ADVERTISEMENT

ಈ ಅಭಿಮಾನಿಗಳಿಗೆ ಏನಾಗಿದೆ?

ಕೆ.ಓಂಕಾರ ಮೂರ್ತಿ
Published 13 ಏಪ್ರಿಲ್ 2014, 19:30 IST
Last Updated 13 ಏಪ್ರಿಲ್ 2014, 19:30 IST

ಈ ಅಭಿಮಾನಿಗಳು ಹೀಗೇಕೇ...?
ನೀವು ಎಲ್ಲಿಯಾದರೂ ಹೋಗಿ ಸ್ವಲ್ಪ ಹೊತ್ತು ನಿಂತುಕೊಳ್ಳಿ, ಅಲ್ಲಿ ಯುವರಾಜ್‌ ಸಿಂಗ್‌ ಬಗ್ಗೆಯೇ ಚರ್ಚೆ. ಬೆಳಿಗ್ಗೆ ತಿಂಡಿ ತಿನ್ನಲು ದರ್ಶಿನಿಗೆ ಹೋದರೆ ‘ಯುವಿ ಬದಲು ರೈನಾ ಅವರನ್ನು ಮೊದಲು ಕ್ರೀಸ್‌ಗೆ ಕಳುಹಿಸಬೇಕಿತ್ತು’ ಎಂಬ ಚರ್ಚೆ. ಸೆಲೂನ್‌ಗೆ ಹೋದರೆ ಅಲ್ಲೂ ಯುವಿಗೆ ಬೈಗುಳ. ‘ಯಾಕ್ರಿ ಇವರನ್ನು ಇನ್ನೂ ತಂಡದಲ್ಲಿ ಇಟ್ಟುಕೊಂಡಿದ್ದಾರೆ’ ಎಂಬ ಆಕ್ರೋಶ. ‘ಇಷ್ಟೊಂದು ಅನುಭವ ಇರುವ ಬ್ಯಾಟ್ಸ್‌ಮನ್‌ ಈ ರೀತಿ ಆಡಬಾರದಿತ್ತು. ತಂಡದ ಸೋಲಿಗೆ ಅವರೇ ಪ್ರಮುಖ ಕಾರಣ’ ಎಂಬ ನಿರಾಸೆಯ ಮಾತುಗಳು. ಬಸ್ಸಿನಲ್ಲೂ ಅದೇ ವಿಷಯ. ‘ಏನ್ರೀ, ಈ ಯುವರಾಜ್‌ಗೆ ಏನಾಗಿದೆ? ನಮಗೆ ಬರಬೇಕಿದ್ದ ವಿಶ್ವಕಪ್‌ ಆತನಿಂದಾಗಿ ಕೈತಪ್ಪಿ ಹೋಯಿತು’ ಎಂಬ ಮಾತು ಆಟೊ ಚಾಲಕನದ್ದು. ‘ಯುವಿಗೆ ಸರಿಯಾಗಿ ಬೈದು ಬರೀರಿ ಸರ್‌’ ಎಂದಿದ್ದು ಆಫೀಸ್‌ ಕ್ಯಾಬ್‌ ಚಾಲಕ.

ಅತಿರೇಕದ ವರ್ತನೆಯ ಈ ಅಭಿಮಾನಿಗಳು ಎಷ್ಟೊಂದು ಬೇಗ ಹಿಂದಿನ ಯಶಸ್ಸುಗಳನ್ನು ಮರೆತುಬಿಡುತ್ತಾರೆ ಅಲ್ಲವೇ? ‘ಯಶಸ್ಸಿಗೆ ಹಲವು ತಂದೆಯರು, ವೈಫಲ್ಯ ಎಂಬುದು ಅನಾಥ’ ಎಂಬ ಹೇಳಿಕೆಯೊಂದಿದೆ. ಅದು ನಿಜ.

ಯುವಿ ನಿವಾಸಕ್ಕೆ ಕಲ್ಲು ಎಸೆದ ‘ಕ್ರಿಕೆಟ್‌ ಅಭಿಮಾನಿಗಳೇ’ ಒಮ್ಮೆ ನೆನಪಿಸಿಕೊಳ್ಳಿ...

ಅದು 2011 ರ ಏಪ್ರಿಲ್ 2, ಬೇಸಿಗೆಯ ಆ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದವರು ಸಂಭ್ರಮದ ಹೊನಲಿನಲ್ಲಿ ತೇಲಾಡುತ್ತಿದ್ದರು. ಎಲ್ಲರ ಕಣ್ಣುಗಳಲ್ಲಿ ಆನಂದಬಾಷ್ಪ. ಕ್ರಿಕೆಟ್ ಪ್ರೇಮಿಗಳ ಆ ಉಲ್ಲಾಸ, ಆ ಖುಷಿ ಹೇಳತೀರದು. ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸಂತೋಷದ ಅಲೆ ಎಲ್ಲೆ ಮೀರಿತ್ತು. ಸ್ವಲ್ಪ ಹೊತ್ತು ಆ ಸಂಭ್ರಮದಲ್ಲಿ ಭಾಗಿಯಾಗಿದ್ದ ‘ಟೂರ್ನಿ ಶ್ರೇಷ್ಠ’ ಯುವರಾಜ್ ಡ್ರೆಸ್ಸಿಂಗ್ ಕೊಠಡಿಯ ಒಂದು ಮೂಲೆಗೆ ತೆರಳಿ ಬಿಕ್ಕಳಿಸುತ್ತಿದ್ದರು. ಅಷ್ಟರಲ್ಲಾಗಲೇ ಅವರಿಗೆ ತಮ್ಮ ದೇಹದೊಳಗೆ ಕ್ಯಾನ್ಸರ್ ಎಂಬ ಮಹಾಮಾರಿ ಹೊಕ್ಕಿರುವ ಸುಳಿವು ಲಭಿಸಿತ್ತು.

ಆದರೆ ಯಾರೊಬ್ಬರ ಬಳಿಯೂ ಅದನ್ನು ಹೇಳಿಕೊಂಡಿರಲಿಲ್ಲ. ಆ ಕಾಯಿಲೆ ಇರುವುದು ಗೊತ್ತಾದ ಮೇಲೂ ಯುವಿ ನೋವನ್ನು ಅದುಮಿಟ್ಟುಕೊಂಡು ಕ್ರಿಕೆಟ್ ಆಡಿದ್ದರು. ಟೂರ್ನಿಯ ಪಂದ್ಯವೊಂದರ ಬಳಿಕ ರಕ್ತ ವಾಂತಿ  ಮಾಡಿಕೊಂಡಿದ್ದರು. ‘ಇನ್ನು ಸಾಧ್ಯವಿಲ್ಲ’ ಎಂಬುದು ಗೊತ್ತಾದಾಗ ಅದನ್ನು ಬಹಿರಂಗಪಡಿಸಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಹೊರಟು ಹೋಗಿದ್ದರು.

ಆಗ ಇಡೀ ಕ್ರೀಡಾ ರಂಗ ಬೆಚ್ಚಿಬಿದ್ದಿತ್ತು. ‘ನೋವನ್ನು ಮುಚ್ಚಿಟ್ಟುಕೊಂಡು ನಮಗೆ ಖುಷಿ ನೀಡಿದ ನೀವು ನಿಜವಾದ ಚಾಂಪಿಯನ್, ನಿಮಗೆ ಈ ರೀತಿ ಆಗಬಾರದಿತ್ತು. ನೀವು  ಖಂಡಿತ ಗೆದ್ದು ಬರುತ್ತೀರಾ. ನಮ್ಮೆಲ್ಲರ ಪ್ರಾರ್ಥನೆ ನಿಮ್ಮೊಂದಿಗಿರಲಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ ಅಭಿಮಾನಿಗಳು ಸಂದೇಶ ಹರಿಬಿಟ್ಟಿದ್ದರು.

ಇದೇ ಯುವಿ ಭಾರತಕ್ಕೆ ಜೂನಿಯರ್‌ ವಿಶ್ವಕಪ್‌ ಗೆದ್ದುಕೊಟ್ಟಿದ್ದರು. ಇಂಗ್ಲೆಂಡ್‌ ಎದುರು ಲಾರ್ಡ್ಸ್‌ನಲ್ಲಿ ನಾಟ್‌ವೆಸ್ಟ್‌ ಸರಣಿ ಗೆಲುವಿಗೆ ಕಾರಣರಾಗಿದ್ದರು. 2007ರಲ್ಲಿ ಟ್ವೆಂಟಿ-20 ವಿಶ್ವಕಪ್‌ ಜಯಿಸಲು ಕಾರಣ ಪಂಜಾಬ್‌ನ ಈ ಆಟಗಾರ. ಒಂದೇ ಓವರ್‌ನಲ್ಲಿ ಅವರು ಎತ್ತಿದ್ದ ಆರು ಸಿಕ್ಸರ್‌ಗಳನ್ನು ಮರೆಯುವುದಾದರೂ ಹೇಗೆ? ಈ ಎಡಗೈ ಬ್ಯಾಟ್ಸ್‌ಮನ್‌ 2011ರ ವಿಶ್ವಕಪ್‌ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಗೌತಮ್‌ ಗಂಭೀರ್‌ ಹೇಳಿದಂತೆ ‘ಯುವಿ ರೀತಿಯ ಮ್ಯಾಚ್‌ ವಿನ್ನರ್‌ನನ್ನು ಭಾರತ ಇದುವರೆಗೆ ಕಂಡಿಲ್ಲ’. ಅವರ ಆ ಮಾತು ನಿಜ. ಅದೆಷ್ಟೊ ಬಾರಿ ಯುವಿ ತಮ್ಮ ಅಮೋಘ ಆಟದ ಮೂಲಕ ಭಾರತೀಯರ ಮೊಗದಲ್ಲಿ ಸಂತೋಷ ಮೂಡಿಸಿದ್ದಾರೆ.

ಈಗ ನೋಡಿ... ಅದೇ ಸಾಮಾಜಿಕ ಜಾಲತಾಣಗಳಲ್ಲಿ ಯುವಿ ಅವರನ್ನು ಹೀಯಾಳಿಸುತ್ತಿದ್ದಾರೆ. ಹಿಗ್ಗಾಮುಗ್ಗಾ ಟೀಕಾ ಪ್ರಹಾರ ಹರಿಸುತ್ತಿದ್ದಾರೆ. ನೆನಪಿನ ಶಕ್ತಿಯನ್ನು ಕಳೆದುಕೊಂಡವರಂತೆ ವರ್ತಿಸಿರುವ ಕೆಲ ಅಭಿಮಾನಿಗಳು ಈ ಆಟಗಾರನ ಮನೆ ಮೇಲೆ ಕಲ್ಲು ತೂರಿದ್ದಾರೆ. ಇದಕ್ಕೆಲ್ಲಾ ಕಾರಣ ಬಾಂಗ್ಲಾದೇಶದಲ್ಲಿ ನಡೆದ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಸೋಲಿಗೆ ಯುವಿ ಕಾರಣ ಎಂಬುದು. ಆದರೆ ಸೋಲಿಗೆ ಅವರೊಬ್ಬರೇ ಕಾರಣ ಅಲ್ಲ ಎಂಬುದು ನಿಜವಾದ ಕ್ರಿಕೆಟ್‌ ಪ್ರೇಮಿಗಳಿಗೆ ಗೊತ್ತಿದೆ. ಏಕೆಂದರೆ ಕ್ರಿಕೆಟ್‌ 11 ಆಟಗಾರರು ಆಡುವ ಕ್ರೀಡೆ. ಎಲ್ಲಕ್ಕಿಂತ ಮಿಗಿಲಾಗಿ ಆ ಪಂದ್ಯದಲ್ಲಿ ಲಂಕಾ ಬೌಲರ್‌ಗಳು ಚೆನ್ನಾಗಿ ಬೌಲ್‌ ಮಾಡಿದರು. ಯುವಿ ಔಟಾದ ಬಳಿಕ ಬಂದ ದೋನಿ ಕೂಡ ಪರದಾಡಿದರು.

ಖ್ಯಾತ ಅಂಕಣಗಾರ್ತಿ ಶೋಭಾ ಡೇ ಹೇಳಿದ ಪ್ರಕಾರ ‘ಇಲ್ಲಿ ನಿಜವಾದ ಖಳನಾಯಕರು ಅಭಿಮಾನಿಗಳು. ನಿಜವಾಗಿ ಸೋತಿರುವುದು ಭಾರತ ಅಥವಾ ಯುವರಾಜ್‌ ಅಲ್ಲ; ಬದಲಾಗಿ ಅಭಿಮಾನಿಗಳು’. 1996ರಲ್ಲಿ ಕೋಲ್ಕತ್ತದಲ್ಲಿ ನಡೆದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಲಂಕಾ ಗೆಲುವಿನ ಹಂತದಲ್ಲಿದ್ದಾಗ ಅಭಿಮಾನಿಗಳು ಕ್ರೀಡಾಂಗಣದೊಳಗೆ ಕಲ್ಲು ಎಸೆದು ರಂಪ ಮಾಡಿದ್ದರು. ಆಗ ಕಾಂಬ್ಳಿ ಅಳುತ್ತಾ ಪೆವಿಲಿಯನ್‌ಗೆ ಬಂದಿದ್ದು ನೆನಪಿದೆ ತಾನೆ? ಚಾಂಪಿಯನ್‌ ಶ್ರೀಲಂಕಾಕ್ಕೆ ಅಭಿನಂದನೆ ಹೇಳಿದ್ದರೆ ತಮ್ಮ ಘನತೆ ಮತ್ತಷ್ಟು ಹೆಚ್ಚುತಿತ್ತು ಎಂಬ ಯೋಚನೆ ಕಲ್ಲು ಎಸೆಯುವ ಆ ಅಭಿಮಾನಿಗಳಿಗೆ ಹೊಳೆಯುವುದಾದರೂ ಹೇಗೆ?

ಕ್ರಿಕೆಟ್‌ ಎಂಬುದು ಭಾರತದಲ್ಲಿ ಅಭಿಮಾನಿಗಳ ಭಾವನೆಗಳೊಂದಿಗೆ ಬೆರೆತು ಹೋಗಿದೆ. ನಿನ್ನೆಯ ಗೆಲುವನ್ನು ಇವತ್ತು ನೆನಪಿಟ್ಟು ಕೊಳ್ಳಲಾರರು. ಅದು ಯಾರೇ ಇರಲಿ, ಕಳಪೆ ಆಟವನ್ನು ಸಹಿಸಲಾರರು. ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ನಡೆದ ಒಂದು ಘಟನೆಯನ್ನೇ ತೆಗೆದುಕೊಳ್ಳಿ. ಸಚಿನ್ ತೆಂಡೂಲ್ಕರ್ ಆ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಾಗ ಅಭಿಮಾನಿಗಳು ಬ್ಹೂ ಬ್ಹೂ.... ಎಂದು ಹೀಯಾಳಿಸಿದ್ದರು. ಸ್ವಂತ ಊರು ಮುಂಬೈನಲ್ಲಿ ಸಚಿನ್ ಅವತ್ತು ಎಷ್ಟು ಅವಮಾನಕ್ಕೆ ಒಳ ಗಾಗಿರಬಹುದು ಹೇಳಿ? ಕ್ರಿಕೆಟ್‌ಗಾಗಿ ಸಚಿನ್ ಎಷ್ಟೆಲ್ಲಾ ಕೊಟ್ಟಿದ್ದಾರೆ. ಎಷ್ಟೊಂದು ಮನ ರಂಜನೆ ನೀಡಿದ್ದಾರೆ. ಅಭಿಮಾನಿಗಳೇ ಅವರನ್ನು ‘ಕ್ರಿಕೆಟ್ ದೇವರು’ ಎಂದಿದ್ದರು. ಆದರೆ ಅದೇ ಅಭಿಮಾನಿಗಳು ಅವತ್ತು ಹೀಯಾಳಿಸಿದ್ದರು.

ಯುವಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿನ್‌, ‘ಯಶಸ್ಸು ಸಿಕ್ಕಾಗ ನೀವು ತಟ್ಟುವ ಚಪ್ಪಾಳೆ ಕ್ರಿಕೆಟಿಗರಾದ ನಮ್ಮಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸುತ್ತದೆ. ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೋತ್ಸಾಹ ಹಾಗೂ ನೆರವು ನಮಗೆ ಅಗತ್ಯ. ಅದನ್ನು  ನಾವು ಇಷ್ಟಪಡುತ್ತೇವೆ’ ಎಂದಿದ್ದಾರೆ.

ಇಷ್ಟು ವರ್ಷ ಕ್ರಿಕೆಟ್ ಆಡಿದ ಅನುಭವವಿರುವ ಯುವಿಗೆ ಈಗ ಎದುರಾಗಿರುವ ಪರಿಸ್ಥಿತಿ ಹೊಸದೇನಲ್ಲ. ಕ್ರಿಕೆಟ್‌ನಲ್ಲಿ ಇದೆಲ್ಲಾ ಸಾಮಾನ್ಯ ಎಂಬುದು ಅವರಿಗೆ ಗೊತ್ತಿದೆ. 21 ಎಸೆತಗಳಲ್ಲಿ  11 ರನ್‌ ಗಳಿಸಿದ ಬಗ್ಗೆ ಪ್ರಶ್ನೆ ಮಾಡುವರಿಗೆ 2007ರ ಚುಟುಕು ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಎದುರು 12 ಎಸೆತಗಳಲ್ಲಿ 50 ರನ್‌ ಗಳಿಸಿದ್ದು ಮರೆತು ಹೋಗಿದೆಯೇ ಎಂದು ಪ್ರಶ್ನೆ ಮಾಡುವ ಹಕ್ಕು ಯುವಿಗಿದೆ.

‘ಕ್ರಿಕೆಟ್‌ ಆಡಲು ನಾವಿಲ್ಲಿರುವುದು ನಿಜ. ಆದರೆ ಕೇವಲ ಕ್ರಿಕೆಟ್‌ ನಮ್ಮ ಬದುಕಲ್ಲ’ ಎಂಬ ದೋನಿ ಮಾತು ನಿಜ ಎನಿಸುತ್ತದೆ. ‘40 ಸಾವಿರ ಪ್ರೇಕ್ಷಕರ ಮುಂದೆ ಕೆಟ್ಟದಾಗಿ ಆಡಬೇಕು ಎಂಬ ಉದ್ದೇಶವನ್ನೂ ಯಾವುದೇ ಆಟಗಾರ ಹೊಂದಿರುವುದಿಲ್ಲ. ಈ ಸೋಲಿನಿಂದಾಗಿ ಅಭಿಮಾನಿಗಳಿಗಿಂತ ನಮಗೆ ಹೆಚ್ಚು ಬೇಸರವಾಗಿದೆ’ ಎಂದೂ ಮಹಿ ನುಡಿದಿದ್ದಾರೆ. ಸೋಲಿಗೆ ಇದೆಲ್ಲಾ ಸಮರ್ಥನೆ ಅಲ್ಲದಿರಬಹುದು. ಆದರೆ ಭಾರತ ತಂಡದವರು ಫೈನಲ್‌ನಲ್ಲಿ ಸೋತರು ಎಂಬುದನ್ನು ಬದಿಗೆ ಸರಿಸಿದರೆ ಆ ಟೂರ್ನಿಯಲ್ಲಿ ಚೆನ್ನಾಗಿಯೇ ಆಡಿದ್ದಾರೆ. ಅದೇನೇ ಇರಲಿ, ಯುವಿ ಅವರ ವೈಫಲ್ಯವನ್ನು ಮತ್ತೆ ಮತ್ತೆ ಕೆದಕುವುದರಲ್ಲಿ ಅರ್ಥವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.