ADVERTISEMENT

ಕುಡುಕರ ಹಾವಳಿ ಮತ್ತು ಕೊಚ್ಚೆ ನೀರು...

ಕ್ರೀಡಾ ಹಾಸ್ಟೆಲ್‌ ಕಥೆ–ವ್ಯಥೆ

ಕೆ.ಎಚ್.ಓಬಳೇಶ್
Published 24 ಮೇ 2015, 19:30 IST
Last Updated 24 ಮೇ 2015, 19:30 IST
ಉದ್ದೇಶಿತ ಕ್ರೀಡಾ ಹಾಸ್ಟೆಲ್‌ ಸುತ್ತಲೂ ಕೊಳಕು ನೀರು ನಿಂತಿರುವುದು      ಪ್ರಜಾವಾಣಿ ಚಿತ್ರ; ಸಿ.ಆರ್‌. ವೆಂಕಟ ರಾಮು
ಉದ್ದೇಶಿತ ಕ್ರೀಡಾ ಹಾಸ್ಟೆಲ್‌ ಸುತ್ತಲೂ ಕೊಳಕು ನೀರು ನಿಂತಿರುವುದು ಪ್ರಜಾವಾಣಿ ಚಿತ್ರ; ಸಿ.ಆರ್‌. ವೆಂಕಟ ರಾಮು   

ಕ್ರೀಡಾ ಹಾಸ್ಟೆಲ್‌ ಎಂದರೆ ಕ್ರೀಡಾಪಟುಗಳಿಗೆ ಚೈತನ್ಯ ತುಂಬುವ ಶಕ್ತಿಕೇಂದ್ರ ತಾನೆ? ಆದರೆ,  ಚಾಮರಾಜನಗರ ಜಿಲ್ಲಾ ಕೇಂದ್ರದ ಕ್ರೀಡಾ ಹಾಸ್ಟೆಲ್  ಅವ್ಯವಸ್ಥೆಯನ್ನು ನೋಡಿದರೆ, ಆ ಮಾತು ಸರಿಯಲ್ಲ ಎನಿಸುತ್ತದೆ.  ಇಂತಹ ಹಾಸ್ಟೆಲ್‌ಗಳು ಕ್ರೀಡಾಪಟುಗಳ ಉತ್ಸಾಹವನ್ನೇ ನಾಶ ಪಡಿಸುತ್ತವೆ ಎಂದೆನಿಸುತ್ತದೆ.

ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಬರವಿಲ್ಲ. ಅವರಿಗೆ ಸೂಕ್ತ ಕ್ರೀಡಾ ಸೌಲಭ್ಯ ದಕ್ಕಿಲ್ಲ. ಹೀಗಾಗಿ, ಗ್ರಾಮೀಣ ಕ್ರೀಡಾ ಕುಸುಮಗಳು ಅರಳುವ ಮೊದಲೇ ಕಮರಿಹೋಗುತ್ತಿವೆ.

ಜಿಲ್ಲೆಗೆ 2007–08ನೇ ಸಾಲಿನಲ್ಲಿ ಕ್ರೀಡಾ ಹಾಸ್ಟೆಲ್‌ ಮಂಜೂರಾಯಿತು.  ಅಂದಿನಿಂದಲೂ ಹಾಸ್ಟೆಲ್‌ ಬಾಡಿಗೆ ಕಟ್ಟಡ ಬಿಟ್ಟು ಸ್ವಂತ ನೆಲೆ ಕಂಡುಕೊಂಡಿಲ್ಲ. ಜಿಲ್ಲೆಯಲ್ಲಿ ಫುಟ್‌ಬಾಲ್‌, ವಾಲಿಬಾಲ್ ತರಬೇತಿಗೆ ಅವಕಾಶವಿದೆ. ಪ್ರತಿವರ್ಷ 5ರಿಂದ 7ನೇ ತರಗತಿವರೆಗಿನ 50 ಮಕ್ಕಳನ್ನು ಆಯ್ಕೆ ಮಾಡಿ ತರಬೇತಿ ನೀಡಬೇಕಿದೆ.

ಆದರೆ, ಸೌಲಭ್ಯದ ಕೊರತೆಯಿಂದ ಮಕ್ಕಳ ಸಂಖ್ಯೆ 30 ದಾಟುವುದಿಲ್ಲ. ಕಳೆದ ವರ್ಷ 27 ಮಕ್ಕಳಿಗೆ ಆಯ್ಕೆ ಸೀಮಿತಗೊಂಡಿತ್ತು. ಈ ಸಾಲಿನಡಿ 35 ಮಕ್ಕಳ ಆಯ್ಕೆಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ಧರಿಸಿದೆ. ಇಲ್ಲಿ ಕ್ರೀಡಾ ಹಾಸ್ಟೆಲನ್ನು  ಹುಡುಕುವುದೇ ಸವಾಲಿನ ಕೆಲಸ. ಹೌಸಿಂಗ್‌ಬೋರ್ಡ್‌ ಕಾಲೊನಿಯ ಬಾಡಿಗೆ ಮನೆಯಲ್ಲಿ ಹಾಸ್ಟೆಲ್‌ ನಡೆಸಲಾಗುತ್ತಿದೆ. ಇಲ್ಲಿ ಕನಿಷ್ಠ 25 ಮಕ್ಕಳಿಗೆ ಮಾತ್ರ ಸ್ಥಳಾವಕಾಶ ಕಲ್ಪಿಸಬಹುದು. ಆದರೆ, ಇಲ್ಲಿ ಎಲ್ಲ ಮಕ್ಕಳಿಗೆ ಸ್ಥಳಾವಕಾಶ ಕಲ್ಪಿಸಲು ಹಗ್ಗಜಗ್ಗಾಟ ನಡೆಸುತ್ತಿದೆ.

ಫುಟ್‌ಬಾಲ್‌ಗೆ ಮಾತ್ರ ಇಲಾಖೆಯ ಕಾಯಂ ತರಬೇತುದಾರರಿದ್ದಾರೆ. ವಾಲಿಬಾಲ್‌ಗೆ ಹೊರಗುತ್ತಿಗೆ ಮೇಲೆ ತರಬೇತುದಾರರನ್ನು ನೇಮಿಸಿಕೊಳ್ಳಲಾಗಿದೆ. ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಎರಡು ಕ್ರೀಡೆಗಳ ಅಭ್ಯಾಸಕ್ಕೆ ಸೂಕ್ತ ಅಂಗಳವೂ ಇದೆ. ಕ್ರೀಡಾಂಗಣದ ಅವ್ಯವಸ್ಥೆ, ಇಲಾಖೆಯ ನಿರ್ಲಕ್ಷ್ಯದಿಂದ ಭವಿಷ್ಯದ ಕ್ರೀಡಾಪಟುಗಳು ಗುಣಮಟ್ಟದ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಯೇ ತರಬೇತಿ ಪಡೆದ ಚಾಮರಾಜನಗರ ತಾಲ್ಲೂಕಿನ ಅರಳೀಪುರದ ಶಿವಕುಮಾರ್‌ ಎಂಬ ಫುಟ್‌ಬಾಲ್‌ ಪಟು ಈಗ ರಾಜ್ಯ ಕಿರಿಯರ ತಂಡದ ನಾಯಕ ಎನ್ನುವುದು ವಿಶೇಷ.

ಅವ್ಯವಸ್ಥೆಯ ಕೇಂದ್ರ
ಕ್ರೀಡಾಂಗಣಕ್ಕೆ ಭೇಟಿ ನೀಡಿದರೆ ಪೆವಿಲಿಯನ್‌ ಕಟ್ಟಡದ ಅನತಿದೂರದಲ್ಲಿ ಬಿಳಿಬಣ್ಣ ಮೆತ್ತಿಕೊಂಡಿರುವ ಕಟ್ಟಡವೊಂದು ಕಾಣುತ್ತದೆ. ಇದೇ ಹೊಸ ಕ್ರೀಡಾ ಹಾಸ್ಟೆಲ್‌ ಕಟ್ಟಡ. ಕುತೂಹಲದಿಂದ ಅತ್ತ ಇಣುಕಿದರೆ ಚರಂಡಿ ನೀರಿನ ಗಬ್ಬುನಾತ ಮೂಗಿಗೆ ಬಡಿಯುತ್ತದೆ.

ಕ್ರೀಡಾಪಟುಗಳಿಗೆ ಶಕ್ತಿಕೇಂದ್ರ ವಾಗಬೇಕಿರುವ ಈ ಕಟ್ಟಡ ನೋಡಿದರೆ ಮರುಕ ಉಂಟಾಗುತ್ತದೆ. ಮೂರ್ನಾಲ್ಕು ವರ್ಷಗಳ ಹಿಂದೆ ಈ ಹಾಸ್ಟೆಲ್‌ ನಿರ್ಮಾಣಕ್ಕೆ ₹94.42 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ.

ಈ ಹಾಸ್ಟೆಲ್‌ ಕಟ್ಟಡದ ಸುತ್ತಲೂ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪೊಲೀಸ್‌ ವಸತಿಗೃಹಗಳು ಮತ್ತು ಗಾಳೀಪುರ ಬಡಾವಣೆಯಿಂದ ಬರುವ ಚರಂಡಿಯ  ನೀರು ಸಂಗ್ರಹಗೊಂಡಿದೆ. ಈ ನೀರು ಹೊರಹೋಗುವ ವ್ಯವಸ್ಥೆ ಕೈಗೊಂಡಿಲ್ಲ. ಕೊಳಕು ನೀರನ್ನು ದಾಟಿಕೊಂಡು ಹಾಸ್ಟೆಲ್‌ ಕಟ್ಟಡದತ್ತ ಹೋಗಲು ಹರಸಾಹಸ ಪಡಬೇಕಿದೆ.

ಚರಂಡಿ ನೀರು ಕ್ರೀಡಾಂಗಣ ಪ್ರವೇಶಿಸದಂತೆ ನಗರಸಭೆಯಿಂದ ಪ್ರತ್ಯೇಕ ಮಾರ್ಗ ನಿರ್ಮಿಸಿಲ್ಲ. ಈ ಸಮಸ್ಯೆ ನಿವಾರಣೆಗೆ ಜಿಲ್ಲಾ ಕ್ರೀಡಾ ಇಲಾಖೆಯು ₹ 21 ಲಕ್ಷ ಮೊತ್ತದ ಅಂದಾಜುಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ.

ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಮದ್ಯದ ಅಂಗಡಿ ಇದೆ. ಸಂಜೆ ವೇಳೆ ಅಲ್ಲಿ ಮದ್ಯ ಖರೀದಿಸುವ ಕುಡುಕರು ಕ್ರೀಡಾಂಗಣಕ್ಕೆ ದಾಂಗುಡಿ ಇಡುತ್ತಾರೆ. ಕ್ರೀಡಾಂಗಣಕ್ಕೆ ಸೂಕ್ತ ತಂತಿಬೇಲಿ ಅಳವಡಿಸಿಲ್ಲ. ಒಂದು ವೇಳೆ ಕ್ರೀಡಾ ಹಾಸ್ಟೆಲ್‌ಗೆ ಮಕ್ಕಳನ್ನು ವರ್ಗಾಯಿಸಿದರೂ ಭದ್ರತೆಯ ತೊಡಕು ಎದುರಾಗಿದೆ.

‘ಕ್ರೀಡಾ ಹಾಸ್ಟೆಲ್‌ ಕಟ್ಟಡ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕಿದೆ. ಜಿಲ್ಲೆಯಲ್ಲಿ ಫುಟ್‌ಬಾಲ್‌ ಕ್ಲಬ್‌ಗಳಿಲ್ಲ. ಇದರಿಂದ ಅವರ ಸಾಮರ್ಥ್ಯ ಸಾಬೀತಿಗೆ ತೊಡಕಾಗಿದೆ. ಹೆಚ್ಚಾಗಿ ಟೂರ್ನಿಗಳು ನಡೆದರೆ ಮಾತ್ರ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಸಾಧ್ಯ. ಜಿಲ್ಲೆಯಲ್ಲಿ ಈ ಕೊರತೆ ಕಾಡುತ್ತಿದೆ’ ಎನ್ನುತ್ತಾರೆ ಫುಟ್‌ಬಾಲ್‌ ತರಬೇತುದಾರ ಗೋಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.