ADVERTISEMENT

ನಗು ನಗುತಾ ಕುಣಿ ಕುಣಿ...

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2015, 19:30 IST
Last Updated 5 ಫೆಬ್ರುವರಿ 2015, 19:30 IST

ಒಂದೇ ವೇದಿಕೆ; ಅಲ್ಲಿ ರಿಯಾಲಿಟಿ ಶೋನ ಪ್ರಖ್ಯಾತರು, ಜತೆಗೆ ಸ್ಟಾರ್ ಸಿನಿಮಾ ನಟರು. ಎಲ್ಲರೂ ಚೆನ್ನಾಗಿಯೇ ಹರಟೆ ಹೊಡೆದರು.
‘ಈಟೀವಿ’ ಕನ್ನಡ ವಾಹಿನಿಯಲ್ಲಿ ನಾಳೆಯಿಂದ (ಫೆ.7) ‘ಮಜಾ ಟಾಕೀಸ್’ ಮತ್ತು ‘ಡ್ಯಾನ್ಸಿಂಗ್ ಸ್ಟಾರ್‌–2’ ರಿಯಾಲಿಟಿ ಶೋಗಳು ಪ್ರಸಾರವಾಗಲಿದೆ. ಈ ಎರಡೂ ಕಾರ್ಯಕ್ರಮಗಳ ವಿವರ ಹೊರ ಬಿದ್ದಿದ್ದು ಒಂದೇ ವೇದಿಕೆಯಲ್ಲಿ.

ಮಜಾ ಟಾಕೀಸ್‌ 
ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಯಿಂದ ‘ಮಜಾ ಟಾಕೀಸ್’ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ಸಮಕಾಲೀನ ಸಂಗತಿಗಳನ್ನು ಹಾಸ್ಯಮಯವಾಗಿ ಹೇಳಲಿದೆ. ‘ಮಜಾ ಟಾಕೀಸ್’ ಒಂದರ್ಥದಲ್ಲಿ ಒನ್ ಮ್ಯಾನ್ ಶೋನಂತೆಯೂ ಕಾಣಲಿದೆ. ಅದಕ್ಕೆ ಕಾರಣ ಸೃಜನ್ ಲೋಕೇಶ್. ಮಜಾ ಟಾಕೀಸ್‌ನಲ್ಲಿ ಅವರೇ ನಿರೂಪಕರಾಗಿದ್ದು ತಮ್ಮ ಪ್ರೊಡೆಕ್ಷನ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.

ಮಿಮಿಕ್ರಿ ದಯಾನಂದ್, ವಿ. ಮನೋಹರ್ ಟಾಕೀಸ್‌ನ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ನಟಿ ಶ್ವೇತಾ ಚೆಂಗಪ್ಪ, ಅಪರ್ಣಾ, ಉಷಾ ಭಂಡಾರಿ ಇನ್ನಿತರ ಸದಸ್ಯರು. ‘ಮಜಾ ಕಾಟೀಸ್‌’ನ ವಿಶೇಷ ವೀಕ್ಷಕರಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಾಲ್ಗೊಳ್ಳುವರು. ಶರಣ್, ಪೂಜಾ ಗಾಂಧಿ, ಯೋಗರಾಜ್ ಭಟ್‌, ಪ್ರೇಮ್, ಅಮೂಲ್ಯ ಇತ್ಯಾದಿ ನಟ–ನಟಿಯರ ಸಂಚಿಕೆಗಳು ಈಗಾಗಲೇ ಚಿತ್ರೀಕರಣಗೊಂಡಿದ್ದು ಮುಂದಿನ ಸಂಚಿಕೆಗಳಲ್ಲಿ ವಿವಿಧ ಕ್ಷೇತ್ರಗಳ ಪ್ರಸಿದ್ಧರು ಭಾಗವಹಿಸುವರು.ಹಾಸ್ಯದ ಜತೆಗೆ ಲಘು ಹರಟೆಯೂ ಇಲ್ಲಿ ಇರಲಿದೆಯಂತೆ.

ಲಂಕೇಶ್ ಮತ್ತು ಲೋಕೇಶ್ ಜೋಡಿ ‘ಎಲ್ಲಿಂದಲೋ ಬಂದವರು’ ಚಿತ್ರದಲ್ಲಿ ಒಗ್ಗೂಡಿದ್ದ ಜೋಡಿ. ಆ ಹಿಂದಿನ ಕ್ಷಣಗಳನ್ನೂ ಸೃಜನ್ ಲೋಕೇಶ್ ಮತ್ತು ಇಂದ್ರಜಿತ್ ಲಂಕೇಶ್ ನೆನಪು ಮಾಡಿಕೊಂಡರು. ಹುಡುಗಾಟ, ಹರಟೆ, ಹಾಸ್ಯ ರಸಾಯನವನ್ನು ಉಣಿಸುವ ‘ಮಜಾ ಟಾಕೀಸ್’ 104 ಸಂಚಿಕೆಗಳಲ್ಲಿ ಪ್ರಸಾರವಾಗಲಿದೆಯಂತೆ.

ಡ್ಯಾನ್ಸಿಂಗ್ ಸ್ಟಾರ್–2
ಡ್ಯಾನ್ಸಿಂಗ್ ಸ್ಟಾರ್‌ ಮೊದಲ ಆವೃತ್ತಿ ಈ ಹಿಂದೆ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈಗ ಮತ್ತೆ ಎರಡನೇ ಆವೃತ್ತಿ ಆರಂಭವಾಗಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಶೋ ಪ್ರಸಾರವಾಗಲಿದೆ. ಇಲ್ಲಿನ ಮುಖ್ಯ ವಿಶೇಷ ಎಂದರೆ ಕನಸುಗಾರ ರವಿಚಂದ್ರನ್. ಮೊದಲ ಬಾರಿಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರ ಸ್ಥಾನದಲ್ಲಿ ಕೂರುತ್ತಿರುವುದು. ನಟಿ ಪ್ರಿಯಾಮಣಿ ಹಾಗೂ ನೃತ್ಯಪಟು ಮಯೂರಿ ಉಳಿದಿಬ್ಬರು ತೀರ್ಪುಗಾರರು. ಅಕುಲ್ ಬಾಲಾಜಿಯದ್ದು ನಿರೂಪಣೆಯ ಸಾರಥ್ಯ. 

ಅನಿರುದ್ಧ್, ಚಂದ್ರಿಕಾ, ಮೈತ್ರೇಯಾ ಗೌಡ, ಹರ್ಷಿಕಾ ಪೂಣಚ್ಚ, ಮಾಸ್ಟರ್ ಆನಂದ್, ರಜನಿ, ಮಾಸ್ಟರ್ ಅಶ್ವಿಕ್, ವಿಜಯ ಸೂರ್ಯ, ಸುಕೃತಾ ನಾಗ್, ಕಾರ್ತಿಕ್, ಗಾಯಕಿ ಸಿಂಚನ್ ದೀಕ್ಷಿತ್ ಸೇರಿದಂತೆ ಕಿರುತೆರೆ ಮತ್ತು ಹಿರಿತೆರೆಯ ನಟ–ನಟಿಯರು ಕಾರ್ಯಕ್ರಮದಲ್ಲಿ ಮೈ ಬಳುಕಿಸಲಿದ್ದಾರೆ.

‘ನನ್ನನ್ನು ನಾನೇ ಜಡ್ಜ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇವರು ಈಗ ನನ್ನನ್ನೇ ಜಡ್ಜ್ ಸ್ಥಾನದಲ್ಲಿ ಕೂರಿಸಿದ್ದಾರೆ. 2015ರಿಂದ ಎಲ್ಲ ಕಡೆ ನುಗ್ಗಬೇಕು ಎಂದುಕೊಂಡಿದ್ದೆ’ ಎಂದು ಶೋ ಬಗ್ಗೆ ಮಾತನಾಡಿದರು ರವಿಚಂದ್ರನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT