಿನಯ್‌ ಚಂದ್ರ) ಹೊಂದಾಣಿಕೆಯಾಗದೇ ಕಿರಿಕಿರಿ ಉಂಟಾದರೂ ಇನ್ನು ಕೆಲವು ಸನ್ನಿವೇಶಗಳಲ್ಲಿ ಬೆಳಕು ಸನ್ನಿವೇಶದ ತೀವ್ರತೆ ಹೆಚ್ಚಿಸುವುದರಲ್ಲಿ ಸಶಕ್ತ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕಾರವೇಲ ತನ್ನ ಬೆರಳ ಮೇಲೆ ಹರಿದಾಡುತ್ತಿರುವ ಇರುವೆಯನ್ನು ಹೊಸಕಿ ಹಾಕಲೇ ಅಥವಾ ಹೊಸಕಿ ಹಾಕಲು ಸಿದ್ಧವಾಗಿರುವ ಬೆರಳಿನಲ್ಲಿಯೇ ಅದನ್ನು ಎತ್ತಿ ಪಕ್ಕಕ್ಕಿರಿಸಲೇ ಎಂಬ ಗೊಂದಲಗೊಳ್ಳುವ ಸನ್ನಿವೇಶ.

ಕಾರವೇಲನ ಮನಸ್ಸಿನಲ್ಲಿನ ಹಿಂಸೆ–ಅಹಿಂಸೆಯ ದಾರಿಗಳ ಆಯ್ಕೆಯ ತೊಳಲಾಟಗಳನ್ನು ಬಿಂಬಿಸುವಂತಹ ಈ ದೃಶ್ಯಕ್ಕೆ ವಿಜಯ್‌ ಅವರ ನಿಧಾನಗತಿಯ ಆಂಗಿಕ ಅಭಿನಯ ಮತ್ತು ಅದಕ್ಕೆ ಪೂರಕವಾದ ಬೆಳಕಿನ ವಿನ್ಯಾಸದಿಂದ ಪರಿಣಾಮಕಾರಿ ಕಾವ್ಯಶಕ್ತಿ ದೊರಕಿದೆ. ಸಂಗೀತವೂ (ಗಜಾನನ ಟಿ ನಾಯ್ಕ) ಕೆಲವು ದೃಶ್ಯಗಳಲ್ಲಿ ಚೆನ್ನಾಗಿದ್ದರೆ ಇನ್ನು ಕೆಲವು ಸಂದರ್ಭಗಳಲ್ಲಿ ಹೊಂದಿಕೆಯಾಗುವುದಿಲ್ಲ. ರಂಗವಿನ್ಯಾಸ (ಅರುಣ್ ಸಾಗರ್‌) ಉತ್ತಮವಾಗಿದೆ. ಪ್ರಸಾದನವೂ (ರಾಮಕೃಷ್ಣ ಕನ್ನರ್ಪಾಡಿ, ವಿಜಯ್‌ ಬೆಣಚ) ಪಾತ್ರಗಳಿಗೆ ಪೂರಕವಾಗಿದೆ.

ಪಾತ್ರದಾರಿಗಳು ಅಲ್ಲಲ್ಲಿ ತೊದಲುವುದು ಕಿರಿಕಿರಿ ಉಂಟುಮಾಡುತ್ತದೆ. ಕಳಿಂಗರು ಸಾಕಷ್ಟು ಸಂಪತ್ತು ಹೊಂದಿದವರು ಎಂಬ ಉಲ್ಲೇಖ ಬರುವ ಸನ್ನಿವೇಶದಲ್ಲಿಯೇ ಬೃಹಸ್ಪತಿ ಮಿತ್ರ ‘ಒಂದು ಹೊತ್ತಿನ ತುತ್ತಿಗಾಗಿ ಗತಿಯಿಲ್ಲದ ಅವರು 30 ವರ್ಷದ ಕಪ್ಪ ಹೇಗೆ ಒಪ್ಪಿಸುತ್ತಾರೋ ನೋಡೋಣ’ ಎಂದು ಹೇಳುವುದರ ಔಚಿತ್ಯ ತಿಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT