ADVERTISEMENT

ಮುಯ್‌ ಥಾಯ್ ‘ವಿಕ್ರಮ’

ಗಿರೀಶದೊಡ್ಡಮನಿ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

‘ಫಿ ಟ್‌ನೆಸ್‌ಗಾಗಿ ಇಲ್ಲಿ ಬಂದು ಸೇರಿದೆ. ಆದರೆ, ಇವತ್ತು ಅಂತರ­ರಾಷ್ಟ್ರೀಯ ಪದಕ ಪಡೆದಿದ್ದೇನೆ. ಕಲಿ­ಯಲು ಕಷ್ಟವೆನಿಸುತ್ತದೆ. ಆದರೆ, ಒಮ್ಮೆ ಅಭ್ಯಾಸವಾದರೆ ಆತ್ಮರಕ್ಷಣೆ, ಆರೋಗ್ಯ­ರಕ್ಷಣೆ ಮತ್ತು ಸ್ಪರ್ಧಾತ್ಮಕ ಹಂತದಲ್ಲಿ ಉತ್ತಮ ಸಾಧನೆ ಮಾಡಬಹುದು’–
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮುಯ್ ಥಾಯ್‌ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಹೆವಿವ್ಹೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಮೊಹಮ್ಮದ್ ಝಲ್ಕರನೈನ್ ಸಂತಸದಿಂದ ಹೇಳು­ತ್ತಾರೆ.

ಅವ­ರೊಂದಿಗೆ ತಂಡ­ದಲ್ಲಿರುವ ಒಟ್ಟು 17 ಆಟಗಾರರು ವಿವಿಧ ವಿಭಾಗ­ಗಳಲ್ಲಿ 16 ಪದಕಗಳನ್ನು ಗೆದ್ದಿದ್ದಾರೆ.  ಮೊಹಮ್ಮದ್ ಕಳೆದ ವರ್ಷ ಬ್ಯಾಂಕಾಕ್ ಅಂತರ­ರಾಷ್ಟ್ರೀಯ ಚಾಂಪಿಯನ್‌­ಷಿಪ್‌­ನಲ್ಲಿಯೂ ಕಂಚು ಗೆದ್ದುಕೊಂಡಿದ್ದಾರೆ. ಮೈಸೂರಿನಲ್ಲಿ ಈಗ ಥಾಯ್ಲೆಂಡ್ ಮೂಲದ ಮುಯ್ ಥಾಯ್ ಕಿಕ್‌ ಬಾಕ್ಸಿಂಗ್ ಸದ್ದಿಲ್ಲದೇ ಜನಪ್ರಿಯತೆ ಗಳಿಸುತ್ತಿದೆ.  ವಿದ್ಯಾರ್ಥಿಗಳು, ವೃತ್ತಿನಿರ­ತರು, ವ್ಯಾಪಾರಸ್ಥರು, ಮಕ್ಕಳು, ಮಹಿ­ಳೆ­ಯರು ಈ ಕ್ರೀಡೆಯತ್ತ ಒಲಿಯುತ್ತಿ­ದ್ದಾರೆ. ಮೈಸೂರಿನಲ್ಲಿ ಈ ಸಮರ ಕಲೆಯು ಬೆಳೆಯಲು ಎಂ.ಎನ್. ವಿಕ್ರಮ್  ಕಾರಣ.

ಕೃಷ್ಣಮೂರ್ತಿಪುರಂನಲ್ಲಿ ಅಕಾಡೆಮಿ ಆಫ್ ಮಾರ್ಷಲ್‌ ಆರ್ಟ್ಸ್ ಸಂಸ್ಥೆಯನ್ನು ನಡೆಸುತ್ತಿರುವ ಅವರು ಮೂಲತಃ ಕರಾಟೆಪಟು. ಆದರೆ, ಸಂಶೋಧನಾ ಪ್ರವೃತ್ತಿಯ ಅವರು ವಿಶ್ವದ ಬೇರೆ ಬೇರೆ ದೇಶಗಳ ಸಮರ ಕಲೆಗಳನ್ನು ಕಲಿತಿದ್ದಾರೆ. ಅದರಲ್ಲಿ ಥಾಯ್ಲೆಂಡ್‌ನ ಮುಯ್ ಥಾಯ್ ಕಿಕ್‌ ಬಾಕ್ಸಿಂಗ್, ಬ್ರೆಜಿಲ್‌ ದೇಶದ ಜಿಜುತ್ಸು, ಐಕಿ ಜುತ್ಸು, ಒಕಿನಾವಾ ಕರಾಟೆ ಕಲಿತಿ­ರುವ ಅವರು ಈಗ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದಾರೆ.

1995 ಮತ್ತು 1996ರಲ್ಲಿ ಬ್ಯಾಂಟಮ್ ಮತ್ತು ವೆಲ್ಟರ್‌ ವೇಟ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್, 1998ರಲ್ಲಿ ಮುಕ್ತ ರಾಷ್ಟ್ರೀಯ ಚಾಂಪಿಯನ್‌ಷಿ­ಪ್‌ನಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ವಿಕ್ರಮ್ ಗೆದ್ದಿದ್ದಾರೆ.  ಇದೀಗ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ತರಬೇತುದಾರರಾಗಿದ್ದಾರೆ. ಇದೀಗ ಮೈಸೂರಿನಲ್ಲಿ ಎಲ್ಲ ವಯೋ­ವರ್ಗ­ದವರು ಅದರಲ್ಲೂ ಮಕ್ಕಳು ಮತ್ತು ಮಹಿಳೆಯರು ಕಲಿಯುವಂತೆ ‘ಮಿಶ್ರ ಸಮರ ಕಲೆಗಳು’ (ಮಿಕ್ಸಡ್‌ ಮಾರ್ಷಲ್ ಆರ್ಟ್ಸ್‌) ಸಂಯೋಜನೆ ಮಾಡಿ ಕಲಿಸುತ್ತಿದ್ದಾರೆ.

ಮುಯ್ ಥಾಯ್ ಬಗ್ಗೆ: ಮುಯ್ ಥಾಯ್ ಮೂಲತಃ ಥಾಯ್ಲೆಂಡ್ ಮೂಲದ ಸಮರ ಕಲೆ. ಚೀನಿಯರಿಗೆ ಕುಂಗಫೂ, ಜಪಾನಿಯರಿಗೆ ಕರಾಟೆ ಇರುವಂತೆ ಥಾಯ್‌ ದೇಶದಲ್ಲಿ ಮುಯ್‌ ಥಾಯ್ ಕಿಕ್‌ ಬಾಕ್ಸಿಂಗ್ ಜನಪ್ರಿಯ. ಆದರೆ, ಈ ಕಲೆಯ ನಿಜವಾದ ಮೂಲ ಯಾವುದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಗಳಿಲ್ಲ. ಥಾಯ್ಲೆಂಡ್‌ನಲ್ಲಿ ಬಹಳ ಹಿಂದಿನಿಂದಲೂ ರಾಜರು, ಸೈನಿಕರು ಈ ಯುದ್ಧಕಲೆಯನ್ನು ಅಭ್ಯಾಸ ಮಾಡು­ತ್ತಿದ್ದರು ಎಂಬ ದಾಖಲೆಗಳು ಇವೆ. ಆ ದೇಶದಲ್ಲಿ ಜಾನಪದ ಕಲೆಯಾಗಿ ಮತ್ತು ಕ್ರೀಡೆಯಾಗಿ ಬೆಳೆದಿದೆ.

ನಿರಾಯುಧ ವ್ಯಕ್ತಿಯ ದೇಹದ ಎಂಟು ಕೀಲುಗಳೇ  (ಎರಡು ಮೊಣಕೈ, ಎರಡು ಮುಷ್ಟಿ, ಎರಡು ಮೊಣಕಾಲು, ಎರಡು ಮುಂಗಾಲು) ಇಲ್ಲಿ ಆಯುಧ­ಗಳು. ಆಯಾ ಅಂಗಗಳು ಬಲಿಷ್ಠವಾ­ಗುವಂತೆ ವ್ಯಾಯಾಮಗಳನ್ನು ರೂಪಿಸ­ಲಾ­ಗಿದ್ದು. ಅವುಗಳ ಮೂಲಕವೇ ಪ್ರಹಾರ ಮಾಡಬೇಕು.

‘ನಾನು ವಿದ್ಯಾರ್ಥಿ ದೆಸೆಯಿಂದಲೂ ಸಮರ ಕಲೆಗಳತ್ತ ಆಸಕ್ತಿ ಬೆಳೆಸಿ­ಕೊಂಡಿದ್ದೆ. ಮೈಸೂರಿನಲ್ಲಿ ಶಿವದಾಸ್ ಅವರ ಹತ್ತಿರ ಕರಾಟೆ ಕಲಿತೆ. ನಂತರ ಬೆಂಗಳೂರಿನ ಮುಯ್‌ ಥಾಯ್ ಗ್ರ್ಯಾಂಡ್‌ ಮಾಸ್ಟರ್ ಎಂ.ಎಚ್. ಅಬಿದ್ ಬಳಿ, ಥಾಯ್ಲೆಂಡ್‌ನ ಅರ್ಜನ್ ಸುಫನಾ ಚಾಬಿರಾಮ್, ಪೊರನ್‌ಕಾಯ್ ಲಿಮಿಂಗೋಕೊಂಚಿಕುಲ್ ಅವರ ಬಳಿ ಮುಯ್‌ ಥಾಯ್ ಕಿಕ್‌ ಬಾಕ್ಸಿಂಗ್ ತರಬೇತಿ ಪಡೆದೆ’ ಎಂದು ವಿಕ್ರಮ ತಮ್ಮ ಸಾಧನೆಯ ಪಟ್ಟಿಯನ್ನು ಬಿಚ್ಚಿಡುತ್ತಾರೆ.

‘ಕರಾಟೆ, ಕುಂಗ್‌ಫೂ ಕಲೆಗಳು ಭಾರತದಲ್ಲಿಯೇ ಹುಟ್ಟಿ, ಬೌದ್ಧಭಿಕ್ಷುಗಳ ಮೂಲಕ ಏಷ್ಯಾದ ಇನ್ನಿತರ ರಾಷ್ಟ್ರಗಳಿಗೆ ಪರಿಚಿತವಾದವು ಎಂದು ಹೇಳಲಾಗು ತ್ತದೆ. ಈ ಕಲೆಗಳು ಕೇವಲ ಎದುರಾಳಿ ಯನ್ನು ಸದೆಬಡಿಯುವ ತಂತ್ರಗಳು ಮಾತ್ರವಲ್ಲ. ನಮ್ಮ ಸಂಪೂರ್ಣ ವ್ಯಕ್ತಿತ್ವವನ್ನು, ಆಧ್ಯಾತ್ಮಿಕ ಚೈತನ್ಯವನ್ನು ತುಂಬುವಂತಹ ಶಕ್ತಿ ಇವುಗಳಿಗೆ ಇದೆ. ಮುಯ್ ಥಾಯ್‌ನಲ್ಲಿ ಸಮರ ಆರಂಭವಾಗುವ ಮುನ್ನ ಪ್ರತಿಸ್ಪರ್ಧಿಗಳು ಪರಸ್ಪರ ಎರಡು ಕೈ ಜೋಡಿಸಿ ನಮಿಸುತ್ತಾರೆ.

ತಮ್ಮ ಹಿರಿಯರಿಗೆ, ಗುರುಗಳಿಗೆ, ತಂದೆ,ತಾಯಿ, ದೇಶಕ್ಕಾಗಿ ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಅಭ್ಯಾಸ ಆರಂಭಿಸುವ ಮುನ್ನವೂ ನಡೆಯುತ್ತದೆ. ಭಾರತದಲ್ಲಿ ಈ ಕಲೆಯನ್ನು ಈಗ ದೇಹದ ತೂಕ ಇಳಿಸಲು, ಮಾನಸಿಕ ನೆಮ್ಮದಿ ಕಂಡುಕೊಳ್ಳಲೂ ಜನ ಕಲಿಯುತ್ತಿದ್ದಾರೆ. ಮಕ್ಕಳು ಮತ್ತು ಮಹಿಳೆಯರಿಗೆ ಇದು ಅತ್ಯಂತ ಅವಶ್ಯಕ’ ಎಂದು ವಿಕ್ರಮ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.