ADVERTISEMENT

ನಾಳೆ ‘ಸೌಗಂಧದ ಸೀಮೇಯಾಚೆ’ ನಾಟಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
‘ಸೌಗಂಧದ ಸೀಮೆಯಾಚೆ’ ನಾಟಕದ ತಾಲೀಮು ದೃಶ್ಯ
‘ಸೌಗಂಧದ ಸೀಮೆಯಾಚೆ’ ನಾಟಕದ ತಾಲೀಮು ದೃಶ್ಯ   

ನಿರ್ದೇಶಕ ಗಿರಿರಾಜ್‌ ಬಿ.ಎಂ ಅವರ ಜಟ್ಟ, ಮೈತ್ರಿ, ಅಮರಾವತಿ ಎಲ್ಲಾ ಸಿನಿಮಾಗಳು ವಿಭಿನ್ನ ಕತೆಗಳಿಂದಲೇ ಸುದ್ದಿ ಮಾಡಿದವು. ಈಗ ಗಿರಿರಾಜ್‌ ಅವರು ಮೊರಾಕ್ಕೊ ನಾಡಿನ ಕತೆವೊಂದನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಈ ಬಾರಿ ಸಿನಿಮಾ ಅಲ್ಲ, ನಾಟಕ ನಿರ್ದೇಶಿಸಿದ್ದಾರೆ.

ಗಿರಿರಾಜ್ ಬಿ. ಎಂ ಅವರ ನಿರ್ದೇಶನದ 'ಸುಗಂಧದ ಸೀಮೆಯಾಚೆ’ ನಾಟಕವು ಹನುಮಂತನಗರದ ಕೆ.ಎಚ್‌.ಕಲಾಸೌಧದಲ್ಲಿ ಫೆಬ್ರುವರಿ 10ರಂದು ಪ್ರದರ್ಶನವಾಗಲಿದೆ. ‘ಸುಗಂಧದ ಸೀಮೆಯಾಚೆ’ ನಾಟಕದ ಕತೆಯೂ ವಿಭಿನ್ನವಾಗಿದೆ.

ವಹಾಬ್ಬಿಗಳು ಮೊರಾಕ್ಕೊ ನಗರವನ್ನು ಆಕ್ರಮಿಸಿ ವಶಪಡಿಸಿಕೊಂಡಾಗ ಒಂದು ಕುಟುಂಬ ಅರಿವಿಲ್ಲದಂತೆ ಸಂಕಷ್ಟದಲ್ಲಿ ಬೀಳುತ್ತದೆ. 1998 ಹಾಗೂ 2016ರ ನಡುವಿನ ದೀರ್ಘ ಕತೆಯನ್ನು ಈ ನಾಟಕ ಒಳಗೊಂಡಿದೆ. ಮೊರಾಕ್ಕೊದ ಕುಟುಂಬ ಜೈಲಿನಿಂದ ತಪ್ಪಿಸಿಕೊಂಡು ಟರ್ಕಿಗೆ ಪಾರಾದ 18 ವರ್ಷಗಳ ಕತೆ ಈ ನಾಟಕದು.

ADVERTISEMENT

ಈ ನಾಟಕದಲ್ಲಿ ಮೊರಾಕ್ಕೊ ಸಂಸ್ಕೃತಿ, ಅಲ್ಲಿನ ಜೀವನ ಶೈಲಿಯನ್ನೇ ವೇದಿಕೆ ಮೇಲೆ ತೋರಿಸಲಾಗುತ್ತದೆ. ಕತೆ, ವಸ್ತ್ರವಿನ್ಯಾಸ, ನಿರ್ದೇಶನದ ದೃಷ್ಟಿಯಿಂದ ಗಿರಿರಾಜ್‌ ಅವರ ಈ ನಾಟಕ ಪ್ರದರ್ಶನ ಕುತೂಹಲ ಮೂಡಿಸಿದೆ.

ಲೇಖಕ ತಾಹರ್‌ ಬಿನ್‌ ಝಲ್ವಾನ್‌ ಅವರ ಸಂದರ್ಶನದಿಂದ ಪ್ರೇರಣೆ ಪಡೆದು ಗಿರಿರಾಜ್‌ ಈ ನಾಟಕವನ್ನು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಗಿರಿರಾಜ್‌ ಅವರು ಇಂಟರ್‌ನೆಟ್‌ ರೇಡಿಯೋದಲ್ಲಿ ತಾಹರ್‌ ಬಿನ್‌ ಝಲ್ವಾನ್‌ನ ಸಂದರ್ಶನವನ್ನು ಕೇಳುತ್ತಿದ್ದರು. ಅವರು ಮೊರಾಕ್ಕೊದ ಕುಟುಂಬವೊಂದು ಜೈಲಿನಲ್ಲಿ ಪಟ್ಟ ಕಷ್ಟ, ಯಾವ ರೀತಿ ಹಿಂಸೆ ನೀಡಲಾಯಿತು, ಅವರು ಹೇಗೆ ತಪ್ಪಿಸಿಕೊಂಡು ಟರ್ಕಿಗೆ ಪಲಾಯನ ಮಾಡಿದರು ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೇ ಕತೆಯನ್ನು ಆಧಾರವಾಗಿಟ್ಟುಕೊಂಡು ನಾಟಕದ ಕತೆ ಬರೆದಿದ್ದಾರೆ ಗಿರಿರಾಜ್‌.

ನಾಟಕದಲ್ಲಿ ನಿರ್ದೇಶಕ ಶಿವಮಣಿ ಅವರ ಇರಾನಿನ ಜನಪ್ರಿಯ ನಿರ್ದೇಶಕ ಜಾಫರ್‌ ಪನಾಹಿ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಕ್ರಾಂತಿಕಾರಕ ನಿಲುವಿನಿಂದ ಜೈಲು ಪಾಲಾದವರು ಪನಾಹಿ. ಶಿವಮಣಿ ಮೊದಲ ಬಾರಿಗೆ ನಾಟಕವೊಂದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಟೈಗರ್‌ಗಲ್ಲಿ ಚಿತ್ರದಲ್ಲಿ ಗಿರಿರಾಜ್‌ ಮತ್ತು ಶಿವಮಣಿ ಒಟ್ಟಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಶಿವಮಣಿ ಅವರ ಜೊತೆ ಗಿರಿರಾಜ್‌ ಚರ್ಚಿಸಿದ್ದರು.

ರಂಗಭೂಮಿ ಹಿನ್ನೆಲೆಯಿರುವ ಗಿರಿರಾಜ್‌ ಅವರಿಗೆ ಈ ನಾಟಕ ಸವಾಲಿನದ್ದು ಆಗಿತ್ತು. ‘ಈ ನಾಟಕದ ವಿಷಯವೇ ಹೊಸದಾಗಿತ್ತು. ಮೊರಾಕ್ಕೊ ಸಂಸ್ಕೃತಿ ನನಗೆ ಸಂಪೂರ್ಣ ಹೊಸದು. ಈ ನಾಟಕಕ್ಕೆ ಮೊರಾಕ್ಕೊದ ವಸ್ತ್ರವಿನ್ಯಾಸವೇ ಬೇಕಿತ್ತು. ಇದಕ್ಕೆ ಹೆಚ್ಚು ಸಮಯ ತೆಗದುಕೊಂಡಿತ್ತು’ ಎಂದು ಗಿರಿರಾಜ್‌ ಹೇಳುತ್ತಾರೆ.

ಈ ನಾಟಕದಲ್ಲಿ 3–4 ಕಲಾವಿದರನ್ನು ಹೊರತುಪಡಿಸಿದರೆ ಎಲ್ಲಾ ಕಲಾವಿದರು ಹೊಸಬರೇ. ಈ ನಾಟಕಕ್ಕಾಗಿಯೇ 30 ಕಲಾವಿದರನ್ನೊಳಗೊಂಡ ಹೊಸ ತಂಡ ‘ನಿರ್ಗುಣ’ವನ್ನು ಕಟ್ಟಿದ್ದಾರೆ. ಮುಖ್ಯಪಾತ್ರವಾದ  ತಾಹರ್‌ ಬಿನ್‌ ಝಲ್ವಾನ್‌ನ ಪಾತ್ರವನ್ನು ಇಬ್ಬರು ನಿರ್ವಹಿಸುತ್ತಿದ್ದು, ಸಿದ್ಧಾರ್ಥ್‌ ಮಧ್ಯಮಿಕ ಹಾಗೂ ಸಂತೋಷ್‌ ಕರ್ಕಿ ಮಾಡಲಿದ್ದಾರೆ. ಜನವರಿ ತಿಂಗಳ ಆರಂಭದಿಂದಲೇ ನಾಟಕದ ತಾಲೀಮು ಆರಂಭವಾಗಿದೆ. ಅಮರಾವತಿ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ ಅಭಿಲಾಷ್‌, ಜೋಯಲ್‌ ಅವರೇ ಈ ನಾಟಕಕ್ಕೂ ಸಂಗೀತ ನೀಡಿದ್ದಾರೆ.

ಈ ನಾಟಕವು ಫೆಬ್ರುವರಿ 10ರಂದು ಕೆ.ಎಚ್‌.ಕಲಾಸೌಧದಲ್ಲಿ, ಫೆಬ್ರುವರಿ 18ರಂದು ಬಸವೇಶ್ವರನಗರದ ಕೆ.ಇ.ಎ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಮಾರ್ಚ್‌ ತಿಂಗಳಲ್ಲೂ ಎರಡು ಪ್ರದರ್ಶನ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.