ADVERTISEMENT

ಕ್ರಿಕೆಟಿಗರಿಗೆ ಪಾಠ...

ಪ್ರಮೋದ ಜಿ.ಕೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಐಪಿಎಲ್‌ ಟೂರ್ನಿ ಬಂದ ಬಳಿಕ ಕ್ರಿಕೆಟ್‌ ಅನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಪ್ರತಿ ಪಂದ್ಯವೂ ಫಿಕ್ಸ್‌ ಆಗಿದೆಯೇ ಎನ್ನುವ ಅನುಮಾನದಿಂದ ನೋಡುವುದು ಸಹಜವಾಗಿಬಿಟ್ಟಿದೆ.

ಸಾಕು ಹಣದ ದಂಧೆ. ಐಪಿಎಲ್‌ ಟೂರ್ನಿಯನ್ನು ನಿಲ್ಲಿಸಿಬಿಡಿ...

ಎರಡು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣ ಬಯಲಾದಾಗ ಕೆಲ ಅಭಿಮಾನಿಗಳು ಆಕ್ರೋಶದಿಂದ ಹೇಳಿದ್ದ ಮಾತುಗಳಿವು.

ದೊಡ್ಡ ಹೆಸರು ಮಾಡುವ ಕನಸು ಹೊತ್ತು ಏಳು ವರ್ಷಗಳ ಹಿಂದೆ ಜನ್ಮ ತಾಳಿದ ‘ಮಿಲಿಯನ್‌ ಡಾಲರ್‌ ಬೇಬಿ’ ಬಗ್ಗೆ ಕ್ರಿಕೆಟ್‌ ಪ್ರೇಮಿಗಳಲ್ಲಿ ಅಸಹ್ಯ ಉಂಟಾಗಿತ್ತು. ಕೆಲ ಆಟಗಾರರು ಕಳ್ಳಾಟದಲ್ಲಿ ಭಾಗಿಯಾದ ಸುದ್ದಿ ಹೊರಬಿದ್ದಾಗಲಂತೂ ಸಾಕಷ್ಟು ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ‘ಸಭ್ಯರ ಕ್ರೀಡೆಯೆನಿಸಿಕೊಂಡ ಕ್ರಿಕೆಟ್‌ನಲ್ಲಿ ಇದೆಂಥಾ ಮೋಸ’ ಎಂದು ಗಾಸಿಗೊಂಡಿದ್ದರು.

ಭಾರತದಲ್ಲಿ ಕ್ರಿಕೆಟ್‌ ಅನ್ನು ಧರ್ಮ ಎಂದು ಕ್ರಿಕೆಟಿಗರನ್ನು ದೇವರೆಂದು ಪೂಜಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದೇ ಅಭಿಮಾನಿಗಳು ಕಳ್ಳಾಟ ನಡೆಸಿದ ಕ್ರಿಕೆಟಿಗರ ವಿರುದ್ಧ ಆಕ್ರೋಶಗೊಂಡಿದ್ದರು. ಇದೆಲ್ಲಾ 2013ರ ಮಾತಾಯಿತು. ಈ ಘಟನೆಗಳು ನಡೆದ ಬಳಿಕ ಚುಟುಕು ಕ್ರಿಕೆಟ್‌ ಅನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಗೆಲ್ಲುವ ನೆಚ್ಚಿನ ತಂಡ ಅನಿರೀಕ್ಷಿತವಾಗಿ ಸೋಲು ಕಂಡಾಗ     ‘ಆ ಪಂದ್ಯ ಫಿಕ್ಸ್‌ ಆಗಿತ್ತಂತೆ’ ಎನ್ನುವ ಮಾತುಗಳು ಕೇಳಿಬರು ವುದು ಸಹಜವಾಗಿ ಬಿಟ್ಟಿದೆ. ಆದ್ದರಿಂದ ಬಿಸಿಸಿಐ ಈಗ ಹದ್ದಿನ ಕಣ್ಣು ನೆಟ್ಟಿದೆ.

ಆಟಗಾರರು ಪಂದ್ಯದ ಮುನ್ನಾದಿನ ಅಭ್ಯಾಸ ನಡೆಸುವಾಗ ಅಥವಾ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ನಿಂತಾಗ ಹಸ್ತಾಕ್ಷರ ನೀಡುವುದು ಮೊದಲಿನಿಂದಲೂ ಸಹಜವಾಗಿ ನಡೆದುಕೊಂಡು ಬಂದಿದೆ. ತಮ್ಮ ನೆಚ್ಚಿನ ಆಟಗಾರರ ಪ್ರೀತಿಯ ಹಸ್ತಾಕ್ಷರಕ್ಕಾಗಿ ಗಂಟೆಗಟ್ಟಲೇ ಕಾಯುವ ಅಭಿ ಮಾನಿಗಳು ಇದ್ದಾರೆ. ಆದರೆ, ಬಿಸಿಸಿಐ ಐಪಿಎಲ್‌ ಎಂಟನೇ ಆವೃತ್ತಿಯಿಂದ ‘ಆಟಗಾರರರು ಕ್ರೀಡಾಂಗಣದಲ್ಲಿದ್ದಾಗ ಹಸ್ತಾಕ್ಷರ ನೀಡುವಂತಿಲ್ಲ’ ಎನ್ನುವ ಆದೇಶ ಹೊರಡಿಸಿದೆ.

ಅಭಿಮಾನಿಗಳು ಹಸ್ತಾಕ್ಷರ ಪಡೆಯುವ ನೆಪದಲ್ಲಿ ‘ವ್ಯವಹಾರ’ ನಡೆಸಬಹುದು ಎನ್ನುವ ಅಪಾಯವನ್ನು ಬಿಸಿಸಿಐ ಗುರುತಿಸಿದೆ. ಅದರಲ್ಲೂ ಮಹಿಳಾ ಅಭಿಮಾನಿಗಳನ್ನು ಆಟಗಾರರ ಹತ್ತಿರಕ್ಕೆ ಬಿಡದಂತೆ ಎಚ್ಚರಿಕೆ ವಹಿಸಿದೆ. ಆದ್ದರಿಂದ ಆಟಗಾರನ ಪ್ರತಿ ನಡೆಯನ್ನೂ ಅನುಮಾನದ ಕಣ್ಣಿನಿಂದ ನೋಡುವಂತಾಗಿದೆ.

ಐಪಿಎಲ್‌ ಆರಂಭವಾದಾಗ ಯುವ ಆಟಗಾರರಿಗೆ ಹೆಚ್ಚು ಅವಕಾಶ ಸಿಗುತ್ತದೆ.  ಇದು ಅತ್ಯುತ್ತಮ ಟೂರ್ನಿ ಎನ್ನುವ ಮಾತುಗಳು ಕೇಳಿ ಬಂದಿದ್ದವು. ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ರಿಕಿ ಪಾಂಟಿಂಗ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಅವರಂಥ ಸಭ್ಯ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಿದ್ದರಿಂದ ಚುಟುಕು ಕ್ರಿಕೆಟ್‌ಗೆ ಹೆಚ್ಚು ಮಹತ್ವ ಬಂದಿತ್ತು.

ಕೆರಿಬಿಯನ್‌, ಲಂಕಾ ಮತ್ತು ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ಗಳೂ ಪ್ರತಿ ವರ್ಷ ನಡೆಯುತ್ತವೆ. ಆದರೆ, ಈ ಟೂರ್ನಿಗಳು ಆರಂಭವಾಗುವುದು ಗೊತ್ತಾಗುವುದಿಲ್ಲ. ಮುಗಿಯುವುದೂ ತಿಳಿಯುವುದಿಲ್ಲ. ಏಕೆಂದರೆ, ಅಲ್ಲಿ ಭಾರತದ ಆಟಗಾರರು ಆಡುವುದಿಲ್ಲ. ಈ ಕಾರಣಕ್ಕಾಗಿಯೇ ಐಪಿಎಲ್‌ ಬೇರೆ    ಎಲ್ಲಾ ಟೂರ್ನಿಗಳಿಗಿಂತಲೂ ಸಾಕಷ್ಟು ಹೆಸರು ಮಾಡಿದೆ.

ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ ಐಪಿಎಲ್‌ ಈಗ ಸಂದಿಗ್ದ ಸ್ಥಿತಿಯಲ್ಲಿದೆ. ಅಭಿಮಾನಿಗಳು ಟೂರ್ನಿಯ ಮೇಲಿಟ್ಟಿರುವ ಭರವಸೆ ಉಳಿಸಿ ಕೊಳ್ಳಬೇಕಾದ ಸವಾಲಿದೆ. ಜೊತೆಗೆ, ಕಳೆದು ಹೋಗಿರುವ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಬೇಕಾದ ಜವಾಬ್ದಾರಿಯಿದೆ. ಆದ್ದರಿಂದ ಬಿಸಿಸಿಐ ಮೋಸದಾಟಕ್ಕೆ ಅವಕಾಶವಿಲ್ಲದಂತೆ ಟೂರ್ನಿ ನಡೆಸಲು ಹೆಚ್ಚು ಎಚ್ಚರಿಕೆ ವಹಿಸಿದೆ. ಟೂರ್ನಿ ಆರಂಭಕ್ಕೆ ಮುನ್ನ ಆಟಗಾರರಿಗೆ ತರಗತಿಗಳನ್ನು ಏರ್ಪಡಿಸಿತ್ತು.

ಪಂದ್ಯದ ವೇಳೆ ಆಟಗಾರರು ಹೇಗೆ ನಡೆದುಕೊಳ್ಳಬೇಕು, ಯಾರ ಜೊತೆ ಹೇಗೆ ವರ್ತಿಸಬೇಕು, ಅಂಗಳದಲ್ಲಿದ್ದಾಗ ಇರಬೇಕಾದ ಶಿಸ್ತು ಹೀಗೆ ಹಲವು ವಿಷಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಪಾಠ ಮಾಡಿದೆ. ಜೊತೆಗೆ, ಭಾರತ ತಂಡದ ಮಾಜಿ ನಾಯಕ ರಾಹುಲ್  ದ್ರಾವಿಡ್‌ ಯುವ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.

‘ದೇಶಿಯ ಟೂರ್ನಿಯಲ್ಲಿ ಚೆನ್ನಾಗಿ ಆಡಿದರೆ ಐಪಿಎಲ್‌ನಲ್ಲಿಯೂ ಸ್ಥಾನ ಲಭಿಸುತ್ತದೆ. ಮುಂದೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಹಾದಿ ಸುಗಮವಾಗುತ್ತದೆ. ಜೊತೆಗೆ, ನಿಮ್ಮ ನಡೆನುಡಿಯೂ ಎಚ್ಚರಿಕೆಯಿಂದ ಕೂಡಿರಬೇಕು’ ಎಂದು ದ್ರಾವಿಡ್‌ ಸಲಹೆ ನೀಡಿದ್ದರು.

ಬೀರಿದೆಯೇ ಪ್ರಭಾವ 
2013ರ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದ ಬಳಿಕ ಕ್ರಿಕೆಟಿಗರಲ್ಲೂ ಸಾಕಷ್ಟು ಬದಲಾವಣೆಯಾದಂತೆ ಕಾಣುತ್ತಿದೆ. ಕಳ್ಳಾಟದಲ್ಲಿ ಭಾಗಿಯಾದರೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತದೆ ಎನ್ನುವ ಅರಿವೂ ಆಟಗಾರರಲ್ಲಿ ಮೂಡಿದೆ. ಈ ಸಲದ ಐಪಿಎಲ್‌ ಆರಂಭಕ್ಕೂ ಒಂದು  ತಿಂಗಳ ಮೊದಲು ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿ.

ರಾಜಸ್ತಾನ ರಾಯಲ್ಸ್ ತಂಡದ ಆಟಗಾರನನ್ನು ಮೋಸದಾಟದ ಬಲೆಯಲ್ಲಿ ಸಿಲುಕಿಸಲು ಯತ್ನ ನಡೆದಿತ್ತು. ಬುಕ್ಕಿಯೊಬ್ಬ ಆಟಗಾರನನ್ನು ಸಂಪರ್ಕಿಸಿದ್ದ ಎನ್ನುವ ವಿಷಯವನ್ನು ಖುದ್ದು ಬಿಸಿಸಿಐ ಬಹಿರಂಗ ಮಾಡಿದೆ. ಆದರೆ, ಆಟಗಾರ ಈ ವಿಷಯವನ್ನೆಲ್ಲಾ ತನ್ನ ತಂಡದ ಆಡಳಿತಕ್ಕೆ ತಿಳಿಸಿದ್ದಾನೆ. ಇದರಿಂದ ಆತ ಬಿಸಿಸಿಐನಿಂದ ಮೆಚ್ಚುಗೆಗೂ ಪಾತ್ರನಾಗಿದ್ದಾನೆ.

ವಿಂದೂ ದಾರಾ ಸಿಂಗ್‌, ರಾಯಲ್ಸ್‌ ಒಡತಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ, ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಅಧಿಕಾರಿ ಗುರುನಾಥ್‌ ಮೇಯಪ್ಪನ್‌ ಹೀಗೆ ಬಹುತೇಕ ಗಣ್ಯರ ಹೆಸರುಗಳೇ ಬೆಟ್ಟಿಂಗ್‌ ಹಗರಣದಲ್ಲಿ ಕೇಳಿ ಬಂದಿದ್ದವು.

ಆದ್ದರಿಂದ ಈ ಬಾರಿಯ ಐಪಿಎಲ್‌ ಪಂದ್ಯಗಳಿಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ಕೊಂಚ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಮೇಯಪ್ಪನ್‌ ಅಂತೂ ತಂಡದಿಂದಲೇ ಹೊರಗಿದ್ದಾರೆ. ಇದು ಐಪಿಎಲ್‌ ಅನ್ನು ಶುಚಿಗೊಳಿಸುವ ಸೂಚನೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT